ಭಾರತದಲ್ಲಿ ಮಹಿಳಾ ಶಿಕ್ಷಣದ ಮಹಾಮಾತೆ; ಸಾವಿತ್ರಿಬಾಯಿ ಫುಲೆ

Update: 2016-09-13 09:35 GMT

ಸಾವಿತ್ರಿಬಾಯಿ ಕೇವಲ ಶಿಕ್ಷಣತಜ್ಞೆ ಮಾತ್ರವಲ್ಲದೇ, ಮಾನವತಾವಾದಿ, ಸಾಮಾಜಿಕ ಕ್ರಾಂತಿಕಾರಿ, ಲೇಖಕಿ ಹಾಗೂ ಕವಯಿತ್ರಿಯೂ ಆಗಿದ್ದರು. ದುರ್ಬಲ ಹಾಗೂ ಕೆಳವರ್ಗದ ಮಹಿಳೆಯರು ಹಾಗೂ ಮಕ್ಕಳ ಸಬಲೀಕರಣಕ್ಕೆ ಹೋರಾಡಿದ ಮೊಟ್ಟಮೊದಲ ಭಾರತೀಯ ಮಹಿಳೆ ಅವರು. ಅವರ ಮೊಟ್ಟಮೊದಲ ಕವನ ಸಂಕಲನ ‘‘ಕಬ್ಯೆ ಫುಲೆ’’ 1854ರಲ್ಲಿ ಬಿಡುಗಡೆಯಾಯಿತು. ಈ ದೇಶದ ಮೂಲನಿವಾಸಿಗಳಿಗೆ ಆರ್ಯನ್ನರು ಶಿಕ್ಷಣಕ್ಕೆ ಅವಕಾಶ ನೀಡದ ಕಾರಣದಿಂದ ಬ್ರಿಟಿಷ್ ದಾಸ್ಯಕ್ಕೆ ದೇಶ ಈಡಾಯಿತು ಎಂದು ಒಂದು ಕವನದಲ್ಲಿ ಅವರು ವಿವರಿಸಿದ್ದರು.

ಸಮಾಜದ ದುರ್ಬಲ ವರ್ಗದವರ ಏಳಿಗೆಗಾಗಿ ತಮ್ಮ ಇಡೀ ಜೀವನವನ್ನು ಸವೆಸಿದ ಕ್ರಾಂತಿಕಾರಿ ಮಹಿಳೆ ಸಾವಿತ್ರಿಬಾಯಿ ಫುಲೆ ಹುಟ್ಟಿದ್ದು, 1831ರ ಜನವರಿ 3ರಂದು ಮಹಾರಾಷ್ಟ್ರದ ಸತಾರ ಜಿಲ್ಲೆಯ ಖಂಡಾಲಾ ತಾಲೂಕಿನ ನಯಾ ಗಂಜ್ ಗ್ರಾಮದಲ್ಲಿ. ಭಾರತದ ಇತಿಹಾಸದಲ್ಲೇ ಇಂಥ ಸಾಹಸಕ್ಕೆ ಕೈ ಹಾಕಿದ ಮೊಟ್ಟಮೊದಲ ಮಹಿಳೆ. ಅವರ ಹೆಸರು ಸಾವಿತ್ರಿಬಾಯಿ. ತಂದೆ ಖಡೋ ಜಿ ನೆವ್ಸೆ ಪಾಟೀಲ್. ಇಂಥ ಕಿಡಿಯೊಂದು ಮುಂದೆ ಸಮಾಜದಲ್ಲಿ ತುಳಿತಕ್ಕೊಳಗಾದ, ಅನಕ್ಷರಸ್ಥ, ಬಡ, ಉಡಲು ಬಟ್ಟೆಯಿಲ್ಲದ ನಿರ್ಗತಿಕರ ಬಾಳಿನ ದೀವಿಗೆಯಾಗುತ್ತದೆ ಎಂದು ಸಾವಿತ್ರಿ ಹುಟ್ಟಿನ ವೇಳೆ ಯಾರೂ ಎಣಿಸಿರಲ್ಲ. ತಮ್ಮದೇ ಸಮಾಜದಲ್ಲಿ ಜಾತಿ ಹಾಗೂ ಲಿಂಗ ತಾರತಮ್ಯ ತಾಂಡವವಾಡುತ್ತಿರುವಾಗ ಆ ವ್ಯವಸ್ಥೆಯಲ್ಲಿ ಬೆಳೆದ ಮಹಿಳೆಯೊಬ್ಬರು ದೀನ ದಲಿತರ ಬಾಳಿನಲ್ಲಿ ಮಿಂಚು ಸಂಚಾರಕ್ಕೆ ಕಾರಣರಾಗುತ್ತಾರೆ ಎಂಬ ಕಲ್ಪನೆಯೂ ಇರಲಿಲ್ಲ.

