ತಾಯಿಯ ಹೊಟ್ಟೆಗೆ ತುಳಿದ ಗೋಮಾತೆಯ ರಕ್ಷಕರು!

Update: 2016-09-25 18:53 GMT

ಉನದಲ್ಲಿ ದಲಿತರು ಕೈಗೊಂಡ ಶಪಥ, ಇದೀಗ ಗುಜರಾತ್ ಸೇರಿದಂತೆ ಇಡೀ ದೇಶದಲ್ಲಿ ತನ್ನ ಪರಿಣಾಮವನ್ನು ಬೀರುತ್ತಿದೆ. ನಿರೀಕ್ಷೆಯಂತೆಯೇ, ಸತ್ತ ದನವನ್ನು ವಿಲೇವಾರಿ ಮಾಡುವುದಕ್ಕೆ ಜನರಿಲ್ಲದ ಕಾರಣ, ಮೇಲ್ಜಾತಿಯವರೆಂದು ಕರೆಸಿಕೊಂಡ ಜನರ ಆಕ್ರೋಶ ದಲಿತರ ಮೇಲೆ ಭುಗಿಲೆದ್ದಿದೆ. ‘ಗೋಮಾತೆ ತಾಯಿ, ದೇವರು’ ಎಂದು ಹೇಳಿ, ದಲಿತರ ಮೇಲೆ ದಾಳಿ ಮಾಡಿದವರು, ಇದೀಗ ‘ಗೋಮಾತೆಯ ಮೃತ ದೇಹಗಳನ್ನು ವಿಲೇವಾರಿ ಮಾಡಲು’ ಒಪ್ಪದ ದಲಿತರ ಮೇಲೆ ಬರ್ಬರವಾಗಿ ಹಲ್ಲೆ ಮಾಡಲು ಶುರುಹಚ್ಚಿದ್ದಾರೆ. ಈ ಮೂಲಕ ಈ ದೇಶದ ಜಾತಿವ್ಯವಸ್ಥೆ, ಅದಕ್ಕೆ ತಗಲು ಹಾಕಿಕೊಂಡ ಕಾಯಕ ಮತ್ತು ಗೋರಕ್ಷಕರ ಅಸಲು ಮುಖ ಬಯಲಾಗಿದೆ. ರವಿವಾರ ಗುಜರಾತ್ ಬಾಣಸ ಕಂಠದಲ್ಲಿ ಸತ್ತ ದನವನ್ನು ವಿಲೇವಾರಿ ಮಾಡಲಿಲ್ಲ ಎಂದು ದಲಿತರ ಮೇಲೆ ನಡೆಸಿದ ಹಲ್ಲೆ, ಊನದಲ್ಲಿ ನಡೆದ ಹಲ್ಲೆಗಿಂತಲೂ ಭೀಕರವಾದುದು.

ಸತ್ತ ದನವನ್ನು ಹೂಳಲು ಒಪ್ಪದ ದಲಿತ ಕುಟುಂಬದ ಸದಸ್ಯರ ಮೇಲೆ ಮೇಲ್ಜಾತಿಯವರು ಹಲ್ಲೆ ನಡೆಸಿರುವುದು ಮಾತ್ರವಲ್ಲ, ಕುಟುಂಬದ ಗರ್ಭಿಣಿ ಮಹಿಳೆಯೋರ್ವರ ಹೊಟ್ಟೆಗೆ ತುಳಿದಿದ್ದಾರೆ. ಅಷ್ಟೇ ಅಲ್ಲ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ‘‘ನೀವು ಇಂತಹ ಕಾಯಕಗಳಿಗಾಗಿಯೇ ಹುಟ್ಟಿದವರು’’ ಎಂದು ನಿಂದಿಸಿದ್ದಾರೆ. ಅಂತಿಮವಾಗಿ, ಗರ್ಭಿಣಿ ಮಹಿಳೆಯನ್ನು ಕೊಂದು ಹಾಕುವ ಬೆದರಿಕೆಯನ್ನೂ ಒಡ್ಡಿದ್ದಾರೆ. ಈ ಸಂಬಂಧ ಪೊಲೀಸರು ಕೆಲವರನ್ನು ಬಂಧಿಸಿದ್ದಾರಾದರೂ, ಅಷ್ಟಕ್ಕೇ ದುಷ್ಕರ್ಮಿಗಳು ಬೆದರಿ ಸುಮ್ಮನೆ ಕೂರುತ್ತಾರೆ ಎಂದು ನಂಬುವಂತಿಲ್ಲ. ತಲೆ ತಲಾಂತರದಿಂದ ಸತ್ತದನದ ವಿಲೇವಾರಿ ಮಾಡುತ್ತಾ ಬಂದವರು, ತಾವು ಆ ಕೆಲಸವನ್ನು ಮಾಡುವುದಿಲ್ಲ ಎಂದು ಘೋಷಿಸುವುದು ನೇರವಾಗಿ ವರ್ಣ ವ್ಯವಸ್ಥೆಯ ವಿರುದ್ಧ ಧ್ವನಿಯೆತ್ತಿದಂತೆ. ಮೇಲ್ಜಾತಿಯ ಅಹಂಗೆ, ಅವರ ಜಮೀನ್ದಾರಿಕೆಗೆ ಕಾಲಿನಿಂದ ಒದ್ದಂತೆ. ಈ ಕಾರಣಕ್ಕಾಗಿಯೇ ಅವರು ಆಕ್ರೋಶದಿಂದ ಗರ್ಭಿಣಿ ಮಹಿಳೆಯ ಹೊಟ್ಟೆಗೆ ತುಳಿದು, ಸತ್ತ ದನವನ್ನು ವಿಲೇವಾರಿ ಮಾಡಿಸಲು ಹೊರಟಿದ್ದಾರೆ. ಒಂದು ಸತ್ತ ದನಕ್ಕಿರುವ ಬೆಲೆ, ದಲಿತರಿಗಿಲ್ಲ ಎನ್ನುವುದನ್ನು ಅವರು ಬಹಿರಂಗವಾಗಿ ಘೋಷಿಸಿದ್ದಾರೆ.

