×
Ad

ಬಿಲ್ಲವ ವಸತಿ ನಿಲಯಕ್ಕೆಸರಕಾರದಿಂದ ಸ್ಥಳಾವಕಾಶ: ಸಚಿವ ಕಾಗೋಡು

Update: 2016-09-18 23:53 IST

ಬೆಂಗಳೂರು, ಸೆ.18: ಬಿಲ್ಲವ ಸಮುದಾಯದಿಂದ ನಿರ್ಮಿಸಲು ಉದ್ದೇಶಿಸಿರುವ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಕೂಡಲೆ ಸ್ಥಳಾವಕಾಶ ಕಲ್ಪಿಸಲು ಸರಕಾರದಿಂದ ಅನುದಾನ ನೀಡಲಾಗುವುದು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಭರವಸೆ ನೀಡಿದ್ದಾರೆ.

ರವಿವಾರ ಇಲ್ಲಿನ ಬನ್ನೇರುಘಟ್ಟ ರಸ್ತೆಯಲ್ಲಿನ ಬಿಲ್ಲವ ಭವನದ ದೇವಕಿ ಆನಂದ ಸುವರ್ಣ ಸಭಾಂಗಣದಲ್ಲಿ ಬಿಲ್ಲವ ಅಸೋಸಿ ಯೇಷನ್ ಆಯೋಜಿಸಿದ್ದ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.


ನಗರದಲ್ಲಿ ವಿದ್ಯಾರ್ಥಿನಿಯರ ವಸತಿ ನಿಲಯವನ್ನು ನಿರ್ಮಿಸಲು ಬಿಲ್ಲವ ಅಸೋಸಿಯೇಷನ್ ಸ್ಥಳವನ್ನು ಗುರುತಿಸಿದ್ದಾರೆ. ಆ ಜಾಗದ ಬಗ್ಗೆ ಸಂಬಂಧಪಟ್ಟ ತಹಶೀಲ್ದಾರ್ ಬಳಿ ಮಾಹಿತಿ ಪಡೆದು ಪರಿಶೀಲಿಸಲಾಗುವುದು. ವಸತಿ ನಿಲಯ ನಿರ್ಮಾಣಕ್ಕೆ ಅಗತ್ಯ ಅನುದಾನ ವನ್ನೂ ಸರಕಾರದಿಂದ ಒದಗಿಸಲಾಗುವುದು ಎಂದು ಹೇಳಿದರು.

ಹಾಸ್ಟೆಲ್ ಸೌಲಭ್ಯ ಸಿಗದ ಹಿಂದುಳಿದ ವರ್ಗಗಳ ವಿದ್ಯಾರ್ಥಿ ಗಳಿಗೆ ರಾಜ್ಯ ಸರಕಾರ ವಿದ್ಯಾಸಿರಿ ಯೋಜನೆಯಡಿ ನೀಡುತ್ತಿರುವ ಮಾಸಿಕ ವೇತನವನ್ನು ಬಿಲ್ಲವ ಸಮುದಾಯದ ಮಕ್ಕಳಿಗೆ ವಿತರಿಸಲು ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಸಚಿವ ಕಾಗೋಡು ತಿಳಿಸಿದರು.

 ಬಿಲ್ಲವ ಸಮುದಾಯ ಸಣ್ಣ ಸಮಾಜ. ಎಲ್ಲ ರಂಗದಲ್ಲೂ ಮುಖ್ಯವಾಹಿನಿಗೆ ಬರಲು ಸಂಘಟನೆ ಮುಖ್ಯ. ಸಮಾಜದ ಅಭಿವೃದ್ಧಿಗೆ ವಿದ್ಯಾವಂತರು ಮುಂದಾಗಬೇಕು. ನಾರಾಯಣ ಗುರುಗಳು ಪ್ರತಿಪಾದಿಸಿದ ತತ್ವಗಳನ್ನು ಅಳವಡಿಸಿಕೊಂಡು, ಸಮಾಜದಲ್ಲಿ ಬದಲಾವಣೆಗೆ ಶ್ರಮಿಸಬೇಕೆಂದು ಅವರು ಕರೆ ನೀಡಿದರು.
 ಬಿಲ್ಲವ ಅಸೋಸಿಯೇಷನ್ ಅಧ್ಯಕ್ಷ ಎಂ.ವೇದಕುಮಾರ್ ಮಾತನಾಡಿ, ಸರಕಾರ ನಾರಾಯಣ ಗುರುಗಳ ಜಯಂತಿಯನ್ನು ಆಚರಿಸಿರುವುದು ಮತ್ತು ಶೇಷಾದ್ರಿಪುರಂ ಮೆಟ್ರೊ ನಿಲ್ದಾಣಕ್ಕೆ ನಾರಾಯಣಗುರು ಹೆಸರಿಡುವ ಘೋಷಣೆ ಮಾಡಿದ ಮುಖ್ಯಮಂತ್ರಿಗೆ ಅಭಿನಂದನೆ ಸಲ್ಲಿಸುತ್ತೇವೆಂದರು.

 ಬಿಬಿಎಂಪಿ ಸದಸ್ಯೆ ಭಾಗ್ಯಲಕ್ಷ್ಮೀ ಮಾತನಾಡಿ, ಬನ್ನೇರುಘಟ್ಟ ಮುಖ್ಯರಸ್ತೆಯ ಯಾವುದಾದರೂ ಒಂದು ರಸ್ತೆ ಅಥವಾ ಪ್ರದೇಶಕ್ಕೆ ನಾರಾಯಣ ಗುರು ಹೆಸರು ಇಡಲು ಸಿದ್ಧ. ಈ ಕುರಿತು ಪಾಲಿಕೆಯ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ, ವಿದ್ಯಾರ್ಥಿ ವೇತನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಹಿರಿಯ ಉಪಾಧ್ಯಕ್ಷ ಭಾಸ್ಕರ್ ಸಿ. ಅಮೀನ್, ಉಪಾಧ್ಯಕ್ಷೆ ಕೆ. ಶಾರದಾಕೃಷ್ಣ, ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಪೂಜಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News