×
Ad

ಜಾಗತಿಕ ಸೌಲಭ್ಯಗಳ ಮೂಲಕ ಪ್ರವಾಸೋದ್ಯಮ ವಿಸ್ತರಣೆ

Update: 2016-09-27 23:43 IST

ಬೆಂಗಳೂರು, ಸೆ. 27:ರಾಜ್ಯದಲ್ಲಿನ ಪ್ರಾಕೃತಿಕ ಸಂಪನ್ಮೂಲಗಳನ್ನು ಸಂರಕ್ಷಿಸುವ ಮತ್ತು ಜಾಗತಿಕ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ರಾಜ್ಯ ಪ್ರವಾಸೋದ್ಯಮವನ್ನು ವಿಸ್ತರಿಸಬೇಕಿದೆ ಎಂದು ಅಪರ ಜಿಲ್ಲಾಧಿಕಾರಿ ಯೋಗೇಶ್ ಜಾಧವ್ ತಿಳಿಸಿದ್ದಾರೆ.
ಮಂಗಳವಾರ ನಗರದ ಬಾದಾಮಿ ಹೌಸ್‌ನಲ್ಲಿ ಆಯೋಜಿಸಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ಪ್ರವಾಸೋದ್ಯಮದಲ್ಲಿ ದೇಶದಲ್ಲಿಯೇ ನಾಲ್ಕನೆ ಸ್ಥಾನದಲ್ಲಿದೆ. ರಾಜ್ಯದಲ್ಲಿರುವ ನೈಸರ್ಗಿಕ ಸಂಪತ್ತಿನ ರಕ್ಷಣೆ ಮತ್ತು ಪ್ರವಾಸಿಗರಿಗೆ ಮೂಲಭೂತ ಸವಲತ್ತು ಕಲ್ಪಿಸುವ ಮೂಲಕ ಪ್ರವಾಸೋದ್ಯಮವನ್ನು ಇನ್ನಷ್ಟು ಸುಧಾರಿಸಬೇಕಿದೆ ಎಂದು ತಿಳಿಸಿದರು.
ವಿಕಲಚೇತನರ ಪ್ರವಾಸ ಸಂಸ್ಥೆ(ಎಬಿಡಿ) ಕಾರ್ಯದರ್ಶಿ ಜನಾದರ್ನ ಮಾತನಾಡಿ, ರಾಜ್ಯದಲ್ಲಿ ಶೇ.3ರಷ್ಟಿರುವ ವಿಕಲಚೇತನರನ್ನು ರಾಜ್ಯದಲ್ಲಿ ಪ್ರವಾಸಕ್ಕೆ ಕೊಂಡೊಯ್ಯಲು ಸೌಲಭ್ಯಗಳು ತೀರಾ ಕಡಿಮೆ ಇವೆ. ಇದರಿಂದ ವಿಕಲಚೇತನರು ಪ್ರವಾಸದ ವೇಳೆ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ವಿಕಲಚೇತನರು ಪ್ರವಾಸ ಮಾಡಲು ಅವರಿಗೆ ಪೂರಕವಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ರಾಜ್ಯ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
 ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಡಾ.ರವೀಂದ್ರ ಮಾತನಾಡಿ, ಸರ್ವರಿಗೂ ಪ್ರವಾಸೋದ್ಯಮ ಕಲ್ಪಿಸಲು ಇಲಾಖೆ ಶ್ರಮಿಸಲಿದೆ. ಜಾಗತಿಕ ಪ್ರವಾಸೋದ್ಯಮ ಸೌಲಭ್ಯಗಳ ಲಭ್ಯತೆಗೆ ಉತ್ತೇಜನ ನೀಡುತ್ತಿದೆ. ಪ್ರವಾಸೋದ್ಯಮ ಇಲಾಖೆಗೆ ಹೊಟೇಲ್-ರೆಸಾರ್ಟ್‌ಗಳ ಸಹಕಾರ ಮುಖ್ಯ ಎಂದು ತಿಳಿಸಿದರು.
 ಕಾರ್ಯಕ್ರಮದಲ್ಲಿ ಜವಳಿ ಅಭಿವೃದ್ಧಿ ಇಲಾಖೆಯ ಮಾಜಿ ಅಧ್ಯಕ್ಷ ಡಿ.ವೆಂಕಟೇಶ್, ಉಪ ವಿಭಾಗಾಧಿಕಾರಿ ನಾಗರಾಜ್, ಹೊಟೇಲ್ ಉದ್ಯಮಿ ಹೆಬ್ಬಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News