ಕಾಶ್ಮೀರ ಹತ್ಯಾಕಾಂಡದ ಕರಾಳ ಅಧ್ಯಾಯ

Update: 2016-09-26 18:04 GMT

ಇದು ಪ್ರತಿಯೊಬ್ಬ ಭಾರತೀಯರ ನಾಗರಿಕ ಪ್ರಜ್ಞೆಗೆ ಕಳಕಳಿಯ ಮನವಿ. ಮಾಧ್ಯಮದ ಬೊಬ್ಬೆಗೆ ಕಿವಿಗೊಡಬೇಡಿ. ಸುಲಭವಾಗಿ ಸಿಗುವ, ಸಿದ್ಧ ವಿವರಗಳಿಂದ ಒಂದು ಹೆಜ್ಜೆ ಹಿಂದೆ ಸರಿದು, ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕಾದ ಸಮಯ ಇದು. ಬುರ್ಹಾನ್ ವಾನಿಯ ನ್ಯಾಯಬಾಹಿರ ಹತ್ಯೆಯ ಬಗ್ಗೆ ಸೂಕ್ತ ತನಿಖೆ ನಡೆಯಬೇಕು ಎಂಬ ನನ್ನ ವಿವಾದಾತ್ಮಕ ಹಾಗೂ ಆಘಾತಕಾರಿ ಹೇಳಿಕೆ ಬಗ್ಗೆ ಹಲವು ಮಂದಿ ಮಾಧ್ಯಮದವರು ನನ್ನಿಂದ ಸ್ಪಷ್ಟನೆ ಬಯಸಿದ್ದಾರೆ. ಈ ವಿವಾದದ ಬಗ್ಗೆ ಆರಂಭದಲ್ಲಿ ಒಂದಷ್ಟು ಹೇಳಲೇಬೇಕಾಗಿದೆ.

ಬಹುತೇಕ ಕಾಶ್ಮೀರಿಗಳಿಗೆ, ಬುರ್ಹಾನ್ ವಾನಿಯನ್ನು ನಕಲಿ ಎನ್‌ಕೌಂಟರ್‌ನಲ್ಲಿ ಕೊಲ್ಲಲಾಗಿದೆಯೇ ಅಥವಾ ನಿಜವಾಗಿಯೂ ಹತ್ಯೆ ಮಾಡಲಾಗಿದೆಯೇ ಎನ್ನುವುದು ತಲೆ ಕೆಡಿಸಿಕೊಳ್ಳುವ ವಿಚಾರವೇ ಅಲ್ಲ. ಇಲ್ಲಿ ಪ್ರಮುಖ ವಿಚಾರ ಎಂದರೆ ಭಾರತ ಸರಕಾರ ಅವನನ್ನು ಹತ್ಯೆ ಮಾಡಿದೆ ಎನ್ನುವುದು. ಇತರ ಹಲವು ಮಂದಿ ಕಾಶ್ಮೀರಿ ಯುವಕರನ್ನು ಕೊಂದಂತೆ, ಕೊಲ್ಲುತ್ತಿರುವಂತೆ ವಾನಿಯನ್ನೂ ಹತ್ಯೆ ಮಾಡಿದೆ ಎನ್ನುವುದು ಅವರಿಗೆ ಗಂಭೀರ ವಿಚಾರ. ಅವರ ಬೇಸರ, ಹತಾಶೆ, ಕ್ರೋಧ ಎನ್‌ಕೌಂಟರ್‌ನ ದೃಢೀಕರಣವನ್ನು ಅವಲಂಬಿಸಿಲ್ಲ. ಭಾರತ ಸರಕಾರದಿಂದ ಸೂಕ್ತ ಪ್ರಕ್ರಿಯೆ ಅನುಸರಿಸಲಾಗುತ್ತದೆ ಹಾಗೂ ನ್ಯಾಯ ಸಿಗುತ್ತದೆ ಎಂಬ ನಿರೀಕ್ಷೆಯೂ ಅವರಿಗಿಲ್ಲ. ಭಾರತ ಸಂವಿಧಾನವನ್ನು ಗೌರವಿಸಬೇಕು ಹಾಗೂ ಪ್ರಕ್ಷುಬ್ಧ ಪ್ರದೇಶಗಳಲ್ಲೂ ಭಾರತೀಯ ಸೇನೆಯನ್ನೂ ಹೊಣೆಗಾರರಾಗಿ ಮಾಡಬೇಕು ಎನ್ನುವುದು ನಾಗರಿಕ ವಿಮೋಚನಾ ಹೋರಾಟಗಾರರ ಆಗ್ರಹ.

