ತಮಿಳುನಾಡಿಗೆ ಕಾವೇರಿ ನೀರು: ಇಂದು ನಿರ್ಧಾರ

Update: 2016-09-28 18:30 GMT

ಬೆಂಗಳೂರು, ಸೆ.28: ಸುಪ್ರೀಂಕೋರ್ಟ್‌ನ ಆದೇಶದಂತೆ ತಮಿಳುನಾಡಿಗೆ ಸೆ.28ರಿಂದ 30ರವರೆಗೆ ನೀರು ಬಿಡುಗಡೆ ಮಾಡುವುದನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಗಿದೆ. ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾಭಾರತಿಯವರ ಅಧ್ಯಕ್ಷತೆಯಲ್ಲಿ ಗುರುವಾರ(ಸೆ.29) ನಡೆಯಲಿರುವ ಉಭಯ ರಾಜ್ಯಗಳ ಸಭೆಯ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಬುಧವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇಂದು ಮಧ್ಯಾಹ್ನ 2 ರಿಂದ ಸಂಜೆ 6 ಗಂಟೆ ಯವರೆಗೂ ನಡೆದ ಸುದೀರ್ಘ ಮಂತ್ರಿಪರಿಷತ್ ಸಭೆಯಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದರು.

ಸುಪ್ರೀಂಕೋರ್ಟ್ ಸೆ.27ರಂದು ನೀಡಿರುವ ತೀರ್ಪಿನಲ್ಲಿ ಎರಡು ಭಾಗಗಳಿವೆ. ಮೊದಲ ಭಾಗದಲ್ಲಿ ಎರಡು ರಾಜ್ಯಗಳ ಮುಖ್ಯಮಂತ್ರಿಗಳು ಸಂಧಾನ ಸಭೆ ನಡೆಸಿ ವಿವಾದವನ್ನು ಇತ್ಯರ್ಥ ಪಡಿಸುವುದು. ಎರಡನೇ ಭಾಗದಲ್ಲಿ ಸೆ.28ರಿಂದ 30ರವರೆಗೂ ಮೂರು ದಿನ ನಿತ್ಯ ಆರು ಸಾವಿರ್ ಕ್ಯೂಸೆಕ್ ನೀರು ಬಿಡಬೇಕು. ಈ ನೀರನ್ನು ಮುಂದಿನ ಸಂಕಷ್ಟ ಸಮಯದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದು ಎಂದು ನ್ಯಾಯಾಲಯವು ಆದೇಶದಲ್ಲಿ ತಿಳಿಸಿದೆ ಎಂದು ಸಿದ್ದರಾಮಯ್ಯ ಹೇಳಿದರು. ಎರಡು ರಾಜ್ಯಗಳ ಮುಖ್ಯಸ್ಥರೊಂದಿಗೆ ಸಂಧಾನ ಸಭೆ ನಡೆಸಿ ವಿವಾದ ಇತ್ಯರ್ಥಕ್ಕೆ ಪ್ರಯತ್ನಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರಕಾರದ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಅವರ ಮುಂದಿಟ್ಟಿರುವ ಸಲಹೆಯಂತೆ ನಾಳೆ ಬೆಳಗ್ಗೆ 11.30ಕ್ಕೆ ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾಭಾರತಿ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು, ಜಲಸಂಪನ್ಮೂಲ ಸಚಿವರು, ಮುಖ್ಯಕಾರ್ಯದರ್ಶಿಗಳು, ಜಲಸಂಪನ್ಮೂಲ ಕಾರ್ಯದರ್ಶಿಗಳು, ನೀರಾವರಿ ಇಲಾಖೆಯ ತಾಂತ್ರಿಕ ವಿಭಾಗದ ಮುಖ್ಯ ಎಂಜಿನಿಯರ್‌ಗಳನ್ನು ಸಭೆಗೆ ಆಹ್ವಾನಿಸಿದ್ದಾರೆ ಎಂದು ಅವರು ತಿಳಿಸಿದರು.