ಒಂಬತ್ತು ವರ್ಷದವರಿದ್ದಾಗಲೇ 1840ರಲ್ಲಿ ಅವರನ್ನು ಶ್ರೇಷ್ಠ ಸಾಮಾಜಿಕ ಕ್ರಾಂತಿಕಾರ ಜ್ಯೋತಿರಾವ್ ಫುಲೆ ಅವರಿಗೆ ವಿವಾಹ ಮಾಡಿಕೊಡಲಾಯಿತು. ಆಗ ಜ್ಯೋತಿರಾವ್ ಅವರಿಗೆ 13 ವರ್ಷ. ಈ ಎರಡು ಕಿಡಿಗಳು ಒಂದಾಗಿ ಮುಂದೆ ಇಡೀ ಸಮಾಜದ ಲಕ್ಷಾಂತರ ಮಂದಿಯ ಬಾಳಿಗೆ ದಾರಿ ತೋರುವ ದೀಪಸ್ತಂಭಗಳಾಗಿ ಬೆಳೆದರು. ಸಮಾಜದ ಲಕ್ಷಾಂತರ ಮಂದಿಯನ್ನು ಅನಕ್ಷರತೆ, ಕೀಳಾಗಿ ನಡೆಸಿಕೊಳ್ಳುವ ಹಾಗೂ ಅಜ್ಞಾನದ ಕೂಪದಿಂದ ಹೊರಕ್ಕೆ ತಂದರು. ಮೇಲ್ವರ್ಗದ ಹಿಂದೂಗಳ ದಬ್ಬಾಳಿಕೆಗೆ ಸಿಲುಕಿದ್ದ ಈ ವರ್ಗಕ್ಕೆ ಹೊಸ ಬದುಕು ಕಲ್ಪಿಸಿದರು. ಇಬ್ಬರೂ ಜತೆಯಾಗಿ ಹೋರಾಡಿ, ಭಾರತದಲ್ಲಿ ತುಳಿತಕ್ಕೊಳಗಾದ ವರ್ಗದ ಜನ ಗೌರವಯುತ ಬದುಕು ಸಾಗಿಸುವಂತೆ ಮಾಡಿದರು. ಈ ಹಿನ್ನೆಲೆಯಲ್ಲಿ ನಂತರ ಇವರನ್ನು ಮಹಾತ್ಮ ಜ್ಯೋತಿರಾವ್ ಫುಲೆ ಎಂದು ಕರೆಯಲಾಯಿತು. ಅನಕ್ಷರತೆ ಎಲ್ಲ ಅನಿಷ್ಟಗಳ ಮೂಲ ಎಂದು ಅವರು ವಿಶ್ಲೇಷಿಸಿದರು. ಈ ಅನಿಷ್ಟವೇ ಬೌದ್ಧಿಕತೆ ಬೆಳವಣಿಗೆಗೆ ತಡೆಯೊಡ್ಡಿದ ಪರಿಣಾಮವಾಗಿ ಇಡೀ ಜನಾಂಗದ ಬೆಳವಣಿಗೆ ತಟಸ್ಥವಾಯಿತು. ಶ್ರೀಮಂತರ ಎದುರು ಪದೇ ಪದೇ ಸೋಲುತ್ತಲೇ ಬಂದದ್ದು ಶೂದ್ರರ ಅವನತಿಗೆ ಕಾರಣವಾಯಿತು ಎನ್ನುವುದು ಅವರ ಚಿಂತನೆಯಾಗಿತ್ತು. ಬ್ರಾಹ್ಮಣ್ಯ ಸಾಹಿತ್ಯದಲ್ಲಿ ಶೂದ್ರರಿಗೆ ವಿದ್ಯಾಭ್ಯಾಸ ನಿಷೇಧಿಸಿದ್ದು, ಅವರ ಅವನತಿಗೆ ಕಾರಣವಾಯಿತು. ಈ ಹಿನ್ನೆಲೆಯಲ್ಲಿ ಶೂದ್ರ ಶಿಕ್ಷಣದಿಂದಲೇ ಅವರ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಈ ದಂಪತಿ ಬಲವಾಗಿ ನಂಬಿದ್ದರು.

