ನ್ಯಾ.ಸಂತೋಷ್ ಹೆಗ್ಡೆಯವರ ನಾವರಿಯದ ಮಾನವೀಯ ಮುಖ!

Update: 2016-09-20 08:18 GMT

ಕರ್ನಾಟಕದ ಭ್ರಷ್ಟರಿಗೆ ಸಿಂಹಸ್ವಪ್ನರಾಗಿ ಕಾಡಿದ, ಕಪಟ ರಾಜಕಾರಣಿಗಳ, ಅಧಿಕಾರಿಗಳ ಜಂಘಾಬಲವನ್ನೇ ಉಡುಗಿಸಿ ಕರ್ನಾಟಕ ಲೋಕಾಯುಕ್ತ ಇಲಾಖೆಗೆ ನವಚೈತನ್ಯ, ನವ ಆಯಾಮವನ್ನು ನೀಡಿದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಯವರ ಜೀವನದ ಸರಳ, ಮಾನವೀಯ ಮುಖವನ್ನು ನೀವು ನೋಡಿದ್ದೀರೋ ಇಲ್ಲವೋ ಗೊತ್ತಿಲ್ಲ. ಆದರೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಅವರೊಂದಿಗೆ ನಿಕಟವಾಗಿರುವುದರಿಂದ ಅವರ ಕೆಲವೊಂದು ವಿಚಾರಗಳನ್ನು ಹತ್ತಿರದಿಂದ ತಿಳಿದುಕೊಂಡು ಆಶ್ಚರ್ಯಪಟ್ಟಿದ್ದೇನೆ. ನಿಜಕ್ಕೂ ಅವರೊಬ್ಬ ರೋಲ್ ಮಾಡೆಲ್ ಎನ್ನುವುದಕ್ಕೆ ಅವರ ಜೀವನ ವೃತ್ತಾಂತವೇ ಸಾಕ್ಷಿ.

2011 ಫೆಬ್ರವರಿಯಲ್ಲಿ ಜಿಂದಾಲ್ ಅಲ್ಯೂಮಿನಿಯಂ ಕಂಪೆನಿಯ "ಸೀತಾರಾಮ್ ಜಿಂದಾಲ್ ಫೌಂಡೇಶನ್" ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರಿಗೆ "ಆದರ್ಶಯುತ ಮಾನವೀಯ ಮೌಲ್ಯಗಳ ಸೇವೆ"ಗಾಗಿ ದೆಹಲಿಯಲ್ಲಿ ಒಂದು ಕೋಟಿ ರೂಪಾಯಿಗಳನ್ನೊಳಗೊಂಡ ಅಗ್ರಮಾನ್ಯ ಪ್ರಶಸ್ತಿ ನೀಡಲು ತೀರ್ಮಾನಿಸಿತು. ಆದರೆ ಈ ಪ್ರಶಸ್ತಿ ಸ್ವೀಕರಿಸಬೇಕಾದರೆ ಒಂದು ಬೇಡಿಕೆ ಇದೆ ಎಂದು ಸಂತೋಷ್ ಹೆಗ್ಡೆ ಹೇಳುತ್ತಾರೆ. ಪ್ರಶಸ್ತಿ ಸ್ವೀಕರಿಸಲು ಬರಬೇಕಾದರೆ ಪ್ರಶಸ್ತಿ ಜೊತೆಗೆ ನೀಡುವ ಆ ಒಂದು ಕೋಟಿ ರೂಪಾಯಿಯನ್ನು ನನಗೆ ನೀಡದೆ ಆ ಮೊತ್ತವನ್ನು ನಾನು ಹೇಳಿದ ಸೇವಾ ಸಂಸ್ಥೆಗೆ ನೀಡಬೇಕೆನ್ನುತ್ತಾರೆ. ಜಿಂದಾಲ್ ಕಂಪೆನಿ ಅದಕ್ಕೆ ಒಪ್ಪಿಗೆ ನೀಡುತ್ತದೆ. ಜಿಂದಾಲ್ ಕಂಪೆನಿ ನೀಡುವ ಪ್ರಶಸ್ತಿ ಮೊತ್ತವನ್ನು ನಿವೃತ್ತ ಯೋಧರ ಕಲ್ಯಾಣ ನಿಧಿಗೆ ನೀಡಲು ಸಂತೋಷ್ ಹೆಗ್ಡೆ ವಿನಂತಿಸುತ್ತಾರೆ. ಹೆಗ್ಡೆ ಅವರಿಗೆ ಪ್ರಶಸ್ತಿ ನೀಡಿದ ಅದೇ ವೇದಿಕೆಯಲ್ಲಿ ಈ ಮೊತ್ತವನ್ನು ನಿವೃತ್ತ ಯೋಧರಿಗೆ ಹಸ್ತಾಂತರಿಸಲಾಗುತ್ತದೆ. ಸಂತೋಷ್ ಹೆಗ್ಡೆ ಆ ಪ್ರಶಸ್ತಿಯ ಮೊತ್ತವನ್ನು ಮುಟ್ಟದೆ ಮಾನವೀಯತೆ ಮೆರೆಯುತ್ತಾರೆ.

