ವಿಕೃತ ಜಾತ್ಯತೀತ ಬೇಡ, ಮುಸ್ಲಿಮರು ನಿಮ್ಮವರೇ

Update: 2016-09-25 18:30 GMT

ಕೋಝಿಕ್ಕೋಡ್, ಸೆ.25: ಜಾತ್ಯಾತೀತತೆ ಎಂಬ ಪದದ ವಿವರಣೆಯನ್ನು ವಿಕೃತಗೊಳಿಸಲಾಗುತ್ತಿದೆ ಎಂದು ಒತ್ತಿಹೇಳಿರುವ ಪ್ರಧಾನಿ ನರೇಂದ್ರ ಮೋದಿ, ಮುಸ್ಲಿಮರನ್ನು ಮತ ಮಾರುಕಟ್ಟೆಯ ವಸ್ತುಗಳು ಎಂಬುದಾಗಿ ಕಾಣುವ ಬದಲು ನಿಮ್ಮವರೇ ಎಂದು ಕಾಣಬೇಕು ಎಂಬ ಜನಸಂಘದ ಮುಖಂಡ ದೀನದಯಾಳ್ ಉಪಾಧ್ಯಾಯ ಅವರ ಹೇಳಿಕೆಯನ್ನು ಉದ್ದರಿಸಿದರು. ಇಲ್ಲಿ ನಡೆದ ಬಿಜೆಪಿ ಸಮಿತಿ ಸಭೆಯ ಸಮಾರೋಪದಲ್ಲಿ ಮಾತನಾಡಿದ ಅವರು, ತಮ್ಮ ಸರಕಾರದ ‘ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್’ ಎಂಬ ಧ್ಯೇಯವಾಕ್ಯ ಕೇವಲ ರಾಜಕೀಯ ಘೋಷಣೆಯಲ್ಲ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಹಿತರಕ್ಷಣೆಯ ಬದ್ಧತೆಯಾಗಿದೆ ಎಂದರು.

ತಮ್ಮ ಭಾಷಣದುದ್ದಕ್ಕೂ ಜಾತ್ಯಾತೀತತೆ, ಸಮತೋಲವುಳ್ಳ ಸಮಗ್ರ ಅಭಿವೃದ್ಧಿ ಚುನಾವಣಾ ಪ್ರಕ್ರಿಯೆಯ ಸುಧಾರಣೆ ಮುಂತಾದ ವಿಷಯಗಳನ್ನು ಮೋದಿ ಉಲ್ಲೇಖಿಸಿದರು. ದೀನದಯಾಳ್ ಉಪಾಧ್ಯಾಯ ಅವರ 100ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಗೌರವ ಅರ್ಪಿಸಿ ಅವರು ಸಭೆಯಲ್ಲಿ ಮಾತನಾಡಿದರು. ಜಾಗತಿಕ ತಾಪಮಾನದ ಬಗ್ಗೆ ಇಂದು ಮಾತು ಕೇಳಿ ಬರುತ್ತಿದೆ. ಆದರೆ ದೀನದಯಾಳ್ ಉಪಾಧ್ಯಾಯರು ಅಂದೇ ಈ ಬಗ್ಗೆ ಎಚ್ಚರಿಸಿದ್ದರು. ನಾವು ಪರಿಸರವನ್ನು ಗೌರವಿಸಬೇಕು ಎಂದಿದ್ದರು. ಇಂದಿನ ದಿನದಲ್ಲಿ ರಾಷ್ಟ್ರೀಯತೆ ಎಂದು ಉಲ್ಲೇಖಿಸಿದರೆ ಅದನ್ನೂ ದೂಷಿಸಲಾಗುತ್ತಿದೆ.ಮುಸ್ಲಿಮರನ್ನು ಹೊಗಳುವುದೂ ಬೇಡ, ನಿಂದಿಸುವುದೂ ಬೇಡ. ಅವರನ್ನು ಸಶಕ್ತಗೊಳಿಸುವತ್ತ ಗಮನಹರಿಸಿ. ಅವರು ಮತ ಮಾರುಕಟ್ಟೆಯಲ್ಲಿರುವ ವಸ್ತುಗಳಲ್ಲ ಅಥವಾ ದ್ವೇಷದ ವಿಷಯವಲ್ಲ. ಅವರನ್ನು ನಿಮ್ಮವರೆಂದೇ ಕಾಣಿರಿ ಎಂದ ಮೋದಿ, ನಾವು ನಮ್ಮ ಸಿದ್ಧಾಂತದ ವಿಷಯದಲ್ಲಿ ಎಂದೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಒತ್ತಿಹೇಳಿದರು.

