1857ರ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮದ್ರಸಗಳ ಪಾತ್ರ

Update: 2016-09-11 05:59 GMT

ವೌಲಾನಾ ಆಝಾದ್‌ರ ಅಲ್-ಹಿಲಾಲ್ ಪ್ರಕಾರ, ಬ್ರಿಟಿಷರ ವಿರುದ್ಧ ಶತಾಯಗತಾಯ ಹೋರಾಡಿದ ಹಝ್ರತ್ ಅಲಿಫ್ ಮುಜದ್ದಿದ್ ಸನಿ, ವೌಲಾನಾ ಅಜ್ಮಲ್ ಖಾನ್, ವೌಲಾನಾ ಸಯೀದ್ ಅತಾವುಲ್ಲಾ ಶಾ ಬುಖಾರಿ, ಅಲ್ಲಾಮ ಅನ್ವರ್ ಶಾ ಕಾಶ್ಮೀರಿ, ಅಶ್ಫಕುಲ್ಲಾ ಖಾನ್ ಕರೊರ್ವಿ, ವೌಲಾನಾ ಇಮಾಮ್ ಬಕ್ಷ್ ಶುಐಬ್, ವೌಲಾನಾ ಹಝ್ರತ್ ಮೊಹಾನಿ ಮತ್ತು ಶಾ ಅಬ್ದುರ್ ರಹೀಂ ರಾಯ್‌ಪುರಿ ಇವರೆಲ್ಲರೂ ಮದ್ರಸಾ ಶಿಕ್ಷಣ ಪಡೆದವರಾಗಿದ್ದರು. 

1857ರ ದಂಗೆಯ ವಿವಿಧ ಹಂತಗಳಲ್ಲಿ ಅರ್ಧ ಮಿಲಿಯನ್‌ಗಿಂತಲೂ ಹೆಚ್ಚು ಮುಸ್ಲಿಮರು ಭಾರತಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ. ಆದರೆ ಈ ಅಂಶ ಪ್ರಾಣತ್ಯಾಗ ಮಾಡಿದವರನ್ನು ದಫನ ಮಾಡಿದ ರೀತಿಯಲ್ಲೇ ಇತಿಹಾಸದಲ್ಲಿ ದಫನ ಮಾಡಲಾಗಿದೆ. ಈ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರು 9/11ರ ಘಟನೆಯ ನಂತರ ಇಡೀ ವಿಶ್ವಾದ್ಯಂತ ಸಂಶಯದ ಕಣ್ಣುಗಳಿಂದ ನೋಡಲ್ಪಡುವ ಮದ್ರಸಗಳಿಂದ ಬಂದವರಾಗಿದ್ದರು. 1997ರಲ್ಲಿ ನಾನು ಭಾರತದ ಸ್ವಾತಂತ್ರ್ಯೋತ್ಸವದ 50ನೆ ವರ್ಷದ ಸಂಭ್ರಮದಲ್ಲಿ ಆಯೋಜಿಸಲಾಗಿದ್ದ ಭವ್ಯ ಕಾರ್ಯಕ್ರಮದ ಸಾಕ್ಷಿದಾರ ಮತ್ತು ಭಾಗವಾಗಿದ್ದೆ.

