ಕೇರಳದಲ್ಲಿ ತ್ಯಾಜ್ಯ ವಿಲೇವಾರಿಗೆ ಹೊಸ ದಿಕ್ಕು ನೀಡುತ್ತಿರುವ ಜಾಬಿರ್ ಕಾರಟ್

Update: 2016-09-20 18:24 GMT

ಕೇರಳದ ಕೋಯಿಕ್ಕೋಡ್‌ನಿಂದ 45 ಕಿ.ಮೀ. ದೂರದಲ್ಲಿರುವ ಸಣ್ಣ ಗ್ರಾಮದ ಪುಥುಪ್ಪಡಿಯಲ್ಲಿ ಜನಿಸಿದ ಜಾಬಿರ್ ಕಾರಟ್ ಸಾಮಾನ್ಯ ವ್ಯಕ್ತಿಯಂತೆ ಬೆಳೆದು ತಮ್ಮ ಮನೆಯ ಪಕ್ಕವೇ ಇರುವ ಸರ್ಕಾರಿ ಶಾಲೆಯಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ ಮುಗಿಸಿದ್ದರು. ಸ್ಥಳೀಯ ಕಾಲೇಜಲ್ಲೇ ಮುಂದಿನ ವಿದ್ಯಾಭ್ಯಾಸ ಮಾಡಲು ಸಿದ್ಧತೆ ನಡೆಸುತ್ತಿದ್ದಾಗಲೇ ಅವರಿಗೆ ಝಾಕೀರ್ ಹುಸೇನ್ ದೆಹಲಿ ಕಾಲೇಜಿನಿಂದ ಸ್ಕಾಲರ್ಶಿಪ್ ಸಿಕ್ಕಿ ಇತಿಹಾಸ ಅಭ್ಯಾಸಕ್ಕಾಗಿ ದೆಹಲಿಗೆ ಹೋದರು. ಇದೇ ಅವರ ಜೀವನದ ಅತೀ ಕುತೂಹಲಕರ ತಿರುವು ನೀಡಿತು. “ನಾನು ಕೇರಳದ ಗ್ರಾಮಸ್ಥ. ಹೀಗಾಗಿ ಚೆನ್ನಾಗಿ ಉಡುಪು ಧರಿಸುವುದು ಗೊತ್ತಿರಲಿಲ್ಲ, ನನ್ನ ಇಂಗ್ಲಿಷ್ ಕೂಡ ಚೆನ್ನಾಗಿರದ ಕಾರಣ ಶೈಕ್ಷಣಿಕವಾಗಿ ಇತರರಿಗಿಂತ ಹಿಂದಿದ್ದೆ. ದೆಹಲಿಯಲ್ಲಿ ನನ್ನ ಐದು ವರ್ಷಗಳು ಬಹಳ ಸಂಪನ್ಮೂಲಭರಿತವಾಗಿದ್ದರೂ, ವ್ಯಕ್ತಿಯಾಗಿ ನನಗೆ ಬಹಳ ಸವಾಲಿನ ದಿನಗಳಾಗಿದ್ದವು” ಎನ್ನುತ್ತಾರೆ ಜಾಬಿರ್. ಪದವಿ ಮುಗಿದ ಮೇಲೆ ಅವರು ಅದೇ ವಿಷಯದ ಮೇಲೆ ದೆಹಲಿ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಓದಲು ಬಯಸಿದ್ದರು. “ನನ್ನ ಮುಂದೆ ಎರಡು ಆಯ್ಕೆಗಳಿದ್ದವು. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವುದು ಅಥವಾ ಪಿಎಚ್‌ಡಿ ಮಾಡುವುದು ನನ್ನ ಸಾಮರ್ಥ್ಯವಾಗಿರಲಿಲ್ಲ. ಬಹಳ ಯೋಚಿಸಿದ ಮೇಲೆ ಬಹಳಷ್ಟು ಪದವೀಧರರು ಯಾವುದೋ ಅನಗತ್ಯ ವಿಷಯದ ಮೇಲೆ ಐದು ವರ್ಷ ಸಂಶೋಧನೆ ಮಾಡುತ್ತಾರೆ ಎನ್ನುವುದು ಅರ್ಥವಾಯಿತು. ಇಂತಹ ಅಧ್ಯಯನದ ಕೆಲವೇ ವಿಷಯಗಳು ಮಾತ್ರ ಜನಜೀವನದಲ್ಲಿ ಬದಲಾವಣೆ ತರುತ್ತದೆ ಎಂದು ಗೊತ್ತಿತ್ತು” ಎಂದು ಅಂದಿನ ತಮ್ಮ ಗೊಂದಲವನ್ನು ವಿವರಿಸುತ್ತಾರೆ. ಜನರ ಉಪಯೋಗಕ್ಕೆ ಬರುವ ಏನಾದರೂ ಮಾಡುವ ಆಸಕ್ತಿ ಜಾಬಿರ್ ಅವರಲ್ಲಿತ್ತು. ಇದೇ ಸಮಯದಲ್ಲಿ ಅವರು ಗಾಂಧಿ ಫೆಲೋಶಿಪ್‌ಗೆ ಆಯ್ಕೆಯಾದರು. ಈ ಎರಡು ವರ್ಷಗಳ ರೆಸಿಡೆನ್ಷಿಯಲ್ ಪ್ರೊಗ್ರಾಂ ಅವರ ಜೀವನ ಬದಲಿಸಿದ ದಿನಗಳಾಗಿದ್ದವು. “ನನ್ನ ಜೀವನದ ಅತ್ಯುತ್ತಮ ಸಮಯ ಇದಾಗಿತ್ತು. ನನ್ನ ಸಂಪೂರ್ಣ ಚಿಂತನೆಯನ್ನು ಇದು ಬದಲಿಸಿತು. ನಾನು ಎರಡು ವರ್ಷಗಳನ್ನು ಬದಲಾವಣೆಗಾಗಿ ಮುಂಬೈನ ಸರ್ಕಾರಿ ಶಾಲೆಗಳಲ್ಲಿ ಮುಖ್ಯೋಪಾಧ್ಯಾಯರಿಗೆ ತರಬೇತಿ ನೀಡಿ ಕಳೆದೆ. ಈ ಸಮಯದಲ್ಲಿ ಕೊಳೆಗೇರಿಯಲ್ಲೂ ನೆಲೆಸುವ ಅವಕಾಶ ಸಿಕ್ಕಿತು. ಭಾರತದ ನಿಜವಾದ ಜಗತ್ತನ್ನು ಕಂಡೆ ಮತ್ತು ವಾಸ್ತವ ನನ್ನ ಕಣ್ಣೆದುರು ಇತ್ತು” ಎಂದು ವಿವರಿಸುತ್ತಾರೆ.