ಉನದಲ್ಲಿ ದಲಿತರು ಸತ್ತ ದನದ ಚರ್ಮ ಸುಲಿದರೆಂದು ಆರೋಪಿಸಿ ಅವರ ಮೇಲೆ ಹಲ್ಲೆ ನಡೆಸಲಾಯಿತು. ಇದರಿಂದ ರೊಚ್ಚಿಗೆದ್ದಿರುವ ದಲಿತರು ಸರಿ, ನಿಮ್ಮ ದನವನ್ನು ನೀವೇ ಇಟ್ಟುಕೊಳ್ಳಿ. ನಿಮ್ಮ ತಾಯಿಯನ್ನು ನೀವೇ ಪೂಜಿಸುತ್ತಿರಿ. ಅದನ್ನು ಸತ್ತ ಬಳಿಕ ನಮ್ಮ ಬಳಿಗೆ ತರಬೇಡಿ, ನಾವು ಅದನ್ನು ಮುಟ್ಟಿಯೂ ನೋಡುವುದಿಲ್ಲ ಎಂದು ನಿರ್ಧಾರ ಮಾಡಿದರು. ಈಗ ವಿಲೇವಾರಿ ಮಾಡಲಿಲ್ಲ ಎಂದು ದಲಿತರ ಮೇಲೆ ಹಲ್ಲೆ ನಡೆಸಲು ಆರಂಭಿಸಿದ್ದಾರೆ. ಒಂದು ಸಮುದಾಯವನ್ನು ಇಂತಹದೇ ಕೆಲಸವನ್ನು ಮಾಡಬೇಕು ಎಂದು ಒತ್ತಾಯಿಸುವುದು, ಮಾಡದಿದ್ದರೆ ಹಲ್ಲೆ ನಡೆಸುವುದು ಜಾತೀಯತೆಯ, ಅಸ್ಪಶ್ಯತೆಯ ಪರಮಾವಧಿ. ಆದರೆ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿ, ಅಸ್ಪಶ್ಯತಾ ಕಾಯ್ದೆಯನ್ನು ಬಳಸಿಕೊಳ್ಳಲು ಮುಂದಾಗುತ್ತಿಲ್ಲ. ಯಾಕೆ ಎನ್ನುವುದನ್ನು ಮತ್ತೆ ವಿವರಿಸಬೇಕಾಗಿಲ್ಲ. ಪ್ರಕರಣ ದಾಖಲಿಸುವ ಪೊಲೀಸರ ಜಾತಿಯೂ, ದಲಿತರಿಗೆ ಥಳಿಸಿದವರ ಜಾತಿಯೂ ಒಂದೇ ಆಗಿದೆ. ಹೀಗಿರುವಾಗ ದಲಿತರು ಯಾರಲ್ಲಿ ನ್ಯಾಯವನ್ನು ನಿರೀಕ್ಷಿಸಬೇಕು?