ಪ್ರತಿ ಎನ್‌ಕೌಂಟರ್‌ಗಳು ನಡೆದಾಗಲೂ ಎಫ್‌ಐಆರ್ ದಾಖಲಿಸಬೇಕು ಮತ್ತು ನ್ಯಾಯಾಂಗ ತನಿಖೆ, ಅಪರಾಧ ತನಿಖೆ ಹಾಗೂ ವಿಚಾರಣೆ ನಡೆಯಬೇಕು ಎಂದು ಸುಪ್ರೀಂಕೋರ್ಟ್ ಹಲವು ಬಾರಿ ಹೇಳಿದೆ. ಅಂದರೆ ಎನ್‌ಕೌಂಟರ್ ನಿಜ ಎಂದು ದೃಢಪಡದಿದ್ದರೆ ಪ್ರತಿಯೊಂದೂ ನಕಲಿ ಎನ್‌ಕೌಂಟರ್ ಎನ್ನುವುದೇ ಅರ್ಥ. ಅಂದರೆ ತಮ್ಮ ಆತ್ಮರಕ್ಷಣೆಗಾಗಿ ಪೊಲೀಸರು/ ಸಶಸ್ತ್ರ ಪಡೆಗಳು ಗುಂಡು ಹಾರಿಸಿದ್ದಾರೆ ಎನ್ನುವುದು ಖಚಿತವಾಗುವವರೆಗೂ ಪ್ರತಿಯೊಂದು ಎನ್‌ಕೌಂಟರ್ ಕೂಡಾ ನಕಲಿ ಎನಿಸಿಕೊಳ್ಳುತ್ತದೆ. 2014ರ ಸುಪ್ರೀಂಕೋರ್ಟ್ ತೀರ್ಪು ಈ ನಿಟ್ಟಿನಲ್ಲಿ ವಿವರವಾದ ಮಾರ್ಗಸೂಚಿಯನ್ನು ನೀಡಿದೆ. ಈ ವರ್ಷದ ಜುಲೈ 8ರಂದು, 1528 ನಕಲಿ ಎನ್‌ಕೌಂಟರ್‌ಗಳ ಹಿನ್ನೆಲೆಯಲ್ಲಿ ಸಶಸ್ತ್ರಪಡೆಗಳ ವಿಶೇಷಾಧಿಕಾರ ಕಾಯ್ದೆಯನ್ನು ರದ್ದು ಮಾಡಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂಕೋರ್ಟ್, ಇದನ್ನು ಪುನರುಚ್ಚರಿಸಿದೆ. ಕೆಲ ರಾಜಕಾರಣಿಗಳು ಹಾಗೂ ಮಾಧ್ಯಮ ನಿರೂಪಕರ ವಾದವನ್ನು ಹೊರತುಪಡಿಸಿದರೆ, ಘಟನೆಯಲ್ಲಿ ಉಗ್ರಗಾಮಿ ಅಥವಾ ನಾಗರಿಕ ಯಾರು ಸತ್ತರು ಎನ್ನುವುದು ಅಪ್ರಸ್ತುತ. ಉಗ್ರಗಾಮಿ, ಭಯೋತ್ಪಾದಕ ಅಥವಾ ಅಪರಾಧಿಯನ್ನು ಕೂಡಾ ನ್ಯಾಯಬಾಹಿರವಾಗಿ ಕೊಲ್ಲಲು ಅವಕಾಶವಿಲ್ಲ. ಒಂದು ಕ್ಷಣ ಯೋಚಿಸಿ. 1,528 ಮಂದಿಯನ್ನು ಮಣಿಪುರದಲ್ಲೇ ಭಾರತದ ಸಶಸ್ತ್ರಪಡೆ ಹತ್ಯೆ ಮಾಡಿದೆ.ಸಂಖ್ಯೆಯನ್ನು ಸುಪ್ರೀಂಕೋರ್ಟ್ ಕೂಡಾ ಅತಿರಂಜಿತ ಎಂದು ಭಾವಿಸಲಿಲ್ಲ. ಸಹಜವಾಗಿಯೇ ಅಂಥ ದೊಡ್ಡ ಸಂಖ್ಯೆ, ಇಂಥ ನಕಲಿ ಎನ್‌ಕೌಂಟರ್‌ಗಳ ಬಗ್ಗೆ ನಮ್ಮನ್ನು ಯೋಚಿಸುವಂತೆ ಮಾಡುತ್ತದೆ. ಇದು ರಾಜಕೀಯ ಅಧಿಕಾರ ಹಾಗೂ ಸಶಸ್ತ್ರ ಕಮಾಂಡ್‌ನ ಅಧಿಕಾರದ ದುರ್ಬಳಕೆ ಎನ್ನಲೇಬೇಕಾಗುತ್ತದೆ. ಇಂಥ ಪರಿಸ್ಥಿತಿಯಲ್ಲಿ ಬುರ್ಹಾನ್ ವಾನಿ ಹತ್ಯೆಯ ಬಗ್ಗೆ ಯಾರಾದರೂ ಹುಬ್ಬೇರಿಸಲು ಹೇಗೆ ಸಾಧ್ಯ? ಅಂಥ ಎನ್‌ಕೌಂಟರ್ ನಿಜ ಎಂಬ ನಂಬಿಕೆ ಬರುವುದಾದರೂ ಹೇಗೆ? ಈ ಹತ್ಯೆ ಬಳಿಕದ ಘಟನಾವಳಿಗಳನ್ನು, ಅದರ ರಾಜಕೀಯ ಪರಿಣಾಮಗಳನ್ನು ಒಂದಷ್ಟು ಗಮನಿಸೋಣ. ವಾನಿ ಹತ್ಯೆ ಹಿನ್ನೆಲೆಯಲ್ಲಿ ಸಾವಿರಾರು ಮಂದಿ ಬೀದಿಗಿಳಿದು ಹೋರಾಟ ನಡೆಸಿದರು. ಮತ್ತೆ ಸಾವಿರಾರು ಮಂದಿ ಮನೆಯಲ್ಲೇ ವಾನಿಗಾಗಿ ಕಂಬನಿ ಮಿಡಿದರು. ಇವರ ಮೇಲೆಯೂ ಗುಂಡುಹಾರಿಸಿ 21 ಮಂದಿಯನ್ನು ಕೊಲ್ಲಲಾಯಿತು. ಸಂಖ್ಯೆ ಹೆಚ್ಚುತ್ತಲೇ ಇದೆ. ಇವರ ಭಾವನೆಯಲ್ಲಿ ಬುರ್ಹಾನ್ ವಾನಿಗಾಗಿ ಕಂಬನಿ ಮಿಡಿದವರು ಹಾಗೂ ಕಾಶ್ಮೀರ ಸ್ವಾತಂತ್ರ್ಯಕ್ಕೆ ಹೋರಾಡುವ ಎಲ್ಲರೂ ಭಯೋತ್ಪಾದಕರು. ಬೀದಿಯಲ್ಲಿ ನಾಯಿಗಳಂತೆ ಸಾಯಲು ಅರ್ಹರು. ದೇಶದ ಪ್ರಧಾನಿಯ ಟ್ವಿಟ್ಟರ್ ನಿರ್ವಹಿಸುವವರು ಟ್ವೀಟ್ ಮಾಡಿದಂತೆ, ‘‘20 ಸಾವಿರ ಮಂದಿ ಉಗ್ರ ವಾನಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ಇವರ ಮೇಲೆ ಬಾಂಬ್ ಹಾಕಿ 20 ಸಾವಿರ ಹಂದಿಗಳಿಗೆ ಸ್ವಾತಂತ್ರ್ಯ ನೀಡಬೇಕಿತ್ತು.’’ ಈ 20 ಸಾವಿರ ಮಂದಿಯನ್ನು ಉಗ್ರ ಹಂದಿಗಳು ಎಂದು ಪರಿಗಣಿಸಿ, ಇವರ ಸಾಮೂಹಿಕ ಹತ್ಯೆಗೆ ಶಿಫಾರಸು ಮಾಡುವವರಲ್ಲಿ ನೀವೂ ಸೇರುತ್ತೀರಿ ಎಂದಾದರೆ, ನಿಮಗೆ ಹೇಳುವುದು ಏನೂ ಇಲ್ಲ.