ಸಾವಿತ್ರಿಬಾಯಿ ಫುಲೆ ತಮ್ಮ ಪತಿಯಿಂದಲೇ ಮನೆಯಲ್ಲಿ ಶಿಕ್ಷಣ ಪಡೆದವರು. ಫುಲೆ 1847ರಲ್ಲಿ ಪೂನಾದ ಸ್ಕಾಟಿಷ್ ಮಿಷಿನ್ ಹೈಸ್ಕೂಲ್‌ನಲ್ಲಿ ಸೆಕೆಂಡರಿ ಶಿಕ್ಷಣ ಪರೀಕ್ಷೆಯಲ್ಲಿ ಉತ್ತೀರ್ಣರಾದರೂ, ಯಾವುದೇ ಸರಕಾರಿ ಉದ್ಯೋಗ ಸ್ವೀಕರಿಸದಿರಲು ನಿರ್ಧರಿಸಿದರು. ಪೈನ್ ಅವರ ಪ್ರಸಿದ್ಧ ಕೃತಿ ‘‘ದ ರೈಟ್ಸ್ ಆಪ್ ಮ್ಯಾನ್’’ ಜ್ಯೋತಿರಾವ್ ಫುಲೆ ಅವರ ಯುವ ಮನಸ್ಸನ್ನು ಕ್ರಾಂತಿಕಾರಿಯಾಗುವಂತೆ ಮಾಡಿತು. ಇವರು ಸಹಜವಾಗಿಯೇ ಸಾವಿತ್ರಿಬಾಯಿಯವರ ಮೇಲೂ ಈ ಪ್ರಭಾವ ಬೀರಿದರು. ಇದರಿಂದಾಗಿ ತನ್ನ ಎಲ್ಲ ಬದುಕಿನ ಐಷಾರಾಮಿ ಜೀವನ ಹಾಗೂ ಬದುಕನ್ನು ಬಲಿಕೊಟ್ಟಾದರೂ, ಸಾಮಾಜಿಕ ಕ್ರಾಂತಿಯಲ್ಲಿ ಪತಿಗೆ ಸಹಕರಿಸುವುದಾಗಿ ಅವರು ಪ್ರತಿಜ್ಞೆ ಮಾಡಿದರು.

