ಈವರೆಗೆ ಬಂದಿಲ್ಲ, ಬೇಗ ಬರಲಿಕ್ಕೂ ಇಲ್ಲ ಅಂತಹ ಸ್ಮಾರ್ಟ್ ಫೋನ್ ಇದು !

Update: 2016-09-03 09:53 GMT

ಹೊಸದಿಲ್ಲಿ , ಸೆ. 3 : ಟ್ಯೂರಿಂಗ್ ರೊಬೊಟಿಕ್ಸ್ ಇಂಡಸ್ಟ್ರೀಸ್ ( ಟಿಆರ್ ಐ) ತನ್ನ ಹೊಸ ಸ್ಮಾರ್ಟ್ ಫೋನ್ ಟ್ಯೂರಿಂಗ್ ಫೋನ್ ಕಡೆಂಝ ಅನ್ನು ಬಿಡುಗಡೆ ಮಾಡಿದ್ದು ಇದು ಈವರೆಗಿನ ಎಲ್ಲ ಸ್ಮಾರ್ಟ್ ಫೋನ್ ಗಳಿಗಿಂತ ವಿಶೇಷ ಫೀಚರ್ ಗಳನ್ನು ಹಾಗು ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಲಾಗಿದೆ. ಇದರಲ್ಲಿರುವ ' ವಾಯ್ಸ್ ಆನ್ ' ಫೀಚರ್ ಮೂಲಕ ಮೊಬೈಲನ್ನು ಧ್ವನಿಯ ಮೂಲಕವೇ ಸ್ವಿಚ್ ಆನ್ ಹಾಗು ಸ್ವಿಚ್ ಆಫ್ ಮಾಡಬಹುದು. ಮಾತ್ರವಲ್ಲ ಈ ವಾಯ್ಸ್ ಕಮಾಂಡ್ ಮೂಲಕ ಬಯೋಮೆಟ್ರಿಕ್ ದೃಢೀಕರಣವೂ ಸಾಧ್ಯವಿದೆ. 

ಕಡೆಂಝದಲ್ಲಿ  1440x2560 ಪಿಕ್ಸೆಲ್ ರೆಸೊಲ್ಯೂಶನ್ ನ  5.8 ಇಂಚು ಕ್ವಾಡ್ ಎಚ್ ಡಿ ಡಿಸ್ಪ್ಲೇ ಇದೆ. ವಿಶೇಷವೆಂದರೆ ಇದರಲ್ಲಿ ಒಂದಲ್ಲ, ಎರಡೆರಡು ಕ್ವಾಲ್ ಕಾಮ್ ಸ್ನ್ಯಾಪ್ ಡ್ರ್ಯಾಗನ್ 830  ಸಿಪಿಯುಗಳಿರುತ್ತವೆ ಎಂದು ಹೇಳಲಾಗಿದೆ. 12 ಜಿಬಿ ರಾಮ್ ಹಾಗು ಒಂದು ಟಿಬಿ ಇಂಟರ್ನಲ್ ಸ್ಟೋರೇಜ್  ಇದರ ಇನ್ನೆರಡು ದೊಡ್ಡ ವಿಶೇಷತೆಗಳು. ಮಾತ್ರವಲ್ಲ ಮೈಕ್ರೋ ಎಸ್ಡಿ ಕಾರ್ಡ್ ಮೂಲಕ ಸ್ಟೋರೇಜ್ ಅನ್ನು ಹೆಚ್ಚುವರಿ 500 ಜಿಬಿ ಗೆ ವಿಸ್ತರಿಸಿಕೊಳ್ಳಬಹುದು. 

ಈ ಹೊಸ ಫೋನ್ ನಲ್ಲಿ ಟ್ಯೂರಿಂಗ್ ಕಂಪೆನಿಯ ಸ್ವಂತ ಸೋರ್ಡ್ ಫಿಶ್ ಆಪರೇಟಿಂಗ್ ಸಿಸ್ಟಮ್ ಇದ್ದು ಐಮ್ಯಾಕ್ಸ್ 6ಕೆ ರೆಕಾರ್ಡಿಂಗ್ ವ್ಯವಸ್ಥೆ ಇರುವ 60 ಮೆಗಾ ಪಿಕ್ಸೆಲ್ ಕ್ಯಾಮರಾ ಇದೆ ! ಸಾಲದ್ದಕ್ಕೆ 20 ಮೆಗಾ ಪಿಕ್ಸೆಲ್ ನ ಡ್ಯೂಯಲ್ ಫ್ರಂಟ್ ಕ್ಯಾಮರ ಬೇರೆ ಇದೆ ! 

ಈವರೆಗಿನ ಮೊಬೈಲ್ಗಳಲ್ಲಿ ಎರಡು ಸಿಮ್ ಹಾಕಬಹುದಾಗಿದ್ದರೆ ಇದರಲ್ಲಿ ನಾಲ್ಕು ಸಿಮ್ ಹಾಕಬಹುದು ! ಗ್ರಾಫೀನ್ ಹಾಗು ಹೈಡ್ರೋಜನ್ ಫ್ಯೂಯೆಲ್ ಸೆಲ್ ಗಳ 100Wh ಬ್ಯಾಟರಿ ಇರುವುದರಿಂದ ಯಾವುದೇ ತಲೆ ಬಿಸಿ ಇಲ್ಲ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News