ಅಮರ್‌ಸಿಂಗ್ ಖುಷ್ ಹುವಾ...

Update: 2016-09-17 19:02 GMT

ಸಮಾಜವಾದಿ ಪಕ್ಷ ಎದುರಿಸುತ್ತಿರುವ ಹೊಸ ಬಿಕ್ಕಟ್ಟಿಗಾಗಿ ಅಮರ್‌ಸಿಂಗ್ ವಿರುದ್ಧ ಪಕ್ಷದ ಎಲ್ಲೆಡೆಗಳಿಂದರೂ ದೂರುಗಳು ಕೇಳಿಬರುತ್ತಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಅಮರ್‌ಸಿಂಗ್ ತನ್ನ ರಾಜಕೀಯದ ಬಗ್ಗೆ ಸಂತೃಪ್ತರಾಗಿರುವಂತೆ ಕಾಣುತ್ತಿದ್ದಾರೆ. ಸಮಾಜವಾದಿ ಪಕ್ಷಕ್ಕೆ ತಾನು ವಾಪಸಾದಾಗಿನಿಂದ ತನ್ನನ್ನು ಕಡೆಗಣಿಸಲಾಗುತ್ತಿಯೆಂದು ಅವರು ಗೊಣಗುತ್ತಿದ್ದಾರೆ. ಈಗ ಅವರಿಗೆ ಸಂತಸಪಡಲು ಉತ್ತಮ ಅವಕಾಶವೊಂದು ದೊರೆತಿದೆ. ನಿರ್ದಿಷ್ಟ ಕಾನೂನು ಪ್ರಕರಣವೊಂದರಲ್ಲಿ ಮುಲಾಯಂಸಿಂಗ್ ಯಾದವ್ ಪರವಾಗಿ ವಾದಿಸಲು ಅಮರ್‌ಸಿಂಗ್ ಅವರು ರಾಮ್‌ಜೇಠ್ಮಲಾನಿಯವರನ್ನು ಗೊತ್ತುಪಡಿಸುವಲ್ಲಿ ಯಶಸ್ವಿಯಾಗಿದ್ದರು. ಇದೇ ಪ್ರಕರಣಕ್ಕಾಗಿ ವಕೀಲರ ತಂಡವನ್ನೇ ಅಮರ್‌ಸಿಂಗ್ ನಿಯೋಜಿಸಿದ್ದರು. ಇದೀಗ ಈ ಪ್ರಕರಣದ ವಿಚಾರಣೆ ಮುಂದೂಡಲ್ಪಟ್ಟಿದೆ. ಅಮರ್‌ಸಿಂಗ್‌ರ ಈ ಪ್ರಯತ್ನಗಳ ಬಗ್ಗೆ ಮುಲಾಯಂ ಎಷ್ಟು ಸಂಪ್ರೀತರಾಗಿದ್ದಾರೆಂದರೆ, ತನ್ನ ಸ್ನೇಹಿತೆ ಜಯಪ್ರದಾರನ್ನು ಉತ್ತರಪ್ರದೇಶ ಸಿನೆಮಾ ಅಭಿವೃದ್ಧಿ ನಿಗಮದ ಹಿರಿಯ ಸದಸ್ಯೆಯನ್ನಾಗಿ ನೇಮಿಸಬೇಕೆಂಬ ಸಿಂಗ್ ಮನವಿಗೆ ಅವರು ಅಸ್ತು ಎಂದಿದ್ದಾರೆ. ಆದರೆ ಮುಖ್ಯಮಂತ್ರಿ ಅಖಿಲೇಶ್ ಯಾದವ್‌ಗೆ ಅಮರ್‌ಸಿಂಗ್ ಅಂದರೆ ಅಷ್ಟಕ್ಕಷ್ಟೇ. ಹೀಗಾಗಿ ಸಿಂಗ್‌ರ ಸಂತಸದ ದಿನಗಳು ದೀರ್ಘ ಕಾಲ ಉಳಿಯುವುದೇ?.


