×
Ad

‘ಆಹಾರ ನಮ್ಮ ಆಯ್ಕೆ, ಭೂಮಿ ನಮ್ಮ ಹಕ್ಕು’ ಅ.4ರಿಂದ ‘ಉಡುಪಿ ಚಲೋ’

Update: 2016-10-02 00:15 IST

ಬೆಂಗಳೂರು, ಅ.1: ಆಹಾರ ನಮ್ಮ ಆಯ್ಕೆ, ಭೂಮಿ ನಮ್ಮ ಹಕ್ಕು ಸೇರಿದಂತೆ ಜಾತಿ,ಧರ್ಮದ ಹೆಸರಿನಲ್ಲಿ ಮೂಲಭೂತವಾದಿಗಳು ನಡೆಸುತ್ತಿರುವ ದೌರ್ಜನ್ಯಗಳ ವಿರುದ್ಧ ಅ.4 ರಿಂದ 9ರ ವರೆಗೆೆ ‘ಉಡುಪಿ ಚಲೋ’ ಸ್ವಾಭಿಮಾನಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಜಾಥಾದ ಸಂಚಾಲಕ ಬಿ.ಆರ್.ಭಾಸ್ಕರ್ ಪ್ರಸಾದ್ ತಿಳಿಸಿದ್ದಾರೆ.

ಶನಿವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರದ ಮಾಜಿ ಅಡ್ವೊಕೇಟ್ ಜನರಲ್ ಪ್ರೊ. ರವಿವರ್ಮ ಕುಮಾರ್ ಜಾಥಾ ಉದ್ಘಾಟಿಸಲಿದ್ದು, ಬೇಲೂರು ಮಠದ ನಿಜಗುಣಾನಂದ ಸ್ವಾಮೀಜಿ, ಸಾಮಾಜಿಕ ಹೋರಾಟಗಾರರಾದ ದು.ಸರಸ್ವತಿ, ಅನಸೂಯಮ್ಮ, ಎನ್.ವೆಂಕಟೇಶ್ ಸೇರಿದಂತೆ ಮತ್ತಿತರ ಮುಖಂಡರು ಭಾಗವಹಿಸಲಿದ್ದಾರೆಂದು ತಿಳಿಸಿದರು.ುಜರಾತ್‌ನ ಉನಾದಲ್ಲಿ ದಲಿತ ಸಮುದಾಯದ ಯುವಕರು ದನದ ಚರ್ಮ ಸುಲಿಯುತ್ತಿದ್ದರೆಂದು ಆರೋಪಿಸಿ ಸಂಘ ಪರಿವಾರದ ಗೂಂಡಾಗಳು ದಲಿತ ಯುವಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದರು. ಈ ಹಲ್ಲೆಯನ್ನು ಖಂಡಿಸಿ ಗುಜರಾತ್‌ನಲ್ಲಿ ದೊಡ್ಡ ಮಟ್ಟದ ಪ್ರತಿಭಟನೆಯನ್ನು ನಡೆಸಲಾಗಿತ್ತು. ಈ ಹೋರಾಟದ ಸ್ಫೂರ್ತಿಯಿಂದ ರಾಜ್ಯದಲ್ಲೂ ಮೂಲಭೂತವಾದಿಗಳ ವಿರುದ್ಧ ಸಮರ ಸಾರುವ ಉದ್ದೇಶದಿಂದ ‘ಉಡುಪಿ ಚಲೋ’ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ದನ, ಧರ್ಮ, ಮೂಢನಂಬಿಕೆ ಹೆಸರಿನಲ್ಲಿ ಸಂಘ ಪರಿವಾರದವರು ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಮೇಲೆ ದಾಳಿ ಮಾಡುತ್ತಿದ್ದಾರೆ. ಇವರ ಈ ದಾಳಿಗಳನ್ನು ಶಾಶ್ವತವಾಗಿ ತಡೆದು, ಸಮ ಸಮಾಜವನ್ನು ನಿರ್ಮಾಣ ಮಾಡಬೇಕಾಗಿದೆ. ಪ್ರಜಾತಂತ್ರದಲ್ಲಿ ವಿಶ್ವಾಸವಿರುವ ಪ್ರತಿಯೊಬ್ಬರೂ ಇಂತಹ ಅಮಾನುಷ ದೌರ್ಜನ್ಯ, ಹಲ್ಲೆಗಳ ವಿರುದ್ಧ ಹೋರಾಡಬೇಕಿದೆ.ದಾಳಿಗಳ ಹಿಂದಿರುವ ಹುನ್ನಾರಗಳನ್ನು ಬಯಲುಗೊಳಿಸಿ ಸ್ವಾತಂತ್ರ, ಸಮಾನತೆ, ಭಾತೃತ್ವದ ಆಶಯಗಳನ್ನು ಎತ್ತಿ ಹಿಡಿಯಬೇಕು ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಆಶಯದ ಸಾಮಾಜಿಕ ಪ್ರಜಾಪ್ರಭುತ್ವ ಸ್ಥಾಪನೆ ಮಾಡುವ ಕೆಲಸಕ್ಕೆ ಮುಂದಾಗಬೇಕಿದೆ. ಜೊತೆಗೆ ಸಂಘಪರಿವಾರದಲ್ಲಿರುವ ಮೇಲ್ವರ್ಗದ ನಾಯಕರು ದಲಿತರು ಹಾಗೂ ಹಿಂದುಳಿದ ಸಮುದಾಯದವರನ್ನೆ ಬಳಸಿಕೊಂಡು ಸಮಾಜದಲ್ಲಿ ಅಶಾಂತಿ, ಕೋಮುಗಲಭೆಗಳನ್ನು ಸೃಷ್ಟಿಸುತ್ತಿದ್ದಾರೆ. ಸಂಘಪರಿವಾರದ ಈ ಷಡ್ಯಂತ್ರವನ್ನು ಜನ ಸಾಮಾನ್ಯರಿಗೆ ತಿಳಿಸುವ ಅಗತ್ಯವಿದೆ ಎಂದು ತಿಳಿಸಿದರು.
ಬಹುಜನ ವಿದ್ಯಾರ್ಥಿ ಸಂಘಟನೆ (ಬಿವಿಎಸ್) ಸಂಚಾಲಕ ಹರಿರಾಮ್ ಮಾತನಾಡಿ, ರಾಜ್ಯದಲ್ಲಿ ಜನಸಾಮಾನ್ಯರ ಮೇಲೆ ಸಂಘಪರಿವಾರದವರ ದೌರ್ಜನ್ಯ ಹೆಚ್ಚುತ್ತಿದೆ. ತಮ್ಮ ಸ್ವಾರ್ಥ ಹಿತಾಸಕ್ತಿಗಾಗಿ ದಲಿತರ ಹಾಗೂ ಅಲ್ಪಸಂಖ್ಯಾತರ ಆಹಾರದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಹೀಗಾಗಿ ಸಂಘಪರಿವಾರಕ್ಕೆ ಎಚ್ಚರಿಕೆ ಕೊಡುವುದಕ್ಕಾಗಿ ‘ಉಡುಪಿ ಚಲೋ’ ಹಮ್ಮಿಕೊಳ್ಳಲಾಗಿದೆ ಎಂದು ಸ್ಪಷ್ಟಣೆ ನೀಡಿದರು.ವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಿ.ರಾಜಶೇಖರ್‌ಮೂರ್ತಿ ಮಾತನಾಡಿ, ಸಮಾನ ಮನಸ್ಕ ಗೆಳೆಯರಿಂದ ಆರಂಭವಾದ ಈ ಹೋರಾಟದ ಪ್ರಕ್ರಿಯೆಗೆ ನಾಡಿನ 150 ಕ್ಕೂ ಹೆಚ್ಚು ಕನ್ನಡಪರ, ದಲಿತ, ವಿದ್ಯಾರ್ಥಿ-ಯುವಜನ, ಮಹಿಳಾ, ಕಾರ್ಮಿಕ ಸಂಘಟನೆಗಳು ಬೆಂಬಲ ಸೂಚಿಸಿವೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿ(ಭೀಮವಾದ)ಆರ್.ಮೋಹನ್‌ರಾಜ್, ಸಾಮಾಜಿಕ ಹೋರಾಟಗಾರ ಹುಲಿಕುಂಟೆ ಮೂರ್ತಿ, ಜನಶಕ್ತಿ ಗೌರಿ, ದಲಿತ ವಿದ್ಯಾರ್ಥಿ ಒಕ್ಕೂಟದ ರಾಜಗೋಪಾಲ್, ದಸಂಸ ಮುಖಂಡ ಎನ್.ವೆಂಕಟೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

