ಸುಪ್ರೀಂ ತೀರ್ಪಿನಲ್ಲಿ ಪ್ರಧಾನಿ ಕೈವಾಡ ಶಂಕೆ :ಮೊಯ್ಲಿ
ಬೆಂಗಳೂರು, ಸೆ.21: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುವ ಸಂಬಂಧ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಲ್ಲಿ ಪ್ರಧಾನಿ ನರೇಂದ್ರಮೋದಿ ಕೈವಾಡವಿರುವ ಕುರಿತು ಅನುಮಾನ ಮೂಡುತ್ತಿದೆ ಎಂದು ಸಂಸದ ವೀರಪ್ಪಮೊಯ್ಲಿ ಹೇಳಿದ್ದಾರೆ.
ಬುಧವಾರ ಅಧಿಕೃತ ನಿವಾಸ ಕಾವೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಕಾಂಗ್ರೆಸ್ ಸಂಸದರ ನಿಯೋಗದೊಂದಿಗೆ ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನದಿ ನೀರಿನ ವಿಚಾರದಲ್ಲಿ ಪ್ರಧಾನಿ ನರೇಂದ್ರಮೋದಿ ಒಕ್ಕೂಟ ವ್ಯವಸ್ಥೆಯ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದರು.
ಸುಪ್ರೀಂಕೋರ್ಟ್ ತೀರ್ಪು ಪಕ್ಷಪಾತದಿಂದ ಕೂಡಿದೆ. ಅವರಿಗೆ ಇಲ್ಲಿನ ಪರಿಸ್ಥಿತಿಯ ಅರಿವಿಲ್ಲ. ಸುಪ್ರೀಂಕೋರ್ಟ್‌ನ ತೀರ್ಪು ಅಕ್ರಮ, ಅನ್ಯಾಯದಿಂದ ಕೂಡಿದೆ. ಈ ಆದೇಶವನ್ನು ಧಿಕ್ಕರಿಸಿದರೆ ಸರಕಾರವೇನು ಉರುಳುವುದಿಲ್ಲ. ಸುಪ್ರೀಂಕೋರ್ಟ್‌ಗೆ ಇರುವಷ್ಟು ಹಕ್ಕು, ವಿಧಾನಸಭೆ ಹಾಗೂ ಸಂಸತ್ತಿಗೂ ಇದೆ ಎಂದು ಮೊಯ್ಲಿ ಹೇಳಿದರು.
ಜನರು ನ್ಯಾಯಾಂಗದ ಮೇಲೆ ನಂಬಿಕೆ ಉಳಿಸಿಕೊಳ್ಳಬೇಕು. ತಮಿಳುನಾಡಿಗೆ ಈಗ ನೀರು ಬಿಟ್ಟರೆ ಕುಡಿಯುವ ನೀರಿಗೆ ತೊಂದರೆಯಾಗಲಿದೆ. ಆದುದರಿಂದ, ಸರಕಾರ ಕುಡಿಯುವ ನೀರಿಗೆ ಯಾವುದೆ ಬಗೆಯ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯರಾದ ಪ್ರೊ.ರಾಜೀವ್‌ಗೌಡ, ಕೆ.ಸಿ.ರಾಮಮೂರ್ತಿ, ಸಂಸದರಾದ ಡಿ.ಕೆ.ಸುರೇಶ್, ಪ್ರಕಾಶ್ ಹುಕ್ಕೇರಿ ಹಾಗೂ ಮುದ್ದಹನುಮೇಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.