ಆದರೆ ಈ ಕಾರ್ಯಕ್ರಮದಲ್ಲಿ ಇಂಗ್ಲಿಷರ ವಿರುದ್ಧ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಉಲಮಾ ಮತ್ತು ಮದ್ರಸಗಳ ಬಗ್ಗೆ ಒಂದು ಶಬ್ದವನ್ನೂ ಉಲ್ಲೇಖಿಸಲಿಲ್ಲ. ಪ್ರಸಿದ್ಧ ಪಂಜಾಬಿ ಸಾಹಿತಿ ಕರ್ತಾರ್ ಸಿಂಗ್ ದುಗ್ಗಲ್ ತಮ್ಮ ಆತ್ಮಚರಿತ್ರೆಯಲ್ಲಿ ಹೇಳುವಂತೆ ಭಾರತೀಯ ವೈದಿಕ ಮತ್ತು ಇಸ್ಲಾಮಿಕ್ ಸಂಪ್ರದಾಯಗಳನ್ನು ಉಳಿಸಿಕೊಳ್ಳುವಲ್ಲಿ ಭಾರತೀಯ ವೌಲ್ವಿಗಳು ಮತ್ತು ಪಂಡಿತರು ಏಕಮತ ಹೊಂದಿದ್ದರು. ‘‘ಉನ್ನತ ಶಿಕ್ಷಣ ಸಂಸ್ಥೆ’’ಗಳಾದ ಮದ್ರಸಗಳು ಧಾರ್ಮಿಕ ಮತ್ತು ವೈಜ್ಞಾನಿಕ ಜ್ಞಾನವನ್ನು ಪ್ರೋತ್ಸಾಹಿಸುವ ಸಲುವಾಗಿ ನಿರ್ಮಿಸಲ್ಪಟ್ಟ ಮೊಘಲ್ ಆಳ್ವಿಕೆಯ ಆಸ್ತಿಯಾಗಿವೆ ಎಂದು ಮದ್ರಸ ಮರ್ಕಝುಲ್ ಮಆರಿಫ್‌ನ ವೌಲಾನಾ ಉಮರ್ ಗೌತಮ್ ವಿವರಿಸುತ್ತಾರೆ.

1857ರಲ್ಲಿ ನಡೆದ ಸಿಪಾಯಿ ದಂಗೆಯ ಸಂದರ್ಭದಲ್ಲಿ ಮದ್ರಸಗಳು ರಾಷ್ಟ್ರೀಯತೆ ಯನ್ನು ಪ್ರೇರೇಪಿಸುವ ತಾಣಗಳಾಗಿದ್ದು, ಬ್ರಿಟಿಷರ ಆಕ್ರೋಶಕ್ಕೆ ತುತ್ತಾಗಿದ್ದವು. ನಂತರವೂ ಮದ್ರಸಗಳು ಬ್ರಿಟಿಷ್ ವಿರೋಧಿ ಚಳವಳಿಯ ತಾಣಗಳಾಗಿ ಉಳಿದವು. ದೇವ್‌ಬಂದ್ ಮದ್ರಸದ ಕಾರಣದಿಂದಾಗಿಯೇ 1919ರ ಜುಲೈ 9ರಂದು ವೌಲಾನಾ ಉಬೈದುಲ್ಲಾ ಸಿಂಧಿಯನ್ನು ವಿಶೇಷ ಕಾರ್ಯಕ್ಕಾಗಿ ಕಾಬೂಲ್‌ಗೆ ಕಳುಹಿಸುವ ಮೂಲಕ ಅಲ್ಲಿ ಗಡಿಪಾರುಗೊಂಡ ಮೇಲೂ ಭಾರತೀಯ ಸರಕಾರವನ್ನು ರಚಿಸಲಾಗಿತ್ತು. ಮಹಾರಾಜಾ ಪ್ರತಾಪ್ ಸಿಂಗ್ ಆ ಸರಕಾರದ ಅಧ್ಯಕ್ಷರಾಗಿದ್ದರೆ ಶೇಖುಲ್ ಹಿಂದ್ ವೌಲಾನಾ ಮಹ್ಮೂದುಲ್ ಹಸನ್ ಅದರ ಪ್ರಧಾನಮಂತ್ರಿಯಾಗಿದ್ದರು.

ವೌಲಾನಾ ಬರ್ಕತುಲ್ಲಾ ಭೋಪಾಲಿ ಮತ್ತು ವೌಲಾನಾ ಉಬೈದುಲ್ಲಾ ಸಿಂಧಿ ಮಂತ್ರಿಗಳಾಗಿದ್ದರು. ದಿಲ್ಲಿ ಉರ್ದು ಅಕ್ಬರ್‌ನಲ್ಲಿ ಉಲ್ಲೇಖಿಸಿದಂತೆ, ಶೇಖುಲ್ ಇಸ್ಲಾಮ್ ವೌಲಾನಾ ಹುಸೈನ್ ಅಹ್ಮದ್ ಮದನಿ, ವೌಲಾನಾ ವಹೀದ್ ಫೈಝಾಬಾದಿ, ವೌಲಾನಾ ಅಝೀಝ್ ಗುಲ್ ಮತ್ತು ಹಕೀಂ ಸಯೀದ್ ನುಸ್ರತ್ ಹುಸೈನ್ ಸೇರಿದಂತೆ 222 ಉಲಮಾಗಳನ್ನು ಬಂಧಿಸಲಾಗಿತ್ತು. ಇವರನ್ನು 1917ರ ಫೆೆಬ್ರವರಿ 21ರಂದು ಕೈರೊ ಮೂಲಕ ಮಾಲ್ಟಾಕ್ಕೆ ಕಳುಹಿಸಿ 1920ರ ಜೂನ್ 8ರಂದು ಬಿಡುಗಡೆ ಮಾಡಲಾಯಿತು. ಅಲ್ಲಿ ತಮ್ಮ ಜೀವಿತಾವಧಿಯನ್ನೇ ಕಳೆದ ಇನ್ನೂ ಹಲವರಿದ್ದರು.