 ಇಡೀ ಪ್ರಕರಣದಲ್ಲಿ ಗೋರಕ್ಷಕರ ಮುಖವಾಡ ಬಯಲಾಗಿದೆ. ‘‘ಗೋವು ತಾಯಿ, ದೇವರು, ಸಂಸ್ಕೃತಿ, ಧರ್ಮ’’ ಎಂದೆಲ್ಲ ಅರಚುವವರು, ಅದು ಸತ್ತಾಗ ಮಾತ್ರ ದಲಿತರನ್ನೇಕೆ ಕರೆಯುತ್ತಾರೆ? ಗೋವು ಜೀವಂತವಿದ್ದಾಗ ದಲಿತರನ್ನು ಕರೆದು ಹಾಲುಕೊಡಲು ಸಿದ್ಧರಿಲ್ಲದ, ಒಂದೇ ಒಂದು ಗೋವನ್ನು ದಲಿತರಿಗೆ ದಾನಮಾಡಲೂ ಸಿದ್ಧರಿಲ್ಲದ ಈ ಜನರಿಗೆ ಅದು ಸತ್ತಾಗ ಮಾತ್ರ ದಲಿತರ ನೆನಪಾಗುತ್ತದೆ. ದನಗಳನ್ನು ಸಾಕುವ ರೈತರು, ಹಾಲುಕೊಡದ ಅಥವಾ ಮುದಿ ದನಗಳನ್ನು ಮಾರಲು ಮುಂದಾದರೆ ‘‘ನಿಮ್ಮ ತಾಯಿಯನ್ನು ನೀವು ಮಾರುತ್ತೀರಾ?’’ ಎಂದು ಪ್ರಶ್ನೆ ಮಾಡುವ ಗೋರಕ್ಷಕರಿಗೆ ಇದೀಗ ದೇಶದ ದಲಿತರು ಪ್ರತಿ ಪ್ರಶ್ನೆ ಮಾಡುತ್ತಿದ್ದಾರೆ. ‘‘ನಿಮ್ಮ ತಾಯಿ ಸತ್ತಾಗ ಅದನ್ನು ದಲಿತರ ಕೈಯಲ್ಲಿ ಸಂಸ್ಕಾರ ಮಾಡಿಸುತ್ತೀರಾ? ಗೋಮಾತೆ ನಿಮ್ಮ ತಾಯಿ ನಿಜವೇ ಆಗಿದ್ದರೆ, ಅದನ್ನು ನೀವೇ ಕೈಯಾರೆ ಸಂಸ್ಕಾರ ಮಾಡಿ. ಅಷ್ಟೇ ಅಲ್ಲ, ತಾಯಿಗೆ ತಿಥಿ ಮಾಡುವಂತೆ, ಗೋಮಾತೆಗೂ ನೀವು ತಿಥಿ ಮಾಡಿ’’ ಎಂದು ಹೇಳುತ್ತಿದ್ದಾರೆ.

ಈ ಪ್ರಶ್ನೆ ಇದೀಗ ನಾಡಿನ ನಕಲಿ ಗೋರಕ್ಷಕರ, ಮೇಲ್ಜಾತಿಯ ಜನರ ಮರ್ಮಕ್ಕೆ ಚುಚ್ಚುತ್ತಿದೆ. ಪ್ರತ್ಯುತ್ತರ ನೀಡಲು ಸಾಧ್ಯವಾಗದ ಜನರು, ಬಲ ಪ್ರದರ್ಶನದ ಮೂಲಕ ದಲಿತರ ಬಾಯಿ ಮುಚ್ಚಿಸುವುದಕ್ಕೆ ಮುಂದಾಗಿದ್ದಾರೆ. ಹಾಲು ಕೊಡುವ ಹಸುವಿನ ಮೇಲೆ ಕರುಣೆಯಿರುವ ಯಾವ ಮನುಷ್ಯರೂ, ಹೊಟ್ಟೆಯೊಳಗೆ ಮಗುವನ್ನು ಹೊತ್ತುಕೊಂಡ ತಾಯಿಯ ಹೊಟ್ಟೆಗೆ ತುಳಿಯಲಾರ. ಅವರು ಆ ಮೂಲಕ ತಮ್ಮ ಹೆತ್ತ ತಾಯಿಯ ಹೊಟ್ಟೆಗೆ ತುಳಿದಿದ್ದಾರೆ. ಇಂಥವರು ಗೋವನ್ನು ತಾಯಿಯೆಂದು ರಕ್ಷಣೆ ಮಾಡುತ್ತಾರೆ ಎಂದು ಭಾವಿಸುವುದೇ ನಮ್ಮ ದೊಡ್ಡಮೂರ್ಖತನವಾಗಿದೆ. ಗುಜರಾತಿನಲ್ಲಿ ಮಾತ್ರವಲ್ಲ, ಮುಂದಿನ ದಿನಗಳಲ್ಲಿ ದೇಶಾದ್ಯಂತ ಇಂತಹ ಹಲ್ಲೆಗಳು ವ್ಯಾಪಕವಾಗಿ ನಡೆಯಲಿದೆ. ಯಾಕೆಂದರೆ, ಇದು ಕೇವಲ ಗೋವಿನ ವಿಲೇವಾರಿಗೆ ಸಂಬಂಧಿಸಿದ ವಿಷಯ ಮಾತ್ರವಲ್ಲ. ಜಾತಿಯ ಮೇಲರಿಮೆಯ ಪ್ರಶ್ನೆಯೂ ಆಗಿದೆ. ದಲಿತರ ನಿರ್ಧಾರದಿಂದ ಮೇಲ್ಜಾತಿಯ ಜನರ ಪ್ರತಿಷ್ಠೆಗೆ ಪೆಟ್ಟು ಬಿದ್ದಿದೆ.