ಈ ಅನುಭವವೇ ಅರ್ಥಗರ್ಭಿತವಾದ ವೃತ್ತಿಯನ್ನು ಆರಿಸಲು ಅವರಿಗೆ ನೆರವಾಯಿತು. ತವರು ರಾಜ್ಯದಿಂದ ಹೊರಗೆ ಏಳು ವರ್ಷಗಳ ಕಾಲ ಕಳೆದ ಮೇಲೆ ಸಾಮಾಜಿಕ ಉದ್ಯಮವನ್ನು ಮನದಲ್ಲಿಟ್ಟುಕೊಂಡು ಕೇರಳಕ್ಕೆ ವಾಪಾಸಾಗಲು ಸಿದ್ಧರಾದರು. ಆಗ ಜಾಬಿರ್ ಸುಸ್ಥಿರ ಉದ್ಯಮಕ್ಕಾಗಿ ಹುಡುಕುತ್ತಿದ್ದರು. ನಮ್ಮ ದೇಶ ಮುಂದಿನ 10 ವರ್ಷಗಳಲ್ಲಿ ಎದುರಿಸಬಹುದಾದ ಅತೀ ದೊಡ್ಡ ಸಮಸ್ಯೆಗಾಗಿ ಅವರು ಹುಡುಕಿ ತ್ಯಾಜ್ಯ ನಿರ್ವಹಣೆ ಸಮಸ್ಯೆಯನ್ನು ಕೈಗೆತ್ತಿಕೊಂಡರು. ವಿಷಯದ ಬಗ್ಗೆ ಹೆಚ್ಚಿನ ಅಧ್ಯಯನಕ್ಕಾಗಿ ಜಾಬಿರ್ ಕೊಯಮತ್ತೂರಿಗೆ ಹೋಗಿ ಘನ ಮತ್ತು ದ್ರವ ಸಂಪನ್ಮೂಲ ನಿಭಾಯಿಸುವ ಕಂಪೆನಿಯಾದ ಇಂಡಿಯನ್ ಗ್ರೀನ್ ಸರ್ವಿಸ್ ಪ್ರಾಜೆಕ್ಟ್ ನಿರ್ದೇಶಕ ವೆಲ್ಲೂರ್ ಶ್ರೀನಿವಾಸನ್ ಬಳಿ ಮೂರು ತಿಂಗಳ ತರಬೇತಿ ಪಡೆದರು. ಇಲ್ಲಿ ಅವರು ಗುಜರಿ ಹೆಕ್ಕುವ ಕೆಲಸ ಮಾಡಿದರು. “ಪ್ರತೀ ದಿನ ಬೆಳೆಗ್ಗೆ ತ್ಯಾಜ್ಯ ಎತ್ತಲು ಹೋಗಿ ಅದರಲ್ಲಿದ್ದ ಜೈವಿಕ ತ್ಯಾಜ್ಯವನ್ನು ಬದಲಿಸಿ ಗೊಬ್ಬರಕ್ಕಾಗಿ ಪ್ರತ್ಯೇಕಿಸುತ್ತಿದ್ದೆ” ಎನ್ನುತ್ತಾರೆ!