 ಸಂಪ್ರದಾಯವಾದಿ ಹಿಂದೂ ಮೇಲ್ವರ್ಗದವರಿಂದ ಭಾರೀ ವಿರೋಧದ ನಡುವೆಯೂ ಈ ದಂಪತಿ ಜತೆಯಾಗಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ 1848ರಲ್ಲಿ ಮೊಟ್ಟಮೊದಲ ಶಾಲೆ ತೆರೆದರು. ಸಂಪ್ರದಾಯವಾದಿ ಹಿಂದೂಗಳ ಕಾನೂನಿನ ಪ್ರಕಾರ, ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವುದು ಕಾನೂನುಬಾಹಿರ. ಅತ್ಯಂತ ಜ್ಞಾನದಾಯಕ ವೇದಗಳನ್ನು ಜೀರ್ಣಿಸಿಕೊಂಡಿ ರುವುದಾಗಿ ಹೇಳಿಕೊಳ್ಳುತ್ತಿದ್ದ ಇವರು ವಾಸ್ತವವಾಗಿ ಶೂದ್ರರು ಹಾಗೂ ಹೆಣ್ಣುಮಕ್ಕಳನ್ನು ಪ್ರಾಣಿಗಳಿಗಿಂತ ಕೀಳಾಗಿ ನಡೆಸಿಕೊಳ್ಳುತ್ತಿದ್ದರು. ಹೊಸ ಹೆಣ್ಣುಮಕ್ಕಳ ಶಾಲೆಯಲ್ಲಿ ಪಾಠ ಮಾಡಲು ಯಾವ ಮೇಲ್ವರ್ಗದ ಹಿಂದೂ ಶಿಕ್ಷಕರೂ ಮುಂದೆ ಬರಲಿಲ್ಲ. ಏಕೆಂದರೆ ಇಲ್ಲಿ ಹಿಂದೂ ಹೆಣ್ಣುಮಕ್ಕಳಲ್ಲದೇ ಅಸ್ಪಶ್ಯ ಹೆಣ್ಣುಮಕ್ಕಳಿಗೂ ಪ್ರವೇಶ ಇತ್ತು. ಇದರಿಂದಾಗಿ 1848ರ ಜನವರಿ 1ರಂದು ಜ್ಯೋತಿರಾವ್ ಫುಲೆ ಅವರು ಸಾವಿತ್ರಿಬಾಯಿ ಅವರನ್ನೇ ಮುಖ್ಯಶಿಕ್ಷಕಿಯಾಗಿ ನೇಮಕ ಮಾಡಿದರು. ಈ ಶಾಲೆ ಬುಧವಾರಪೇಟೆಯ ಒಬ್ಬ ಹಿಂದೂ ಬ್ರಾಹ್ಮಣನ ಮನೆಯಲ್ಲಿ ನಡೆಯುತ್ತಿತ್ತು. ಶಾಲೆಯಲ್ಲಿ ಇದ್ದ ಬಹುತೇಕ ವಿದ್ಯಾರ್ಥಿಗಳೂ ಬ್ರಾಹ್ಮಣ ಹೆಣ್ಣುಮಕ್ಕಳು. ಶೂದ್ರರ ಹೆಣ್ಣುಮಕ್ಕಳ ಜತೆಗೆ ಬ್ರಾಹ್ಮಣ ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಿರುವ ಬಗ್ಗೆ ದೊಡ್ಡ ಕೂಗು ಎಬ್ಬಿಸಿದರು. ಇದು ಹಿಂದೂ ಧರ್ಮಗ್ರಂಥಗಳಿಗೆ ವಿರುದ್ಧ ಎಂದು ಪ್ರತಿಪಾದಿಸಿದರು. ಶಾಲೆಗೆ ಹೋಗಲು ಸಾವಿತ್ರಿಬಾಯಿ ಮನೆಯಿಂದ ಹೊರಟಾಗ ಆಕೆಗೆ ಸೆಗಣಿ ಹಾಗೂ ಕೆಸು ಎರಚಿದರು. ಅದನ್ನು ಸಾವಿತ್ರಿಬಾಯಿ ಶಾಲೆಯಲ್ಲೇ ತೊಳೆದುಕೊಂಡರು. ಆದರೆ ಹಿಂದೂ ಮೇಲ್ವರ್ಗದವರು ಅವರನ್ನು ತೀರಾ ಕೆಟ್ಟದಾಗಿ ನಡೆಸಿಕೊಂಡರು. ಆದರೆ ಇದರಿಂದ ಅವರು ಸಾಮಾಜಿಕ ಬದಲಾವಣೆಯ ಈ ಪವಿತ್ರ ಕಾರ್ಯದಿಂದ ವಿಮುಖರಾಗಲಿಲ್ಲ. ಇದರ ಬದಲಾಗಿ ಅವರು ಅಸ್ಪಶ್ಯರ ಕಾಲೋನಿಯಲ್ಲಿ 1848ರ ಮೇ 15ರಂದು ಮತ್ತೊಂದು ಶಾಲೆ ತೆರೆದರು. ಇದನ್ನು ಅವರ ವಿಧವಾ ಸಹೋದರಿ ಸುಗುಣಾಬಾಯಿ ನಿರ್ವಹಿಸುತ್ತಿದ್ದರು. ಇದಕ್ಕೆ ಮತ್ತೆ ಆಕ್ಷೇಪ ವ್ಯಕ್ತಪಡಿಸಿದ ಇಂಥ ಸಂಪ್ರದಾಯವಾದಿಗಳು ಜ್ಯೋತಿರಾವ್ ತಂದೆ ಗೋವಿಂದರಾವ್ ಅವರಿಗೆ ಗಂಭೀರ ಪರಿಣಾಮ ಎದುರಿಸುವಂತೆ ಎಚ್ಚರಿಕೆ ನೀಡಿದರು. ಮಗ ಹಾಗೂ ಸೊಸೆಯ ಚಟುವಟಿಕೆಯಿಂದ ದೂರ ಸರಿಯದಿದ್ದರೆ, ಪರಿಣಾಮ ನೆಟ್ಟಗಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು. ದಂಪತಿ ಈ ಸೇವಾ ಕಾರ್ಯವನ್ನು ಸ್ಥಗಿತಗೊಳಿಸಲು ನಿರಾಕರಿಸಿದಾಗ, ಮನೆಯಿಂದ ಹೊರಗೆ ಹೋಗುವಂತೆ ಸೂಚಿಸಿದರು. ಬಳಿಕ ಇಬ್ಬರೂ ಮುಸ್ಲಿಂ ಸಮುದಾಯಕ್ಕೆ ಸೇರಿದ ಮಿಯಾನ್ ಉಸ್ಮಾನ್ ಶೇಕ್ ಎಂಬವರ ಮನೆಗೆ ಸ್ಥಳಾಂತರಗೊಂಡರು. 18ನೆ ಶತಮಾನದ ಮೊದಲ ಮುಸ್ಲಿಂ ಮಹಿಳಾ ಶಿಕ್ಷಕಿ ಎನಿಸಿಕೊಂಡಿದ್ದ ಶೇಕ್ ಅವರ ಸಹೋದರಿ ಫಾತಿಮಾ ದಲಿತ ಮಕ್ಕಳಿಗೆ ಬೋಧನೆ ಆರಂಭಿಸಿದರು. ಸರಕಾರಿ ಹಾಗೂ ಸಾಮಾಜಿಕ ವರ್ತುಲದಲ್ಲಿ ಬ್ರಾಹ್ಮಣ ಪ್ರಾಬಲ್ಯ ಇದ್ದ ಅಂತಿಮ ಪರಿಸ್ಥಿತಿಯಲ್ಲಿ ಇದು ನಿಜಕ್ಕೂ ಸವಾಲಿನ ಕೆಲಸವಾಗಿತ್ತು. ಆದರೂ ಸಾವಿತ್ರಿಬಾಯಿ ಇದನ್ನು ಛಲ, ಬದ್ಧತೆ ಹಾಗೂ ಜಾಣ್ಮೆಯಿಂದ ನಿರ್ವಹಿಸಿಕೊಂಡು ಬಂದರು. ದಲಿತರನ್ನು ಉದ್ಧರಿಸಲು ಕೇವಲ ಶಿಕ್ಷಣವೊಂದೇ ಮಾರ್ಗ ಎಂದು ಅವರು ಬಲವಾಗಿ ನಂಬಿದ್ದರು.

