ನೂರಾರು ಮಕ್ಕಳು ಅಪೌಷ್ಟಿಕತೆಯಿಂದ ಸಾಯುತ್ತಿದ್ದಾರೆ ಎಂದಾಗ "ಸಾಯಲಿ ಬಿಡಿ" ಎಂದ ಸಚಿವ!

Update: 2016-09-17 03:19 GMT

ಮುಂಬೈ, ಸೆ.17: ಮಹಾರಾಷ್ಟ್ರದ ಪಲ್ಗಾರ್‌ನಲ್ಲಿ ನೂರಾರು ಮಕ್ಕಳು ಅಪೌಷ್ಟಿಕತೆಯಿಂದ ಸಾಯುತ್ತಿದ್ದಾರೆ ಎನ್ನುವುದನ್ನು ಗಮನಕ್ಕೆ ತಂದಾಗ "ಸಾಯಲಿ ಬಿಡಿ" ಎಂದು ಉಡಾಫೆಯ ಉತ್ತರ ನೀಡಿದ ಮಹಾರಾಷ್ಟ್ರದ ಬುಡಕಟ್ಟು ಅಭಿವೃದ್ಧಿ ಖಾತೆ ಸಚಿವ ವಿಷ್ಣು ಸಾವರ ಇದೀಗ ಪೇಚಿಗೆ ಸಿಲುಕಿಕೊಂಡಿದ್ದಾರೆ. ಅವರ ಪದಚ್ಯುತಿಗೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮೇಲೆ ಒತ್ತಡ ಹೆಚ್ಚುತ್ತಿದೆ.
ಆದರೆ ಸಾವರ ತಾನು ಇಂಥ ಹೇಳಿಕೆ ನೀಡಿಲ್ಲ ಎಂದು ನಿರಾಕರಿಸಿದ್ದಾರೆ. ಗುರುವಾರ ಪಲ್ಗರ್ ಜಿಲ್ಲೆಯ ಕಳಂಬವಾಡಿ ಎಂಬ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಚಿವರು ಈ ಹೇಳಿಕೆ ನೀಡಿದ್ದರು. ಹದಿನೈದು ದಿನಗಳ ಹಿಂದೆ ಗ್ರಾಮದಲ್ಲಿ ಅಪೌಷ್ಟಿಕತೆಯಿಂದಾಗಿ ಒಂದು ವರ್ಷದ ಮಗು ಮೃತಪಟ್ಟ ಹಿನ್ನೆಲೆಯಲ್ಲಿ ಸಚಿವರು ಭೇಟಿ ನೀಡಿದ್ದರು. ಸಚಿವರು ತೀರಾ ತಡವಾಗಿ ಗ್ರಾಮಕ್ಕೆ ಭೇಟಿ ನೀಡಿದ ಕಾರಣಕ್ಕೆ ಶ್ರಮಜೀವಿ ಸಂಘಟನೆ ಕಾರ್ಯಕರ್ತರು ಪ್ರಬಲ ಪ್ರತಿಭಟನೆ ನಡೆಸಿದ್ದರು. ಸಚಿವರ ಜತೆ ಮಾತುಕತೆ ವೇಳೆ, ಕಳೆದ ಕೆಲ ವರ್ಷಗಳಲ್ಲಿ ಜಿಲ್ಲೆಯಲ್ಲಿ ಅಪೌಷ್ಟಿಕತೆಯಿಂದಾಗಿ 600ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿರುವುದನ್ನು ಸಚಿವರ ಗಮನಕ್ಕೆ ತರಲಾಗಿತ್ತು. ಕಳೆದ 15 ದಿನಗಳಲ್ಲಿ ಇಂಥ ನಾಲ್ಕು ಪ್ರಕರಣಗಳು ವರದಿಯಾಗಿವೆ.
ಆದರೆ ಸಚಿವ ಸಾವರ, ತಮ್ಮ ವಿವಾದಾಸ್ಪದ ಹೇಳಿಕೆಯನ್ನು ನಿರಾಕರಿಸಿದ್ದು, "ನಾನು ಬುಡಕಟ್ಟು ಜನಾಂಗದಲ್ಲೇ ಹುಟ್ಟಿ ಬೆಳೆದವನು. ಅವರ ಕಷ್ಟಗಳ ಅರಿವು ನನಗಿದೆ. ಸಾಯಲಿ ಬಿಡಿ ಎಂದು ನಾನು ಹೇಳಿಯೇ ಇಲ್ಲ. ನಾನು ಹೇಳಿದ್ದಾಗಿ ಬಿಂಬಿಸಲಾಗುತ್ತಿದೆ" ಎಂದಿದ್ದಾರೆ. ವಿರೋಧ ಪಕ್ಷದ ನಾಯಕ ರಾಧಾಕೃಷ್ಣ ವಿಖೆ ಪಾಟೀಲ್ ಹಾಗೂ ಎನ್‌ಸಿಪಿ ಅಧ್ಯಕ್ಷ ಸುನೀಲ್ ಟಲ್ಕರೆ, ಸಚಿವರ ವಜಾಕ್ಕೆ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News