ನಂತರದ ದಿನಗಳಲ್ಲಿ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರಿಗೆ ಮುಂಬೈಯ ಪಾಲ್ಕೀವಾಲ ಮೆಮೋರಿಯಲ್ ಟ್ರಸ್ಟ್ ಎರಡೂವರೆ ಲಕ್ಷ ರೂಪಾಯಿಯನ್ನೊಳಗೊಂಡ ಪ್ರಶಸ್ತಿ ಪ್ರದಾನ ಮಾಡುತ್ತದೆ. ಆ ಸಂದರ್ಭದ ಮೊತ್ತವನ್ನು ಕೂಡಾ ಹೆಗ್ಡೆ ಅವರು ಮುಂಬೈಯ ಟಾಟಾ ಮೆಮೋರಿಯಲ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ನ ಮಕ್ಕಳ ವಿಭಾಗದ ಆಸ್ಪತ್ರೆಗೆ ಕೊಡುಗೆ ನೀಡುತ್ತಾರೆ. ಆಲ್ ಇಂಡಿಯಾ ಇನ್ಸ್ಟಿಟ್ಯೂಶನ್ ಆಫ್ ಮೆನೇಜ್ ಮೆಂಟ್ 51,000  ರೂ.ಗಳನ್ನೊಳಗೊಂಡ ಪ್ರಶಸ್ತಿ ನೀಡಿದಾಗಲೂ ಆ ಹಣವನ್ನು ಬೆಂಗಳೂರಿನ ಜಯದೇವ ಆಸ್ಪತ್ರೆಯ ಬಡರೋಗಿಗಳ ಕಲ್ಯಾಣಕ್ಕೆ ವಿನಿಯೋಗಿಸಿದ ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರ ಕಾಳಜಿ ಗ್ರೇಟ್ ಎನಿಸುತ್ತದೆ. ಅವರಿಗೆ ಎರಡು ವಿಶ್ವ ವಿದ್ಯಾನಿಲಯಗಳು ಗೌರವ ಡಾಕ್ಟರೇಟ್ ಪ್ರದಾನ ಮಾಡಿದ್ದರೂ ಈ ತನಕ ಅವರು ಡಾ. ಸಂತೋಷ್ ಹೆಗ್ಡೆ ಅಂತ ಎಲ್ಲೂ ಉಲ್ಲೇಖಿಸಿಲ್ಲ. ಅಂತಹ ಅಹಂ ಕೂಡಾ ಅವರಲ್ಲಿಲ್ಲ.