ಮೂರು ತಿಂಗಳು ಕಳೆದ ಮೇಲೆ ತಮ್ಮ ಹೊಸ ಉದ್ಯಮದ ಸವಾಲನ್ನು ಸ್ವೀಕರಿಸಲು ಸಿದ್ಧವಾಗಿರುವ ಭಾವನೆ ಜಾಬಿರ್‌ಗೆ ಬಂತು. ಕೋಯಿಕ್ಕೋಡ್ ಜಿಲ್ಲೆಯ ಥಮರಸ್ಸೆರಿಯಲ್ಲಿ ಗ್ರೀನ್ ವರ್ಮ್ಸ್ ಕಂಪೆನಿ ಹೀಗೆ ಹುಟ್ಟಿಕೊಂಡಿತು. ಅವರ ತಂಡವು ಒಂದು ಎಕರೆ ಜಾಗವನ್ನು ತ್ಯಾಜ್ಯ ಪ್ರತ್ಯೇಕಿಸಲು ಮತ್ತು ಗೊಬ್ಬರ ಘಟಕ ಸ್ಥಾಪಿಸಲೆಂದು ಲೀಸ್‌ಗೆ ಪಡೆದುಕೊಂಡರು. ಸಾಮಾನ್ಯವಾಗಿ ಅಂಗಡಿ ಮುಂಗಟ್ಟುಗಳು ತಮ್ಮ ತ್ಯಾಜ್ಯವನ್ನು ರಸ್ತೆ ಬದಿಗೆ ಎಸೆಯುತ್ತಾರೆ ಅಥವಾ ನದಿಗೆ ಎಸೆಯುತ್ತಾರೆ. ಜಾಬಿರ್ ಅವರನ್ನು ಜವಾಬ್ದಾರಿಯುತವಾಗಿ ತ್ಯಾಜ್ಯ ನಿಭಾಯಿಸುವಂತೆ ಒಪ್ಪಿಸಿದರು. ಅವರ ಮೂರು ಮಂದಿಯ ತಂಡ ಈ ವ್ಯಾಪಾರಿಗಳು ಮತ್ತು ಅಂಗಡಿ ಮಾಲೀಕರ ತ್ಯಾಜ್ಯವನ್ನು ಪ್ರೊಸೆಸ್ ಮಾಡಲು ಶುರು ಮಾಡಿದರು. ಇದಕ್ಕಾಗಿ ಸಣ್ಣ ಮಟ್ಟಿಗಿನ ಸೇವಾ ಶುಲ್ಕವನ್ನೂ ಗ್ರೀನ್ ವರ್ಮ್ಸ್ ಅವರಿಂದ ಪಡೆಯುತ್ತಿತ್ತು. ಆದರೆ ಇದು ಬಹಳ ದಿನ ನಡೆಯಲಿಲ್ಲ. ತ್ಯಾಜ್ಯವನ್ನು ಹಣಕೊಟ್ಟು ನಿಭಾಯಿಸುವುದಕ್ಕಿಂತ ಎಲ್ಲೋ ಎಸೆಯುವುದೇ ಸುಲಭ ಎಂದುಕೊಂಡು ಮತ್ತೆ ರಸ್ತೆಗೆ ಎಸೆಯಲಾರಂಭಿಸಿದರು. ಜಾಬಿರ್ ಮತ್ತು ಅವರ ತಂಡಕ್ಕೆ ಇದು ದೊಡ್ಡ ಪಾಠವಾಯಿತು.

1000 ಕೇಜಿ ತ್ಯಾಜ್ಯ ಕೊಟ್ಟರೆ ಅದರಿಂದ 900 ಕೇಜಿ ನವೀಕರಿಸಬಹುದು. ಇಂದು ಎಲ್ಲವೂ ಕೇಂದ್ರೀಯ ಪ್ರೊಸೆಸಿಂಗ್ ಯುನಿಟ್‌ಗಳಲ್ಲಿ ನಡೆಯುತ್ತವೆ. ಇದಕ್ಕಾಗಿ ಸಾಗಾಟ ಮತ್ತು ಕಾರ್ಮಿಕ ಶುಲ್ಕವೂ ತಗಲುತ್ತದೆ. ಅಲ್ಲದೆ ನಿಭಾಯಿಸಬೇಕಾದ ತ್ಯಾಜ್ಯವೂ ಅಧಿಕವಾಗಿರುತ್ತದೆ. ಹೀಗಾಗಿ ಜಾಬಿರ್ ಮತ್ತು ತಂಡ ಶಾಲೆಗಳಲ್ಲಿ ತ್ಯಾಜ್ಯದ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಆರಂಭಿಸಿದರು. ವಿದ್ಯಾರ್ಥಿಗಳಿಗೆ ವಿಭಿನ್ನ ತ್ಯಾಜ್ಯ ಪ್ರತ್ಯೇಕಿಸುವುದು, ನವೀಕರಣ ಮತ್ತು ಗೊಬ್ಬರ ಇತ್ಯಾದಿಗಳ ವಿವರ ನೀಡಿದರು.

