ಪ್ರಧಾನಿ ಮಧ್ಯೆಪ್ರವೇಶಿಸಲು ಆಗ್ರಹಿಸಿ ದಿಲ್ಲಿಯಲ್ಲಿಸಂಸದರ ಧರಣಿ
ಹೊಸದಿಲ್ಲಿ, ಸೆ.27: ಕಾವೇರಿ ನದಿ ನೀರಿನ ಹಂಚಿಕೆ ಸಂಬಂಧ ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ವಿವಾದ ಇತ್ಯರ್ಥಕ್ಕೆ ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸಬೇಕು ಎಂದು ಆಗ್ರಹಿಸಿ ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಂಸತ್ ಬಳಿಯ ಗಾಂಧಿ ಪ್ರತಿಮೆ ಮುಂದೆ ಕಾಂಗ್ರೆಸ್ ಸಂಸದರು ಧರಣಿ ಸತ್ಯಾಗ್ರಹ ನಡೆಸಿದರು.ುಡಿಯಲು ನೀರಿಲ್ಲ: ಕರ್ನಾಟಕ ರಾಜ್ಯದಲ್ಲಿ ಕುಡಿಯಲು ನೀರಿಲ್ಲದೆ ಭೀಕರ ಸ್ವರೂಪದ ಬರ ಆವರಿಸಿದೆ. ಇಂತಹ ಸಂಕಷ್ಟದ ಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಹರಿಸಬೇಕೆಂಬ ಆದೇಶ ಸರಿಯಲ್ಲ. ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಪ್ರಧಾನಿ ಮಧ್ಯೆ ಪ್ರವೇಶಿಸಬೇಕೆಂದು ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದರು.
ಮಹಾದಾಯಿ ಹಾಗೂ ಕಾವೇರಿ ವಿವಾದ ಬಗೆಹರಿಸಲು ಪ್ರಧಾನಿ ಮೋದಿ ಮಧ್ಯಸ್ಥಿಕೆ ಅಗತ್ಯ. ಈ ಹಿಂದೆ ಅಂತಾರಾಜ್ಯ ಜಲ ವಿವಾದಗಳ ಸಂಬಂಧ ಪ್ರಧಾನಿಗಳು ಮಧ್ಯಸ್ಥಿಕೆ ವಹಿಸಿರುವ ಉದಾಹರಣೆಗಳಿವೆ. ಕುಡಿಯುವ ನೀರಿನ ವಿಷಯವಾಗಿರುವುದರಿಂದ ಪ್ರಧಾನಿಯವರು ಮಧ್ಯಸ್ಥಿಕೆ ವಹಿಸಿ ರಾಜ್ಯಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಖರ್ಗೆ ಒತ್ತಾಯಿಸಿದರು.ಾವೇರಿ ಕೊಳ್ಳದ ಕಬಿನಿ, ಕೆಆರ್‌ಎಸ್, ಹೇಮಾವತಿ, ಹಾರಂಗಿ ಜಲಾಶಯಗಳಲ್ಲಿ ನೀರಿಲ್ಲ. ಉಳಿದ ನೀರು ಕುಡಿಯಲಿಕ್ಕೂ ಕೊರತೆಯಾಗುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಆದೇಶ ಪಾಲಿಸಲು ಸಾಧ್ಯವಿಲ್ಲ. ಆದುದರಿಂದಲೇ ವಿಧಾನ ಮಂಡಲ ಉಭಯ ಸದನದಲ್ಲಿ ನೀರು ಹರಿಸಲು ಸಾಧ್ಯವಿಲ್ಲ ಎಂಬ ನಿರ್ಣಯ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಸಂಸದರಾದ ಮುದ್ದ ಹನುಮೇಗೌಡ, ಕೆ.ಎಚ್.ಮುನಿಯಪ್ಪ, ಎಂ.ಚಂದ್ರಪ್ಪ, ಧ್ರುವನಾರಾಯಣ್, ಡಿ.ಕೆ.ಸುರೇಶ್, ಪ್ರಕಾಶ್ ಹುಕ್ಕೇರಿ, ರಾಜ್ಯಸಭಾ ಸದಸ್ಯರಾದ ಪ್ರೊ.ಕೆ.ರಾಜೀವ್ ಗೌಡ, ಆಸ್ಕರ್ ಫೆರ್ನಾಂಡಿಸ್, ಬಿ.ಕೆ.ಹರಿಪ್ರಸಾದ್, ಕೆ.ಸಿ. ರಾಮಮೂರ್ತಿ, ಜಯರಾಂ ರಮೇಶ್, ಮಾಜಿ ಸಂಸದ ಎಚ್. ವಿಶ್ವನಾಥ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.