ಹದಿಮೂರು ಆರೋಪಿಗಳೂ ದೋಷಿ ಎಂದು ಸಾಬೀತು
ಬೆಂಗಳೂರು, ಸೆ.15: ನಾಲ್ಕು ವರ್ಷಗಳ ಹಿಂದೆ ಕೆಲ ಹಿಂದೂ ಮುಖಂಡರ ಹತ್ಯೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ಬಂಧಿತರಾಗಿದ್ದ ಎಲ್ಲ 13 ಆರೋಪಿಗಳೂ ದೋಷಿಗಳೆಂಬುದು ಸಾಬೀತಾಗಿದೆ. ಎನ್‌ಐಎ ವಿಶೇಷ ನ್ಯಾಯಾಲಯವು ಗುರುವಾರ ಈ ತೀರ್ಪು ಹೊರಡಿಸಿದೆ. ಶುಕ್ರವಾರ ಬೆಳಗ್ಗೆ ಅಪರಾಧಿಗಳಿಗೆ ನ್ಯಾಯಾಲಯವು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ.
2012ರಲ್ಲಿ ಪ್ರತಾಪ್ ಸಿಂಹ, ಪ್ರಮೋದ್ ಮುತಾಲಿಕ್, ವಿಶ್ವೇಶ್ವರ ಭಟ್ ಸೇರಿದಂತೆ ಹಲವು ಹಿಂದೂ ಪರ ಮುಖಂಡರ ಹತ್ಯೆಗೆ ಇವರು ಸಂಚು ರೂಪಿಸಿದ್ದರೆನ್ನಲಾಗಿದೆ. ಈ ಪ್ರಕರಣ ಸಂಬಂಧ 13 ಮಂದಿಯನ್ನು ಬಂಧಿಸಿದ್ದ ಸಿಸಿಬಿ ಪೊಲೀಸರು 2013ರಲ್ಲಿ ಚಾರ್ಜ್‌ಶೀಟ್ ಸಲ್ಲಿಸಿದ್ದರು. 14 ಜನರ ವಿರುದ್ಧ ಆರೋಪ ದಾಖಲು ಮಾಡಿತ್ತು. ಈ ಪೈಕಿ ಝಾಕಿರ್ ಎಂಬಾತ ಪೊಲೀಸರ ಕೈಗೆ ಇನ್ನೂ ಸ್ಕಿಕಿಲ್ಲ. ಲಷ್ಕರ್ ತೋಯ್ಬಿ ಉಗ್ರ ಸಂಘಟನೆಗೆ ಸೇರಿದವರಾಗಿರುವ ಇವರು ಕರ್ನಾಟಕ, ಮಹಾರಾಷ್ಟ್ರ ಮತ್ತು ತೆಲಂಗಾಣದಲ್ಲಿರುವ ಹಿಂದುತ್ವವಾದಿ ಮುಖಂಡರು ಮತ್ತು ಗಣ್ಯರನ್ನು ಹತ್ಯೆಗೈಯಲು ರಿಯಾದ್‌ನಲ್ಲಿ ಸಂಚು ರೂಪಿಸಿದ್ದರೆಂಬ ಮಾಹಿತಿ ಇದೆ. ಯಾರಾರು ದೋಷಿಗಳು?: ಶೋಯೆಬ್ ಅಹ್ಮದ್ ಮಿರ್ಜಾ, ಅಬ್ದುಲ್ ಹಕೀಮ್ ಜಮಾದಾರ್, ರಿಯಾಜ್ ಅಹ್ಮದ್ ಬ್ಯಾಹಟ್ಟಿ, ಮುಹಮ್ಮದ್ ಅಕ್ರಮ್, ಉಬೇದುಲ್ಲಾ ಬಹದ್ದೂರ್, ವಾಹಿದ್ ಹುಸೈನ್, ಜಾಫರ್ ಇಕ್ಬಾಲ್ ಶೋಲಾಪುರ್, ಮುಹಮ್ಮದ್ ಸಾದಿಕಿ, ಮೆಹಬೂಬ್ ಬಾಗಲ್ ಕೋಟ್, ಒಬೈದ್ ಉರ್ ರೆಹಮಾನ್, ಡಾ. ನಯೀಮ್ ಸಿದ್ದೀಕಿ, ಡಾ. ಇಮ್ರಾನ್ ಅಹ್ಮದ್ ಮತ್ತು ಸಯ್ಯದ್ ತಾಂಜಿಮ್ ಅಹ್ಮದ್ ದೋಷಿಗಳಾಗಿದ್ದಾರೆ.