ನಿಮ್ಮ ಮಾತುಗಳು ಅತಿ ರಾಷ್ಟ್ರೀಯವಾದಿ ಶ್ರೋತೃಗಳಿಗೆ ಒಪ್ಪುವಂಥದ್ದಾದರೆ, ಹೊರ ಜಗತ್ತು ಮಾತ್ರ ಭಾರತದಲ್ಲಿ ಕಾಶ್ಮೀರಿಗಳ ಮೇಲೆ ಆಗುತ್ತಿರುವ ದೌರ್ಜನ್ಯ ಎಂದು ಅದನ್ನು ಪರಿಗಣಿಸುತ್ತದೆ. ಕಾಶ್ಮೀರಿಗಳನ್ನು ಭಾರತದಲ್ಲಿ ಹಂದಿಗಳಂತೆ ಕಾಣಲಾಗುತ್ತಿದೆಯೇ ವಿನಃ ಕಾನೂನುಬದ್ಧ ರಾಜಕೀಯ ಅಭಿಪ್ರಾಯ ಹಾಗೂ ಬೇಡಿಕೆಯನ್ನು ಹೊಂದಿರುವ ಮನುಷ್ಯರಾಗಿ ಅಲ್ಲ. ಅವರ ಬೇಡಿಕೆಯೇ ಕಾನೂನುಬಾಹಿರವಾಗಿದ್ದರೆ ಅವರು ಏಕೆ ಭಾರತದಲ್ಲಿ ಉಳಿಯಬೇಕು? ನಿಮ್ಮಲ್ಲಿ ಕೆಲವರಾದರೂ, ಕಾಶ್ಮೀರಿಗಳು ಪ್ರತಿಭಟನೆ ಮಾಡುತ್ತಿದ್ದಾರೆಯೇ ವಿನಃ ಉಗ್ರರಲ್ಲ ಎಂದು ಭಾವಿಸುತ್ತೀರಿ ಎಂದುಕೊಳ್ಳುತ್ತೇನೆ.

 ಮೊದಲನೆಯದಾಗಿ ಬುರ್ಹಾನ್ ವಾನಿ ತನ್ನ ಮಾರ್ಗವನ್ನು ಏಕೆ ಕಂಡುಕೊಂಡ ಎಂದು ನಿಮ್ಮನ್ನು ನೀವು ಕೇಳಿಕೊಳ್ಳಿ. ‘ಕಾಶ್ಮೀರ್ ಬರ್ನ್ಸ್ ಅಗೈನ್’ ಕೃತಿಯಲ್ಲಿ ಶುದ್ಧವ್ರತ ಸೇನ್‌ಗುಪ್ತ ಹೇಳಿದಂತೆ, 2010ರ ಅಕ್ಟೋಬರ್‌ನಲ್ಲಿ ಬುರ್ಹಾನ್ ವಾನಿಗೆ 16 ವರ್ಷ. ತನ್ನ ಅಣ್ಣ ಖಾಲಿದ್ ವಾನಿ ಹಾಗೂ ಸ್ನೇಹಿತನ ಜತೆ ಮೋಟರ್‌ಸೈಕಲ್‌ನಲ್ಲಿ ಹೋಗುತ್ತಿದ್ದ. ತಾವು ಹುಟ್ಟಿ ಬೆಳೆದ ಥ್ರಲ್ ಪ್ರದೇಶದಲ್ಲಿ ಇತರ ಹದಿಹರೆಯದವರಂತೆ ವಿಹಾರ ಹೊರಟಿದ್ದರು. ಜಮ್ಮು ಕಾಶ್ಮೀರ ಪೊಲೀಸ್ ವಿಶೇಷ ಕಾರ್ಯಾಚರಣೆ ಪಡೆ ಅವರನ್ನು ತಡೆದು, ಸಿಗರೇಟ್ ತರುವಂತೆ ಸೂಚಿಸಿತು. ಖಾಲಿದ್ ಸಿಗರೇಟ್ ತರಲು ಹೋದ. ಬುರ್ಹಾನ್ ಹಾಗೂ ಸ್ನೇಹಿತ ಅಲ್ಲೇ ಕಾದರು. ಮಾತಿಗೆ ಮಾತು ಬೆಳೆದು ಪೊಲೀಸರು ಹುಡುಗರನ್ನು ತೀವ್ರವಾಗಿ ಹೊಡೆದು ಖಾಲಿದ್‌ನ ಪ್ರೀತಿಪಾತ್ರ ಬೈಕ್‌ಗೆ ಹಾನಿ ಮಾಡಿದರು. ಖಾಲಿದ್‌ಗೆ ಪ್ರಜ್ಞೆ ತಪ್ಪಿತು. ಬುರ್ಹಾನ್‌ಗೂ ತೀವ್ರ ಗಾಯಗಳಾದವು. ಆತ್ಮಗೌರವದ ವ್ಯಕ್ತಿಯಾಗಿದ್ದ ತನ್ನನ್ನು ವಿನಾಕಾರಣ ಹೊಡೆದು ಗಾಯಗೊಳಿಸಿದ ಭಾವನೆ ಮಾತ್ರ ಆತನಲ್ಲಿ ಸದಾ ಇತ್ತು

2010ರ ಜುಲೈನಿಂದ ಸೆಪ್ಟಂಬರ್ ವರೆಗೆ 112 ಮಂದಿ ನಾಗರಿಕರು ಕಾಶ್ಮೀರದ ಬೀದಿಯಲ್ಲಿ ಭೀಕರವಾಗಿ ಕೊಲ್ಲಲ್ಪಟ್ಟರು. ಪರಿಣಾಮವಾಗಿ ಹದಿಹರೆಯದ ಬುರ್ಹಾನ್ ವಿಹಾರ ಬೈಕ್ ಯಾತ್ರೆ ಸಹಜವಾಗಿಯೇ ಹಿಂಸೆ, ಅವಮಾನವಾಗಿ ಮಾರ್ಪಟ್ಟಿತು.

