ಬೆಂಗಳೂರಿನ ವೈದೇಹಿ ಕಾಲೇಜಿಗೆ ಐಟಿ ದಾಳಿ: 43 ಕೋಟಿ ರೂ. ವಶಕ್ಕೆ
ಬೆಂಗಳೂರು, ಸೆ.28: ವೈದೇಹಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಸಂಶೋಧನಾ ಕೇಂದ್ರದ ಟ್ರಸ್ಟಿಯೊಬ್ಬರ ಮನೆ ಮೇಲೆ ದಾಳಿ ನಡೆಸಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು 43 ಕೋಟಿ ರೂ. ಮತ್ತು ಕೆಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಐಟಿ ಇಲಾಖೆಯ ಪ್ರಧಾನ ಆಯುಕ್ತೆ ನೂತನ್ ಒಡೆಯರ್, ಖಚಿತ ಮಾಹಿತಿ ಸಂಗ್ರಹಿಸಿ ಸೆ.27ರಂದು ಆದಾಯ ತೆರಿಗೆ ಅಧಿಕಾರಿಗಳು ಸಂಸ್ಥೆ ಟ್ರಸ್ಟಿಗಳಲ್ಲಿ ಒಬ್ಬರಾದ ಪ್ರಭಾವಿ ವ್ಯಕ್ತಿಯ ಮನೆ ಮೇಲೆ ದಾಳಿ ಮಾಡಿ ಪರಿಶೀಲಿಸಿದಾಗ 1 ಸಾವಿರ ಹಾಗೂ 500 ರೂ. ಕಂತೆಗಳ ದೊಡ್ಡ ರಾಶಿ ಇರುವುದು ಕಂಡು ಬಂದಿದೆ. ಈ ಬಗ್ಗೆ ವಿಚಾರಣೆ ಕೈಗೊಂಡಾಗ ವೈದ್ಯಕೀಯ ಸೀಟು ನೀಡಲು ವಿದ್ಯಾರ್ಥಿಗಳಿಂದ ಭಾರೀ ಮೊತ್ತದ ಡೊನೇಷನ್ ಸ್ವೀಕರಿಸಿರುವುದು ಮತ್ತು 265 ಕೋಟಿ ರೂ. ವೆಚ್ಚದ ದಾಖಲೆ ರಹಿತ ವ್ಯವಹಾರ ಪ್ರಕರಣಗಳೂ ಬೆಳಕಿಗೆ ಬಂದಿವೆ ಎಂದು ತಿಳಿಸಿದರು.
ಈ ದಾಳಿ ಬಳಿಕ ತಮಿಳುನಾಡು, ಆಂಧ್ರಪ್ರದೇಶ ಹಾಗೂ ಹೊಸದಿಲ್ಲಿಯಲ್ಲಿರುವ ಈ ಸಂಸ್ಥೆಯ ಟ್ರಸ್ಟ್‌ಗೆ ಸೇರಿದ ಇತರ ಸಹೋದರ ಸಂಸ್ಥೆಗಳಲ್ಲೂ ಅಧಿಕಾರಿಗಳು ತೀವ್ರ ಶೋಧ ನಡೆಸಿದ್ದಾರೆ.