1920ರಲ್ಲಿ ಖಿಲಾಫತ್ ಸಮಿತಿಯ ಸದಸ್ಯರು ಅಸಹಕಾರ ಚಳವಳಿಯನ್ನು ಬೆಂಬಲಿಸಿದ್ದರು. ದಿಲ್ಲಿಯ ಅಲ್ ಜಮೀಯತ್ ಉರ್ದು ದೈನಿಕದಲ್ಲಿ ಪ್ರಕಟವಾದ 500 ಉಲಮಾಗಳು ಸಹಿ ಹಾಕಿದ್ದ ಫತ್ವಾವು ಬ್ರಿಟಿಷ್ ಸರಕಾರವನ್ನು ಹರಾಂ (ಶರಿಯಾದಿಂದ ನಿಷೇಧಿಸಲ್ಪಟ್ಟ) ಎಂದು ಘೋಷಿಸಿತ್ತು. ಇದು ಹಿಂದೂಗಳು ಇಂಗ್ಲಿಷರನ್ನು ವಿರೋಧಿಸಿ ಶುದ್ಧೀಕರಣ ಅಭಿಯಾನ ಆರಂಭಿಸಲು ಪ್ರೇರಣೆ ನೀಡಿತು.

ಮದ್ರಸಗಳು ದೇಶ ಮತ್ತು ಮುಸ್ಲಿಂ ಸಮುದಾಯಕ್ಕೆ ನೀಡಿದ ಸೇವೆಯು ಒಂದು ನೈಜ ಸತ್ಯ. ಈ ಮದ್ರಸಗಳು ಮಾನವ, ಇಸ್ಲಾಮ್ ಮತ್ತು ಸಾಮಾಜಿಕ ವೌಲ್ಯಗಳನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿವೆ. ಈ ಸಂಸ್ಥೆಗಳು ಇಸ್ಲಾಮಿಕ್ ಸಂಪ್ರದಾಯಗಳ ಉಳಿವಿನಲ್ಲೂ ಮುಖ್ಯ ಪಾತ್ರ ನಿಭಾಯಿಸಿವೆ- ಹರಡುವಿಕೆ, ಇಸ್ಲಾಂ ಸಾಹಿತ್ಯಗಳ ಮುದ್ರಣ, ಇಸ್ಲಾಮಿಕ್ ನಂಬಿಕೆಗಳ ರಕ್ಷಣೆ ಮತ್ತು ಇಸ್ಲಾಮಿಕ್ ಸಂಸ್ಕೃತಿ ಮತ್ತು ನಾಗರಿಕತೆಯ ಅಭಿವೃದ್ಧಿಯ ಜೊತೆಗೆ ದೇಶದ ಅಭಿವೃದ್ಧಿಯಲ್ಲೂ ಕಾಣಿಕೆ ನೀಡಿದೆ. ವೌಲಾನಾ ಆಝಾದ್‌ರ ಅಲ್-ಹಿಲಾಲ್ ಪ್ರಕಾರ, ಬ್ರಿಟಿಷರ ವಿರುದ್ಧ ಶತಾಯಗತಾಯ ಹೋರಾಡಿದ ಹಝ್ರತ್ ಅಲಿಫ್ ಮುಜದ್ದಿದ್ ಸನಿ, ವೌಲಾನಾ ಅಜ್ಮಲ್ ಖಾನ್, ವೌಲಾನಾ ಸಯೀದ್ ಅತಾವುಲ್ಲಾ ಶಾ ಬುಖಾರಿ, ಅಲ್ಲಾಮ ಅನ್ವರ್ ಶಾ ಕಾಶ್ಮೀರಿ, ಅಶ್ಫಕುಲ್ಲಾ ಖಾನ್ ಕಕೊರ್ವಿ, ವೌಲಾನಾ ಇಮಾಮ್ ಬಕ್ಷ್ ಶುಐಬ್, ವೌಲಾನಾ ಹಝ್ರತ್ ಮೊಹಾನಿ ಮತ್ತು ಶಾ ಅಬ್ದುರ್ ರಹೀಂ ರಾಯ್‌ಪುರಿ ಇವರೆಲ್ಲರೂ ಮದ್ರಸಾ ಶಿಕ್ಷಣ ಪಡೆದವರಾಗಿದ್ದರು.