ಈ ಬಗ್ಗೆ ಕುತೂಹಲಗೊಂಡ ನಾನು "ನಿಮ್ಮ ಮೇಲಿನ ಅಭಿಮಾನದಿಂದ ಸಂಸ್ಥೆಗಳು ನೀಡಿದ ಪ್ರಶಸ್ತಿ ಮೊತ್ತವನ್ನು ನೀವೇ ಸ್ವೀಕರಿಸದೆ ಇತರರಿಗೆ ವಿತರಿಸಲು ಹೇಳುವುದು ಸರಿಯಾ?" ಎಂದು ಸಂತೋಷ್ ಹೆಗ್ಡೆ ಅವರಲ್ಲಿ ನಯವಾಗಿಯೇ ಪ್ರಶ್ನಿಸಿದ್ದೆ. ಇದಕ್ಕುತ್ತರಿಸಿದ ನ್ಯಾಯಮೂರ್ತಿಯವರು "ಇದು ನನ್ನ ಹಣವಲ್ಲ. ನ್ಯಾಯವಾಗಿಯೇ ಸಾರ್ವಜನಿಕರಿಗೆ ಸಂದಾಯವಾಗಬೇಕಾದದ್ದು. ನನಗೆ ಹಣದ ಅನಿವಾರ್ಯತೆ ಇದೆಯೆಂದು ನಾನು ಪ್ರಶಸ್ತಿಯ ಮೊತ್ತವನ್ನು ನನ್ನ ಬಳಿ ಇಟ್ಟುಕೊಳ್ಳಲಾರೆ. ಸೇರಬೇಕಾದ ಜಾಗಕ್ಕೆ ಸೇರಬೇಕು" ಎಂದರು. ಇಂತಹ ಗುಣಗಳಿಗೆ ಸಂತೋಷ್ ಹೆಗ್ಡೆ ಅವರು ಗ್ರೇಟ್ ಅನ್ನಿಸೋದು. ಸಂತೋಷ್ ಹೆಗ್ಡೆಯವರು ತುಂಬಾ ಸರಳ ವ್ಯಕ್ತಿ. ಅವರನ್ನು ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ ಮೂಡಿಸುವ ಹಲವಾರು ಕಾರ್ಯಕ್ರಮಗಳಿಗೆ ಆಹ್ವಾನಿಸಿದ್ದೇನೆ. ಆದರೆ ಈ ತನಕ  ಅವರು ನಮ್ಮಿಂದ ಒಂದು ನಯಾ ಪೈಸೆ ಫಲಾಪೇಕ್ಷೆಯನ್ನು ಪಡೆದಿಲ್ಲ. ದುಬೈ ಕಾರ್ಯಕ್ರಮಕ್ಕೆ ಆಹ್ವಾನಿಸಿದಾಗ ಬಿಸಿನೆಸ್ ಕ್ಲಾಸ್ ಟಿಕೆಟ್ ತೆಗೆದದ್ದಕ್ಕೆ ಬೈದಿದ್ದರು. ದುಬೈ ವಿಮಾನ ನಿಲ್ದಾಣದಲ್ಲಿ ವಿಐಪಿ ಮಜ್ ಲಿಸ್ ಮೂಲಕ ಕರೆತಂದಾಗ ಅತೃಪ್ತಿ ವ್ಯಕ್ತಪಡಿಸಿ ಪುನಃ ಹಿಂತಿರುಗುವಾಗ ಸಾಮಾನ್ಯರಂತೆ ತೆರಳಿದ್ದರು.

