ಉದ್ಯಮಿ, ಪತ್ರಕರ್ತರ ಹತ್ಯೆಗೆ ಸಂಚು ಪ್ರಕರಣ: 13 ಅಪರಾಧಿಗಳಿಗೆ 5 ವರ್ಷ ಜೈಲು
ಬೆಂಗಳೂರು, ಸೆ.16: ಉದ್ಯಮಿ ವಿಜಯ ಸಂಕೇಶ್ವರ, ಪತ್ರಕರ್ತ ವಿಶ್ವೇಶ್ವರ ಭಟ್, ಸಂಸದ ಪ್ರತಾಪ್ ಸಿಂಹ ಮತ್ತು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸೇರಿದಂತೆ ಹಲವರ ಹತ್ಯೆಗೆ ಸಂಚು ರೂಪಿಸಿದ್ದ ಪ್ರಕರಣದ 13 ಆರೋಪಿಗಳಿಗೆ ರಾಷ್ಟ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯ ಶುಕ್ರವಾರ 5 ವರ್ಷಗಳ ಜೈಲುಶಿಕ್ಷೆ ಹಾಗೂ ತಲಾ 7 ಸಾವಿರ ರೂ.ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.
ಈ ಪ್ರಕರಣದಲ್ಲಿ ಆರೋಪಿಗಳಾದ ಶೋಯಿಬ್ ಅಹ್ಮದ್ ಮಿರ್ಜಾ, ಮುಹಮ್ಮದ್ ಸಾದಿಕ್ ಲಷ್ಕರ್, ಡಾ.ಇಮ್ರಾನ್ ಅಹ್ಮದ್, ಸೈಯದ್ ತಾಂಜಿಮ್ ಅಹ್ಮದ್, ಡಾ.ನಯೀಂ ಸಿದ್ದಿಕಿ, ಅಬ್ದುಲ್ ಹಕೀಂ ಜಮಾದಾದ್, ಉಬೇದುಲ್ಲಾ ಬಹದ್ದೂರ್, ವಾಹಿದ್ ಹುಸೇನ್, ರಿಯಾಝ್ ಅಹ್ಮದ್ ಬ್ಯಾಹಟ್ಟಿ, ಮುಹಮ್ಮದ್‌ಅಕ್ರಮ್, ಡಾ.ಜಾಫರ್ ಇಕ್ಬಾಲ್, ಶೊಲ್ಲಾಪೂರ್, ಮೆಹಬೂಬ್ ಬಾಗಲಕೋಟ್ ಮತ್ತು ಒಬೈದ್‌ಉರ್ ರೆಹಮಾನ್ ಅವರು ತಪ್ಪಿತಸ್ಥರು ಎಂದು ನ್ಯಾಯಾಲಯ ಗುರುವಾರ ಆದೇಶ ನೀಡಿತ್ತು. ಶಿಕ್ಷೆ ಪ್ರಮಾಣವನ್ನು ಶುಕ್ರವಾರ ಪ್ರಕಟಿಸುವುದಾಗಿ ಕೋರ್ಟ್ ಹೇಳಿತ್ತು.
ಪ್ರಕರಣವೇನು?:
ದೇಶದಲ್ಲಿ ಉಗ್ರರು ಸಮಾಜಘಾತುಕ ಚಟುವಟಿಕೆಗಳನ್ನು ನಡೆಸಲು ಸಂಚು ರೂಪಿಸಿದ್ದಾರೆ ಎಂಬ ಖಚಿತ ಮಾಹಿತಿ ಆಧರಿಸಿ ಸಿಸಿಬಿ ಜಂಟಿ ಪೊಲೀಸ್ ಆಯುಕ್ತರಾಗಿದ್ದ ಬಿ.ದಯಾನಂದ್ ನೇತೃತ್ವದ ತಂಡ 2012ರ ಆಗಸ್ಟ್ 29ರಂದು ಬೆಂಗಳೂರಿನ ಬಸವೇಶ್ವರನಗರ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಯುವಕರನ್ನು ಬಂಧಿಸಿತ್ತು. ಅದೇ ವೇಳೆ, ಜೆ.ಸಿ.ನಗರದ ಮುಬಾರಕ್ ಮೊಹಲ್ಲಾದಿಂದ ನಾಲ್ವರು ಯುವಕರನ್ನು ಹಾಗೂ ಹುಬ್ಬಳ್ಳಿಯಲ್ಲಿ ಐವರು ಸೇರಿ 15 ಮಂದಿ ಶಂಕಿತರನ್ನು ಬಂಧಿಸಲಾಗಿತ್ತು. ಬಂಧಿತರಿಂದ 7.6 ಎಂಎಂ ಪಿಸ್ತೂಲು ಹಾಗೂ ಐದು ಸುತ್ತು ಗುಂಡು ವಶಪಡಿಸಿಕೊಳ್ಳಲಾಗಿತ್ತು.
ಹತ್ಯೆಗೆ ಸಂಚು- ತಪ್ಪೊಪ್ಪಿಗೆ
ಉದ್ಯಮಿ ವಿಜಯ್ ಸಂಕೇಶ್ವರ್, ಆಗ ಪತ್ರಕರ್ತರಾಗಿದ್ದ ಹಾಲಿ ಸಂಸದ ಪ್ರತಾಪ್ ಸಿಂಹ, ಪತ್ರಕರ್ತ ವಿಶ್ವೇಶ್ವರ ಭಟ್, ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಬಿಜೆಪಿ ಮುಖಂಡ ಪ್ರಹ್ಲಾದ್ ಜೋಷಿ, ಬಜರಂಗದಳದ ಮುಖಂಡ ಜರ್ತಾರ್ಕರ್, ಪೊಲೀಸ್ ಅಧಿಕಾರಿಗಳಾದ ಬಿ.ದಯಾನಂದ್, ಡಿ.ಎಂ.ಕೃಷ್ಣರಾಜು, ನ್ಯಾಮಗೌಡ ಸೇರಿದಂತೆ ಹೈದರಾಬಾದ್ ಮತ್ತು ನಾಂದೇಡ್‌ನಲ್ಲಿನ ಹಲವು ಗಣ್ಯರು ಹಾಗೂ ರಾಜಕಾರಣಿಗಳ ಹತ್ಯೆ ಮಾಡಲು ಮತ್ತು ಆ ಮೂಲಕ ದೇಶದಲ್ಲಿ ಕೋಮುಗಲಭೆ ಸೃಷ್ಟಿಸಲು ಸಂಚು ರೂಪಿಸಿರುವುದಾಗಿ ಈ 13 ಮಂದಿ ದೋಷಿಗಳು ತನಿಖೆ ವೇಳೆ ತಪ್ಪೊಪ್ಪಿಕೊಂಡಿದ್ದರು.