×
Ad

ಬೆಂಗಳೂರು: ಕಾರ್ಮಿಕರ ಮುಷ್ಕರಕ್ಕೆ ಅಭೂತಪೂರ್ವ ಬೆಂಬಲ

Update: 2016-09-02 18:30 IST

ಬೆಂಗಳೂರು, ಸೆ. 2: ಕೇಂದ್ರ ಸರಕಾರ ಕಾರ್ಮಿಕ ವಿರೋಧಿ ನೀತಿ ಖಂಡಿಸಿ, ರಸ್ತೆ ಸಾರಿಗೆ ಮತ್ತು ಸುರಕ್ಷತಾ ಮಸೂದೆ ರದ್ದು, ಕನಿಷ್ಠ ವೇತನ 18 ಸಾವಿರ ರೂ.ನಿಗದಿ, ಬೆಲೆ ಏರಿಕೆ ತಡೆಗಟ್ಟುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಅಖಿಲ ಭಾರತ ಮುಷ್ಕರ ಅಭೂತಪೂರ್ವ ಯಶಸ್ಸುಕಂಡಿದೆ.
ಶುಕ್ರವಾರ ಬೆಳಗ್ಗೆ 6ಗಂಟೆಯಿಂದ ಸಂಜೆ 6ಗಂಟೆಯ ವರೆಗೆ ಕರೆ ನೀಡಿದ್ದ ‘ಭಾರತ್ ಬಂದ್’ಗೆ ಕಾರ್ಮಿಕ ಸಂಘಟನೆಗಳು, ಆಟೋರಿಕ್ಷಾ, ಟ್ಯಾಕ್ಸಿ, ಕ್ಯಾಬ್‌ಗಳು, ಖಾಸಗಿ ಬಸ್ಸುಗಳ ಮಾಲಕರು-ಚಾಲಕರು ಬೆಂಬಲ ಘೋಷಿಸಿದ್ದರು. ಹೀಗಾಗಿ ಯಾವುದೇ ವಾಹನಗಳು ರಸ್ತೆಗಿಳಿಯದ ಹಿನ್ನೆಲೆಯಲ್ಲಿ ಜನ ಜೀವನ ಸಂಪೂರ್ಣ ಸ್ತಬ್ಧವಾಗಿತ್ತು.
ರಾಜಧಾನಿ ಬೆಂಗಳೂರು ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿನ ಬಹುತೇಕ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಲಾಗಿತ್ತು. ಸದಾ ಜನಜಂಗುಳಿಯಿಂದ ತುಂಬಿತುಳುತ್ತಿದ್ದ ಬಸ್ಸು ನಿಲ್ದಾಣ, ರೈಲ್ವೆ ನಿಲ್ದಾಣಗಳು, ಮಾರುಕಟ್ಟೆ ಪ್ರದೇಶಗಳು, ಮಾಲ್‌ಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
 ಬೆಂಗಳೂರು, ಮೈಸೂರು, ಮಂಗಳೂರು, ಬಳ್ಳಾರಿ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ ಸೇರಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳು ಸೇರಿದಂತೆ ವಿವಿಧೆಡೆ ಸಾವಿರಾರು ಸಂಖ್ಯೆಯಲ್ಲಿ ಕಾರ್ಮಿಕರು ಬೀದಿಗಿಳಿದು ಕೇಂದ್ರ ಸರಕಾರ ವಿರುದ್ಧ ಧಿಕ್ಕಾರದ ಘೋಷಣೆ ಮೊಳಗಿಸಿ ಆಕ್ರೋಶ ವ್ಯಕ್ತಪಡಿಸಿದರು.
 ಸಾರಿಗೆ ಸಂಸ್ಥೆಗಳು, ವಿಮೆ, ಬ್ಯಾಂಕ್ ನೌಕರರು, ಕೈಗಾರಿಕೆಗಳು ಸೇರಿದಂತೆ ವಿವಿಧ ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ನೀಡಿದ್ದರಿಂದ ರಾಜ್ಯದಲ್ಲಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಕೆಎಸ್ಸಾರ್ಟಿಸಿ, ಬಿಎಂಟಿಸಿ, ಆಟೋರಿಕ್ಷಾ, ಕ್ಯಾಬ್, ಟ್ಯಾಕ್ಸಿ ಸ್ಥಗಿತದ ಹಿನ್ನೆಲೆಯಲ್ಲಿ ಸಾರ್ವಜನಿಕರು ಪರದಾಡಬೇಕಾಯಿತು.
 ಸಾರಿಗೆ ಸಂಸ್ಥೆ ವಾಹನಗಳ ರಸ್ತೆಗಿಳಿಯದ ಹಿನ್ನೆಲೆಯಲ್ಲಿ ಕೆಲ ಆಟೋರಿಕ್ಷಾ, ಕ್ಯಾಬ್ ಚಾಲಕರು ಪರಿಸ್ಥಿತಿಯ ಲಾಭ ಪಡೆಯಲು ನಿಗದಿತ ದರಕ್ಕಿಂತ ನಾಲ್ಕೈದು ಪಟ್ಟು ಹೆಚ್ಚಿನ ದರ ವಸೂಲಿ ಮಾಡುತ್ತಿದುದ್ದು ಕಂಡು ಬಂತು. ಈ ಸಂಬಂಧ ಕೆಲವರು ಆಟೋ ಚಾಲಕರೊಂದಿಗೆ ವಾಗ್ದಾನ ನಡೆಸಿದ ಘಟನೆಗಳು ನಡೆದವು.
ಕೈಗಾರಿಕಾ ಪ್ರದೇಶಗಳು ಸ್ತಬ್ಧ: ಇಲ್ಲಿನ ಪೀಣ್ಯ, ಕೆಂಗೇರಿ, ಬೊಮ್ಮನಹಳ್ಳಿ, ದೊಡ್ಡಬಳ್ಳಾಪುರ ಸೇರಿದಂತೆ ರಾಜ್ಯದಲ್ಲಿನ ಬಹುತೇಕ ಕೈಗಾರಿಕಾ ಪ್ರದೇಶಗಳಲ್ಲಿ ಅಕ್ಷರಶಃ ಸ್ತಬ್ಧವಾಗಿದ್ದವು. ಎಲ್ಲ ಕಾರ್ಮಿಕರು ಮುಷ್ಕರಕ್ಕೆ ಬೆಂಬಲ ಘೋಷಿಸಿ ಕೇಂದ್ರ ಸರಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಿದರು.
ಆ್ಯಂಬುಲೆನ್ಸ್, ಆಸ್ಪತ್ರೆ, ಹಾಲು ವಿತರಣೆ, ನ್ಯೂಸ್ ಪೇಪರ್ ಹೊರತುಪಡಿಸಿ ಇತರೆ ಯಾವುದೇ ಸಾರ್ವಜನಿಕ ಸೇವೆ ದೊರೆಯದ ಹಿನ್ನೆಲೆಯಲ್ಲಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಮುನ್ನಚ್ಚರಿಕೆ ಕ್ರಮವಾಗಿ ಕೆಲ ಜಿಲ್ಲೆಗಳನ್ನು ಹೊರತು ಪಡಿಸಿ ರಾಜ್ಯದಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು,
ರಸ್ತೆ ಸಾರಿಗೆ ಮತ್ತು ಸುರಕ್ಷತಾ ಮಸೂದೆ ರದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆ ತಡೆಗಟ್ಟಬೇಕು, ಕನಿಷ್ಠ ವೇತನ 18 ಸಾವಿರ ರೂ.ನಿಗದಿಪಡಿಸಬೇಕು. ಗುತ್ತಿಗೆ ಪದ್ದತಿ ನಿಷೇಧಿಸಬೇಕು, ರೈಲ್ವೆ, ರಕ್ಷಣೆ, ವಿಮಾ ಕ್ಷೇತ್ರದಲ್ಲಿ ಎಫ್‌ಡಿಐ ಹೂಡಿಕೆ ವಿರೋಧಿಸಿ, ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರೆ ನೀಡಿದ್ದ ಮುಷ್ಕರ ಯಶಸ್ವಿಯಾಗಿದೆ.
ಕಲ್ಲು ತೂರಾಟ: ಕಾರ್ಮಿಕರ ಮುಷ್ಕರ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ಸೇರಿದಂತೆ ರಾಜ್ಯದ ಕೆಲವೆಡೆ ಬಸ್ಸು, ಆಟೋರಿಕ್ಷಾ, ಕ್ಯಾಬ್‌ಗಳು ಸೇರಿ ಹಲವು ವಾಹನಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ ಗಾಜುಗಳನ್ನು ಪುಡಿಗೈದಿದ್ದಾರೆ.
