ಕಾವೇರಿ ನೀರು ವಿವಾದ-ಸುಪ್ರೀಂ ಕೋರ್ಟ್ ತೀರ್ಪು ವಿರೋಧಿಸಿ ಸೆ.9ಕ್ಕೆ ಕರ್ನಾಟಕ ಬಂದ್
ಬೆಂಗಳೂರು, ಸೆ. 6: ತಮಿಳುನಾಡಿಗೆ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ವಿರೋಧಿಸಿ ಸೆ.9ಕ್ಕೆ ಕರೆ ನೀಡಿರುವ ಕರ್ನಾಟಕ ಬಂದ್ ಖಚಿತವಾಗಿದ್ದು, ಎಲ್ಲರೂ ಬೆಂಬಲ ಸೂಚಿಸಿದ್ದಾರೆ ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ನಗರದ ಕೆಂಪೇಗೌಡ ಬಸ್‌ನಿಲ್ದಾಣದಲ್ಲಿ ಕನ್ನಡ ಒಕ್ಕೂಟ-ಕರ್ನಾಟಕ ರಾಜ್ಯದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ, ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಪ್ರತಿಕೃತಿ ದಹಿಸಿ ಪ್ರತಿಭಟನೆಯ ನೇತೃತ್ವವಹಿಸಿ ಮಾತನಾಡಿದ ಅವರು, ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ವಿರೋಧಿಸಿ ಸೆ. 9ಕ್ಕೆ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದು, 960ಕ್ಕೂ ಹೆಚ್ಚಿನ ಕನ್ನಡಪರ ಸಂಘಟನೆಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿವೆ ಎಂದರು.
ಸುಪ್ರೀಂ ಕೋರ್ಟ್ ತೀರ್ಪು ಒಪ್ಪಲು ಸಾಧ್ಯವಿಲ್ಲ, ಕಾವೇರಿ ನದಿಯ ಒಂದು ಹನಿ ನೀರನ್ನೂ ಬಿಡಲ್ಲ, ಜೈಲಿಗೆ ಹೋಗಲು ನಾವು ಸಿದ್ಧರಿದ್ದೇವೆ. ನ್ಯಾಯಾಂಗ ನಿಂದನೆಯನ್ನೂ ಎದುರಿಸಲು ಸಿದ್ಧ ಎಂದ ಅವರು, ಸಾರಿಗೆ ನೌಕರರು, ಕನ್ನಡಪರ ಸಂಘಟನೆಗಳು, ರಿಕ್ಷಾ ಚಾಲಕರು-ಮಾಲಕರು, ಕಲಾವಿದರು, ಚಿತ್ರೋದ್ಯಮ, ಐಟಿಬಿಟಿ ಉದ್ಯೋಗಿಗಳು ಸೇರಿದಂತೆ ಎಲ್ಲರೂ ಬಂದ್‌ಗೆ ಬೆಂಬಲ ನೀಡಿದ್ದಾರೆ. ರಾಜ್ಯಾದ್ಯಂತ ಅಂದು ಬೆಳಗ್ಗೆ 6 ರಿಂದ ಸಂಜೆ 6ರವೆಗೆ ಬಂದ್ ನಡೆಸಲಾಗುತ್ತದೆ ಎಂದು ಮಾಹಿತಿ ನೀಡದರು.
ಪ್ರತಿಭಟನೆ ನಮಗೆ ಅನಿವಾರ್ಯವಾಗಿದೆ. ಪದೇ ಪದೇ ಬಂದ್ ಎಂದು ಜನರು ಬೇಸರಿಸಿಕೊಳ್ಳದೆ ಬೆಂಬಲ ನೀಡಬೇಕು ಎಂದ ಅವರು, ರಾಜ್ಯದ ಪಾಲಿಗೆ ಸುಪ್ರೀಂ ತೀರ್ಪು ಮರಣ ಶಾಸನವಾಗಿದೆ. ಅಲ್ಲದೆ, ಕಾವೇರಿ, ಕೃಷ್ಣಾ ರಾಜ್ಯದ ಎರಡು ಕಣ್ಣುಗಳಿದ್ದಂತೆ. ಎರಡರಲ್ಲಿಯೂ ನಮಗೆ ಅನ್ಯಾಯವಾಗುತ್ತಿದೆ. ಹಾಗಾಗಿ, ನಾವು ಹೋರಾಡುವುದು ಅನಿವಾರ್ಯ ಎಂದರು.
ಬೃಹತ್ ರ್ಯಾಲಿ:
ಸೆ.9 ರಂದು ಬೆಳಗ್ಗೆ 10 ಗಂಟೆಗೆ ನಗರದ ಟೌನ್‌ಹಾಲ್‌ನಿಂದ ಫ್ರೀಡಂ ಪಾರ್ಕ್‌ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲು ತೀರ್ಮಾನಿಸಲಾಗಿದೆ. ಅಂದು ಒಂದು ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಲಿದ್ದಾರೆ ಎಂದು ತಿಳಿಸಿದರು.
ಘೋಷಣೆಗಳ ಕೂಗು:
ಪ್ರತಿ ಬಾರಿ ಕ್ಯಾತೆ ತೆಗೆಯುವ ಜಗಳಗಂಟಿಯಾಗಿದ್ದಾರೆ ಎಂದು ಜಯಲಲಿತಾ ವಿರುದ್ಧ, ಸುಪ್ರೀಂಕೋರ್ಟ್‌ಗೆ ಸರಿಯಾಗಿ ಮಾಹಿತಿ ನೀಡಿಲ್ಲ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಹಾಗೂ ರಾಜ್ಯದ ಪರ ಸರಿಯಾಗಿ ವಾದ ಮಂಡನೆ ಮಾಡಿಲ್ಲ ಎಂದು ನಾರಿಮನ್ ವಿರುದ್ಧ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು, ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಶಿವರಾಮೇಗೌಡ, ಕನ್ನಡ ಕುಮಾರ್ ಸೇರಿ ಪ್ರಮುಖರು ಹಾಜರಿದ್ದರು.
ಬಂದ್‌ಗೆ ‘ಕಸಾಪ’ ಬೆಂಬಲ
ತಮಿಳುನಾಡಿಗೆ ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ವಿರೋಧಿಸಿ ಸೆ.9ಕ್ಕೆ ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಕನ್ನಡ ಸಾಹಿತ್ಯ ಪರಿಷತ್ತು ಬೆಂಬಲ ಘೋಷಿಸಿದೆ ಎಂದು ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ್ ಪ್ರಕಟನೆಯಲ್ಲಿ ಹೇಳಿದ್ದಾರೆ.
ತಮಿಳು ಚಿತ್ರ ಪ್ರದರ್ಶನ ರದ್ದು
ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪ್ರತಿಭಟನೆ ಕಾವೇರಿದೆ ಹಿನ್ನೆಲೆಯಲ್ಲಿ ಮಂಗಳವಾರ ನಗರದ ಶೇಷಾದ್ರಿಪುರಂನ ನಟರಾಜ ಚಿತ್ರಮಂದಿರದಲ್ಲಿ ನಟ ಶಶಿಕುಮಾರ್ ಅಭಿಯನದ ಖಿಡರಿ ಚಿತ್ರ ಪ್ರದರ್ಶಿಸಲಾಗುತ್ತಿತ್ತು. ಆದರೆ, ಗಲಾಟೆಗಳಾಗಬಹುದೆಂಬ ಮುಂಜಾಗರೂಕ ಕ್ರಮದಿಂದಾಗಿ ಚಿತ್ರ ಪ್ರದರ್ಶನ ರದ್ದುಪಡಿಸಲಾಗಿದೆ.