‘‘ಈ ಹದಿಹರೆಯದ ಯುವಕ ಬುರ್ಹಾನ್ ಅಂದಿನ ಬೈಕ್ ಘಟನೆಯಲ್ಲಿ ಸತ್ತುಹೋದ. ಆತನ ಜಾಗದಲ್ಲಿ ಭಯೋತ್ಪಾದಕ ಬುರ್ಹಾನ್ ಹುಟ್ಟಿಕೊಂಡು, ಭಯೋತ್ಪಾದಕ ಕಮಾಂಡರ್ ಆಗಿ ಬೆಳೆದ. ಕಮಾಂಡರ್ ಬುರ್ಹಾನ್ ವಾನಿಯ ಹುಟ್ಟು ಹಾಗೂ ಸಾವಿಗೆ ಕಾರಣವಾದದ್ದು ಭಾರತ ಸರಕಾರ. ಯುವ, ಪ್ರತಿಭಾವಂತ, ಜನಪ್ರಿಯತೆ ಹೊಂದಿದ್ದ ಬುರ್ಹಾನ್‌ಗೆ ತನ್ನ ಗೌರವವನ್ನು ಒತ್ತೆ ಇಟ್ಟು ಜೀತದಾಳಾಗುವ ಮನೋಭಾವ ಇದ್ದಿರಲಿಲ್ಲ. ಅದರ ಬದಲು ಬಂದೂಕು ಹಿಡಿದು ಯುದ್ಧಕ್ಕೆ ಅಣಿಯಾದ. ಈ ಬಾರಿ ಬಹಳಷ್ಟು ಮಂದಿ ಕಾಶ್ಮೀರಿಗಳು ಹತ್ಯೆಯಾಗಿದ್ದಾರೆ. ಅಂಧರಾಗಿದ್ದಾರೆ ಮಾತ್ರವಲ್ಲದೇ ಮತ್ತೆ ಅವಮಾನಕ್ಕೆ ಒಳಗಾಗಿದ್ದಾರೆ. ಆಸ್ಪತ್ರೆಗಳ ಒಳಗೂ ಆಶ್ರುವಾಯು ಸಿಡಿಸಲಾಗಿದೆ. ಗಾಯಾಳುಗಳನ್ನು ಒಯ್ಯುತ್ತಿದ್ದ ಆ್ಯಂಬುಲೆನ್ಸ್ ಮೇಲೂ ದಾಳಿ ನಡೆಸಲಾಗಿದೆ.

ಮತ್ತೊಮ್ಮೆ ಒಂದು ಕ್ಷಣ ನಿಂತು ಹಿಂದಕ್ಕೆ ಹೋಗಿ. ರಾಷ್ಟ್ರಪ್ರೇಮಿಗಳಾದ ನೀವು ಭಾಗವಹಿಸಿದ ಪ್ರತಿಭಟನೆಯನ್ನು ಪೊಲೀಸರು ಹಾಗೂ ಸರಕಾರ ಅಕ್ರಮ ಎಂದು ಘೋಷಿಸಿದೆ ಎಂದುಕೊಳ್ಳಿ, ಅಮಾನುಷ ಅತ್ಯಾಚಾರದ ವಿರುದ್ಧ ಸಾವಿರಾರು ಮಂದಿ ಇಂಡಿಯಾಗೇಟ್ ಬಳಿ ದೊಡ್ಡ ಪ್ರತಿಭಟನೆ ನಡೆಸಿದ 2012ರ ಡಿಸೆಂಬರ್ ಪ್ರತಿಭಟನೆಯನ್ನು ನೆನಪಿಗೆ ತಂದುಕೊಳ್ಳಿ. ನೀವು ಅದರಲ್ಲಿ ಸೇರಿದ್ದರೆ ಅಥವಾ ಆ ಬಗ್ಗೆ ನೀವು ಅನುಕಂಪ ವ್ಯಕ್ತಪಡಿಸಿದ್ದರೆ. ಲಾಠಿ ಬೀಸಿದ, ಅಶ್ರುವಾಯು ಸಿಡಿಸಿದ, ಗುಂಡುಹಾರಿಸಿದ ಪೊಲೀಸರ ಬಗ್ಗೆ, ಸರಕಾರದ ಬಗ್ಗೆ ಆಕ್ರೋಶ ಕಟ್ಟೆಯೊಡೆಯುತ್ತಿರಲಿಲ್ಲವೇ? ಮಾಧ್ಯಮ ನಿಮ್ಮ ಚಳವಳಿಯನ್ನು ಹೊಗಳುವ ಬದಲು, ಪೊಲೀಸರ ಕ್ರೌರ್ಯವನ್ನು ಟೀಕಿಸುವ ಬದಲು, ಪ್ರತಿಭಟನಾಕಾರರನ್ನು ಹತ್ಯೆ ಮಾಡಿದ ಪೊಲೀಸರನ್ನು ಹೊಗಳಿದ್ದರೆ ಸರಕಾರದ ಬಗ್ಗೆ ಸಿಟ್ಟು ಬರುತ್ತಿರಲಿಲ್ಲವೇ? ಆದರೆ ಕಾಶ್ಮೀರದಲ್ಲಿ ಇಂಥ ಘಟನೆಗಳ ಚಕ್ರ, ನಾಗರಿಕರ ರಕ್ತಪಾತ ದಶಕಗಳಿಂದ ನಡೆಯುತ್ತಿದೆ. ನಿಮ್ಮ ಬವಣೆ, ಬಂಧನ, ಚಿತ್ರಹಿಂಸೆ, ಕಿರುಕುಳದ ಬಗ್ಗೆ ಒಂದು ವಿಚಾರ ಸಂಕಿರಣ ನಡೆಸಲು, ಘೋಷಣೆ ಕೂಗಲು ಕೂಡಾ ಅವಕಾಶ ಇಲ್ಲ ಎಂದಾದರೆ, ನೀವು ಏನು ಮಾಡುತ್ತಿದ್ದಿರಿ? ಕಾಶ್ಮೀರಿ ಯುವಕರು ಇಂದು ಏನು ಮಾಡುತ್ತಿದ್ದಾರೆ? ಇನ್ನೂ ಎಷ್ಟು ಮಂದಿ ಬುರ್ಹಾನ್‌ಗಳನ್ನು ಸೃಷ್ಟಿಸಿ ಹತ್ಯೆ ಮಾಡಲಾಗುತ್ತದೆ? ಈ ಲೇಖನ ಕಾಶ್ಮೀರ ಸಮಸ್ಯೆಯ ಇತಿಹಾಸ ವಿವರಿಸುವ ಉದ್ದೇಶದ್ದಲ್ಲ. ನೀವು ಇಷ್ಟನ್ನು ತಾಳ್ಮೆಯಿಂದ ಓದಿದ್ದೀರಿ ಎಂದಾದರೆ, ನನ್ನ ಸಲಹೆಗಳನ್ನು ಪರಿಗಣಿಸಿದ್ದೀರಿ ಎಂದಾದರೆ, ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂಬ ಹೇಳಿಕೆಗಷ್ಟೇ ತೃಪ್ತರಾಗುವುದಿಲ್ಲ. ನಿಷ್ಪಕ್ಷಪಾತವಾಗಿ, ಹಲವು ಮಂದಿ ಕಾಶ್ಮೀರಿಗಳು ಭಿನ್ನ ನಿರ್ಧಾರಕ್ಕೆ ಬರಲು ಏನು ಕಾರಣ ಎಂಬ ಶೋಧನೆಗೆ ಹೊರಡುತ್ತೀರಿ. ಅಂಥದ್ದನ್ನು ತಿಳಿದುಕೊಳ್ಳುವುದು ಕೂಡಾ ಮನಸ್ಸಿಗೆ ಘಾಸಿ ಮಾಡುವಂಥದ್ದು.

