‘ಬಿಬಿಎಂಪಿ ಮೈತ್ರಿ’ಎಚ್ಡಿಕೆ ಜೊತೆ ಚರ್ಚೆ: ಡಾ.ಜಿ.ಪರಮೇಶ್ವರ್
Update: 2016-09-15 23:54 IST
ಬೆಂಗಳೂರು, ಸೆ.15: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ಮೇಯರ್ ಹಾಗೂ ಉಪಮೇಯರ್ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮುಂದುವರಿಸುವ ಸಂಬಂಧ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಜೊತೆ ಚರ್ಚೆ ನಡೆಸುವುದಾಗಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಗುರುವಾರ ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿಯಲ್ಲಿ ಜೆಡಿಎಸ್ ಜೊತೆಗೆ ಮೈತ್ರಿ ಮುಂದುವರಿಸಲು ನಮಗೆ ಯಾವುದೆ ರೀತಿಯ ಅಡ್ಡಿಯಿಲ್ಲ. ಮೊದಲ ವರ್ಷದಲ್ಲಿ ಆಗಿರುವ ಸಣ್ಣಪುಟ್ಟ ವ್ಯತ್ಯಾಸಗಳನ್ನು ಸರಿಪಡಿಸಿಕೊಂಡು ಮುಂದುವರಿಯಲು ನಾವು ಸಿದ್ಧರಿದ್ದೇವೆ ಎಂದರು.
ಮೇಯರ್ ಸ್ಥಾನ ಬಿಟ್ಟುಕೊಡುವವರಿಗೆ ಬೆಂಬಲ ಎಂದು ಕುಮಾರಸ್ವಾಮಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮೇಯರ್ ಸ್ಥಾನ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಸೇರಿದಂತೆ ಎಲ್ಲರಿಗೂ ಬೇಕು. ಮಾತುಕತೆ ನಡೆಯಲಿ ‘ಕೊಡು-ಕೊಳ್ಳುವಿಕೆ’ ಸೂತ್ರದಡಿಯಲ್ಲಿ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದರು.