‘ನೀರಾ ನೀತಿ’ಗೆ ಸಚಿವ ಸಂಪುಟ ಅನುಮೋದನೆ

Update: 2016-09-21 14:07 GMT

ಬೆಂಗಳೂರು, ಸೆ. 21: ಬೆಲೆ ಕುಸಿತದ ಹಿನ್ನೆಲೆಯಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ತೆಂಗು ಬೆಳೆಗಾರರನ್ನು ರಕ್ಷಿಸುವ ಉದ್ದೇಶಕ್ಕಾಗಿ ಮಿತ ಪ್ರಮಾಣದಲ್ಲಿ ತೆಂಗಿನ ಮರದಿಂದ ನೀರಾ ಇಳಿಸುವ ‘ನೀರಾ ನೀತಿ’ಗೆ ರಾಜ್ಯ ಸರಕಾರ ಸಂಪುಟ ಸಭೆಯಲ್ಲಿ ಮಹತ್ವದ ಅನುಮೋದನೆ ನೀಡಿದೆ.

ಬುಧವಾರ ವಿಧಾನಸೌಧದ ಸಚಿವ ಸಂಪುಟ ಸಭಾ ಭವನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಜಯಚಂದ್ರ, ನೀರಾವನ್ನು ಅಬಕಾರಿ ಕಾಯ್ದೆಯಿಂದ ಹೊರಗಿರಿಸಲು ನಿರ್ಧರಿಸಲಾಗಿದೆ ಎಂದರು.

2015-19ರ ಆಯವ್ಯಯ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದಂತೆ ನೀರಾ ನೀತಿಗೆ ಅನುಮೋದನೆ ನೀಡಿದ್ದು, ನೀರಾವನ್ನು ಮಿತ ಪ್ರಮಾಣದಲ್ಲಿ ಇಳಿಸಲು ತೆಂಗು ಬೆಳೆಗಾರರ ಫೆಡರೇಷನ್ ಸದಸ್ಯರಿಗೆ ಅನುಮತಿ ನೀಡಲು ಅಬಕಾರಿ ಕಾಯ್ದೆಗೆ ತಿದ್ದುಪಡಿ ತರಲು ಒಪ್ಪಿಗೆ ನೀಡಲಾಗಿದೆ ಎಂದರು.
ಈ ಸಂಬಂಧ ಸೂಕ್ತ ನೀತಿಯೊಂದನ್ನು ಕಾಸರಗೋಡಿನಲ್ಲಿರುವ ಕೇಂದ್ರೀಯ ತೋಟಗಾರಿಕಾ ಮಂಡಳಿ ರೂಪಿಸಲಿದೆ. ತೆಂಗು ಬೆಳೆಗಾರರ ಬಹುದಿನಗಳ ಬೇಡಿಕೆ ಈಡೇರಿಸಿದ್ದು, ನೀರಾ ಪಾನೀಯವನ್ನು ಉತ್ಪಾದಿಸುವ ಪ್ರಕ್ರಿಯೆ ಆರಂಭಿಸಲು ಉದ್ದೇಶಿಸಲಾಗಿದೆ ಎಂದರು.

‘ನೀರಾ’ವನ್ನು ಅಬಕಾರಿ ಕಾಯ್ದೆ ವ್ಯಾಪ್ತಿಯಿಂದ ಹೊರಗಿಡುವುದರಿಂದ ತೆಂಗಿನಿಂದ ಆರೋಗ್ಯಕರ ಪಾನೀಯ, ಚಾಕೋಲೇಟ್, ಜೇನುತುಪ್ಪ, ಬೆಲ್ಲ, ಐಸ್‌ಕ್ರಿಮ್ ಸೇರಿದಂತೆ ಇನ್ನಿತರ ಉತ್ಪನ್ನಗಳನ್ನು ಉತ್ಪಾದಿಸಲು ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.

ಜೀವನೋಪಾಯ ಇಲಾಖೆ ರಚನೆ

ನೂತನವಾಗಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ರಚನೆಗೆ ನಿರ್ಧರಿಸಿದ್ದು, ಸಿಬ್ಬಂದಿ ಮತ್ತು ನೂತನ ಕಾರ್ಯದರ್ಶಿ ನೇಮಕ ಮಾಡಲು ಸಚಿವ ಸಂಪುಟ ತೀರ್ಮಾನಿಸಿದೆ ಎಂದು ಅವರು ಮಾಹಿತಿ ನೀಡಿದರು.

ಯಲಹಂಕದ ಪುಟ್ಟೇನಹಳ್ಳಿ ಕೆರೆ ಅಭಿವೃದ್ಧಿಗೆ 12.56 ಕೋಟಿ ರೂ., ಕೇಂದ್ರ ಸಹಯೋಗದೊಂದಿಗೆ ವಿಶ್ವಬ್ಯಾಂಕ್ ನೆರವಿನಡಿ ದಾವಣಗೆರೆಯಲ್ಲಿ ತರಬೇತಿ ಕಟ್ಟಡಕ್ಕೆ 11.10 ಕೋಟಿ ರೂ.ಗಳನ್ನು ಒಗಿಸಲು ಸಂಪುಟ ತೀರ್ಮಾನಿಸಿದೆ ಎಂದು ಕಾನೂನು ಸಚಿವ ಜಯಚಂದ್ರ ಹೇಳಿದರು.

ಮೈಸೂರಿನ ಹುಣಸೂರು ತಾಲೂಕಿನ ಉದ್ದೂರು ಆಸ್ಪತ್ರೆ ಕಾವಲ್ ಬೇಸಾಯ ಸಹಕಾರ ಸಂಘದ 738 ಮಂದಿ ಸದಸ್ಯರಿಗೆ ಮಂಜೂರು ಮಾಡಿದ್ದ 1268 ಎಕರೆ ಭೂಮಿ ತಾಂತ್ರಿಕ ತೊಂದರೆ ನಿವಾರಿಸಿದ್ದು, ಅದನ್ನು ಸರಕಾರಿ ಆದೇಶದನ್ವಯ ಅನುಷ್ಠಾನಕ್ಕೆ ಸಂಪುಟ ನಿರ್ಧರಿಸಿದೆ ಎಂದರು.

ಹಕ್ಕಿಪಿಕ್ಕಿಗಳಿಗೆ ಪುನರ್ವಸತಿ: ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ರಾಗಿಹಳ್ಳಿ ಅರಣ್ಯದ ಸ.ನಂ.1ರಲ್ಲಿ ಹಕ್ಕಿಪಿಕ್ಕಿ ಮತ್ತು ಇರುಳಿಗ ಜನಾಂಗಗಳಿಗೆ 350 ಎಕರೆ ಭೂಮಿಯಲ್ಲಿ ಪುನರ್ವಸತಿ ಕಲ್ಪಿಸಲು ಹೊಸ ಅಧಿಸೂಚನೆ ಹೊರಡಿಸಲು ಸಂಪುಟ ಅನುಮೋದನೆ ನೀಡಿದೆ ಎಂದರು.

ಅಕ್ಕಮಹಾದೇವಿ ವಿ.ವಿ.

ವಿಜಯಪುರದ ರಾಜ್ಯ ಮಹಿಳಾ ವಿಶ್ವ ವಿದ್ಯಾಲಯವನ್ನು ‘ರಾಜ್ಯ ಅಕ್ಕ ಮಹಾದೇವಿ ವಿಶ್ವವಿದ್ಯಾಲಯ ವಿಜಯಪುರ’ ಎಂದು ಮರುನಾಮಕರಣ ಮಾಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News