ಬೆಂಗಳೂರಿನಲ್ಲಿ ಪತ್ನಿ ಜೊತೆಗೆ ವಾಸಿಸುತ್ತಿರುವ ಅವರು ನಾವು ಕರೆದಾಗ ಸ್ವಂತ ಖರ್ಚಿನಲ್ಲಿ ವಿಮಾನದಲ್ಲಿ ಬಂದು ಹೋಗುತ್ತಾರೆ. ವಿಮಾನ ನಿಲ್ದಾಣದಿಂದ ಅವರ ತಮ್ಮ ನಿಟ್ಟೆ ವಿನಯ ಹೆಗ್ಡೆಯವರ ಕಾರಲ್ಲಿ ಕಾರ್ಯಕ್ರಮಕ್ಕೆ ಆಗಮಿಸುತ್ತಾರೆ. ವಿಮಾನ ನಿಲ್ದಾಣದಿಂದ ಕರಕೊಂಡು ಬರುವ ಖರ್ಚು ಕೂಡಾ ನಮಗಿಲ್ಲ. ಕಾರ್ಯಕ್ರಮಕ್ಕೆ ಒಂದು ಸಮಯ ನಿಗದಿಯಾದರೆ ಅದಕ್ಕಿಂತ ಅರ್ಧ ಗಂಟೆ ಮುಂಚಿತವಾಗಿ ಸ್ಥಳದಲ್ಲಿ ಹಾಜರಿರುತ್ತಾರೆ. ಸಮಯಕ್ಕೆ ಬಹಳ ಪ್ರಾಮುಖ್ಯತೆ ನೀಡುತ್ತಾರೆ. ಕೊನೆಪಕ್ಷ ನಮಗೆ ಊಟ ಚಹಾ ದ ವ್ಯವಸ್ಥೆಗೂ ಅವಕಾಶ ಮಾಡಿ ಕೊಡುವುದಿಲ್ಲ. ಅಂತಹ ಅನಿವಾರ್ಯತೆ ಕಂಡಾಗ ಮಾತ್ರ ನಮ್ಮ ಜೊತೆ ಊಟ ಅಥವಾ ಚಹಾ ಸೇವಿಸುತ್ತಾರೆ. ಕಾರ್ಯಕ್ರಮದಲ್ಲಿ ಆಡಂಬರವನ್ನೂ ಆಶಿಸುವುದಿಲ್ಲ. ಪೊಲೀಸ್ ಎಸ್ಕೋರ್ಟ್ ಅಥವಾ ರಕ್ಷಣೆಯನ್ನೂ ಬಯಸುವುದಿಲ್ಲ. ಕಾರ್ಯಕ್ರಮಕ್ಕೆ ಕರೆದರೆ ಸಂಯೋಜಕರು ಸಂತೋಷ್ ಹೆಗ್ಡೆ ಅವರನ್ನು ಸನ್ಮಾನಿಸಿ ಗೌರವಿಸುವುದು ಸಾಮಾನ್ಯ. ಆದರೆ ಅವರು ಆಸನದಲ್ಲಿ ಕೂತು ಈ ತನಕ ಸನ್ಮಾನ, ಪ್ರಶಸ್ತಿಗಳನ್ನು ಪಡೆದಿಲ್ಲ ಎನ್ನುವುದು ಕೂಡಾ ಆಶ್ಚರ್ಯ. ಸಾಮಾನ್ಯರಲ್ಲಿ ಸಾಮಾನ್ಯರಾಗಿರುವುದೇ ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರ ಜಾಯಮಾನ. ಭ್ರಷ್ಟಾಚಾರದ ಕುರಿತು ಉಪನ್ಯಾಸ ನೀಡುವಾಗ, ಸಂವಾದ ನಡೆಸುವಾಗ ಭ್ರಷ್ಟಾಚಾರಿಗಳ ವಿರುದ್ಧ ಕೆಂಡಾಮಂಡಲರಾಗುತ್ತಾರೆ.