ನನಗೆ ಎಲ್ಲವೂ ಗೊತ್ತು ಎನ್ನುವ ನಿಮ್ಮ ಮೂಲಭಾವನೆಯನ್ನೇ ಅದು ಅಲ್ಲಾಡಿಸಬಲ್ಲದು. ನಮ್ಮ ಹೆಸರಿನಲ್ಲಿ ಕಾಶ್ಮೀರಿಗಳ ಮೇಲೆ ಸಾಕಷ್ಟು ದೌರ್ಜನ್ಯವಾಗಿದೆ ಎಂಬ ನಾಚಿಕೆ ಹಾಗೂ ಮನಸ್ಸಿನ ಖೇದ ಅನುಭವಿಸಲು ಸಿದ್ಧರಾಗಬೇಕಾಗುತ್ತದೆ. ಎಲ್ಲಿಯವರೆಗೂ ನಾವು ಹಾಗೂ ನಮ್ಮ ಸರಕಾರ, ಕಾಶ್ಮೀರಗಳಿಗೂ ಕಾನೂನುಬದ್ಧ ಆತ್ಮಗೌರವ ಇದೆ ಎನ್ನುವುದು ಮನವರಿಕೆಯಾಗುವುದಿಲ್ಲವೋ ಅಲ್ಲಿಯವರೆಗೆ ಕಾಶ್ಮೀರ ಸಮಸ್ಯೆಗೆ ಪರಿಹಾರ ಸಾಧ್ಯವಿಲ್ಲ. ಕಾಶ್ಮೀರದಲ್ಲಿ ನಡೆಯುತ್ತಿರುವುದು ರಾಷ್ಟ್ರೀಯವಾದಿ ಸೈನಿಕರು ಹಾಗೂ ದುಷ್ಟ ಕಾಶ್ಮೀರಿ ಉಗ್ರರ ನಡುವಿನ ಸಂಘರ್ಷ ಎಂದು ಹೇಳುವುದು ಸುಲಭ. ಆದರೆ ಅಂಥ ಮನೋಭಾವ ಕಾಶ್ಮೀರಿಗಳ ಗಾಯಕ್ಕೆ ಬರೆ ಎಳೆಯುವಂಥದ್ದು. ಇದು ಕಾಶ್ಮೀರ ಸಮಸ್ಯೆಯ ಪರಿಹಾರದಿಂದ ಮತ್ತಷ್ಟು ದೂರ ಒಯ್ಯುವ ಸಾಧ್ಯತೆ ಇದೆ.