ಶೂನ್ಯ ತ್ಯಾಜ್ಯ ತತ್ವದಡಿ ಮದುವೆ ಮತ್ತು ಇತರ ಕಾರ್ಯಕ್ರಮಗಳಲ್ಲೂ ಕಾರ್ಯಕ್ರಮ ಆಯೋಜಿಸಿದರು. ಕಾರ್ಯಕ್ರಮಗಳಲ್ಲಿ ಸೆರಮಿಕ್, ಸ್ಟೀಲ್ ಇತ್ಯಾದಿಗಳಿಂದ ಮಾಡಿದ ನವೀಕರಿಸಬಹುದಾದ ತಟ್ಟೆಗಳನ್ನು ಕೊಟ್ಟರು. ಎಸೆಯಬಹುದಾದ ತಟ್ಟೆ ಬೇಕೆಂದು ಗ್ರಾಹಕರು ಕೇಳಿದಾಗ ಅಡಕೆ ಮರದ ವಸ್ತುಗಳಿಂದ ತಯಾರಾದ ತಟ್ಟೆಗಳು ಮತ್ತು ಗ್ಲಾಸ್‌ಗಳನ್ನು ತಯಾರಿಸಿದರು. ಆಹಾರಕ್ಕಾಗಿ ಪಾರಂಪರಿಕ ಬಾಳೆ ಎಲೆ ಬಳಸಲು ಸೂಚಿಸಿದರು. ಈ ಎಲ್ಲಾ ಕಾರ್ಯಕ್ರಮಗಳ ತ್ಯಾಜ್ಯವನ್ನೂ ಗ್ರೀನ್ ವರ್ಮ್ಸ್ ನಿಭಾಯಿಸುತ್ತದೆ. ಸಾವಯವ ತ್ಯಾಜ್ಯವನ್ನು ಪ್ರೊಸೆಸಿಂಗ್ ಘಟಕಕ್ಕೆ ಕೊಂಡೊಯ್ದು ಗೊಬ್ಬರವಾಗಿ ಬದಲಿಸಲಾಗುತ್ತದೆ. ಅವರ ಕೆಲಸಕ್ಕೆ ಸಾಕಷ್ಟು ಜನರ ಗಮನ ಸೆಳೆದು ಈಗ ಜನರು ತ್ಯಾಜ್ಯ ನಿಭಾಯಿಸಲು ಅವರಿಗೆ ಕರೆ ಮಾಡುತ್ತಾರೆ.

“ಸದ್ಯಕ್ಕೆ ನಾವು ಐಐಎಂನ ಮೊದಲ ಸುತ್ತಿನ ಸಂದರ್ಶನದಲ್ಲಿ ನಮ್ಮ ಸಂಸ್ಥೆಯ ಬಗ್ಗೆ ವಿವರ ನೀಡಿ ಉತ್ತರಕ್ಕಾಗಿ ಕಾಯುತ್ತಿದ್ದೇವೆ. ಒಂದು ಉದ್ಯಮ ಯೋಜನೆ ಸಿಕ್ಕರೆ ಈ ಮಾದರಿಯನ್ನು ದೊಡ್ಡ ಪ್ರಮಾಣದಲ್ಲಿ ಮುಂದಿಡುವ ಆಶಯವಿದೆ. ಭವಿಷ್ಯದಲ್ಲಿ ನಾವು ಕನ್ಸಲ್ಟನ್ಸಿಯಾಗಿ ಬದಲಾಗಿ ರಾಜ್ಯದಲ್ಲಿ ಇತರರಿಗೂ ಸುಸ್ಥಿರ ತ್ಯಾಜ್ಯ ನಿರ್ವಹಣೆ ಅಭ್ಯಾಸ ಮಾಡಲು ನೆರವಾಗಲು ಬಯಸಿದ್ದೇವೆ” ಎನ್ನುತ್ತಾರೆ ಜಾಬಿರ್.

ಕೃಪೆ: http://economictimes.indiatimes.com/m

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News