ಶೀಲಾ ದೀಕ್ಷಿತ್ ಎಲ್ಲಿ?
ಉತ್ತರಪ್ರದೇಶದ ಕಾಂಗ್ರೆಸ್ ಕಾರ್ಯಕರ್ತರು ಈಗ ಬಹಳಷ್ಟು ಚಿಂತಾಕ್ರಾಂತರಾಗಿದ್ದಾರೆ. ದಿಯೋರಿಯಾದಲ್ಲಿ ನಡೆದ ‘ಕಾಟ್ ಯಾತ್ರೆ’ಯ ಚೊಚ್ಚಲ ಭಾಷಣದ ವೇಳೆ, ಹಲವಾರು ಮಂಚಗಳು ಕಾಣೆಯಾದ ಬಳಿಕ ಪಕ್ಷವು ನಗೆಪಾಟಲಿಗೀಡಾಗಿದೆಯೆಂದು ಅವರಲ್ಲಿ ಕೆಲವರು ಭಾವಿಸಿದ್ದಾರೆ. ಆದರೆ ರಾಜ್ಯದ ಕಾಂಗ್ರೆಸ್ ಕಾರ್ಯಕರ್ತರಿಗಿಂತಲೂ, ಶೀಲಾ ದೀಕ್ಷಿತ್‌ಗೆ ಚಿಂತೆಯಾಗಲು ಹೆಚ್ಚು ಕಾರಣಗಳಿವೆಯೆಂದು ಇನ್ನು ಕೆಲವರು ಹೇಳುತ್ತಿದ್ದಾರೆ. ಕಾಂಗ್ರೆಸ್‌ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಈಗಾಗಲೇ ಅವರ ಹೆಸರನ್ನು ಘೋಷಿಸಲಾಗಿದೆ. ಆದರೆ ಪಕ್ಷದ ಪೋಸ್ಟರ್‌ಗಳಲ್ಲಿ ಆಕೆಯ ಮುಖ ನಾಪತ್ತೆಯಾಗಿರುವುದು ಭಾರೀ ಅನುಮಾನಗಳಿಗೆ ಕಾರಣವಾಗಿದೆ. ಇತ್ತೀಚೆಗೆ ಆಕೆ ದಿಲ್ಲಿಯಲ್ಲಿ ಕಾಣಿಸಿಕೊಂಡು, ರಾಷ್ಟ್ರದ ರಾಜಧಾನಿಯಲ್ಲಿ ಸೋಂಕು ರೋಗಗಳು ಉಲ್ಬಣಿಸಿರುವ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ್ದರು ಹಾಗೂ ಇದಕ್ಕಾಗಿ ಎಎಪಿ ಸರಕಾರವನ್ನು ದೂರಿದ್ದರು. ಆಂದರೆ ಶೀಲಾ ದೀಕ್ಷಿತ್, ಉತ್ತರಪ್ರದೇಶದ ಮುಖ್ಯಮಂತ್ರಿಯಾಗುವ ಮಹತ್ವಾಕಾಂಕ್ಷೆಯನ್ನು ಕೈಬಿಟ್ಟಿದ್ದಾರೆಯೇ?.