 ಕಲಬುರಗಿಯಲ್ಲಿ ರೈತ ಮುಖಂಡ ಮಾರುತಿ ಮಾನ್ಪಡೆ ನೇತೃತ್ವದಲ್ಲಿ ಕಾರ್ಮಿಕರ ಪ್ರತಿಭಟನೆ ವೇಳೆ ಪ್ರಧಾನಿ ಮೋದಿ ಭೂತದಹನ ವೇಳೆ ಕಾರ್ಮಿಕ ಬಸವರಾಜ್ ಎಂಬವರಿಗೆ ಬೆಂಕಿ ತಗುಲಿ ಸಣ್ಣಪುಟ್ಟ ಗಾಯಗಳಾಗಿವೆ. ಬೆಂಗಳೂರು ನಗರದಲ್ಲಿ ಫ್ರೀಡಂ ಪಾರ್ಕ್‌ನ ಬಳಿ ಪ್ರತಿಭಟನೆ ವೇಳೆ ಸಂಚರಿಸುತ್ತಿದ್ದ ಸರಕು ಸಾಗಾಣಿಕೆ ರಿಕ್ಷಾ ಚಾಲಕನಿಗೆ ಥಳಿಸಿದ ಘಟನೆ ವರದಿಯಾಗಿದೆ.
ಒಗ್ಗಟ್ಟು ಪ್ರದರ್ಶನ: ಕೇಂದ್ರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ(ಜೆಸಿಟಿಯು) ಕರೆ ನೀಡಿದ್ದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ದೇಶದ 18 ಕೋಟಿಗೂ ಅಧಿಕ ಮಂದಿ ಕಾರ್ಮಿಕರು ಬೀದಿಗಿಳಿದು ಕೇಂದ್ರ ಸರಕಾರದ ವಿರುದ್ದ ತಮ್ಮ ಒಗ್ಗಟ್ಟು ಪ್ರದರ್ಶಿಸಿದರು.
ಕಾರ್ಮಿಕ ವಿರೋಧಿ ನೀತಿಗಳನ್ನು ಕೈಬಿಡಬೇಕು. ಜನ ವಿರೋಧಿಸಿ ರಸ್ತೆ ಸಾರಿಗೆ ಮತ್ತು ಸರಕ್ಷತಾ ಮಸೂದೆಯನ್ನು ರದ್ದುಪಡಿಸಬೇಕು. ಕನಿಷ್ಟ ವೇತನ 18 ಸಾವಿರ ರೂ.ನಿಗದಿಪಡಿಸಬೇಕು ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಬೇಕೆಂದು ಆಗ್ರಹಿಸಿ ಕಾರ್ಮಿಕರ ಘೋಷಣೆ ಕೂಗಿ ತಮ್ಮ ಆಕ್ರೋಶವನ್ನು ಹೊರ ಹಾಕಿದರು.

ನೌಕರರಿಲ್ಲದೆ ಬಿಕೋ ಎನ್ನುತ್ತಿದ್ದ ವಿಧಾನಸೌಧ

ಬೆಂಗಳೂರು, ಸೆ. 2: ಕೇಂದ್ರದ ಕಾರ್ಮಿಕ ವಿರೋಧಿ ‘ರಸ್ತೆ ಸಾರಿಗೆ ಮತ್ತು ಸುರಕ್ಷತಾ ಮಸೂದೆ’ ರದ್ದುಗೊಳಿಸಲು ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿದ್ದರಿಂದ ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧ, ವಿಕಾಸಸೌಧ ಸೇರಿದಂತೆ ಬಹುತೇಕ ಸರಕಾರಿ ಕಚೇರಿಗಳು ಸಿಬ್ಬಂದಿ ಹಾಜರಾತಿ ಕೊರತೆಯಿಂದ ಬಿಕೋ ಎನ್ನುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಶುಕ್ರವಾರ ಬೆಳಗ್ಗೆ 6ಗಂಟೆಯಿಂದ ಸಂಜೆ 6ಗಂಟೆಯ ವರೆಗೆ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಮುಷ್ಕರಕ್ಕೆ ಕರೆ ನೀಡಿದ್ದರಿಂದ ಕೆಎಸ್ಸಾರ್ಟಿಸಿ, ಬಿಎಂಟಿಸಿ, ಆಟೋರಿಕ್ಷಾ, ಟ್ಯಾಕ್ಸಿ, ಕ್ಯಾಬ್‌ಗಳು, ಖಾಸಗಿ ಬಸ್ಸುಗಳ ಮಾಲಕರು-ಚಾಲಕರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು. ಸಾರಿಗೆ ವ್ಯವಸ್ಥೆಯಿಲ್ಲದ ಹಿನ್ನೆಲೆಯಲ್ಲಿ ಸರಕಾರಿ ಕಚೇರಿಗಳಿಗೆ ಸಿಬ್ಬಂದಿ ಹಾಜರಾಗಲಿಲ್ಲ.