ಇನ್ನು ಹಿಂದೂ-ಮುಸ್ಲಿಂ ಬಾಂಧವ್ಯದ ಸಂಕೇತವಾಗಿದ್ದ ಬಹದೂರ್ ಶಾ ಝಫರ್ ಅವರ ತ್ಯಾಗವನ್ನು ಯಾರು ಮರೆಯಲು ಸಾಧ್ಯ? ಇನ್ನು ಇಂಗ್ಲಿಷರಿಂದ ಅತ್ಯಾಚಾರಕ್ಕೊಳಗಾಗುವ ಬದಲು ಅವರ ವಿರುದ್ಧ ಹೋರಾಡುತ್ತಾ ಪ್ರಾಣತ್ಯಾಗ ಮಾಡಿದ ಮುಸ್ಲಿಂ ಮಹಿಳೆಯರಾದ ಚಾಂದ್ ಬೀಬಿ, ಬೇಗಂ ಹಝ್ರತ್ ಮಹಲ್ ಮತ್ತು ಬೇಗಂ ಝೀನತ್ ಮಹಲ್‌ರನ್ನು ಯಾರಾದರೂ ಮರೆಯಲು ಸಾಧ್ಯವೇ? ಬ್ರಿಟಿಷರ ಭಾರತವನ್ನು ಗುಲಾಮಗಿರಿಗೆ ಒಳಪಡಿಸುವ ಯೋಜನೆಯನ್ನು ಮೊಟ್ಟಮೊದಲ ಬಾರಿಗೆ ಅರಿತ ವ್ಯಕ್ತಿ ಶಾ ವಲಿಯುಲ್ಲಾ ಮುಹದ್ದಿಸ್ ದೆಹ್ಲವಿ ಇದೇ ಇಸ್ಲಾಮಿಕ್ ಮದ್ರಸದ ಕೊಡುಗೆಯಾಗಿದ್ದಾರೆ. ಅವರೊಬ್ಬ ಉನ್ನತ ಸಂತ ಕೂಡಾ ಆಗಿದ್ದರು.

ಶಾ ವಲಿಯುಲ್ಲಾ ಮುಹದ್ದಿಸ್ ದೆಹ್ಲವಿಯವರು ತಮ್ಮ ಕಣ್ಣುಗಳಿಂದ ದೇಶದ ಸರ್ವನಾಶವನ್ನು ಕಂಡಿದ್ದರು ಎಂದು ಲಾಹೋರ್‌ನ ಸವೇರಾ ಉರ್ದು ಮಾಸಿಕ ತಿಳಿಸುತ್ತದೆ. ಯೂರೋಪ್ ಮತ್ತು ಏಷ್ಯಾದಲ್ಲಿರುವ ಪರಿಸ್ಥಿತಿಗಳನ್ನು ಆಳವಾಗಿ ಅಧ್ಯಯನ ನಡೆಸಿದ ನಂತರ ಭಾರತದಿಂದ ಬ್ರಿಟಿಷರನ್ನು ಹೊರದಬ್ಬುವ ದೃಷ್ಟಿಕೋನದಿಂದ ಭವಿಷ್ಯದ ಸರಕಾರಕ್ಕೆ ಕೆಲವು ಸುಧಾರಣಾತ್ಮಕ ಯೋಚನೆಗಳ ಸಲಹೆ ನೀಡಿದ್ದರು.