ಸಮಾಜದ ಮೇಲ್ವರ್ಗದವರ ಶಿಕ್ಷಣಕ್ಕಾಗಿ ಸರಕಾರದ ಆದಾಯದ ದೊಡ್ಡ ಪಾಲನ್ನು ವಿನಿಯೋಗಿಸುವ ಬ್ರಿಟಿಷ್ ಸರಕಾರದ ನೀತಿಯನ್ನು ಫುಲೆ ಬಲವಾಗಿ ವಿರೋಧಿಸಿದರು. ಇದರಿಂದಾಗಿ ಎಲ್ಲ ಸರಕಾರಿ ಹುದ್ದೆಗಳು ಬ್ರಾಹ್ಮಣರ ಪಾಲಾಗುತ್ತದೆ ಎನ್ನುವುದು ಅವರ ಆತಂಕವಾಗಿತ್ತು ಈ ಏಕಸ್ವಾಮ್ಯವನ್ನು ಮುರಿದು, ಕೆಳವರ್ಗದವರು ಕೂಡಾ ತಮ್ಮ ಹಕ್ಕುಗಳಿಗಾಗಿ ಹೋರಾಡಲು ಸಜ್ಜುಗೊಳಿಸಲು ಈ ದಂಪತಿ ಪಣ ತೊಟ್ಟರು. 1882ರಲ್ಲಿ ಹಂಟರ್ ಸಮಿತಿಗೆ ಪ್ರಬಲ ಮನವಿ ಸಲ್ಲಿಸಿದ ಫುಲೆ, ಎಲ್ಲ ವರ್ಗದವರಿಗೂ ಉಚಿತ ಹಾಗೂ ಕಡ್ಡಾಯ ಶಿಕ್ಷಣಕ್ಕೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಇದನ್ನು ಅಂಬೇಡ್ಕರ್ ಸಂವಿಧಾನದಲ್ಲಿ ಅಳವಡಿಸಿಕೊಂಡರು.