ಕಾಶ್ಮೀರದಲ್ಲಿ ಇರುವುದು ಕಾನೂನು ಹಾಗೂ ಸುವ್ಯವಸ್ಥೆ ಸಮಸ್ಯೆಯಲ್ಲ ಅಥವಾ ಪಾಕಿಸ್ತಾನ ಸೃಷ್ಟಿಸಿದ ಭಯೋತ್ಪಾದಕ ಸಮಸ್ಯೆಯಲ್ಲ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಕಾಶ್ಮೀರ ಪ್ರಶ್ನೆ ವಾಸ್ತವವಾಗಿ ಭಾರತ ಉಗ್ರರನ್ನು ಹೇಗೆ ನಿರ್ವಹಿಸುತ್ತದೆ ಎನ್ನುವುದಲ್ಲ. ಕಾಶ್ಮೀರದ ರಾಜಕೀಯ ಸಮಸ್ಯೆಗೆ ಹೇಗೆ ರಾಜಕೀಯ ಪರಿಹಾರ ಕಂಡುಹಿಡಿಯಬಹುದು ಎನ್ನುವುದು. ಆದ್ದರಿಂದ ಬುರ್ಹಾನ್ ವಾನಿ ಹಾಗೂ ಇತರ ನಾಗರಿಕರ ಹತ್ಯೆ ಮೂಲಕ ಸರಕಾರ ಕಾಶ್ಮೀರಿಗಳಿಗೆ ಯಾವ ಸಂದೇಶ ನೀಡಲು ಬಯಸಿದೆ ಎಂದು ಕೇಳಬೇಕಾಗಿದೆ. ಪ್ರತಿಯೊಂದು ಸಾವು ಕೂಡಾ, ಕಾಶ್ಮೀರ ಸಮಸ್ಯೆಯ ಪರಿಹಾರದ ಕನಸಿಗೆ ದೊಡ್ಡ ಪೆಟ್ಟು. ಬುರ್ಹಾನ್ ವಾನಿ ಉಗ್ರಗಾಮಿ, ಭಯೋತ್ಪಾದಕ ಎನ್ನುವುದು ನಿಸ್ಸಂದೇಹ. ಸಶಸ್ತ್ರ ಉಗ್ರಗಾಮಿ ಸಂಘಟನೆಗೆ ಸೇರುವಂತೆ ಯುವ ಕಾಶ್ಮೀರಿಗಳಿಗೆ ಕರೆ ನೀಡುವ ವೀಡಿಯೊವನ್ನು ಆತ ಸಿದ್ಧಪಡಿಸಿದ್ದ.

ಆದರೆ ತನ್ನ ಕೊನೆಯ ವೀಡಿಯೊದಲ್ಲಿ ತನ್ನ ಸಂಘಟನೆ ನಾಶಮಾಡುವಂಥದ್ದಲ್ಲ ಎಂದು ಸ್ಪಷ್ಟಪಡಿಸಿದ್ದ. ಹಾಗೂ ಅಮರನಾಥ ಯಾತ್ರೆಗೆ ಬರುವ ಹಿಂದೂ ಭಕ್ತರಿಗೆ ಅಡ್ಡಿಪಡಿಸಬೇಡಿ ಎಂದು ಸಹಚರರಿಗೆ ಸೂಚಿಸಿದ್ದ. ಯಾತ್ರೆ ಬರುವುದು ಅವರ ಹಕ್ಕು. ಅವರ ಧಾರ್ಮಿಕ ಕರ್ತವ್ಯಕ್ಕೆ ಯಾರೂ ಅಡ್ಡಿಪಡಿಸಬಾರದು. ನಮಗೆ ಅಡ್ಡಿಪಡಿಸಿದ ಕಾಶ್ಮೀರಿ ಪೊಲೀಸರಿಗೂ ಯಾವುದೇ ಹಾನಿ ಮಾಡಬೇಡಿ. ಕಾಶ್ಮೀರಿ ಪಂಡಿತರು ಮತ್ತೆ ಕಾಶ್ಮೀರಿ ಮುಸ್ಲಿಮರ ನೆರೆಯವರಾಗಿ ಆಗಮಿಸಿ ಬಾಳ್ವೆ ನಡೆಸಬೇಕು ಎಂದು ಮನವಿ ಮಾಡಿದ್ದ. ಆದರೆ ಇಸ್ರೇಲಿ ಮಾದರಿಯ ವಸತಿ ಕಾಲನಿಗಳನ್ನು ಇವರಿಗೆ ಪ್ರತ್ಯೇಕವಾಗಿ ಮಾಡುವುದನ್ನು ವಿರೋಧಿಸಿದ್ದ. ಪ್ರತ್ಯೇಕತಾವಾದಿ ಗುಂಪನ್ನು ಕಾಶ್ಮೀರ ರಾಜಕೀಯದ ಪ್ರಮುಖ ಅಂಗ ಎಂದು ನಾವು ಸ್ವೀಕರಿಸಿದರೆ, ಅಂಥ ಗುಂಪುಗಳ ಹೇಳಿಕೆಗಳು ಪ್ರಮುಖ ಹಾಗೂ ಸ್ವಾಗತಾರ್ಹವಾಗುತ್ತವೆ.

ಭಾರತ ಸರಕಾರ ಬುರ್ಹಾನ್ ವಾನಿ ಜತೆ ಮಾತುಕತೆ ನಡೆಸಬೇಕಿತ್ತೇ ವಿನಃ ಆತನನ್ನು ಕೊಲ್ಲಬಾರದಿತ್ತು. ಹಾಗಾದರೆ ಪರಿಹಾರದ ಹತ್ತಿರಕ್ಕೆ ನಮ್ಮನ್ನು ಒಯ್ಯುವುದು ಯಾವುದು? ಸಮಸ್ಯೆಗೆ ಏನು ಪರಿಹಾರ? ಕಾಶ್ಮೀರದ ಸಾಮಾನ್ಯರೂ ಹೇಳುವಂತೆ ಒಂದು ದೀರ್ಘಾವಧಿ ಪರಿಹಾರವೆಂದರೆ ಅವರ ಘನತೆ-ಗೌರವ ಕಾಪಾಡುವುದು. ಆದರೆ ಕಾಶ್ಮೀರ ನಮ್ಮ ಅವಿಭಾಜ್ಯ ಅಂಗ ಎಂದು ಹೇಳಿಕೊಳ್ಳುತ್ತಲೇ, ಅವರ ಧ್ವನಿಯನ್ನು ಹತ್ತಿಕ್ಕಿ, ಅವರನ್ನು ಅವಮಾನಿಸುತ್ತಿದ್ದರೆ, ಅವರ ಮೌನವೂ ಕಟ್ಟೆಯೊಡೆಯುತ್ತದೆ. ಪ್ರಬಲ ಪ್ರತಿಭಟನೆ ಅಥವಾ ಹಿಂಸಾತ್ಮಕ ಚಟುವಟಿಕೆಗಳಾಗಿ ಸ್ಫೋಟಗೊಳ್ಳುತ್ತದೆ. ಇದು ಖಂಡಿತಾ ಪರಿಹಾರವಾಗಲಾರದು. ಅವರನ್ನು ಹತ್ತಿಕ್ಕುವ ಬದಲು ಅವರ ಧ್ವನಿಯನ್ನು ಆಲಿಸುವುದು ಅಗತ್ಯ. ಕಣಿವೆಯಲ್ಲಿ ಅನಗತ್ಯವಾಗಿ ಹೆಚ್ಚಿನ ಪ್ರಮಾಣದ ಮಿಲಿಟರಿ ಹೆಜ್ಜೆಗುರುತನ್ನು ಅಳಿಸುವಂತೆ ನಮ್ಮ ಸರಕಾರಕ್ಕೆ ತಿಳಿಹೇಳಬೇಕು. ಸಂಧಾನ ಮಾತುಕತೆ ನಡೆಯಬೇಕಾದರೆ ಸೈನಿಕರು ಕಾಶ್ಮೀರಿಗಳ ಕತ್ತಿನ ಮೇಲೆ ಬೂಟು ಇಡುವುದು ನಿಲ್ಲಬೇಕು.