ಅಷ್ಟೇ ಅಲ್ಲ, ಹೀಗಾದರೆ ಸತ್ತ ದನದ ವಿಲೇವಾರಿ, ಮಲಹೊರುವುದು ಮೊದಲಾದ ಪದ್ಧತಿಗಳನ್ನು ಮಾಡುವವರು ಯಾರು? ಎಂಬ ಚಿಂತೆಯೂ ಮೇಲ್ಜಾತಿಯ ಜನರಲ್ಲಿ ತಲೆದೋರಿದೆ. ಸ್ವತಃ ಆ ಕೆಲಸಗಳನ್ನು ಮಾಡಲು ಅವರಿಂದ ಸಾಧ್ಯವಿಲ್ಲದೇ ಇರುವುದರಿಂದ, ದಲಿತರ ಕೈಯಲ್ಲಿ ಬಲವಂತವಾಗಿ ಅವರು ಮಾಡಿಸುವ ಸಾಧ್ಯತೆಗಳು ಹೆಚ್ಚಿವೆ. ಇದಕ್ಕೆ ವಿರೋಧ ವ್ಯಕ್ತಪಡಿಸುವ ದಲಿತರ ಮೇಲೆ ಹಲ್ಲೆಗಳು ಹೆಚ್ಚಾಗುವ ಸಾಧ್ಯತೆಗಳಿವೆ. ಮೇಲ್ಜಾತಿಯ ಜನರ ಬೆದರಿಕೆಗೆ ಮಣಿದು, ಕೆಲ ಭಾಗದಲ್ಲಿ ದಲಿತರು ಇಂತಹ ಕೀಳು ವೃತ್ತಿಯನ್ನು ಮಾಡುವ ಸಾಧ್ಯತೆಗಳನ್ನೂ ಅಲ್ಲಗಳೆಯಲು ಸಾಧ್ಯವಿಲ್ಲ.

ಇಂತಹ ಹಲ್ಲೆಗಳನ್ನು ಬರೇ ಪೊಲೀಸರಿಂದಷ್ಟೇ ತಡೆಯಲು ಸಾಧ್ಯವಿಲ್ಲ. ಯಾಕೆಂದರೆ, ಇಡೀ ಪೊಲೀಸ್ ವ್ಯವಸ್ಥೆ ಮೇಲ್ಜಾತಿಯ ಸೂತ್ರಕ್ಕೆ ತಕ್ಕಂತೆ ಕುಣಿಯುತ್ತಿದೆ. ದಲಿತರು ಮತ್ತು ಶೋಷಿತ ಸಮುದಾಯದ ಬೃಹತ್ ಸಂಘಟನೆಯಷ್ಟೇ ಈ ಬರ್ಬರ ಹಲ್ಲೆಗಳನ್ನು ತಡೆಯಬಲ್ಲುದು. ಉನದಲ್ಲಿ ನಡೆದಿರುವ ಬೃಹತ್ ಸಮಾವೇಶ ಈಗಾಗಲೇ ಸರಕಾರವನ್ನೂ, ಪೊಲೀಸ್ ವ್ಯವಸ್ಥೆಯನ್ನೂ ಸಣ್ಣದಾಗಿ ನಡುಗಿಸಿದೆ. ಮುಂದಿನ ದಿನಗಳಲ್ಲಿ ಇಂತಹ ಸಮಾವೇಶ ದೇಶಾದ್ಯಂತ ಜರಗಿದರೆ, ಖಂಡಿತವಾಗಿಯೂ ದಲಿತರು ಮತ್ತು ಶೋಷಿತ ಸಮುದಾಯದ ಮೇಲೆ ಹಲ್ಲೆ ನಡೆಸುವಂತಹ ಧೈರ್ಯವನ್ನು ಮೇಲ್ಜಾತಿಯ ಜನರು ತೋರಿಸಲಾರರು. ಆದುದರಿಂದ, ಅಂಬೇಡ್ಕರ್ ಅವರು ಕರೆ ನೀಡಿದಂತೆ, ಸಂಘಟಿತ ಹೋರಾಟವನ್ನು ನಡೆಸುವುದಷ್ಟೇ ನಮ್ಮ ಮುಂದಿರುವ ಏಕೈಕ ಮಾರ್ಗ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News