ಜನಪ್ರತಿನಿಧಿಗಳು ಸ್ವಯಂ ಗುಲಾಮರಾಗಿದ್ದಾರೆ: ದೇವನೂರ
ಬೆಂಗಳೂರು, ಸೆ.27: ನಮ್ಮ ಜನಪ್ರತಿನಿಧಿಗಳು ಸ್ವಯಂ ಗುಲಾಮರಾಗುವ ಮೂಲಕ ದೇಶದ ಸಂಪತ್ತನ್ನು ಬಹುರಾಷ್ಟ್ರೀಯ ಕಂಪೆನಿಗಳಿಗೆ ಒತ್ತೆ ಇಡುತ್ತಿದ್ದಾರೆ ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಆತಂಕ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಕರ್ನಾಟಕ ವಿದ್ಯಾರ್ಥಿ ಸಂಘಟನೆ ಹುತಾತ್ಮ ಭಗತ್ ಸಿಂಗ್ ಜನ್ಮ ದಿನದ ಪ್ರಯುಕ್ತ ಸಮಾಜದ ಸಂಕಷ್ಟಕ್ಕೆ ವಿದ್ಯಾರ್ಥಿಗಳ ಸ್ಪಂದನೆ ಹೇಗಿರಬೇಕು ಎಂಬ ವಿಷಯಕ್ಕೆ ಸಂಬಂಧಿಸಿದಂತೆ ನಗರದ ಸೆನೆಟ್ ಸಭಾಂಗಣದಲ್ಲಿ ಆಯೋಜಿಸಿದ್ದ ‘ಸೇ ಯೆಸ್ ಸಮಾವೇಶ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ್ರೋಹಿ ಜನಪ್ರತಿನಿಧಿಗಳು: ದೇಶದ ಕೆರೆ, ನದಿ ಹಾಗೂ ಕೃಷಿ ಭೂಮಿಯನ್ನು ಬಹುರಾಷ್ಟ್ರೀಯ ಕಂಪೆನಿಗಳಿಗೆ ಒತ್ತೆ ಇಡುತ್ತಿರುವ ನಮ್ಮ ಜನಪ್ರತಿನಿಧಿಗಳು ದೇಶ ದ್ರೋಹದ ಕೃತ್ಯ ಮಾಡುತ್ತಿದ್ದಾರೆ. ಇದರ ವಿರುದ್ಧ ರೈತರು ಹಾಗೂ ವಿದ್ಯಾರ್ಥಿಗಳು ಸೇರಿ ದೊಡ್ಡ ಮಟ್ಟದ ಚಳವಳಿ ಮಾಡಬೇಕಾಗಿದೆ ಎಂದು ಅವರು ಹೇಳಿದರು.
ದೇಶದ ಅಂಬಾನಿ ಸಹೋದರರ ಸಂಪತ್ತು ನಮ್ಮ ರಾಜ್ಯದ ಒಂದು ವರ್ಷದ ಬಜೆಟ್‌ನ ನಾಲ್ಕು ಪಟ್ಟಿದೆ. ಇದು ಅವರೇ ಬಹಿರಂಗಗೊಳಿಸಿರುವ ಆಸ್ತಿಯಾಗಿದೆ. ಇನ್ನು ಬಹಿರಂಗಗೊಳಿಸದೇ ಇರುವ ಅಕ್ರಮ ಸಂಪತ್ತು ಇನ್ನೆಷ್ಟು. ಹೀಗೆ ಇಡೀ ದೇಶದ ಸಂಪತ್ತು ಕೆಲವೇ ಬಂಡವಾಳಶಾಹಿಗಳ ವಶದಲ್ಲಿದೆ. ಆ ಸಂಪತ್ತನ್ನು ಪಡೆಯುವುದರತ್ತ ಚಳವಳಿ ರೂಪಿಸುವ ಅಗತ್ಯವಿದೆ ಎಂದು ದೇವನೂರ ಮಹಾದೇವ ತಿಳಿಸಿದರು.
ಸಂಪತ್ತನ್ನು ದೋಚುವುದೆ ಅಭಿವೃದ್ಧಿಯೆಂದು ಜನಪ್ರತಿನಿಧಿಗಳು ಜನತೆಗೆ ನಂಬಿಸಲು ಹೊರಟಿದ್ದಾರೆ. ಜನತೆಯನ್ನು ವಂಚಿಸುವ ಬಂಡವಾಳಿಶಾಹಿ ಕೇಂದ್ರಿತ ಅಭಿವೃದ್ಧಿ ಕ್ಯಾನ್ಸರ್ ರೋಗವಿದ್ದಂತೆ ಎಂಬುದನ್ನು ಅರಿಯಬೇಕಾಗಿದೆ. ಈ ನಿಟ್ಟಿನಲ್ಲಿ ಸಂವಿಧಾನದ ಆಶಯಗಳಾದ ಸ್ವಾತಂತ್ರ, ಸಮಾನತೆ ಹಾಗೂ ನ್ಯಾಯವನ್ನು ಪಡೆಯುವ ನಿಟ್ಟಿನಲ್ಲಿ ಹೋರಾಟವನ್ನು ಮಾಡಬೇಕಾಗಿದೆ ಎಂದು ಅವರು ಕರೆ ನೀಡಿದರು.
