ಮಾಹಿತಿ ನಿರಾಕರಣೆ: ರಾಜಭವನಕ್ಕೆ 5 ಸಾವಿರ ರೂ.ದಂಡ

Update: 2016-09-11 14:52 GMT

ಬೆಂಗಳೂರು, ಸೆ. 11: ರಾಜ್ಯಪಾಲರ ಕಾರ್ಯ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ರಾಜಭವನಕ್ಕೆ ಮಾಹಿತಿ ಆಯುಕ್ತರು 5 ಸಾವಿರ ರೂ.ದಂಡ ವಿಧಿಸಿರುವುದು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ದಾಖಲೆಗಳಿಂದ ಬಯಲಾಗಿದೆ.
ರಾಜ್ಯಪಾಲ ವಜುಭಾಯಿ ವಾಲಾ ಅವರು 2014ರ ಅಕ್ಟೋಬರ್ 4ರಿಂದ 2016ರ ಜೂನ್ 29ರ ಮಧ್ಯೆ ಗುಜರಾತಿನ ಭಾವನಗರ ಸೇರಿದಂತೆ ರಾಜ್ಯದ ವಿವಿಧೆಡೆಗೆ ವಿಮಾನ ಹಾಗೂ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಲು ಒಟ್ಟು 2,89,87,899 (2.89 ಕೋಟಿ ರೂ.) ರೂ.ಗಳನ್ನು ವೆಚ್ಚ ಮಾಡಿರುವುದು ಬೆಳಕಿಗೆ ಬಂದಿದೆ.
ಆದರೆ, 2009ರಿಂದ 2014ರ ವರೆಗೆ ಆರು ವರ್ಷಗಳ ಕಾಲ ರಾಜ್ಯಪಾಲರಾಗಿದ್ದ ಎಚ್.ಆರ್.ಭಾರದ್ವಾಜ್ ಅವರ ವಿಮಾನಯಾನ ವೆಚ್ಚ ಕೇವಲ 67, 82,745 ರೂ. (67.82ಲಕ್ಷ ರೂ.)ಗಳನ್ನು ವೆಚ್ಚ ಮಾಡಿದ್ದಾರೆಂಬ ಅಂಶ ಸಾಮಾಜಿಕ ಹೋರಾಟಗಾರ ಟಿ. ನರಸಿಂಹ ಮೂರ್ತಿ ಆರ್‌ಟಿಐನಡಿ ಪಡೆದ ದಾಖಲೆಗಳಿಂದ ಗೊತ್ತಾಗಿದೆ.
ಸಂವಿಧಾನ ವಿರೋಧಿ: ರಾಜ್ಯಪಾಲರ ವಿಮಾನಯಾನ ವೆಚ್ಚದ ಮಾಹಿತಿ ಕೋರಿ 2015ರ ಆ.21ರಂದು ರಾಜಭವನಕ್ಕೆ ಅರ್ಜಿ ಸಲ್ಲಿಸಿದ್ದೆ. ಆದರೆ, ಅದಕ್ಕೆ ಯಾವುದೆ ಉತ್ತರ ದೊರೆಯಲಿಲ್ಲ. ಆ ಹಿನ್ನೆಲೆಯಲ್ಲಿ ಅಕ್ಟೋಬರ್ 15ರಂದು ಮೇಲ್ಮನವಿ ಸಲ್ಲಿಸಿದೆ. ನ.9ರಂದು ವಿಚಾರಣೆಗೆ ಕರೆದು ಕೋರ್ಟ್‌ನಲ್ಲಿರುವ ಪ್ರಕರಣವೊಂದನ್ನು ಉಲ್ಲೇಖಿಸಿ ಮಾಹಿತಿ ನಿರಾಕಸಿದರು ಎಂದು ನರಸಿಂಹಮೂರ್ತಿ ಆರೋಪಿಸಿದ್ದಾರೆ.
ರಾಜ್ಯದ ಮುಖ್ಯಸ್ಥರಾಗಿರುವ ರಾಜ್ಯಪಾಲರು ಮತ್ತು ರಾಜಭವನ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅತೀತವಲ್ಲ. ಕಾಯ್ದೆಗಳನ್ನು ಪಾಲಿಸಬೇಕಾದವರೇ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದರೆ ಮಾಹಿತಿ ನೀಡದೆ ಉಲ್ಲಂಘಿಸಿರುವುದು ಸಂವಿಧಾನ ವಿರೋಧಿ ಎಂದು ನರಸಿಂಹಮೂರ್ತಿ ದೂರಿದರು.
2016ರ ಜೂನ್ 22ರಂದು ತಮಿಳುನಾಡು ರಾಜಭವನಕ್ಕೆ ಮಾಹಿತಿ ಕಾಯ್ದೆಯಡಿ ರಾಜ್ಯಪಾಲರ ವಿಮಾನಯಾನ ವೆಚ್ಚದ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದೆ. ಒಂದೇ ವಾರದಲ್ಲೆ ಮಾಹಿತಿ ನೀಡಿದರು ಎಂದ ಅವರು, ರಾಜ್ಯದಲ್ಲಿ ಮಾಹಿತಿ ನೀಡಲು ನಿರಾಕರಣೆ ಸರಿಯಲ್ಲ ಎಂದು ಆಕ್ಷೇಪಿಸಿದರು.
 ದಂಡ ಪಾವತಿ: 2015ರ ಡಿ.3ರಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರ ನೇಮಕ ಸಂಬಂಧ ರಾಜ್ಯಪಾಲರ ನಿಲುವಿನ ಬಗ್ಗೆ ತಾನು ಮಾಹಿತಿ ಕೋರಿದ್ದೆ. ಆ ವೇಳೆ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಮಾಹಿತಿ ಹಕ್ಕು ಆಯುಕ್ತರು 5 ಸಾವಿರ ರೂ.ದಂಡ ವಿಧಿಸಿದ್ದು, ಅದನ್ನು ರಾಜಭವನ ಪಾವತಿಸಿದೆ ಎಂದು ನರಸಿಂಹ ಮೂರ್ತಿ ದಾಖಲೆಗಳನ್ನು ಪ್ರದರ್ಶಿಸಿದರು.


 ‘ರಾಜ್ಯಪಾಲ ವಜುಭಾಯಿ ವಾಲಾ 42ದಿನಗಳಲ್ಲಿ ವಿಮಾನ ಹಾಗೂ ಹೆಲಿಕಾಪ್ಟರ್ ಪ್ರಯಾಣಕ್ಕೆ 2.89 ಕೋಟಿ ರೂ.ಗಳನ್ನು ವೆಚ್ಚ ಮಾಡಿದ್ದಾರೆ. ಆ ಪೈಕಿ ಬೆಂಗಳೂರಿನಿಂದ ತೋರಣಗಲ್, ಅಲ್ಲಿಂದ ಗುಜರಾತ್‌ಗೆ ವಿಶೇಷ ವಿಮಾನಯಾನಕ್ಕೆ 11.88ಲಕ್ಷ ರೂ.ವೆಚ್ಚ ಮಾಡಿರುವುದು ಮಾಹಿತಿ ಹಕ್ಕಿನಡಿ ಪಡೆದ ದಾಖಲೆಗಳಿಂದ ಗೊತ್ತಾಗಿದೆ’
-ಟಿ.ನರಸಿಂಹಮೂರ್ತಿ ಸಾಮಾಜಿಕ ಹೋರಾಟಗಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News