 2010ರ ಹತ್ಯೆ ಬಗೆಗಿನ ವರದಿಯಲ್ಲಿ ವೃಂದಾ ಗ್ರೋವರ್, ಬೆಲಾ ಸೊಮಾರಿ, ಸುಕುಮಾರ್ ಮುರಳೀಧರನ್ ಹಾಗೂ ರವಿ ಹೇಮಾದ್ರಿ ಅವರು, ‘‘ಕಾಶ್ಮೀರದಲ್ಲಿ ಸೇನೆಯ ಅಸ್ತಿತ್ವವನ್ನು ಕನಿಷ್ಠಗೊಳಿಸಬೇಕು; ವಿಶೇಷ ಭದ್ರತಾ ಕಾನೂನುಗಳನ್ನು ರದ್ದು ಮಾಡಬೇಕು; ಈ ಕಾನೂನುಗಳ ಅನ್ವಯ ಬಂಧಿಸಿರುವ ಎಲ್ಲರನ್ನೂ ಬಿಡುಗಡೆ ಮಾಡಬೇಕು; ಇತ್ತೀಚಿನ ಹತ್ಯೆಗಳ ಬಗ್ಗೆ ವಿಶ್ವಾಸಾರ್ಹ ತನಿಖೆ ನಡೆಸಬೇಕು’’ ಎಂದು ಶಿಫಾರಸು ಮಾಡಿದ್ದರು. ಇಂಥ ಕನಿಷ್ಠ ಕ್ರಮಗಳ ಬದಲು ಭಾರತ ಸರಕಾರ ವಿರೋಧಾಭಾಸದ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಕಣಿವೆಯಿಂದ ಹೊರಗೆ ಇರುವ ಕಾಶ್ಮೀರಿ ವಿದ್ಯಾರ್ಥಿಗಳು ಭೀತಿಯ ನೆರಳಲ್ಲೇ ಕಾಲ ಕಳೆಯಬೇಕಾಗಿದೆ. ಕೇವಲ ಭಾರತೀಯ ಭದ್ರತಾ ಪಡೆಗಳ ಕಿರುಕುಳ ಮಾತ್ರವಲ್ಲದೇ, ಬಲಪಂಥೀಯ ಸಂಘಟನೆಗಳಿಂದಲೂ ಭೀತಿ ಎದುರಿಸಬೇಕಾಗಿದೆ.

ಪರಿಸ್ಥಿತಿ ಮತ್ತಷ್ಟು ಹದಗೆಡಲು ಕಾರಣವೆಂದರೆ, ಭಾರತದ ಪ್ರಮುಖ ಮಾಧ್ಯಮ ಸಂಸ್ಥೆಗಳು ಕಾಶ್ಮೀರಿಗಳನ್ನು ಅವಮಾನಿಸಲು ಸಿಗುವ ಯಾವ ಅವಕಾಶವನ್ನೂ ತಪ್ಪಿಸಿಕೊಳ್ಳುವುದಿಲ್ಲ. ಭೀಕರ ಪ್ರವಾಹದಂಥ ಪರಿಸ್ಥಿತಿಯನ್ನೂ ಇವರು ಭಿನ್ನವಾಗಿ ಕಾಣುತ್ತಾರೆ. ಸೂಕ್ತ ಪರಿಹಾರ ವ್ಯವಸ್ಥೆ ಕಲ್ಪಿಸುವಂತೆ ಅಲ್ಲಿನ ನಾಗರಿಕರು ಮಾಡುವ ಪ್ರತಿಭಟನೆಗಳನ್ನು ಕೂಡಾ ರಾಷ್ಟ್ರವಿರೋಧಿಗಳ ನೆಲೆಯಲ್ಲಿ ಕಾಣಲಾಗುತ್ತದೆ. ಸೇನೆಯ ಪರಿಹಾರ ಕಾರ್ಯವನ್ನು ವೈಭವೀಕರಿಸಿ, ಈ ಹಿಂದೆ ಮಾಡಿದ ಎಲ್ಲ ಕಸ್ಟಡಿ ಕೊಲೆ ಹಾಗೂ ಅತ್ಯಾಚಾರ ಪ್ರಕರಣಗಳನ್ನು ಮುಚ್ಚಿಹೋಗುವಂತೆ ಮಾಡಲಾಗುತ್ತದೆ. ಇದು ನಿಲ್ಲಬೇಕು.