 ಬ್ರಾಹ್ಮಣರೂ ಸೇರಿದಂತೆ ಹಿಂದೂ ವಲಯದಲ್ಲಿ ವಿಧವಾ ಪುನರ್ ವಿವಾಹಕ್ಕೆ ವಿರೋಧ ಹಾಗೂ ಬಾಲ್ಯವಿವಾಹದಂತಹ ಅನಿಷ್ಟಗಳು ಮನೆ ಮಾಡಿದ್ದವು. ಹಲವು ಮಂದಿ ಹಿಂದೂ ವಿಧವೆಯರು ಸಾರ್ವಜನಿಕರ ಎದುರೇ ಸತಿ ಸಹಗಮನಕ್ಕೆ ಬಲಿಯಾದರು. ಹಲವು ಮಂದಿ ಎಳೆ ವಯಸ್ಸಿನಲ್ಲೇ ವಿಧವೆಯರಾದರೂ, ಎಲ್ಲರೂ ಸಂಪ್ರದಾಯವಾದಿಗಳ ನಿರೀಕ್ಷೆಯಂತೆ ಬದುಕು ಸಾಗಿಸುವುದು ಸಾಧ್ಯವಿರಲಿಲ್ಲ. ಕೆಲ ಅಸಹಾಯಕ ವಿಧವೆಯರು, ಗರ್ಭಪಾತಕ್ಕೆ ಮುಂದಾದರು ಅಥವಾ ಕಾನೂನುಬಾಹಿರ ಮಕ್ಕಳನ್ನು ಬೀದಿಗೆ ಎಸೆದರು. ಇವರ ಬಗ್ಗೆ ಕನಿಕರಪಟ್ಟ ಜ್ಯೋತಿರಾವ್ ಫುಲೆ, ಮೊಟ್ಟಮೊದಲ ನಿರ್ಗತಿಕ ಕೇಂದ್ರವನ್ನು ಆರಂಭಿಸಿದರು. ಬಹುಶಃ ಹಿಂದೂಗಳು ಹುಟ್ಟುಹಾಕಿದ ಮೊಟ್ಟಮೊದಲ ನಿರ್ಗತಿಕ ಕೇಂದ್ರ ಅದು. ಫುಲೆ ದಂಪತಿ ಇಂಥ ಗರ್ಭಿಣಿ ವಿಧವೆಯರಿಗೆ ರಕ್ಷಣೆ ನೀಡಿ, ಅವರ ಮಕ್ಕಳ ಯೋಗಕ್ಷೇಮವನ್ನು ಈ ನಿರ್ಗತಿಕ ಕೇಂದ್ರ ನೋಡಿಕೊಳ್ಳುತ್ತದೆ ಎಂಬ ಭರವಸೆ ನೀಡಿದರು. ಇದನ್ನು ನಿರ್ವಹಿಸುವ ಜವಾಬ್ದಾರಿಯನ್ನು ಸಾವಿತ್ರಿಬಾಯಿಗೆ ವಹಿಸಲಾಯಿತು. ಈ ನಿರ್ಗತಿಕ ಕೇಂದ್ರದಲ್ಲಿ ಕಾಶಿಬಾಯಿ ಎಂಬ ಬ್ರಾಹ್ಮಣ ವಿಧವೆ 1973ರಲ್ಲಿ ಗಂಡುಮಗುವಿಗೆ ಜನ್ಮ ನೀಡಿದರು. ಈ ಮಗುವನ್ನೇ ಅವರು ದತ್ತು ತೆಗೆದುಕೊಂಡು, ಯಶವಂತ ಎಂದು ನಾಮಕರಣ ಮಾಡಿದರು. ಆತನಿಗೆ ಉತ್ತಮ ಶಿಕ್ಷಣ ನೀಡಿ ವೈದ್ಯರನ್ನಾಗಿ ರೂಪಿಸಿದರು. 1876-77ರ ಭೀಕರ ಕ್ಷಾಮದ ವೇಳೆ, ಫುಲೆ ವೈದ್ಯ ಮಗನ ಸಹಾಯದಿಂದ ಸುಮಾರು 200ಕ್ಕೂ ಹೆಚ್ಚು ಮಕ್ಕಳನ್ನು ಉಚಿತವಾಗಿ ಆರೈಕೆ ಮಾಡಿದರು. ಸಾವಿತ್ರಿಬಾಯಿ ತನ್ನ ಪತಿಯ ಶಕ್ತಿಯಾಗಿದ್ದರು.

ಇಂದಿಗೂ ಸಮಾನತೆ, ನ್ಯಾಯ ಹಾಗೂ ಭ್ರಾತೃತ್ವದ ನಿಯಮವನ್ನು ಸಂಸ್ಥಾಪಿಸಲು ಅವರು ಇಂದಿಗೂ ಸೂರ್ತಿಯ ಚಿಲುಮೆಯಾಗಿದ್ದಾರೆ. ಅವರ ಜೀವನ ಸಾಧನೆಯಿಂದ ಸೂರ್ತಿ ಪಡೆದು, ಎಲ್ಲ ಅವಕಾಶಗಳಿಂದ ವಂಚಿತರಾಗಿರುವ ಕೆಳವರ್ಗದವರ ಹಾಗೂ ದಲಿತರ ಸೇವೆಗೆ ಪಣ ತೊಡೋಣ.

ಸಾವಿತ್ರಿಬಾಯಿ ಕೇವಲ ಶಿಕ್ಷಣತಜ್ಞೆ ಮಾತ್ರವಲ್ಲದೇ, ಮಾನವತಾವಾದಿ, ಸಾಮಾಜಿಕ ಕ್ರಾಂತಿಕಾರಿ, ಲೇಖಕಿ ಹಾಗೂ ಕವಯಿತ್ರಿಯೂ ಆಗಿದ್ದರು. ದುರ್ಬಲ ಹಾಗೂ ಕೆಳವರ್ಗದ ಮಹಿಳೆಯರು ಹಾಗೂ ಮಕ್ಕಳ ಸಬಲೀಕರಣಕ್ಕೆ ಹೋರಾಡಿದ ಮೊಟ್ಟಮೊದಲ ಭಾರತೀಯ ಮಹಿಳೆ ಅವರು. ಅವರ ಮೊಟ್ಟಮೊದಲ ಕವನ ಸಂಕಲನ ‘‘ಕಬ್ಯೆ ಫುಲೆ’’ 1854ರಲ್ಲಿ ಬಿಡುಗಡೆಯಾಯಿತು. ಈ ದೇಶದ ಮೂಲನಿವಾಸಿಗಳಿಗೆ ಆರ್ಯನ್ನರು ಶಿಕ್ಷಣಕ್ಕೆ ಅವಕಾಶ ನೀಡದ ಕಾರಣದಿಂದ ಬ್ರಿಟಿಷ್ ದಾಸ್ಯಕ್ಕೆ ದೇಶ ಈಡಾಯಿತು ಎಂದು ಒಂದು ಕವನದಲ್ಲಿ ಅವರು ವಿವರಿಸಿದ್ದರು. ಮಾತೃಭೂಮಿಯ ಮೇಲೆ ನಡೆಯುತ್ತಿರುವ ಶೇ.85ರಷ್ಟು ದಾಳಿಗಳ ಸಂದರ್ಭದಲ್ಲಿ ಜನರನ್ನು ಮೂಕ ಪ್ರೇಕ್ಷಕರಾಗಿರುವಂತೆ ಮಾಡಲಾಯಿತು. ಇದಕ್ಕೆ ಬ್ರಾಹ್ಮಣರು ಹಾಗೂ ಜಾತಿ ವ್ಯವಸ್ಥೆ ಕಾರಣ ಎಂದು ಪ್ರತಿಪಾದಿಸಿದ್ದರು. ಸಾವಿತ್ರಿಬಾಯಿಯವರ ಸಹೋದರ ಬ್ರಾಹ್ಮಣ್ಯದ ಮಾರ್ಗದಲ್ಲಿ ಮುಂದುವರಿಯುವಂತೆ ಸೂಚಿಸಿದಾಗ, ಸಿಡಿದೆದ್ದ ಸಾವಿತ್ರಿಬಾಯಿ, ಗಂಡನ ಆದರ್ಶ ಮಾರ್ಗದಲ್ಲೇ ಮುನ್ನಡೆಯುವುದಾಗಿ ಹೇಳಿ, ನಿನ್ನಂತೆ ಅಂಧವಾಗಿ ಬ್ರಾಹ್ಮಣಪಥ ತುಳಿಯುವುದಿಲ್ಲ ಎಂದಿದ್ದರು. ಸಹೋದರನನ್ನು ಕುರಿತು, ‘‘ಹೋಗಿ ಹಸು ಮತ್ತು ಆಡನ್ನು ಪ್ರೀತಿಸು. ನಾಗರ ಪಂಚಮಿಯಂದು ಹಾವಿಗೆ ಹಾಲೆರೆ. ಇಷ್ಟಾಗಿಯೂ ಬ್ರಾಹ್ಮಣರು ನಿನ್ನನ್ನು ಪೂಜಾ ಸ್ಥಳದಿಂದ ಹೊರಗೆ ಕಳುಹಿಸಿ, ಅಸ್ಪಶ್ಯ ಎಂಬ ಹಣೆಪಟ್ಟಿ ಕಟ್ಟುತ್ತಾರೆ’’ ಎಂದು ಹೇಳಿದ್ದರು. ಇದು ಆಕೆ ಎಲ್ಲರ ಬಗ್ಗೆಯೂ ಪ್ರೀತಿ ಹೊಂದಿದ್ದ ಮಹಿಳೆ ಹಾಗೂ ಎಲ್ಲರ ಬಗ್ಗೆ ಕಾಳಜಿ ಹೊಂದಿದ್ದ ಮಹಿಳೆ ಎನ್ನುವುದನ್ನು ತೋರಿಸುತ್ತದೆ.

1890ರಲ್ಲಿ ಪತಿ ನಿಧನರಾದ ಬಳಿಕ ಸಾವಿತ್ರಿಬಾಯಿಯವರು, ನತದೃಷ್ಟ ಮಕ್ಕಳ ಕಲ್ಯಾಣಕ್ಕಾಗಿ ಅವರು ಸ್ಥಾಪಿಸಿದ್ದ ಸತ್ಯಶೋಧಕ ಸಮಾಜದ ವ್ಯವಹಾರಗಳನ್ನು ಏಳು ವರ್ಷಗಳ ಕಾಲ ಯಶಸ್ವಿಯಾಗಿ ನಿಭಾಯಿಸಿದರು.