ಕರ್ನಾಟಕದ ಲೋಕಾಯುಕ್ತರಾಗಿ ನಿವೃತ್ತರಾದ ಬಳಿಕ ಸಂತೋಷ್ ಹೆಗ್ಡೆ ಅವರು ಸುಮ್ಮನೆ ಮನೆಯಲ್ಲಿ ಕೂತಿರಬಹುದು ಎಂದು ಭಾವಿಸಿದ್ದರೆ ಆ ಕಲ್ಪನೆ ತಪ್ಪು. ಯಾಕೆಂದರೆ ಈ ಇಳಿವಯಸ್ಸಿನಲ್ಲೂ ಸಂತೋಷ್ ಹೆಗ್ಡೆ ಅವರು ನಿದ್ದೆಗೆಟ್ಟು ಯುವಸಮೂಹ ಹಾಗೂ ವಿದ್ಯಾರ್ಥಿಗಳನ್ನು ಗುರಿಯಾಗಿಟ್ಟುಕೊಂಡು "ಸಾಮಾಜಿಕ ಮೌಲ್ಯಗಳ ಕುಸಿತ ಮತ್ತು ಅದರ ಪರಿಣಾಮ"ಗಳ ಬಗ್ಗೆ ದೇಶದ ಮೂಲೆಮೂಲೆಗಳಲ್ಲಿ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸುವ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇಷ್ಟರತನಕ ದೇಶದ ವಿವಿಧೆಡೆ ಬರೋಬ್ಬರಿ 800 ಕ್ಕೂ ಅಧಿಕ ಜಾಗೃತಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಈ ಕಾರ್ಯಕ್ರಮಗಳಲ್ಲಿ ಅವರು ಸಂತೃಪ್ತಿಪಟ್ಟಿದ್ದಾರೆಯೇ ಹೊರತು ಆಯಾಸವನ್ನು ಕಂಡಿಲ್ಲ. ನಿರಂತರ ಎರಡೂವರೆಯಿಂದ ಮೂರು ಗಂಟೆಗಳ ಜಾಗೃತಿ ಕಾರ್ಯಕ್ರಮದಲ್ಲಿ ಅರ್ಧಗಂಟೆ ಕಾಲ ಮಾತಿನ ಮೂಲಕ ಮೈನವಿರೇಳಿಸುವ ಭ್ರಷ್ಟಾಚಾರದ ದುರಂತಗಳನ್ನು ಬಿಚ್ಚಿಡುತ್ತಾರೆ. ನಮ್ಮನ್ನು ಚಿಂತನೆಗೆ ಹಚ್ಚುತ್ತಾರೆ. ಉಳಿದ ಸಮಯದಲ್ಲಿ ಯುವ ಸಮೂಹದೊಂದಿಗೆ ಸಂವಾದ ನಡೆಸುವ ಮೂಲಕ ಅರ್ಥಪೂರ್ಣ ಕಾರ್ಯಕ್ರಮಕ್ಕೆ ನಾಂದಿಯಾಡುತ್ತಾರೆ. ಇವರ ಮಾತಿನಿಂದ ಉತ್ತೇಜಿತರಾದ ಲಕ್ಷಾಂತರ ಯುವಸಮೂಹ ಭ್ರಷ್ಟಾಚಾರದ ವಿರುದ್ಧದ ಪ್ರತಿಜ್ಞೆಗೆ ಮುಂದಾಗಿದ್ದಾರೆ.

ಈ ಹಿಂದೆ ಲೋಕಸಭಾ ಸ್ಪೀಕರ್ ಆಗಿದ್ದ ಜಸ್ಟಿಸ್ ಕೆ.ಎಸ್. ಹೆಗ್ಡೆ ಅವರ ಪುತ್ರನಾಗಿರುವ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಮೂಲತಃ ಕರಾವಳಿಯ ಕಾರ್ಕಳದ ನಿಟ್ಟೆಯವರು. ಪ್ರಸ್ತುತ ಬೆಂಗಳೂರಿ ಕನ್ನಿಂಗ್ ಹ್ಯಾಂ ನಲ್ಲಿ ಪತ್ನಿ ಶಾರದಾ ಹೆಗ್ಡೆ ಜೊತೆಗೆ ವಾಸ್ತವ್ಯ. ಇವರಿಗೆ ಮಕ್ಕಳಿಲ್ಲ. ದತ್ತುಪುತ್ರ ಒಬ್ಬನಿದ್ದಾರೆ. ಮಗ ಪ್ಯಾರಿಸ್ ನಲ್ಲಿ ವಾಸ್ತವ್ಯ. ನ್ಯಾ. ಹೆಗ್ಡೆ ಅವರು ವರ್ಷಕ್ಕೊಮ್ಮೆ ಕುಟುಂಬ ಸಮೇತ ಪ್ಯಾರಿಸ್ ಗೆ ತೆರಳುತ್ತಾರೆ. ಹೆಗ್ಡೆ ಅವರು ದೊಡ್ಡ ಜಮೀನ್ದಾರರೇನಲ್ಲ. ಪತ್ನಿ ಆಸ್ತಿ ಏನೂ ಇಲ್ಲ. ಇರುವುದು ಬೆಂಗಳೂರಿನಲ್ಲಿ ಒಂದು ವಾಸ್ತವ್ಯದ ಅಪಾರ್ಟ್ ಮೆಂಟ್.