ಇದಕ್ಕಾಗಿ ಚಳವಳಿಯನ್ನು ಆರಂಭಿಸಿದ ಅವರು ಮದ್ರಸಗಳನ್ನು ರಾಷ್ಟ್ರೀಯ ಅಭಿಯಾನಗಳ ಕೇಂದ್ರವನ್ನಾಗಿಸಿದರು. 1731ರಲ್ಲಿ ದೇಶದ ಸ್ವಾತಂತ್ರ್ಯದ ಯೋಜನೆಯನ್ನು ಶಾ ಸಾಹಬ್ ಮತ್ತು ಉಲಮಾಗಳಾದ ಶಾ ಅಬ್ದುಲ್ ಅಝೀಝ್ ಮತ್ತು ಶಾ ರಫೀಯುದ್ದೀನ್ ಅವರ ನೇತೃತ್ವದಲ್ಲಿ ರಚಿಸಲಾಗಿತ್ತು. ಶಾ ಸಾಹಬ್‌ರ ಕಲ್ಪನೆ ಮತ್ತು ಯೋಚನೆಗಳ ನಿಜವಾದ ವಾರಿಸುದಾರರು ಇಮಾಮೆ ಹುರಿಯತ್, ಶಾ ಅಬ್ದುಲ್ ಅಝೀಝ್ ಮುಹದ್ದಿಸ್ ದೆಹ್ಲವಿ ಆಗಿದ್ದಾರೆ. ಯಾಕೆಂದರೆ ಇವರು ಬ್ರಿಟಿಷರ ವಿರುದ್ಧ ದಂಗೆಯ ಕಮಾನನ್ನು ಹಿಡಿದು ದೇಶವು ಗುಲಾಮಗಿರಿಗೆ ಒಳಗಾಗಿದೆ ಮತ್ತು ಸ್ವಾತಂತ್ರ್ಯಕ್ಕಾಗಿ ಜಿಹಾದಿ ಯುದ್ಧ ನಡೆಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಫತ್ವಾ ಹೊರಡಿಸಿದ್ದರು.

ಇಮಾಮೆ ಹುರಿಯತ್‌ರ ಈ ಘೋಷಣೆಯ ನಂತರ ಮದ್ರಸಗಳು ದೇಶದ ಸ್ವಾತಂತ್ರ್ಯವನ್ನೇ ತಮ್ಮ ಜೀವನದ ಗುರಿಯನ್ನಾಗಿಸಿದವು. 1818ರಿಂದ 1831ರ ಸಮಯದಲ್ಲಿ ಸಯೀದ್ ಅಹ್ಮದ್ ಶಾಹಿದ್ ಬರೇಲ್ವಿಯವರ ನೇತೃತ್ವದಲ್ಲಿ ಉಲಮಾಗಳ ದೇಶಾದ್ಯಂತ ಪ್ರವಾಸ ನಡೆಸಿತು. 1831ರಲ್ಲಿ ಬಾಲಕೋಟ್‌ನಲ್ಲಿ ಬ್ರಿಟಿಷರ ವಿರುದ್ಧ ಹೋರಾಡುವ ಸಂದರ್ಭದಲ್ಲಿ ಸಯೀದ್ ಅಹ್ಮದ್ ಶಹೀದ್ ಮತ್ತವರ ನೈಜ ಅನುಯಾಯಿ ಇಸ್ಮಾಯೀಲ್ ಶಹೀದ್ ದೇಶಕ್ಕಾಗಿ ಪ್ರಾಣವನ್ನೇ ಅರ್ಪಿಸಿ ಹುತಾತ್ಮರಾದರು.
ಅವರ ಸಾವುಗಳು ಸ್ವಾತಂತ್ರ್ಯ ಹೋರಾಟದ ಅಲೆಯನ್ನು ಚಂಡಮಾರುತವನ್ನಾಗಿ ಬದಲಾಯಿಸಿತು.

ಕೃಪೆ: hindustantimes.com

Writer - ಫಿರೋಝ್ ಭಕ್ತ್ ಅಹ್ಮದ್

contributor

Editor - ಫಿರೋಝ್ ಭಕ್ತ್ ಅಹ್ಮದ್

contributor

Similar News