ಕಾವೇರಿ ಬಿಕ್ಕಟ್ಟು: ಕೇಂದ್ರಕ್ಕೆಸಾಹಿತಿಗಳ ಉಗ್ರ ಎಚ್ಚರಿಕೆ
ಬೆಂಗಳೂರು, ಸೆ.26: ಕಾಂಗ್ರೆಸ್ ಮುಕ್ತ ಭಾರತದ ಅಜೆಂಡಾವನ್ನು ಮುಂದಿಟ್ಟುಕೊಂಡು ಕಾವೇರಿ ಸಮಸ್ಯೆಯನ್ನು ಬಿಗಡಾಯಿಸುವಂತೆ ಮಾಡಿದರೆ ಕೇಂದ್ರ ಸರಕಾರದ ವಿರುದ್ಧ ಉಗ್ರಸ್ವರೂಪದ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ಸಾಹಿತಿ ಕಲಾವಿದರ ಒಕ್ಕೂಟ ಇಂದಿಲ್ಲಿ ನೇರವಾಗಿ ಎಚ್ಚರಿಕೆ ನೀಡಿದೆ.
ಕರ್ನಾಟಕ ಸಾಹಿತಿ ಕಲಾವಿದರ ಒಕ್ಕೂಟ ನಗರದಲ್ಲಿಂದು ಹಮ್ಮಿಕೊಂಡಿದ್ದ ‘ಬದಲಾದ ಸಂದರ್ಭ ಕಾವೇರಿ ಹೋರಾಟದ ಮುನ್ನಡೆ’ ಕುರಿತ ಸಮೂಹದ ಗೋಷ್ಠಿಯಲ್ಲಿ ನಾಡಿನ ಸಾಹಿತಿ, ಕಲಾವಿದರು, ಚಿಂತಕರು ರಾಜ್ಯದ ವಸ್ತುಸ್ಥಿತಿಯನ್ನು ಮನಗಂಡು ಕಾವೇರಿ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಪ್ರಧಾನಿ ಮುಂದಾಗಬೇಕು. ಅದನ್ನು ಬಿಟ್ಟು ಕಾಂಗ್ರೆಸ್ ಮುಕ್ತ ಭಾರತದ ಅಜೆಂಡಾ ಸಾಕಾರಗೊಳಿಸಲು ಮುಂದಾದರೆ ಕಾವೇರಿ ಸಮಸ್ಯೆ ಮತ್ತಷ್ಟು ಉಲ್ಭಣಿಸಲಿದೆ. ಹೀಗಾದರೆ ಕೇಂದ್ರ ಸರಕಾರದ ವಿರುದ್ಧ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.ಾವೇರಿ ಸಮಸ್ಯೆಯನ್ನು ಬಗೆಹರಿಸಲು ಪ್ರಧಾನಿ ನರೇಂದ್ರ ಮೋದಿ ಕೂಡಲೇ ಮಧ್ಯ ಪ್ರವೇಶಿಸಬೇಕು. ಆ ಮೂಲಕ ಕರ್ನಾಟಕದ ಹಿತ ಕಾಪಾಡಲು ಮುಂದಾಗಬೇಕು. ಈ ನಿಟ್ಟಿನಲ್ಲಿ ರಾಜ್ಯದ ಸಂಸದರು ಅವರ ಮೇಲೆ ಒತ್ತಡ ಹಾಕಬೇಕು ಎಂದು ಸಾಹಿತಿಗಳಾದ ಕೆ.ಎಂ.ಮರುಳಸಿದ್ದಪ್ಪ, ಜಿ.ಕೆ. ಗೋವಿಂದರಾವ್, ಎಸ್.ಜಿ. ಸಿದ್ದರಾಮಯ್ಯ, ಮುಖ್ಯಮಂತ್ರಿ ಚಂದ್ರು, ಡಾ. ವಿಜಯಾ, ರುದ್ರಪ್ಪ ಹನಗವಾಡಿ ಸೇರಿದಂತೆ ಅನೇಕರು ಆಗ್ರಹಿಸಿದ್ದಾರೆ.
ಹಿರಿಯ ಚಿಂತಕ ಮರುಳಸಿದ್ದಪ್ಪಮಾತನಾಡಿ, ಇತ್ತೀಚೆಗೆ ನಡೆದ ವಿಧಾನ ಮಂಡಲ ಅಧಿವೇಶನದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಿರುವುದು ಶ್ಲಾಘನೀಯ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ವಿರುದ್ಧ ನ್ಯಾಯಾಂಗ ನಿಂದನೆ ಆಗುವುದಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಜೊತೆಗೆ ನಾಳೆ ಸುಪ್ರೀಂ ಕೋರ್ಟ್ ಇನ್ನು ಯಾವ ರೀತಿ ತೀರ್ಪು ನೀಡಲಿದೆ ಎನ್ನುವುದು ತೀವ್ರ ಕುತೂಹಲ ಕೆರಳಿಸಿದೆ ಎಂದರು.ಸ್.ಜಿ.ಸಿದ್ದರಾಮಯ್ಯ ಮಾತನಾಡಿ, ನಾಡಿನ ನೆಲ, ಜಲದ ವಿಷಯದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಒಗ್ಗಟ್ಟು ಪ್ರದರ್ಶಿಸಿರುವುದು ಶ್ಲಾಘನೀಯ. ಇದೇ ರೀತಿಯ ಒಗ್ಗಟ್ಟನ್ನು ಮುಂಬರುವ ದಿನಗಳಲ್ಲೂ ಕಾಯ್ದುಕೊಳ್ಳುವ ಅಗತ್ಯವಿದೆ. ರಾಜ್ಯದ ಎಲ್ಲ ಸಂಸದರು ಪ್ರಧಾನಿ ಅವರ ಮೇಲೆ ಒತ್ತಡ ಹೇರಿ ಮಧ್ಯ ಪ್ರವೇಶಿಸುವಂತೆ ಆಗ್ರಹಿಸಬೇಕಾಗಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಚಂದ್ರು ಮಾತನಾಡಿ, ಕುಡಿಯುವ ನೀರಿಗೆ ಯಾವುದೇ ತೊಂದರೆ ಎದುರಾಗದಂತೆ ನೋಡಿಕೊಳ್ಳುವ ಅಗತ್ಯವಿದೆ ಎಂದು ಸಂವಿಧಾನದಲ್ಲೇ ಉಲ್ಲೇಖಿಸಲಾಗಿದೆ. ಕುಡಿಯುವ ನೀರಿನ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜಕೀಯ ಮಾಡುವುದನ್ನು ಬಿಟ್ಟು ಮಧ್ಯ ಪ್ರವೇಶಿಸುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.
ಪ್ರಧಾನಿ ಹಾಗೂ ಬಿಜೆಪಿಯ ನಡವಳಿಕೆ ಅನುಮಾನ ಹುಟ್ಟಿಸುತ್ತಿದೆ ಎಂದ ಅವರು, ಕಾವೇರಿ ವಿಷಯವಾಗಿ ಜನಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.
ಜಿ.ಕೆ. ಗೋವಿಂದರಾವ್, ಡಾ. ವಿಜಯಾ, ರುದ್ರಪ್ಪ ಹನಗವಾಡಿ, ನಾಗರಾಜಮೂರ್ತಿ, ರವಿ ಸಿರಿವರ ಸೇರಿದಂತೆ ಮತ್ತಿತರ ಸಾಹಿತಿ, ಕಲಾವಿದರು ಉಪಸ್ಥಿತರಿದ್ದರು.