×
Ad

ಐಎಎಸ್ ಅಧಿಕಾರಿ ರತ್ನಪ್ರಭಾ ಪರ ಯಡಿಯೂರಪ್ಪ ಧ್ವನಿ

Update: 2016-09-18 23:59 IST

ಬೆಂಗಳೂರು, ಸೆ.18: ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರತ್ನ ಪ್ರಭಾ ಅವರು ರಾಜ್ಯದ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಅರ್ಹತೆಯನ್ನು ಪಡೆದಿದ್ದರೂ ಕಾಂಗ್ರೆಸ್ ಸರಕಾರ ಓರ್ವ ದಲಿತ ಮಹಿಳೆಯೆಂಬ ಕಾರಣಕ್ಕೆ ಉನ್ನತ ಹುದ್ದೆಗೇರುವುದನ್ನು ತಪ್ಪಿಸಿದೆ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಪಾದಿಸಿದ್ದಾರೆ.

 ರವಿವಾರ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಮಹಿಳಾ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ರಾಜ್ಯ ಸರಕಾರ ರತ್ನಪ್ರಭಾ ಅವರು ಮಾಡಿರುವ ಸಾಧನೆಯನ್ನು ಪರಿಗಣಿಸದೆ ಅವರಿಗೆ ಮುಖ್ಯಕಾರ್ಯದರ್ಶಿ ಹುದ್ದೆಯನ್ನು ತಪ್ಪಿಸಲು ಹೊರಟಿರುವುದನ್ನು ತಾವು ಖಂಡಿಸುತ್ತೇವೆ ಎಂದು ಹೇಳಿದರು. ರತ್ನಪ್ರಭಾ ಅವರು ಬೀದರ್ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಮೊದಲ ಮಹಿಳಾ ಜಿಲ್ಲಾಧಿಕಾರಿಯಾಗಿ ಸಲ್ಲಿಸಿದ ಸೇವೆಯನ್ನು ಈಗಲೂ ಅಲ್ಲಿನ ಜನರು ಸ್ಮರಿಸಿಕೊಳ್ಳುತ್ತಾರೆ. ವಿಶೇಷವಾಗಿ ಸಾಕ್ಷರತಾ ಕ್ಷೇತ್ರದಲ್ಲಿ ಅವರ ಕೊಡುಗೆ ಅನನ್ಯ. ಬೀದರ್‌ನಲ್ಲಿ ಇದ್ದ ಸಾಕ್ಷರತಾ ಪ್ರಮಾಣವನ್ನು ಶೇ.3ರಿಂದ ಶೇ.80ಕ್ಕೆ ಹೆಚ್ಚಿಸಿದ ಕೀರ್ತಿ ರತ್ನಪ್ರಭಾ ಅವರದ್ದಾಗಿದೆ ಎಂದು ಹೇಳಿದರು. ರಾಯಚೂರು ಜಿಲ್ಲಾಧಿಕಾರಿಯಾಗಿ ಅದೇ ಮೊದಲ ಬಾರಿಗೆ ದೇವದಾಸಿಯರ ಪುನರ್ವಸತಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ದೇವದಾಸಿಯರಿಗೆ ನೀರಾವರಿ ಜಮೀನನ್ನು ತರಿಸಿದ ನಿಜವಾದ ಸಾಮಾಜಿಕ ಕಾರ್ಯಕರ್ತೆ ಎಂದರೂ ತಪ್ಪಿಲ್ಲ. ಮಹಿಳಾ ಸಬಲೀಕರಣಕ್ಕೆ ಅವರು ನೀಡಿದ ಕೊಡುಗೆಯನ್ನೂ ರಾಜ್ಯ ಸರಕಾರ ಪರಿಗಣಿಸಬೇಕಾಗಿತ್ತು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News