ಗೃಹಸಚಿವರು ಮತ್ತು ಕಾಶ್ಮೀರಿ ರಾಜಕಾರಣಿಗಳು ಶಾಂತಿಗಾಗಿ ಕರೆ ನೀಡುವುದು ಅಥವಾ ತಮ್ಮ ಮಕ್ಕಳನ್ನು ಮನೆಗಳಲ್ಲೇ ಉಳಿಸಿಕೊಳ್ಳುವಂತೆ ಕರೆ ನೀಡಿದರಷ್ಟೇ ಸಾಲದು. ಹೀಗೆ ಹೇಳುತ್ತಾ ಕಾಲ ಕಳೆಯುವ ಬದಲು, ಕಾಶ್ಮೀರಿ ಸಮಸ್ಯೆಗೆ ಶಾಂತಿಯುತ ಹಾಗೂ ಗೌರವಾರ್ಹ ಪರಿಹಾರ ಕಂಡುಹಿಡಿಯುವಂತೆ ಒತ್ತಡ ತರಬೇಕು. ಕಾಶ್ಮೀರ ಜನತೆಯ ಆಶಯಕ್ಕೆ ಅನುಗುಣವಾಗಿ ಇಂಥ ಪರಿಹಾರ ಒದಗಿಸಬೇಕು ಎನ್ನುವುದು ಅವರ ಒತ್ತಡ ಮಾತ್ರವಾಗದೇ, ಇಡೀ ದೇಶದ ಮೂಲೆ ಮೂಲೆಗಳಿಂದಲೂ ಇಂಥ ಆಗ್ರಹ ಕೇಳಿಬರಬೇಕು. ನಾನು ಕನಸುಗಾರ್ತಿ ಎಂದು ನಿಮಗೆ ಅನಿಸಬಹುದು. ಆದರೆ ನಾನು ಮಾತ್ರ ಅಂಥ ಕನಸು ಕಾಣುತ್ತಿಲ್ಲ. ನನ್ನ ನಿರೀಕ್ಷೆ ಮುಂದುವರಿಯುತ್ತದೆ. ಆ ನಿಟ್ಟಿನಲ್ಲಿ ನನ್ನ ಕೆಲಸ ನಾನು ಮಾಡುತ್ತೇನೆ.

ಘಟನೋತ್ತರ: ಇತ್ತೀಚೆಗೆ, ಅಮೆರಿಕದ ದೂರವಾಣಿ ಕರೆಯೊಂದು ನನಗೆ ಬಂತು. ಒಬ್ಬ ರಾಷ್ಟ್ರೀಯವಾದಿ ಅನಿವಾಸಿ ಭಾರತೀಯರೊಬ್ಬರ ಕರೆ ಅದು. ನೀವು ಬುರ್ಹಾನ್ ವಾನಿಯ ತಂಡದವರೇ ಎಂದು ಕೇಳಿದರು. ನನ್ನ ಮೇಲೆ ಎಷ್ಟು ವಿಧದಲ್ಲಿ ಅತ್ಯಾಚಾರ ಎಸಗಬೇಕು ಎಂದು ಕೇಳಿದರು. ಈ ಬರಹದಿಂದ ಮತ್ತಷ್ಟು ನಿಂದನೆ ಹಾಗೂ ಕೀಳು ಅಭಿರುಚಿಯ ಮಾತುಗಳು ಎದುರಾಗಬಹುದು. ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಇದನ್ನು ಓದಿದ ನೀವು, ಸ್ವಲ್ಪಮಟ್ಟಿಗೆ ಕಾಶ್ಮೀರದ ಬಗ್ಗೆ ಯೋಚಿಸು ವಂತಾದರೂ, ಇಂಥ ಕಮೆಂಟ್‌ಗಳಿಗೆ ಧ್ವನಿಗೂಡಿಸಿ; ಶಾಂತಿಯನ್ನು ಹಂಚಿಕೊಳ್ಳಿ. ಈ ಎಲ್ಲ ಅಂಶವನ್ನು ಅವರು ಒಪ್ಪಿಕೊಳ್ಳದಿದ್ದರೂ, ಕನಿಷ್ಠ ಮತ್ತೊಬ್ಬರಿಗಾದರೂ ಓದಲು ಹೇಳಿ.

ಇವರ ಭಾವನೆಯಲ್ಲಿ ಬುರ್ಹಾನ್ ವಾನಿಗಾಗಿ ಕಂಬನಿ ಮಿಡಿದವರು ಹಾಗೂ ಕಾಶ್ಮೀರ ಸ್ವಾತಂತ್ರ್ಯಕ್ಕೆ ಹೋರಾಡುವ ಎಲ್ಲರೂ ಭಯೋತ್ಪಾದಕರು. ಬೀದಿಯಲ್ಲಿ ನಾಯಿಗಳಂತೆ ಸಾಯಲು ಅರ್ಹರು. ದೇಶದ ಪ್ರಧಾನಿಯ ಟ್ವಿಟ್ಟರ್ ನಿರ್ವಹಿಸುವವರು ಟ್ವೀಟ್ ಮಾಡಿದಂತೆ, ‘‘20 ಸಾವಿರ ಮಂದಿ ಉಗ್ರ ವಾನಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ಇವರ ಮೇಲೆ ಬಾಂಬ್ ಹಾಕಿ 20 ಸಾವಿರ ಹಂದಿಗಳಿಗೆ ಸ್ವಾತಂತ್ರ್ಯ ನೀಡಬೇಕಿತ್ತು.’’ ಈ 20 ಸಾವಿರ ಮಂದಿಯನ್ನು ಉಗ್ರ ಹಂದಿಗಳು ಎಂದು ಪರಿಗಣಿಸಿ, ಇವರ ಸಾಮೂಹಿಕ ಹತ್ಯೆಗೆ ಶಿಫಾರಸು ಮಾಡುವವರಲ್ಲಿ ನೀವೂ ಸೇರುತ್ತೀರಿ ಎಂದಾದರೆ, ನಿಮಗೆ ಹೇಳುವುದು ಏನೂ ಇಲ್ಲ.

Writer - ಕವಿತಾ ಕೃಷ್ಣನ್

contributor

Editor - ಕವಿತಾ ಕೃಷ್ಣನ್

contributor

Similar News