ಸಂತೋಷ್ ಹೆಗ್ಡೆ ಮತ್ತವರ ಪತ್ನಿಯ ಜೀವನ ಸಾಗುತ್ತಿರುವುದು ಸಂತೋಷ್ ಹೆಗ್ಡೆಯವರ ನಿವೃತ್ತಿ ವೇತನದಲ್ಲಿ. ಇದೇ ನಿವೃತ್ತಿ ವೇತನದ ಹಣದಿಂದ ಕಾರ್ಯಕ್ರಮಗಳಿಗೆ ಕೂಡಾ ತೆರಳುತ್ತಾರೆ. ಕಾರ್ಯಕ್ರಮದ ಸಂಯೋಜಕರು ಯಾರೇ ಪ್ರಯಾಣ ಭತ್ಯೆಯ ಆಫರ್ ನೀಡಿದರೂ ಅದನ್ನು ನಯವಾಗಿಯೇ ತಿರಸ್ಕರಿಸುತ್ತಾರೆ. ಅಂತಹ ದೊಡ್ಡ ಗುಣವನ್ನು ಹೊಂದಿದವರು ಸಂತೋಷ್ ಹೆಗ್ಡೆ. ನಿವೃತ್ತಿ ನಂತರ ಸಂತೋಷ್ ಹೆಗ್ಡೆ ಅವರಿಗೆ ಪ್ರಯಾಣ ಭತ್ಯೆ ಮತ್ತು ನಿವೃತ್ತಿ ವೇತನ ಸೇರಿ ಒಂದೂವರೆ ಲಕ್ಷ ರೂಪಾಯಿ ಕೇಂದ್ರ ಸರ್ಕಾರದಿಂದ ಬರುತ್ತಿದೆ. ಅದರಲ್ಲೇ ಇವರ ಜೀವನ ಹಾಗೂ ದೇಶದ ಮೂಲೆಮೂಲೆಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ನಡೆಯಬೇಕು. ಮನುಷ್ಯನಿಗೆ ತೃಪ್ತಿ ಅನ್ನೋದು ಬೇಕು. ನನಗಿದು ತೃಪ್ತಿ ತಂದಿದೆ. ಇದಕ್ಕಿಂತ ಹೆಚ್ಚಿನದ್ದನ್ನು ನಾನು ಆಶಿಸುವುದೂ ಇಲ್ಲ ಎನ್ನುತ್ತಾರೆ ಸಂತೋಷ್ ಹೆಗ್ಡೆ.

"ಯಾವುದೇ ಆದಾಯ ಮೂಲವಿಲ್ಲದೆ ಕೇವಲ ನಿವೃತ್ತಿ ವೇತನದಿಂದ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಜೀವನ ನಡೆಸುವುದರ ಜೊತೆಗೆ ರಾಷ್ಟ್ರದ ಮೂಲೆ ಮೂಲೆಗೆ ತೆರಳಿ ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ ಮೂಡಿಸುತ್ತಿದ್ದಾರೆಂದರೆ ನಂಬೋಕೇ ಆಗುತ್ತಿಲ್ಲ. ತಂದೆ ಜಸ್ಟಿಸ್ ಕೆ.ಎಸ್. ಹೆಗ್ಡೆ ಮನೆತನದ ಪಿತ್ರಾರ್ಜಿತ ಆಸ್ತಿ ಇರಬೇಕಲ್ಲಾ?" ಅಂತ ಹಲವರು ಪ್ರಶ್ನಿಸಿದ್ದಿದೆ.

