ಚುನಾವಣೆಗೆ ಸಜ್ಜಾಗುತ್ತಿದೆ ರಾಜ್ಯ ಕಾಂಗ್ರೆಸ್

Update: 2016-09-27 10:22 GMT

ಬೆಂಗಳೂರು, ಸೆ.27: ಮುಂಬರಲಿರುವ ವಿಧಾನಸಭಾ ಚುನಾವಣೆಗೆ ಕಾರ್ಯಕರ್ತರನ್ನು ಸಜ್ಜುಗೊಳಿಸಲು ನಿರ್ಧರಿಸಲಾಗಿದ್ದು, ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಯನ್ನು ಎದುರಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.

ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪರಮೇಶ್ವರ್, ಕಾವೇರಿ ವಿವಾದ ಸಂಬಂಧ ಉಭಯ ಸದನ ಕೈಗೊಂಡಿರುವ ನಿರ್ಧಾರಕ್ಕೆ ಕಾಂಗ್ರೆಸ್ ಬದ್ದವಾಗಿದೆ. ಅದೇ ರೀತಿ ಮಹದಾಯಿ ವಿವಾದ ಕುರಿತು ಸರಕಾರದ ನಿಲುವಿಗೂ ಪಕ್ಷ ಬದ್ದವಾಗಿದೆ.ಈ ಎರಡೂ ಪ್ರಕರಣಗಳಲ್ಲಿ ಪ್ರಧಾನಿ ಮಧ್ಯಸ್ಥಿಕೆ ವಹಿಸಬೇಕು ಎನ್ನುವುದೇ ಪಕ್ಷದ ನಿಲುವಾಗಿದೆ ಎಂದರು.

ಅ.2ರಿಂದ ಜನವರಿ 30ರವರೆಗೆ ರಾಜ್ಯದಲ್ಲಿ ಕಾಂಗ್ರೆಸ್ ವತಿಯಿಂದ ಬಹುದೊಡ್ಡ ಕಾರ್ಯಕ್ರಮಗಳು ನಡೆಯಲಿವೆ. ಅ.2ರಂದು ವಿಧುರಾಶ್ವತ್ಥದಲ್ಲಿ ಗ್ರಾಮ ಸ್ವರಾಜ್ಯದ ಸಮಾವೇಶ ಮಾಡುವ ಮೂಲಕ ಅದಕ್ಕೆ ಚಾಲನೆ ನೀಡಲಾಗುತ್ತದೆ. ಅಂದೇ ಕಾಂಗ್ರೆಸ್ ನಡಿಗೆ ಸುರಾಜ್ಯದ ಕಡೆಗೆ ಎನ್ನುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ. ರಾಜ್ಯಾದ್ಯಂತ  ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಈ ಕಾರ್ಯಕ್ರಮ ನಡೆಸಲಾಗುತ್ತದೆ. ಈ ಕಾರ್ಯಕ್ರಮವನ್ನು ವಿಧುರಾಶ್ವತ್ಥದಲ್ಲಿ ಘೋಷಣೆ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ ಎಂದರು.

ಡಿ.28ರಂದು ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯನ್ನು ಎಲ್ಲಾ ಬ್ಲಾಕ್ ನಲ್ಲಿ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ. ಜ.30ರಂದು ಹುತಾತ್ಮರ ದಿನಾಚರಣೆ ಆಚರಿಸಲಾಗುತ್ತದೆ. ಬಳಿಕ ಬೇರೆ ಕಾರ್ಯಕ್ರಮಗಳನ್ನು ಘೋಷಣೆ ಮಾಡಲಾಗುತ್ತದೆ. ಕಾರ್ಯಕರ್ತರನ್ನು ವಿಧಾನಸಭಾ ಚುನಾವಣೆಗೆ ಸಜ್ಜುಗೊಳಿಸುವ ಭಾಗವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಕಾಂಗ್ರೆಸ್ ನೀಡಿದ್ದ ಭರವಸೆ ಹಾಗೂ ಈಡೇರಿಕೆ ಕುರಿತು ಮಾಹಿತಿಯನ್ನು ಮನೆಮನೆಗೆ ತಲುಪಿಸಲು ಕಾರ್ಯಕ್ರಮ ರೂಪಿಸಲು ತೀರ್ಮಾನಿಸಿದ್ದೇವೆ ಎಂದು ಪರಮೇಶ್ವರ್ ಮಾಹಿತಿ ನೀಡಿದರು.

ಕಾಂಗ್ರೆಸ್ ಪಿಎಂ, ಸಿಎಂ ಕಿರುಹೊತ್ತಿಗೆ

ಜವಾಹರ್ ಲಾಲ್ ನೆಹರೂ ಅವರಿಂದ ಹಿಡಿದು ಮನಮೋಹನ್ ಸಿಂಗ್ ವರೆಗೆ ಹಾಗೂ ಕೆ.ಸಿ. ರೆಡ್ಡಿ ಅವರಿಂದ ಹಿಡಿದು ಸಿದ್ದರಾಮಯ್ಯವರೆಗೆ ದೇಶಕ್ಕೆ ಕಾಂಗ್ರೆಸ್ ಪಿಎಂ,  ರಾಜ್ಯದಲ್ಲಿ ಕಾಂಗ್ರೆಸ್ ಸಿಎಂ ನೀಡಿರುವ ಕೊಡುಗೆಗಳ ಕುರಿತು ಕಿರುಹೊತ್ತಿಗೆ ಬಿಡುಗಡೆ ಮಾಡಲಾಗುತ್ತದೆ ಎಂದು ಪರಮೇಶ್ವರ್ ಹೇಳಿದರು.

ಸಾಮೂಹಿಕ ನಾಯಕತ್ವ

ಮುಂಬರಲಿರುವ ರಾಜ್ಯ ವಿಧಾನಸಭೆ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲೇ ಎದುರಿಸಲಾಗುತ್ತದೆ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ನಮ್ಮ ನಾಯಕರು. ನಾವೆಲ್ಲಾ ಅವರ ಅಡಿಯಲ್ಲೇ ಮುಂದೆ ಹೋಗುತ್ತೇವೆ. ಸಿದ್ದರಾಮಯ್ಯ, ಖರ್ಗೆ ಸೇರಿದಂತೆ ಸಾಮೂಹಿಕ ನೇತೃತ್ವದಲ್ಲೇ ಚುನಾವಣೆಗೆ ಹೋಗುತ್ತೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News