ಶಿಕ್ಷಣ ತಜ್ಞ ಶ್ರೀಪಾದ್ ಭಟ್ ಮಾತನಾಡಿ, ಇಂದು ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತಲಿನ ಸಮಾಜವನ್ನು ಅರಿಯುವಂತಹ ಕೆಲಸ ಮಾಡಬೇಕು. ಇದಕ್ಕಾಗಿ ವಿದ್ಯಾರ್ಥಿಗಳು ತಮ್ಮಲ್ಲೆ ಸ್ಟಡಿ ಗ್ರೂಪ್‌ಗಳನ್ನು ಮಾಡಿಕೊಂಡು ಅಂಬೇಡ್ಕರ್‌ರವರ ಸಂವಿಧಾನದ ಆಶಯಗಳನ್ನು ಅರಿಯುವುದಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು ಎಂದು ಅವರು ತಿಳಿಸಿದರು.
ಸಂಘಪರಿವಾರ ಹೇಳುತ್ತಿರುವ ಸಂಸ್ಕೃತಿ ಜನಪರವಾಗಿದೆಯೇ. ಯಾವುದು ಜನಪರವಾದ ಸಂಸ್ಕೃತಿ ಎಂಬುದನ್ನು ಅರಿಯುವುದು ಅಗತ್ಯವಿದೆ. ಆರೆಸ್ಸೆಸ್‌ನಂತೆ ಕೇವಲ ಘೋಷಣೆಯಲ್ಲಿ ಕೂಗುವುದರಲ್ಲಿ ದೇಶ ಪ್ರೇಮ ಅಡಗಿದೆಯೇ, ಅಥವಾ ರೈತ, ಕಾರ್ಮಿಕ ಹಾಗೂ ದಲಿತರ ಅಭಿವೃದ್ಧಿ ಮಾಡುವುದರಲ್ಲಿ ಅಡಗಿದೆಯೇ ಎಂಬುದನ್ನು ವಿದ್ಯಾರ್ಥಿಗಳು ತಿಳಿದು, ಜನಪರ ಸಂಘಟನೆಯ ಜೊತೆ ಕೈಜೋಡಿಸಬೇಕು ಎಂದು ಅವರು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ರೈತ ನಾಯಕ ವೀರಸಂಗಯ್ಯ, ಶಿಕ್ಷಣ ಹಕ್ಕು ಹೋರಾಟಗಾರ್ತಿ ಕವಿತಾ, ದಲಿತ ಮುಖಂಡ ಸಿ.ಜಿ.ಗಂಗಪ್ಪ, ಭಾಸ್ಕರ್ ಪ್ರಸಾದ್, ರೈತ ಮುಖಂಡ ಶಿವಕುಮಾರ್, ಕೆವಿಎಸ್‌ನ ಮುತ್ತುರಾಜ್, ತ್ರೀಮೂರ್ತಿ, ಮಲ್ಲಿಗೆ, ಡಾ.ಎಚ್.ವಿ.ವಾಸು ಮತ್ತಿತರರು ಉಪಸ್ಥಿತರಿದ್ದರು.
ಮುಚ್ಚಿರುವ ಶಾಲೆಗಳನ್ನು ತೆರೆಸೋಣಸಮಾನ ಶಿಕ್ಷಣದಿಂದ ಮಾತ್ರ ದೇಶದ ಅಭಿವೃದ್ಧಿ ಕಾಣಲು ಸಾಧ್ಯ. ಈ ನಿಟ್ಟಿನಲ್ಲಿ ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಒತ್ತಾಯಿಸುವುದು ಹಾಗೂ ಈಗಾಗಲೇ ರಾಜ್ಯದಲ್ಲಿ ಮುಚ್ಚಿರುವ ಸರಕಾರಿ ಶಾಲೆಗಳನ್ನು ತೆರೆಸುವಂತಹ ಕೆಲಸ ಮಾಡಬೇಕಾಗಿದೆ. ಆ ನಿಟ್ಟಿನಲ್ಲಿ ಜನತೆಯಲ್ಲಿ ಜಾಗೃತಿ ಮೂಡಿಸಿ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸುವಂತಹ ಪ್ರಕ್ರಿಯೆಗೆ ಚಾಲನೆ ನೀಡಬೇಕಾಗಿದೆ.
-ದೇವನೂರ ಮಹಾದೇವ, ಹಿರಿಯ ಸಾಹಿತಿ ಸಂಘಪರಿವಾರದಿಂದ ದನದ ಮಾಂಸ ರಫ್ತುದೇಶದಲ್ಲಿ ಆರು ಕಂಪೆನಿಗಳ ಮೂಲಕ ಒಂದು ಲಕ್ಷ ಟನ್ ದನದ ಮಾಂಸ ವಿದೇಶಕ್ಕೆ ಹೋಗುತ್ತಿದೆ. ಈ ಆರು ಕಂಪೆನಿಗಳ ಮಾಲಕರು ಸಂಘಪರಿವಾರಕ್ಕೆ ಸೇರಿದವರಾಗಿದ್ದಾರೆ. ಈ ವ್ಯವಹಾರದಲ್ಲಿ ಬರುವ ಕೋಟ್ಯಂತರ ರೂ. ಸಂಘಪರಿವಾರಕ್ಕೆ ದೇಣಿಗೆಯಾಗಿ ನೀಡುತ್ತಿದ್ದಾರೆ.
-ಭಾಸ್ಕರ್ ಪ್ರಸಾದ್‌ದಲಿತ ಮುಖಂಡ