ಅಂತಹ ಯಾವುದೇ ಆಸ್ತಿಯಾಗಲಿ, ಅಂತಸ್ತಾಗಲಿ, ಹಣವಾಗಲೀ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರಲ್ಲಿಲ್ಲ. ಸಂತೋಷ್ ಹೆಗ್ಡೆ ಯವರಿಗೆ ನಿವೃತ್ತಿ ವೇತನವಲ್ಲದೆ ಕೆಲವು ಸಂಸ್ಥೆಗಳ ನ್ಯಾಯ ವಿಲೇವಾರಿಗೆ ಕೋರ್ಟ್ ಆರ್ಬಿಟ್ರೇಶನ್ (ಮಧ್ಯಸ್ಥ) ಆಗಿ ನೇಮಿಸಿರುತ್ತದೆ. ಅದರ ಮೊತ್ತ ಕೆಲವೊಮ್ಮೆ ಸಿಗುತ್ತದೆಯಷ್ಟೆ. ಅದು ಬಿಟ್ಟು ಬೇರೆ ಯಾವುದೇ ಆದಾಯವಿಲ್ಲ. ತಂದೆ ಕೆ.ಎಸ್. ಹೆಗ್ಡೆ ಅವರು 1990 ರಲ್ಲಿ ನಿಧನರಾಗುವಾಗ ಅವರ ಸೊತ್ತು ಅಂತ ಇದ್ದದ್ದು ಕಾರ್ಕಳದ ನಿಟ್ಟೆಯಲ್ಲಿ ಎರಡು ಬೆಡ್ ರೂಮ್ ಮಾತ್ರ. ತಾಯಿಗೆ ಇದ್ದ 10 ಎಕ್ರೆ ಕೃಷಿ ಭೂಮಿಯಲ್ಲಿ ತಾನು ಪಾಲು ಪಡೆದುಕೊಳ್ಳದೆ ಸಹೋದರಿಯರಿಗೆ ಬಿಟ್ಟುಕೊಟ್ಟಿದ್ದಾರೆ. ಸಂತೋಷ್ ಹೆಗ್ಡೆ ಬೆಂಗಳೂರಿನಲ್ಲಿ ವಾಸಿಸಲು ಸ್ವಂತ ಫ್ಲಾಟ್ ಖರೀದಿಸುವಾಗ ಅವರ ತಂದೆ ಸಹಾಯ ಮಾಡಿದ್ದರು. ಅದೇ ನಿವಾಸದಲ್ಲಿ ಸಂತೋಷ್ ಹೆಗ್ಡೆ ಈಗಲೂ ಇದ್ದಾರೆ. ತಂದೆ ಜಸ್ಟಿಸ್ ಕೆ.ಎಸ್. ಹೆಗ್ಡೆ ಅವರು ಸುಪ್ರೀಂ ಕೋರ್ಟ್ ಗೆ ರಾಜೀನಾಮೆ ನೀಡುವ ಸಂದರ್ಭ ಅವರಿಗಿದ್ದ ಮಾಸಿಕ ಸಂಬಳ ಕೇವಲ 4,000/- ರೂ. ನೀವೇ ಊಹಿಸಿ ಈ ಮೊತ್ತದಿಂದ ಕೆ.ಎಸ್. ಹೆಗ್ಡೆ ಅವರು ಏನು ಸೊತ್ತು ಮಾಡಿಡಲು ಸಾಧ್ಯ? ಸಂತೋಷ್ ಹೆಗ್ಡೆ ಯಂತೆ ಅವರು ಕೂಡಾ ನ್ಯಾಯಪರ ಸರಳ ವ್ಯಕ್ತಿ ಆಗಿದ್ದರು. ಅವರ ಬಗ್ಗೆ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ತಂದೆ ಹಾಕಿಕೊಟ್ಟ ಆದರ್ಶದಲ್ಲೇ ಇಂದು ಸಂತೋಷ್ ಹೆಗ್ಡೆ ಮುನ್ನಡೆಯುತ್ತಿದ್ದಾರೆ.

ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಆದಾಯದ ಕುರಿತು ಯಾವುದೇ ರೀತಿಯ ಸಂದೇಹ ಬೇಕಾಗಿಲ್ಲ. ಅವರೊಬ್ಬ ಸ್ವಚ್ಛ ವ್ಯಕ್ತಿ ಮತ್ತು ನಾಡಿನ ಶ್ರೇಷ್ಠ ಶಕ್ತಿ. ಹೆಗ್ಡೆಯವರು ನಿಜಕ್ಕೂ ಇಂದು ಭಾರತದ ಶ್ರೇಷ್ಟ ಹುದ್ದೆಯಲ್ಲಿ ವಿರಾಜಮಾನರಾಗಬೇಕಿತ್ತು. ಆದರೆ ರಾಜಕಾರಣಿಗಳಿಗೆ ಅವರು ಅಪಥ್ಯ ಆಗಿರುವುದರಿಂದ ನಿವೃತ್ತ ಲೋಕಾಯುಕ್ತರಾಗಿಯೇ ಉಳಿದಿದ್ದಾರೆ. ಅವರ ವ್ಯಕ್ತಿತ್ವಕ್ಕೆ ಗೌರವ ಕೊಡುವುದಾದರೆ ರಾಷ್ಟ್ರಪತಿಯಾಗಿ ಆಯ್ಕೆಯಾಗಲು ನ್ಯಾ. ಹೆಗ್ಡೆ ಅವರು ಎಲ್ಲಾ ರೀತಿಯಲ್ಲೂ ಅರ್ಹರಾಗಿದ್ದಾರೆ.

ಸಂತೋಷ್ ಹೆಗ್ಡೆಯವರ ನಡೆನುಡಿ ನೋಡುವಾಗ ಪವಿತ್ರ ಕುರ್ ಆನ್ ನ ಈ ಉಕ್ತಿ ನೆನಪಾಗುತ್ತದೆ. "ನೀವು ಮಾಡದೇ ಇರುವುದನ್ನು ಹೇಳುವುದು ಅಲ್ಲಾಹನ (ಭಗವಂತ) ದೃಷ್ಟಿಯಲ್ಲಿ ಅಪ್ರಿಯವಾಗಿದೆ -ಕುರ್ ಆನ್." ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಏನು ಹೇಳುತ್ತಾರೋ ಅದನ್ನೇ ಮಾಡುತ್ತಾರೆ. ಅವರು ಏನು ಮಾತನಾಡಿದರೂ ಅದರಲ್ಲೊಂದು ಅರ್ಥವಿದೆ. ಅದಕ್ಕೆ ತೂಕವಿದೆ. ಅವರು ನ್ಯಾಯದ ಬಗ್ಗೆ ಮಾತನಾಡುವಾಗ ಅವರ ಜೀವನಕ್ರಮದಲ್ಲಿ ಆಚರಣೆಗೆ ತಂದದ್ದನ್ನೇ ಮಾತನಾಡುತ್ತಾರೆ. ಮಾಡುವುದೊಂದು ಹೇಳುವುದೊಂದು ಎಂಬುವುದು ಸಂತೋಷ್ ಹೆಗ್ಡೆ ಜೀವನದಲ್ಲಿಲ್ಲ. ಇವರಂತಹ ಮಹಾನ್ ಹುದ್ದೆಯಲ್ಲಿ ಬೇರೆ ತುಂಬಾ ಮಂದಿಯನ್ನು ನಾವು ನೋಡಿದ್ದೇವೆ. ಆದರೆ ಸಂತೋಷ್ ಹೆಗ್ಡೆ ಯವರ ವ್ಯಕ್ತಿತ್ವಕ್ಕೆ ಸರಿದೂಗುವ ವ್ಯಕ್ತಿ ವಿರಳ. ನಿವೃತ್ತ ಲೋಕಾಯುಕ್ತರಾದ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರಿಗೆ ದೇವರು ಆಯುರಾರೋಗ್ಯ, ಸುಖ-ಸಂತೋಷ ದಯಪಾಲಿಸಲಿ, ಇನ್ನಷ್ಟು ಕಾಲ ಭ್ರಷ್ಟಾಚಾರದ ವಿರುದ್ಧ ಧ್ವನಿ ಮೊಳಗಿಸಲಿ ಎಂಬುವುದೇ ನನ್ನ ಆಶಯ.

ರಶೀದ್ ವಿಟ್ಲ

Writer - ರಶೀದ್ ವಿಟ್ಲ

contributor

Editor - ರಶೀದ್ ವಿಟ್ಲ

contributor

Similar News