ಸಂಧಾನ ಸಭೆಗೆ ಎರಡು ರಾಜ್ಯಗಳ ಪರ ವಕೀಲರು ಸುಪ್ರೀಂಕೋರ್ಟ್ ಎದುರು ಒಪ್ಪಿಗೆ ಸೂಚಿಸಿದ್ದಾರೆ. ಸಭೆಯಲ್ಲಿ ಭಾಗವಹಿಸಲು ನಾನು ದಿಲ್ಲಿಗೆ ತೆರಳುತ್ತಿದ್ದೇನೆ. ಸಭೆಯಲ್ಲಿ ಈವರೆಗೂ ಆಗಿರುವ ಬೆಳವಣಿಗೆಗಳು, ಜಲಾಶಯಗಳ ವಸ್ತುಸ್ಥಿತಿ, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಎಲ್ಲ ವಿಷಯಗಳನ್ನು ವಿವರಿಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು. ಸುಪ್ರೀಂಕೋರ್ಟ್ ತಮಿಳುನಾಡಿಗೆ ಮತ್ತೆ ನೀರು ಬಿಡುವಂತೆ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಇಂದು ಸರ್ವಪಕ್ಷಗಳ ಸಭೆಯನ್ನು ಕರೆಯಲಾಗಿತ್ತು. ಕೇಂದ್ರ ಸಚಿವರು, ಸಂಸದರು, ವಿಧಾನಮಂಡಲದ ಉಭಯ ಸದನಗಳ ವಿರೋಧಪಕ್ಷದ ನಾಯಕರು, ಸದನ ನಾಯಕರು ಸೇರಿದಂತೆ ಎಲ್ಲ ಪ್ರಮುಖರು ಪಾಲ್ಗೊಂಡಿದ್ದರು ಎಂದು ಅವರು ಹೇಳಿದರು. ಸೆ.23ರಂದು ವಿಧಾನಮಂಡಲದ ಉಭಯ ಸದನಗಳಲ್ಲಿ ಸರ್ವಾನುಮತದಿಂದ ಕೈಗೊಂಡ ನಿರ್ಧಾರದಂತೆ ನಮ್ಮ ಜಲಾಯಶಗಳಲ್ಲಿ ಇರುವ ನೀರನ್ನು ಕುಡಿಯಲು ಶೇಖರಿಸಿಟ್ಟುಕೊಳ್ಳಬೇಕು. ಬೇರೆ ಯಾವುದಕ್ಕೂ ಬಳಕೆ ಮಾಡಬಾರದು ಎಂದು ಎಲ್ಲ ಪ್ರಮುಖರು ಸರ್ವಪಕ್ಷಗಳ ಸಭೆಯಲ್ಲಿ ಸಲಹೆಯನ್ನು ನೀಡಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು. ಸದನದ ನಿರ್ಣಯ, ಸರ್ವ ಪಕ್ಷಗಳ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳು, ಜಲಾಶಯಗಳ ವಾಸ್ತವ ಪರಿಸ್ಥಿತಿಯನ್ನು ಆಧರಿಸಿ, ಉಮಾಭಾರತಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಹೊರಬರಲಿರುವ ನಿರ್ಣಯವನ್ನು ಆಧರಿಸಿ ಸರಕಾರ ಮುಂದಿನ ನಿರ್ಣಯವನ್ನು ಕೈಗೊಳ್ಳಲಿದೆ ಎಂದು ಅವರು ಹೇಳಿದರು.

ನ್ಯಾಯಾಲಯಕ್ಕೆ ಅಗೌರವ ತೋರಬೇಕು ಎಂಬುದು ನಮ್ಮ ಉದ್ದೇಶವಲ್ಲ. ಜಲಾಶಯಗಳಲ್ಲಿ ಇರುವ ನೀರು ಕುಡಿಯುವ ಉದ್ದೇಶಕ್ಕೆ ಮಾತ್ರ ಸಾಕಾಗುವುದರಿಂದ ಮತ್ತು ಸರ್ವಪಕ್ಷಗಳ ಸಭೆ ಹಾಗೂ ಸದನ ಕೈಗೊಂಡಿರುವ ನಿರ್ಧಾರವನ್ನು ಆಧರಿಸಿ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವುದನ್ನು ಮುಂದೂಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News