×
Ad

ಎಂ.ಕೃಷ್ಣಪ್ಪಗೆ ಸಚಿವ ಸ್ಥಾನ: ಇಂದು ಪ್ರಮಾಣ ವಚನ ಸ್ವೀಕಾರ?

Update: 2016-09-04 19:48 IST

ಬೆಂಗಳೂರು, ಸೆ.4: ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ ಹಾಗೂ ಹಿರಿಯ ಕಾಂಗ್ರೆಸ್ ಶಾಸಕ ಎಂ.ಕೃಷ್ಣಪ್ಪ ಸಚಿವ ಸಂಪುಟ ಸೇರ್ಪಡೆಯ ಕನಸು ನನಸಾಗಿದ್ದು, ಸೋಮವಾರ ಸಂಜೆ 4 ಗಂಟೆಗೆ ರಾಜಭವನದ ಗಾಜಿನ ಮನೆಯಲ್ಲಿ ನಡೆಯಲಿರುವ ಸರಳ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ರಾಜ್ಯಪಾಲ ವಜುಭಾಯಿವಾಲ ನೂತನ ಸಚಿವ ಎಂ.ಕೃಷ್ಣಪ್ಪಗೆ ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ. ಕಳೆದ ಜೂ.19ರಂದು ನಡೆದ ಸಚಿವ ಸಂಪುಟ ಪುನರ್ರಚನೆ ಸಂದರ್ಭದಲ್ಲಿ 13 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಪಟ್ಟಿಯಲ್ಲಿ 14ನೆಯವರಾಗಿದ್ದ ಎಂ.ಕೃಷ್ಣಪ್ಪ ಹೆಸರು ಅಂತಿಮ ಕ್ಷಣದಲ್ಲಿ ಕೈ ಬಿಡಲಾಗಿತ್ತು.

 ಇಂಧನ ಸಚಿವ ಡಿ.ಕೆ.ಶಿವಕುಮಾರ್ ಕೈವಾಡದಿಂದಲೆ ಕೃಷ್ಣಪ್ಪಗೆ ಸಚಿವ ಸ್ಥಾನ ಕೈ ತಪ್ಪಿದೆ ಎಂದು ಅವರ ಬೆಂಬಲಿಗರು ವಿಜಯನಗರದಲ್ಲಿ ಸಾಕಷ್ಟು ಪ್ರತಿಭಟನೆಗಳನ್ನು ಮಾಡಿದ್ದರು. ಅಲ್ಲದೆ, ಕೃಷ್ಣಪ್ಪರನ್ನು ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸಬೇಕೆಂದು ನಿರಂತರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದರು. ಹೈಕಮಾಂಡ್ ಮಟ್ಟದಲ್ಲಿ ಪ್ರಭಾವಿಯಾಗಿರುವ ಕೃಷ್ಣಪ್ಪ ಪಟ್ಟು ಬಿಡದೆ ಸಚಿವ ಸಂಪುಟ ಸೇರ್ಪಡೆಯ ಹಾದಿಯನ್ನು ಸುಗುಮಗೊಳಿಸಿಕೊಂಡಿದ್ದಾರೆ.

ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್‌ಸಿಂಗ್‌ರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಕೃಷ್ಣಪ್ಪರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವಂತೆ ಉಭಯ ನಾಯಕರು ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

 ಅಹಿಂದ ವರ್ಗಗಳಿಗೆ ಆದ್ಯತೆ ನೀಡುತ್ತಿದ್ದಾರೆ ಎಂಬ ಆಪಾದನೆಯನ್ನು ಹೊತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಬಲ ಸಮುದಾಯಗಳಾದ ಒಕ್ಕಲಿಗ ಹಾಗೂ ಲಿಂಗಾಯತರಿಗೂ ಸಮಾನ ಅವಕಾಶ ನೀಡುವ ಮೂಲಕ ತಮ್ಮ ವಿರೋಧಿಗಳಿಗೆ ತಕ್ಕ ಉತ್ತರ ನೀಡಿದ್ದಾರೆ.

ಒಕ್ಕಲಿಗ ಸಮುದಾಯದ ಎಂ.ಕೃಷ್ಣಪ್ಪರನ್ನು ಸಂಪುಟ ಸಚಿವರನ್ನಾಗಿ ಸೇರಿಸಿ ಕೊಳ್ಳುವದರ ಜೊತೆಗೆ ಪಶುಸಂಗೋಪನೆ ಸಚಿವ ಎ.ಮಂಜು ಹಾಗೂ ಲಿಂಗಾಯತ ಸಮುದಾಯಕ್ಕೆ ಸೇರಿದ ಗಣಿ ಮತ್ತು ಭೂ ವಿಜ್ಞಾನ ಸಚಿವ ವಿನಯ್‌ಕುಲಕರ್ಣಿಗೆ ರಾಜ್ಯಖಾತೆಯಿಂದ ಸಂಪುಟ ದರ್ಜೆಗೆ ಭಡ್ತಿ ನೀಡಲು ತೀರ್ಮಾನಿಸಿದ್ದಾರೆ.

ಅಂಬರೀಶ್‌ಗೆ ನಿರಾಸೆ

ಸಚಿವ ಸಂಪುಟ ಪುನರ್ರಚನೆ ಸಂದರ್ಭದಲ್ಲಿ ಸಚಿವ ಸ್ಥಾನ ಕಳೆದುಕೊಂಡ ಅಂಬರೀಶ್‌ಗೆ ಎಂ.ಕೃಷ್ಣಪ್ಪ ಸಂಪುಟ ಸೇರ್ಪಡೆಯಿಂದಾಗಿ ನಿರಾಸೆಯಾಗಿದೆ. ಅಲ್ಲದೆ, ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್‌ಗೆ ಸಚಿವ ಸ್ಥಾನ ಕೊಡಿಸಲು ಪ್ರಯತ್ನಪಟ್ಟಿದ್ದ ಸಚಿವ ಡಿ.ಕೆ.ಶಿವಕುಮಾರ್‌ಗೆ ಹೈಕಮಾಂಡ್ ತೀರ್ಮಾನ ದಿಂದ ಹಿನ್ನಡೆಯುಂಟಾಗಿದೆ.

ಬಾಕ್ಸ್.................

ವಸತಿ ಖಾತೆ ?

 ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಎಂ.ಕೃಷ್ಣಪ್ಪಗೆ ವಸತಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜವಾಬ್ದಾರಿ ವಹಿಸುವ ಸಾಧ್ಯತೆಗಳಿವೆ. ಸಂಪುಟ ಪುನರ್ರಚನೆ ಸಂದರ್ಭದಲ್ಲಿ ವಸತಿ ಸಚಿವರಾಗಿದ್ದ ಅಂಬರೀಶ್‌ರನ್ನು ಕೈ ಬಿಟ್ಟಿದ್ದರಿಂದ ವಸತಿ ಖಾತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬಳಿ ಇರಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News