  ಅ.4ರಂದು ನಗರದ ಸ್ವಾತಂತ್ರ ಉದ್ಯಾನವನದಲ್ಲಿ ‘ಚಲೋ’ಗೆ ಮಾಜಿ ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್ ಚಾಲನೆ ನೀಡಲಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದಲ್ಲಿ ಅಂದು ವಾಸ್ತವ್ಯ. ಅ.5ರಂದು ಕುಣಿಗಲ್, ಚನ್ನರಾಯಪಟ್ಟಣ, ಹೊಳೆನರಸೀಪುರ. ಅ.6ರಂದು ಹಾಸನ-ಬೇಲೂರು, ಅ.7ಕ್ಕೆ ಚಿಕ್ಕಮಗಳೂರು ಮಾರ್ಗವಾಗಿ ಕೊಪ್ಪ ತಾಲೂಕಿನ ಜಯಪುರದಲ್ಲಿ ಬೃಹತ್ ಮೆರವಣಿಗೆ ಹಾಗೂ ಬಹಿರಂಗ ಸಭೆ ನಡೆಯಲಿದೆ. ಅ.9ರಂದು ಉಡುಪಿಯಲ್ಲಿ ದಲಿತ ದಮನಿತರ ಬೃಹತ್ ಸಮಾವೇಶ ಜರುಗಲಿದ್ದು, ಗುಜರಾತ್ ಉನಾ ಹೋರಾಟದ ರೂವಾರಿ, ಯುವ ವಕೀಲ ಜಿಗ್ನೇಶ್ ಮೆವಾನಿ ಪಾಲ್ಗೊಳ್ಳಲಿದ್ದು, ಸುಮಾರು 25 ಸಾವಿರಕ್ಕೂ ಅಧಿಕ ಮಂದಿ ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

-ಬಿ.ಆರ್.ಭಾಸ್ಕರ್ ಪ್ರಸಾದ್, ಜಾಥಾದ ಸಂಚಾಲಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News