ಅರವಿಂದ್‌ಗೆ ದೀದಿ ಸಲಹೆ
 ಮದರ್ ತೆರೇಸಾ ಅವರನ್ನು ಸಂತಪದವಿಗೇರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಮಮತಾ ಬ್ಯಾನರ್ಜಿ ರೋಮ್‌ಗೆ ತೆರಳಿದ್ದರು. ಅರವಿಂದ್ ಕೇಜ್ರಿವಾಲ್ ಕೂಡಾ ಅಲ್ಲಿದ್ದರು. ರೋಮ್‌ಗೆ ಪ್ರಯಾಣಿಸುತ್ತಿದ್ದ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಯನ್ನು, ಕೇಜ್ರಿವಾಲ್ ದುಬೈನಲ್ಲಿ ಸೇರಿಕೊಂಡಿದ್ದರು. ಈ ಸಂದರ್ಭದಲ್ಲಿ ಉಭಯ ಮುಖಂಡರು ಹಲವಾರು ವಿಷಯಗಳ ಬಗ್ಗೆ ಚರ್ಚಿಸಿದ್ದರು. ಬಹುಶಃ ಕೇಜ್ರಿವಾಲ್ ಅವರು ಚುನಾವಣೆಗೆ ತೆರಳಲಿರುವ ಪಂಜಾಬ್‌ನಲ್ಲಿ ತನ್ನ ಪಕ್ಷಕ್ಕೆ ಎದುರಾಗಿರುವ ಬಿಕ್ಕಟ್ಟಿನಿಂದ ಹೊರಬರುವುದು ಹೇಗೆ ಎಂಬ ಬಗ್ಗೆ ಬ್ಯಾನರ್ಜಿಯವರಿಂದ ಸಲಹೆ ಪಡೆಯಲು ಬಯಸಿರಬಹುದು. ಆದರೆ ದೀದಿಯ ಸಹಪ್ರಯಾಣಿಕೆಯಾಗಿದ್ದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ಗೆ ಆಗ ರಾಜಕೀಯ ಮಾಡಲು ಸಮಯವಿರಲಿಲ್ಲ. ವಿಮಾನಯಾನದ ವೇಳೆ ಸುಷ್ಮಾ ಅವರು ಸಲ್ಮಾನ್‌ಖಾನ್ ಅಭಿನಯದ ದಬಾಂಗ್ ಚಿತ್ರವನ್ನು ವೀಕ್ಷಿಸುವುದರಲ್ಲಿ ಮಗ್ನರಾಗಿದ್ದರು.


ನಿರಾಶೆಯಿಂದ ಹೊರಬಂದ ನಜ್ಮಾ
  ನಜ್ಮಾ ಹೆಫ್ತುಲ್ಲಾ ಅವರು ಅಲ್ಪಸಂಖ್ಯಾತ ವ್ಯವಹಾರಗಳ ಕೇಂದ್ರ ಸಚಿವೆಯಾಗಿದ್ದಾಗ, ಉಪರಾಷ್ಟ್ರಪತಿ ಚುನಾವಣೆಯ ಕಣಕ್ಕಿಳಿಯಲು ಉತ್ಸುಕರಾಗಿದ್ದರು. ಇದಕ್ಕಾಗಿ ಪ್ರಧಾನಿ ಮೋದಿ ಮತ್ತಿತರರ ಬೆಂಬಲವನ್ನು ಪಡೆಯುವ ಬಗ್ಗೆ ಅವರಲ್ಲಿ ತುಂಬಾ ಭರವಸೆಯಿತ್ತು. ಆದರೆ ಆಕೆಗೆ ಮೋದಿ ನಿರಾಶಾದಾಯಕ ಅಚ್ಚರಿಯೊಂದನ್ನು ನೀಡಿದ್ದರು. ತಿಂಗಳ ಹಿಂದೆ ಆಕೆಯನ್ನು ದೂರದ ಮಣಿಪುರಕ್ಕೆ ರಾಜ್ಯಪಾಲೆಯಾಗಿ ರವಾನಿಸಲಾಯಿತು. ಆದರೆ ಈಗ ನಜ್ಮಾ ಈ ನಿರಾಶೆಯಿಂದ ಹೊರಬಂದಿರುವಂತೆ ಭಾಸವಾಗುತ್ತಿದೆ. ತೀರಾ ಇತ್ತೀಚೆಗೆ ಅವರು, ನಾಗರಿಕ ವಾಯುಯಾನ ಸಚಿವ ಅಶೋಕ್ ಗಜಪತಿ ರಾಜು ಅವರನ್ನು ಭೇಟಿಯಾಗಿ ಮಣಿಪುರದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಏರ್‌ಇಂಡಿಯಾವು, ರಾಜಧಾನಿ ಇಂಫಾಲಕ್ಕೆ ದಿಲ್ಲಿ, ಮುಂಬೈ, ಬೆಂಗಳೂರು ಹಾಗೂ ಚೆನ್ನೈನಿಂದ ಪ್ರತಿ ವಾರ ನೇರ ವಿಮಾನಯಾನವನ್ನು ಆರಂಭಿಸಬೇಕೆಂದು ಆಗ್ರಹಿಸಿದರು. ಮಣಿಪುರವು ಪೂರ್ಣ ಪ್ರಮಾಣ ಮುಖ್ಯಮಂತ್ರಿಯನ್ನು ಹೊಂದಿದ್ದರೂ, ನಜ್ಮಾ ಅವರು ರಾಜ್ಯವನ್ನು ಅಭಿವೃದ್ಧಿಪಡಿಸುವ ಬಗ್ಗೆ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ. ತನಗೆ ಹಿಂದೆ ಆಗಿರುವ ನಿರಾಶೆಗಳ ಬಗ್ಗೆ ಯೋಚಿಸುವ ಬದಲು ರಾಜ್ಯಪಾಲೆಯ ಹುದ್ದೆಯಲ್ಲಿ ಸಂತೃಪ್ತಿಪಡೆಯಲು ನಜ್ಮಾ ಬಯಸಿರುವ ಹಾಗೆ ಕಾಣುತ್ತಿದೆ.


‘ಅಮ್ಮಾ’ನ ದಾರಿ ಹಿಡಿದ ಶಿವರಾಜ್
 ‘ಅಮ್ಮಾ’ನನ್ನು ಅನುಕರಿಸುವ ಯೋಚನೆ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಬಂದಿರಬಹುದು. ಆದರೆ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ಸಿಂಗ್ ಚೌಹಾಣ್ ಅವರಿಗಿಂತಲೂ ಬಹಳ ಮುಂದೆ ಸಾಗಿದ್ದಾರೆ. ಹೌದು. ಜನಸಾಮಾನ್ಯರಿಗೆ ತಮಿಳ್ನಾಡು ಮುಖ್ಯಮಂತ್ರಿ ಜೆ.ಜಯಲಲಿತಾರ ಕೊಡುಗೆಯಾದ, ಕಡಿಮೆದರದಲ್ಲಿ ಪೌಷ್ಟಿಕ ಆಹಾರ ಒದಗಿಸುವ ‘ಅಮ್ಮಾ ಕ್ಯಾಂಟೀನ್’ ನಗರಪ್ರದೇಶಗಳ ಬಡವರಲ್ಲಿ ಭಾರೀ ಜನಪ್ರಿಯವಾಗಿದೆ. ರಾಜ್ಯದಲ್ಲಿರುವ ‘ಅಮ್ಮಾ’ ಕ್ಯಾಂಟೀನ್‌ಗಳು ಪ್ರತಿ ದಿನವೂ 1.50 ಲಕ್ಷ ಜನರಿಗೆ ಊಟ ನೀಡುತ್ತಿದೆ. ಇದಕ್ಕಾಗಿ ತಮಿಳ್ನಾಡು ಸರಕಾರಕ್ಕೆ ಪ್ರತಿ ದಿನ ತಗಲುವ ಅಂದಾಜು ವೆಚ್ಚ 5 ಲಕ್ಷ ರೂ. ಮಾತ್ರ. ಹೆಣ್ಣು ಮಕ್ಕಳ ಬಗ್ಗೆ ಕಾಳಜಿ ವಹಿಸುವ ಮಾವ ಅಥವಾ ‘ಮಾಮಾ’ ಎಂದೇ ತನ್ನನ್ನು ಕರೆದುಕೊಳ್ಳುವ ಮುಖ್ಯಮಂತ್ರಿ ಶಿವರಾಜ್‌ಸಿಂಗ್ ಚೌಹಾಣ್, ಇದೀಗ ತನ್ನ ರಾಜ್ಯದಲ್ಲಿ ಕೇವಲ ಹತ್ತು ರೂಪಾಯಿಗೆ ಮಧ್ಯಾಹ್ನ ಹಾಗೂ ರಾತ್ರಿ ಊಟವನ್ನು ನೀಡುವ ಯೋಜನೆ ಹಾಕಿಕೊಂಡಿದ್ದಾರೆ. ಅವರ ಈ ಮಹತ್ವಾಕಾಂಕ್ಷಿ ಕಾರ್ಯಕ್ರಮವು ಭೋಪಾಲ್, ಇಂದೋರ್, ಜಬಲ್‌ಪುರ್ ಹಾಗೂ ಗ್ವಾಲಿಯರ್‌ಗಳಲ್ಲಿ ಶೀಘ್ರವೇ ಆರಂಭಗೊಳ್ಳಲಿದೆ. ಭಾರತೀಯ ಜನಸಂಘದ ಹಿರಿಯ ನಾಯಕರಾಗಿದ್ದ ದೀನದಯಾಳ್ ಉಪಾಧ್ಯಾಯರ ನೆನಪಿಗಾಗಿ ‘ದೀನದಯಾಳ್ ಸಹಕಾರಿ ಥಾಲಿ ಯೋಜನಾ’ವನ್ನು ಚೌಹಾಣ್ ಅನಾವರಣಗೊಳಿಸಲಿದ್ದಾರೆ. ಈ ಥಾಲಿಯಲ್ಲಿ ನಾಲ್ಕು ಚಪಾತಿ, ದಾಲ್, ತರಕಾರಿ ಪದಾರ್ಥ, ಪುಲಾವ್ ಹಾಗೂ ಉಪ್ಪಿನಕಾಯಿ ಒಳಗೊಂಡಿರುವುದಾಗಿ ಚೌಹಾಣ್ ಪಾಳಯದ ಮೂಲಗಳು ತಿಳಿಸಿವೆ. ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ, ಉಪಾಧ್ಯಾಯ ಅವರ 100ನೆ ಜನ್ಮಶತಮಾನೋತ್ಸವದ ದಿನವಾದ ಸೆಪ್ಟಂಬರ್ 25ರಂದು ರಾಜ್ಯದ ಜನತೆ ಈ ಥಾಲಿಯನ್ನು ಸವಿಯಲಿದ್ದಾರೆ. ಆದರೆ ಚೌಹಾಣ್‌ರ ಟೀಕಾಕಾರರು ಮಾತ್ರ ಹೇಳುವುದು ಬೇರೆಯೇ. ವ್ಯಾಪಂ ಹಗರಣದ ಬಿರುಗಾಳಿಯಿಂದ ತೂತುಬಿದ್ದಿರುವ ತನ್ನ ಸಾರ್ವಜನಿಕ ಇಮೇಜ್‌ಗೆ ತೇಪೆಹಚ್ಚಲು ಮುಖ್ಯಮಂತ್ರಿ ನಡೆಸುತ್ತಿರುವ ಪ್ರಯತ್ನ ಇದೆಂದು ಅವರು ಕುಹಕವಾಡುತ್ತಿದ್ದಾರೆ. ಇದಕ್ಕೆ ತಟ್ಟೆಯಲ್ಲಿ ರುಚಿಕರವಾದ ಊಟವನ್ನು ನೀಡುವುದಕ್ಕಿಂತ ಬೇರೆ ಉತ್ತಮ ದಾರಿ ಯಾವುದಿದೆ ಅಲ್ಲವೇ?.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News