ಮಾನವ ಸಂಪನ್ಮೂಲದ ಸದ್ಬಳಕೆಗಾಗಿ ದೇಶಪಾಂಡೆ ಕರೆ
ಬೆಂಗಳೂರು, ಸೆ. 15: ಕರ್ನಾಟಕದಲ್ಲಿರುವ ಮಾನವ ಸಂಪನ್ಮೂಲದ ಸದ್ಬಳಕೆಗಾಗಿ ಹೊರರಾಜ್ಯ ಹಾಗೂ ಹೊರ ದೇಶಗಳ ಕಂಪನಿಗಳು ಹೂಡಿಕೆಗೆ ಮುಂದಾಗುತ್ತಿದ್ದು, ರಾಜ್ಯದ ಕೈಗಾರಿಕೋದ್ಯಮಿಗಳು ಕೂಡ ಇಂದಿನ ಮಾನವ ಸಂಪನ್ಮೂಲದ ಸದ್ಭಳಕೆಗೆ ಮುಂದಾಗಬೇಕಿದೆ ಎಂದು ಬೃಹತ್ ಕೈಗಾರಿಕೆ ಹಾಗೂ ಮೂಲಸೌಕರ್ಯ ಸಚಿವ ಆರ್.ವಿ. ದೇಶಪಾಂಡೆ ಹೇಳಿದ್ದಾರೆ.
ಗುರುವಾರ ನಗರದ ಖಾಸಗಿ ಹೊಟೇಲ್‌ವೊಂದರಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಆಯೋಜಿಸಿದ್ದ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಹೆಚ್ಚು ಯುವಕರನ್ನು ಹೊಂದಿದ ದೇಶ ಎಂದು ಭಾರತ ಹೆಗ್ಗಳಿಕೆಗೆ ಪಾತ್ರವಾಗಿದೆ. ಕರ್ನಾಟಕ ದೂರದೃಷ್ಟಿ ಹೊಂದಿರುವ ರಾಜ್ಯ ಹಾಗಾಗಿ ಹೆಚ್ಚೆಚ್ಚು ಬಂಡವಾಳಿಗರನ್ನು ಆಕರ್ಷಿಸುತ್ತಿದೆ. ಎಲ್ಲಾ ನೀತಿಗಳು ಕರ್ನಾಟಕದಲ್ಲಿ ಜಾರಿಯಾದ ನಂತರ ಬೇರೆ ರಾಜ್ಯಗಳಲ್ಲಿ ಅಳವಡಿಸಿಕೊಳ್ಳುವಷ್ಟು ಮುಂದುವರೆದಿದೆ ಎಂದರು.
ಸರ್.ಎಂ. ವಿಶ್ವೇಶ್ವರಯ್ಯ ಅವರ ಕೈಗಾರೀಕರಣಗೊಳ್ಳಿ ಅಥವಾ ಅಸ್ತಿತ್ವ ಕಳೆದುಕೊಳ್ಳಿ ಎನ್ನುವ ಮಾತಿನಂತೆ ಇಂದು ‘ಸಂಶೋಧನೆ ಮಾಡಿ ಅಥವಾ ಅಸ್ತಿತ್ವ ಕಳೆದುಕೊಳ್ಳಿ’ ಎನ್ನುವಂತಾಗಿದೆ. ನಮ್ಮ ದೇಶದಲ್ಲಿರುವ ಎಲ್ಲಾ ಮಾನವ ಸಂಪನ್ಮೂಲಗಳನ್ನು ಬಳಕೆ ಮಾಡಿ ಯುವಕರು ಹೆಚ್ಚೆಚ್ಚು ಸಂಶೋಧನೆಯಲ್ಲಿ ತೊಡಗುವ ಅಗತ್ಯವಿದೆ.
ಮೈಸೂರು ಸಂಸ್ಥಾನದ ರಾಜರುಗಳ ಆಳ್ವಿಕೆ ಕಾಲದಲ್ಲಿ, ರಾಜ್ಯದಲ್ಲಿ ಅತಿ ಹೆಚ್ಚು ಕಾರ್ಖಾನೆಗಳನ್ನು ತೆರೆಯಲು ಅವಕಾಶ ನೀಡುತ್ತಿದ್ದರು. ಕ್ರಮೇಣವಾಗಿ ಸರಕಾರದ ಬದಲು ಖಾಸಗಿ ಕಂಪನಿಗಳು ಹುಟ್ಟಿಕೊಂಡವು. ಆದರೆ ಖಾಸಗಿಯವರಿಗೂ ಮೂಲ ಸೌಲಭ್ಯಗಳನ್ನು ಸರಕಾರ ಕಲ್ಪಿಸಿಕೊಡುವ ಅಗತ್ಯವಿದೆ, ಖಾಸಗಿ ಕಂಪನಿಗಳಿಂದ ನಮ್ಮ ದೇಶದ ಸಾವಿರಾರು ಯುವಕರಿಗೆ ಕೆಲಸ ದೊರೆತಂತಾಗುತ್ತದೆ ಎಂದರು.ಫ್‌ಕೆಸಿಸಿಐ ಮಾಜಿ ಅಧ್ಯಕ್ಷ ಡಾ. ಎಂ.ಕೆ. ಪಾಂಡುರಂಗ ಶೆಟ್ಟಿ ಅವರಿಗೆ ಭಾರತರತ್ನ ಸರ್.ಎಂ. ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿಯನ್ನು ನೀಡಲಾಯಿತು. ಎಫ್‌ಕೆಸಿಸಿಐ ಅಧ್ಯಕ್ಷ ಎಂ.ಸಿ. ದಿನೇಶ್, ಉಪಾಧ್ಯಕ್ಷ ಕೆ.ರವಿ, ನಿವೃತ್ತ ಐಎಎಸ್ ಅಧಿಕಾರಿ ಸುಧಾಕರ್ ರಾವ್ ಉಪಸ್ಥಿತರಿದ್ದರು.