1897ರಲ್ಲಿ ಮಹಾರಾಷ್ಟ್ರದಲ್ಲಿ ಕಾಲರಾ ಹರಡಿದಾಗ, ಹಲವು ಸಹಾಯ ಕೇಂದ್ರಗಳನ್ನು ತೆರೆದು, ಗ್ರಾಮೀಣ ಹಾಗೂ ನಗರಗಳಲ್ಲಿ ಬಳಲುತ್ತಿದ್ದ ಎಲ್ಲರಿಗೂ ಮಾನವೀಯ ನೆರವು ನೀಡಿದರು. ರೋಗಿಗಳನ್ನು ಸ್ವತಃ ತಾವೇ ಮಗ ಯಶವಂತನ ಬಳಿಗೆ ಕರೆದೊಯ್ದು, ನೂರಾರು ಮಂದಿಗೆ ಉಚಿತ ಚಿಕಿತ್ಸೆ ನೀಡಿದರು.

ಕಾಲರಾಗೆ ತುತ್ತಾಗಿದ್ದ ಮಹಾರ್ ಹುಡುಗನನ್ನು ಮಗನ ಕ್ಲಿನಿಕ್‌ಗೆ ಕರೆದೊಯ್ದು ದಾಖಲಿಸುವ ಸಂದರ್ಭದಲ್ಲಿ ತಾವೇ ಕಾಲರಾಗೆ ತುತ್ತಾಗಿ 1897ರ ಮಾರ್ಚ್ 10ರಂದು ಕೊನೆಯುಸಿರೆಳೆದರು.

ಧಾರ್ಮಿಕ ಸಂಪ್ರದಾಯ, ಜಾತಿ ಹಾಗೂ ವಂಶಪಾರಂಪರ್ಯ ಸಂಪ್ರದಾಯವನ್ನು ಮುರಿದು ಸಾರ್ವತ್ರಿಕ ಭ್ರಾತೃತ್ವದ ಹೊಸ ಸಮಾಜ ವ್ಯವಸ್ಥೆಯನ್ನು ಹುಟ್ಟುಹಾಕಲು ಶಕ್ತಿಮೀರಿ ಶ್ರಮಿಸಿದ ಅವರಿಗೆ ನಾವು ನಮನ ಸಲ್ಲಿಸಲೇಬೇಕು. ಭಾರತದಲ್ಲಿ ಮಹಿಳೆಯರು ಹಾಗೂ ಮಕ್ಕಳನ್ನು ಉದ್ಧರಿಸಲು ಶ್ರಮಿಸಿದ ಮೊಟ್ಟಮೊದಲ ಭಾರತೀಯ ಮಹಿಳೆ ಇವರು. ಅಸ್ಪಶ್ಯತೆ ಸೇರಿದಂತೆ ಸಂಪ್ರದಾಯವಾದಿ ಕಾನೂನು ಕಟ್ಟಳೆಗಳನ್ನು ಇವರು ಪ್ರಬಲವಾಗಿ ವಿರೋಧಿಸುತ್ತಿದ್ದರು. ಇವರು ಅಸಹಾಯಕ ನಿರ್ಗತಿಕರ ತಾಯಿಯಾಗಿ, ಅನಕ್ಷರಸ್ಥರಿಗೆ ಶಿಕ್ಷಕಿಯಾಗಿ ಹಾಗೂ ರೋಗ ರುಜಿನಗಳಿಂದ ಬಳಲುವ ವರ್ಗದವರಿಗೆ ಸಾಂತ್ವನ ಹೇಳುವ ಮಮತಾಮಯಿ. ಭಾರತೀಯ ಮಹಿಳಾ ಶಿಕ್ಷಣದ ಮಹಾಮಾತೆ ಎಂಬ ಗೌರವಕ್ಕೆ ಇವರು ಅರ್ಹರು.

ಇಂದಿಗೂ ಸಮಾನತೆ, ನ್ಯಾಯ ಹಾಗೂ ಭ್ರಾತೃತ್ವದ ನಿಯಮವನ್ನು ಸಂಸ್ಥಾಪಿಸಲು ಅವರು ಇಂದಿಗೂ ಸೂರ್ತಿಯ ಚಿಲುಮೆಯಾಗಿದ್ದಾರೆ. ಅವರ ಜೀವನ ಸಾಧನೆಯಿಂದ ಸೂರ್ತಿ ಪಡೆದು, ಎಲ್ಲ ಅವಕಾಶಗಳಿಂದ ವಂಚಿತರಾಗಿರುವ ಕೆಳವರ್ಗದವರ ಹಾಗೂ ದಲಿತರ ಸೇವೆಗೆ ಪಣ ತೊಡೋಣ.

Writer - ವಿಸ್ಮಯ

contributor

Editor - ವಿಸ್ಮಯ

contributor

Similar News