ಆನ್‌ಲೈನ್‌ನಲ್ಲಿ ಅಶ್ಲೀಲ ಚಿತ್ರ ವೀಕ್ಷಣೆ: ಆಘಾತಕಾರಿ ಮಾಹಿತಿ ಬಹಿರಂಗ

Update: 2016-09-21 14:03 GMT

ಬೆಂಗಳೂರು, ಸೆ. 21: ದಕ್ಷಿಣ ಭಾರತದಲ್ಲಿ ಶೇ.69ರಷ್ಟು ಹದಿಹರೆಯದ ಯುವಕರು ಆನ್‌ಲೈನ್ ಮೂಲಕ ಅಶ್ಲೀಲ ಚಿತ್ರಗಳನ್ನು ವೀಕ್ಷಣೆ ಮಾಡುತ್ತಿದ್ದಾರೆ. ಒಂದು ವರ್ಷದಲ್ಲಿ ಸುಮಾರು ಹತ್ತು ಲಕ್ಷ ಪದವಿಪೂರ್ವ ಮತ್ತು ಪದವಿ ವಿದ್ಯಾರ್ಥಿಗಳು ಅಶ್ಲೀಲ ಚಿತ್ರ ವಿಕ್ಷಣೆ ಚಟಕ್ಕೆ ದಾಸರಾಗುತ್ತಿರುವ ಮಾಹಿತಿ ರೆಸ್ಕೂ ಸಂಸ್ಥೆ ನಡೆಸಿರುವ ಸಮೀಕ್ಷೆಯಿಂದ ಬಹಿರಂಗಗೊಂಡಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ರೆಸ್ಕೂ ಸಂಸ್ಥೆ ಕಾರ್ಯನಿರ್ವಾಹಕ ಅಧಿಕಾರಿ ಅಭಿಷೇಕ್ ಕ್ಲೀಪರ್ಡ್ ಸಮೀಕ್ಷೆಯ ಫಲಿತಾಂಶವನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ದಕ್ಷಿಣ ಭಾರತದ ಆರು ರಾಜ್ಯಗಳಲ್ಲಿ 300 ಕಾಲೇಜುಗಳಲ್ಲಿ ಅತ್ಯಾಚಾರ ಅಶ್ಲೀಲ ಚಿತ್ರ ಮತ್ತು ಮಕ್ಕಳ ಅಶ್ಲೀಲ ಚಿತ್ರ ವೀಕ್ಷಣೆ ಕುರಿತು ಪ್ರಶ್ನಾವಳಿ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆಯ ಪ್ರಶ್ನಾವಳಿಗಳಿಗೆ ಆರು ಸಾವಿರ ವಿದ್ಯಾರ್ಥಿಗಳು ಉತ್ತರಿಸಿದ್ದಾರೆ. ಈ ಸಮೀಕ್ಷೆಯಲ್ಲಿ ಪ್ರತಿವರ್ಷ 10 ಲಕ್ಷ ವಿದ್ಯಾರ್ಥಿಗಳು ಅಶ್ಲೀಲ ಹಾಗೂ ಅತ್ಯಾಚಾರ ವೀಡಿಯೊಗಳನ್ನು ವೀಕ್ಷಿಸುವುದರಲ್ಲಿ ತಲ್ಲೀನರಾಗುತ್ತಿರುವ ಅಂಶ ಬೆಳಕಿಗೆ ಬಂದಿದೆ ಎಂದರು. ಪ್ರತಿ ವಾರ ಶೇ.69ರಷ್ಟು ಹುಡುಗರು ಸರಾಸರಿ 7 ಗಂಟೆ ಅಶ್ಲೀಲ ಚಿತ್ರ ವೀಕ್ಷಿಸುತ್ತಾರೆ. 9ನೆ ತರಗತಿಯಿಂದಲೇ ಹುಡುಗರು ಅಶ್ಲೀಲ ಚಿತ್ರ ವೀಕ್ಷಿಸಲು ಆರಂಭಿಸುತ್ತಿರುವುದು ಆಘಾತಕಾರಿಯಾಗಿದ್ದು, ಸಮೀಕ್ಷೆಯಿಂದ ಇದು ಬಹಿರಂಗಗೊಂಡಿದೆ. ಇಂಟರ್‌ನೆಟ್ ಮೂಲಕ ವರ್ಷವೊಂದರಲ್ಲಿ 13ಲಕ್ಷ ಜನರು ಅಶ್ಲೀಲ ಚಿತ್ರ ವೀಕ್ಷಣೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಅಶ್ಲೀಲ ಚಿತ್ರ ವೀಕ್ಷಣೆ ಮಾಡುತ್ತಿರುವವರಲ್ಲಿ ಶೇ.85ರಷ್ಟು ವಿದ್ಯಾರ್ಥಿಗಳು ಹಂತ ಹಂತವಾಗಿ ಕೆಟ್ಟತನಕ್ಕೆ ಇಳಿದು ಬಿಡುತ್ತಾರೆ ಹಾಗೂ ಅವರಲ್ಲಿ ಚಟವಾಗಿ ಪರಿಣಮಿಸುತ್ತಿದೆ. ಶೇ.87ರಷ್ಟು ವಿದ್ಯಾರ್ಥಿಗಳು ಅನೈತಿಕ ಸಂಬಂಧಕ್ಕೆ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುತ್ತಾರೆ. ಇವರಲ್ಲಿ ಶೇ.45ರಷ್ಟು ಯುವಕರು ವಿವಾಹ ಪೂರ್ವ ಸೆಕ್ಸ್ ನಡೆಸುತ್ತಿದ್ದಾರೆ ಎಂದು ಆತಂಕ ಪಟ್ಟರು.

ಮಕ್ಕಳ ಅಶ್ಲೀಲ ಚಿತ್ರ ವೀಕ್ಷಣೆಯೇ ಹೆಚ್ಚು: ಅಶ್ಲೀಲ ಚಿತ್ರ ವೀಕ್ಷಣೆ ಡ್ರಗ್ಸ್‌ಗಿಂತಲೂ ಅತ್ಯಂತ ಕೆಟ್ಟ ಚಟವಾಗಿ ಪರಿಣಮಿಸಿದೆ. ಶೇ.36ರಷ್ಟು ಪದವಿ ವಿದ್ಯಾರ್ಥಿಗಳು ಅತ್ಯಂತ ಕ್ರೂರ ಮತ್ತು ಮಕ್ಕಳ ಅಶ್ಲೀಲ ಚಿತ್ರ ವೀಕ್ಷಣೆ ಮಾಡುತ್ತಿದ್ದಾರೆ. ಪ್ರತೀ ವಾರದಲ್ಲಿ ಏಳು ಗಂಟೆಗಳ ಸರಾಸರಿ 19 ಅತ್ಯಾಚಾರ ವಿಡಿಯೋಗಳನ್ನು ವೀಕ್ಷಿಸುತ್ತಿದ್ದಾರೆ ಎಂದು ತಿಳಿಸಿದರು.

ಶಾಲಾ ಕಾಲೇಜುಗಳಲ್ಲಿ ಲೈಂಗಿಕ ಶಿಕ್ಷಣ ಮತ್ತು ವಿವಾಹ ಪೂರ್ವ ಲೈಂಗಿಕ ಕ್ರಿಯೆಯಿಂದಾಗುವ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಬೇಕಿದೆ. ಯುವಕರಿಗೆ ಮಾರಕವಾಗಿರುವ ಪೊರ್ನ್ ವೆಬ್‌ಸೈಟ್‌ಗಳನ್ನು ನಿಷೇಧ ಮಾಡುವಂತೆ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News