 ಹೈಕೋರ್ಟ್, ಬಹುಮಹಡಿ ಕಟ್ಟಡ, ವಿಶ್ವೇಶ್ವರಯ್ಯ ಗೋಪುರ, ಎಜಿ ಕಚೇರಿ, ಖನಿಜ ಭವನ ಸೇರಿದಂತೆ ಬಹುತೇಕ ಸರಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಇಲ್ಲದೆ ಬಿಕೋ ಎನ್ನುತ್ತಿದ್ದವು. ಮುಷ್ಕರದ ಬಿಸಿ ಸರಕಾರಿ ಕಚೇರಿಗಳಿಗೂ ಬಲವಾಗಿಯೇ ತಟ್ಟಿದೆ ಎಂದು ಹೇಳಬಹುದು.
ಕಾರ್ಮಿಕರ ಮುಷ್ಕರದ ಮುನ್ಸೂಚನೆ ಹಿನ್ನೆಲೆಯಲ್ಲಿ ವಿಧಾನಸೌಧ, ವಿಕಾಸಸೌಧ, ಎಂ.ಎಸ್.ಬಿಲ್ಡಿಂಗ್ ಸೇರಿದಂತೆ ಸರಕಾರಿ ಕಚೇರಿಗಳಿಗೆ ಅರ್ಜಿ ಹಿಡಿದುಕೊಂಡ ಬರುವ ಸಾರ್ವಜನಿಕರಿಲ್ಲದೆ ಶಕ್ತಿ ಕೇಂದ್ರದ ಮೊಗಸಾಲೆಗಳು ಬಣಗುಟ್ಟುತ್ತಿದ್ದ ದೃಶ್ಯ ಕಂಡುಬಂತು.
 
ಕೆಲ ಕಚೇರಿಗಳಲ್ಲಿ ಅಧಿಕಾರಿಗಳು ಹಾಗೂ ಕೆಳಹಂತದ ಬೆರಳೆಣಿಕೆಯಷ್ಟು ಸಿಬ್ಬಂದಿ ಮತ್ತು ನೌಕರರ ಹಾಜರಾತಿಯಿದ್ದರೂ ಅವರಲ್ಲಿ ಪ್ರತಿನಿತ್ಯದಂತೆ ಯಾವುದೇ ಗಡಿಬಿಡಿ ಇಲ್ಲದೆ ನಿರಾಳ ಭಾವ ಮನೆಮಾಡಿತ್ತು. ಒಂದು ರೀತಿಯಲ್ಲಿ ರಜಾ ದಿನದಂತೆ ಕಚೇರಿಗಳಿದ್ದದ್ದು ಗೋಚರಿಸುತ್ತಿದ್ದವು. ಕೇವಲ ನಮ್ಮ ಮೆಟ್ರೋ ರೈಲು ಹೊರತುಪಡಿಸಿ ಯಾವುದೇ ಸಾರಿಗೆ ವ್ಯವಸ್ಥೆ ಇರಲಿಲ್ಲ. ಕೆಎಸ್ಸಾರ್ಟಿಸಿ, ಬಿಎಂಟಿಸಿ, ಆಟೋರಿಕ್ಷಾ, ಕ್ಯಾಬ್, ಖಾಸಗಿ ಬಸ್ಸುಗಳನ್ನೇ ಆಶ್ರಯಿಸಿದ್ದ ನೌಕರರು ಕಚೇರಿಯತ್ತ ಮುಖ ಮಾಡಲಿಲ್ಲ.
 ಶುಕ್ರವಾರ ಮುಷ್ಕರ, ಶನಿವಾರ ಒಂದು ದಿನ ರಜೆ ಹಾಕಿದರೆ ರವಿವಾರ ಮತ್ತು ಸೋಮವಾರ ಗೌರಿ-ಗಣೇಶನ ಹಬ್ಬದ ರಜೆಯಿದ್ದ ಕಾರಣ ಬಹುತೇಕ ಸಿಬ್ಬಂದಿ ಮೊದಲೆ ರಜೆ ಹಾಕಿಕೊಂಡಿದ್ದರು. ಹೀಗಾಗಿ ಸೆ.6ರ ಮಂಗಳವಾರವೆ ಕಚೇರಿಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭಗೊಳ್ಳಲಿವೆ.
ಸಿಎಂ, ಸಚಿವರ ಸುಳಿವಿಲ್ಲ: ನಿಗಮ ಮಂಡಳಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಸಂಬಂಧ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್, ಸಚಿವರು, ಶಾಸಕರು ಸೇರಿ ಅವರ ಹಿಂಬಾಲಕರೆಲ್ಲ ಹೊಸದಿಲ್ಲಿಯಲ್ಲಿ ಬೀಡುಬಿಟ್ಟಿದ್ದರಿಂದ ಶಕ್ತಿ ಕೇಂದ್ರದತ್ತ ಯಾರೊಬ್ಬರೂ ಧಾವಿಸಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News