'ಕಾನೂನು ಚೌಕಟ್ಟಿನಲ್ಲಿಪರಿಹಾರ ಸೂಕ್ತ'
ಬೆಂಗಳೂರು, ಸೆ.18: ಕಾವೇರಿ ನದಿ ನೀರಿನ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ತಮಿಳುನಾಡಿನ ಮಧ್ಯೆ ಸೃಷ್ಟಿಯಾಗಿರುವ ಬಿಕ್ಕಟ್ಟಿನ ಪರಿಹಾರಕ್ಕೆ ರಾಜ್ಯ ಸರಕಾರ ಕಾನೂನು ಚೌಕಟ್ಟಿನಲ್ಲಿ ಪ್ರಯತ್ನ ನಡೆಸಬೇಕೆಂದು ಕೇಂದ್ರ ಸಚಿವ ಅನಂತ್ ಕುಮಾರ್ ಸಲಹೆ ಮಾಡಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಭಯ ರಾಜ್ಯಗಳ ನಡುವಿನ ವಿವಾದವನ್ನು ಸಂವಿಧಾನದ ಪರಿಧಿಯೊಳಗೆ ಇತ್ಯರ್ಥಪಡಿಸಲು ಸಿಎಂ ಸಿದ್ದರಾಮಯ್ಯ ನೇತೃತ್ವ ವಹಿಸಬೇಕು. ಸುಖಾ ಸುಮ್ಮನೆ ಎಲ್ಲ ಸಮಸ್ಯೆಗಳಿಗೂ ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.ಂತಾರಾಜ್ಯ ನದಿ ನೀರಿನ ಹಂಚಿಕೆ ವಿವಾದಗಳಿಗೆ ಸಂಬಂಧ ನ್ಯಾಯಾಂಗ ಅಥವಾ ಮೇಲುಸ್ತುವಾರಿ ಸಮಿತಿ ವ್ಯಾಪ್ತಿಯಲ್ಲಿ ಪರಿಹಾರ ಕಂಡುಕೊಳ್ಳಬೇಕು. ಇಂತಹ ಸಮಸ್ಯೆಗಳ ಇತ್ಯರ್ಥಕ್ಕೆ ಪ್ರಧಾನ ಮಂತ್ರಿ ಮಧ್ಯ ಪ್ರವೇಶ ಸಾಧ್ಯವಿಲ್ಲ ಎಂದ ಅವರು, ಕಾಂಗ್ರೆಸ್ ಮುಖಂಡರು ಪ್ರಧಾನಿ ಮಧ್ಯಸ್ಥಿಕೆಗೆ ಆಗ್ರಹಿಸುವುದು ಸಲ್ಲ ಎಂದರು.
ನ್ಯಾಯಾಧಿಕರಣ, ನ್ಯಾಯಾಲಯಗಳಲ್ಲಿರುವ ಜಲ ವಿವಾದಗಳ ಪರಿಹಾರಕ್ಕೆ ಈವ ರೆಗೂ ಪ್ರಧಾನಿ ಮಧ್ಯಸ್ಥಿಕೆ ವಹಿಸಿದ ಯಾವುದೇ ನಿದರ್ಶನಗಳಿಲ್ಲ. ಹೀಗಿರುವಾಗ ಪ್ರಧಾನಿ ಮಧ್ಯಸ್ಥಿಕೆ ಅಸಾಧ್ಯ ಎಂದು ಪುನರುಚ್ಚರಿಸಿದ ಅವರು, ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ರಾಜ್ಯದ ವಾಸ್ತವ ಸ್ಥಿತಿಯನ್ನು ಮನವರಿಕೆಗೆ ಪ್ರಯತ್ನಿಸಬೇಕೆಂದರು.
ರಾಜಕೀಯ ಸಲ್ಲ: ರಾಜ್ಯದ ನೆಲ, ಜಲ, ಭಾಷೆ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರ ತೀರ್ಮಾನಕ್ಕೆ ನಾವೆಲ್ಲರೂ ಬದ್ಧ. ಸೂಕ್ಷ್ಮ ವಿಚಾರದಲ್ಲಿ ಯಾವುದೇ ಪಕ್ಷ ರಾಜಕೀಯ ಮಾಡುವುದು ಸಲ್ಲ. ಸಂಕಷ್ಟದ ಸ್ಥಿತಿ ಇರುವ ವೇಳೆ ತಮಿಳುನಾಡಿಗೆ ನೀರು ಬಿಡುವುದು ಕಷ್ಟ ಎಂದರು.