 ಕೇರಳದಲ್ಲಿ ಪಕ್ಷಕ್ಕೆ ನೆಲೆ ಕಲ್ಪಿಸುವ ಉದ್ದೇಶದಿಂದ ಈ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಪಕ್ಷವು ತನ್ನ ಸಿದ್ಧಾಂತದೊಂದಿಗೆ ರಾಜಿ ಮಾಡಿಕೊಂಡಿದ್ದರೆ ನಾವು ಬಹಳ ಹಿಂದೆಯೇ ಅಧಿಕಾರ ಪಡೆಯುತ್ತಿದ್ದೆವು. ನೀವು ಎಷ್ಟು ಕಾಲ ಪ್ರಧಾನಿ ಹುದ್ದೆಯಲ್ಲಿರುತ್ತೀರಿ ಎಂದು ಈ ದೇಶದ ಒಬ್ಬರು ಪ್ರಧಾನಿಯನ್ನು ಒಮ್ಮೆ ಪ್ರಶ್ನಿಸಲಾಯಿತು. ಅದಕ್ಕೆ ಅವರು- ಎವರೆಸ್ಟ್ ಏರುವುದು ಅಲ್ಲಿ ವಿರಮಿಸಲೆಂದಲ್ಲ, ಇತಿಹಾಸ ಸೃಷ್ಟಿಸಲೆಂದು ಎಂದು ಉತ್ತರಿಸಿದ್ದರು. ಇದೇ ರೀತಿ ನಾವು ಲಾಭ ಮಾಡಲೆಂದು ರಾಜಕೀಯ ಕ್ಷೇತ್ರಕ್ಕೆ ಬಂದಿದ್ದರೆ ನಮ್ಮ ವೌಲ್ಯ, ಸಿದ್ಧಾಂತದ ಜೊತೆ ರಾಜಿ ಮಾಡಿಕೊಳ್ಳುತ್ತಿದ್ದೆವು ಎಂದರು.

   ಜನತೆಯ ಹಿತರಕ್ಷಣೆ ಎಂಬ ನೀತಿ ಬಿಜೆಪಿಯ ಮೂಲ ಲಕ್ಷಣವಾಗಿದೆ. ಎಲ್ಲಾ ಪಕ್ಷಗಳಲ್ಲೂ ಉತ್ತಮ ಜನರಿದ್ದಾರೆ. ಆದರೆ ನಮ್ಮ ಪಕ್ಷದಲ್ಲಿ ಇಂತಹ ಉತ್ತಮ ಜನರು ಬಹಳಷ್ಟಿದ್ದಾರೆ. ನಾವು ಇಂದು ಸಾಧಿಸಿದ ಸಾಧನೆ ನಮ್ಮ ಹಿರಿಯ ನಾಯಕರ ಶ್ರಮದ ಫಲವಾಗಿದೆ ಎಂದರು. ಸಮಾಜದ ಬಡಜನರಿಗಾಗಿ ನಮ್ಮ ಪಕ್ಷವು ರಚನೆಯಾಗಿದೆ ಮತ್ತು ತುಳಿತಕ್ಕೆ ಒಳಗಾದ ವ್ಯಕ್ತಿಗಳನ್ನು ಕೇಂದ್ರೀಕರಿಸಿ ನಮ್ಮ ಉಪಕ್ರಮಗಳು ಸಾಗುತ್ತವೆ ಎಂದು ಮೋದಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News