ನಗರದಲ್ಲಿ ಬಿಗಿ ಬಂದೋಬಸ್ತ್
ಬೆಂಗಳೂರು, ಸೆ. 27: ತಮಿಳುನಾಡಿಗೆ ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಸುಪ್ರೀಂ ಕೋರ್ಟ್ ಮತ್ತೆ ನೀರು ಹರಿಸುವಂತೆ ಆದೇಶ ನೀಡಿರುವ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿ ನಿಷೇಧಾಜ್ಞೆ ವಿಧಿಸಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
ನಗರದ ಸೂಕ್ಷ್ಮ ಪ್ರದೇಶಗಳಾದ ಮೈಸೂರು ಬ್ಯಾಂಕ್ ವೃತ್ತ, ಫ್ರೀಡಂ ಪಾರ್ಕ್, ವಿಧಾನಸೌಧ, ಹೈಕೋರ್ಟ್, ಶಿವಾಜಿನಗರ, ಮೈಸೂರು ರಸ್ತೆ, ಗಾಂಧಿನಗರ, ಕೆಂಪೇಗೌಡ ಬಸ್ ನಿಲ್ದಾಣ ಸೇರಿ ವಿವಿಧ ಕಡೆ ಕೇಂದ್ರದ ಅರೆಸೇನಾ ಪಡೆ, ಕ್ಷಿಪ್ರ ಕಾರ್ಯಾಚರಣೆ ಪಡೆ, ರಾಜ್ಯ ಮೀಸಲು ಪಡೆ, ಗೃಹರಕ್ಷಕ ದಳ ಸೇರಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.
ಬೆಂಗಳೂರಿನ ಗಲಭೆ ಪೀಡಿತ ಪಶ್ಚಿಮ ಹಾಗೂ ಉತ್ತರ ವಲಯದಲ್ಲಿ ಭದ್ರತೆಯನ್ನು ಬಿಗಿಗೊಳಿಸಿ ಪ್ರತಿಭಟನೆ, ಮೆರವಣಿಗೆ ನಡೆಸುವುದು ಮತ್ತು ಗುಂಪು ಸೇರದಂತೆ ಎಚ್ಚರಿಕೆ ವಹಿಸಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ನಿರಂತರ ಗಸ್ತು ತಿರುಗುತ್ತಿದ್ದು ಪರಿಸ್ಥಿತಿಯ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಅಲ್ಲದೆ, ಇಲ್ಲಿಯವರೆಗೆ ಎಲ್ಲಿಯೂ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಮೇಘರಿಕ್ ಮಾಹಿತಿ ನೀಡಿದರು.