ಹೊಳೆ ಮೀನಿನ ಶಿಕಾರಿ

Update: 2016-10-03 11:00 GMT

 

ನಮ್ಮ ಕಲ್ಕುಳಿ ಗದ್ದೆ ಕೋಗಿನ ಬುಡ ಶುರುವಾಗುವುದೇ ಹೊಳೆಯಿಂದ ಆ ಹೊಳೆಗೆ ನಾವೆಲ್ಲ ದೊಡ್ಡಹೊಳೆ ಎಂದು ಕರೆಯುತ್ತೇವೆ. ಕೆಳಕೆಳಗೆ ಹೋದಂಗೆ ಅದನ್ನು ತುಂಗಾ ನದಿ ಅಂತ ಕರೆಯುತ್ತಾರೆ. ನಮ್ಮ ಹೊಳೆ ಬೇಸಿಗೆಯಲ್ಲಿ ಸಣ್ಣದಾಗಿ ಮಳೆಗಾಲದಲ್ಲಿ ಭರ್ತಿಯಾಗಿ ಅದರಲ್ಲೂ ಮಳೆ ಜಾಸ್ತಿಯಾಗಿ ನೆರೆ ಬಂದ್ರೆ ನೆರೆ ಹೊಳೆ ನಮ್ಮ ಮನೆಯವರೆಗೂ ಬರುತ್ತಿತ್ತು. ಬೇಸಿಗೆಯಲ್ಲಿ ರಜಾ ಕಳೆಯಲು ನಮ್ಮ ಆಟದ ಅಂಕಣವೇ ದೊಡ್ಡಹೊಳೆಯಾಗಿತ್ತು. ಈ ಹೊಳೆಗೆ ದೊಡ್ಡಹೊಳೆ ಅಂತ ಹೆಸರು ಏಕೆಂದರೆ? ನಮ್ಮ ಮನೆಯಿಂದ ಸ್ವಲ್ಪದೂರದಲ್ಲಿರುವ ನಮ್ಮ ಇನ್ನೊಂದು ಜಮೀನಿನ ಪಕ್ಕದಲ್ಲಿ ಹರಿದು ಬರುವ ಕಿರುಹೊಳೆ ದೊಡ್ಡಾ ಹೊಳೆಯನ್ನು ನಮ್ಮ ಜಮೀನಿನ ಕೂಡಿಗೆ ಎಂಬುವಲ್ಲಿ ಕೂಡುತ್ತದೆ. ಕಿರುಹೊಳೆ ಕೆಸುಗೋಡು ಮುಂಡುಗಾರು, ಅಡಿಕೇಸು, ಅಂಚಿನಕೊಡುಗೆ, ಎಡಗುಂದ ಮುಂತಾದ ಬೃಹತ್ ಅರಣ್ಯಗಳಿಂದ ಕೂಡಿರುವ ಗುಡ್ಡಗಳಲ್ಲಿ ಹುಟ್ಟುವ ಜಲಮೂಲಗಳೆಲ್ಲ ಒಟ್ಟಾಗಿ ಝರಿ, ಸರ್ಲು, ಅಡೆಹಳ್ಳ, ಹಳ್ಳ, ಗೀಗೆ ಹಳ್ಳಗಳಲ್ಲಿ ಸೇರಿ ಕಿರುಹೊಳೆಯಾಗಿ ಈ ದೊಡ್ಡಹೊಳೆಗೆ ಸೇರುತ್ತವೆ. ನಮ್ಮ ಹೊಳೆಯಲ್ಲಿ ಕೆಲವು ಮಿಲಿ ಮೀಟರ್ ಉದ್ದದ ಒಂದು ಗ್ರಾಂ ನಿಂದ ಹಿಡಿದು ಒಂದು ಕ್ವಿಂಟಾಲ್ ತೂಗುವ ಅನೇಕ ಜಾತಿಯ ಮೀನುಗಳಿವೆ. ನಮ್ಮೂರಿಗೆ ಹರಿದು ಬರುವ ನದಿಯ ಅಕ್ಕಪಕ್ಕ ಯಾವುದೇ ದೊಡ್ಡಾ ಪೇಟೆ ಪಟ್ಟಣಗಳು ಇಲ್ಲದುದ್ದರಿಂದ ನಮ್ಮ ಹೊಳೆಯ ನೀರು ನಿರ್ಮಲವಾಗಿಯೂ, ಸ್ಪಟಿಕವಾಗಿಯೂ ಶುದ್ಧವಾಗಿಯೂ, ಇರುತ್ತದೆ. ನಮ್ಮ ಹೊಳೆಯ ಗುಂಡಿಗಳನ್ನು ಹತ್ತು ಇಪ್ಪತ್ತು ಅಡಿ ಆಳವನ್ನು ಮೇಲಿನಿಂದಲೇ ನಿಂತು ತಳವನ್ನು ನೋಡಬಹುದು. ನಮ್ಮ ಹೊಳೆಯಲ್ಲಿ ಮೂವತ್ತು ನಲವತ್ತು ಅಥವಾ ಅದಕ್ಕಿಂತ ಹೆಚ್ಚು ಆಳದ ಗುಂಡಿಗಳಿವೆ. ಕೆಲವು ಕಡೆ ಹಾಸು ಬಂಡೆಗಳಿದ್ದು ಅಂತಲ್ಲಿ ಅಬ್ಬಿಗಳು ಏರ್ಪಟ್ಟಿವೆ. ಅಂತಹ ಅಬ್ಬಿಗಳಿರುವ ತಿರುವುಗಳಿರುವ ಕಡೆಯಲ್ಲೆಲ್ಲ ಆಳದ ಗುಂಡಿಗಳಿರುತ್ತವೆ. ಒಂದು ಆಳದ ಗುಂಡಿಯಾದ ನಂತರ ಮತ್ತೊಂದು ಕಡ್ಲು ಎಂದು ಹೇಳುವ ಬೇಸಿಗೆಯಲ್ಲಿ ಮನುಷ್ಯರು, ಪ್ರಾಣಿಗಳು, ಜಾನುವಾರುಗಳು ದಾಟಾಡುವ ಕಡಿಮೆ ಆಳದ ರಭಸವಾಗಿ ನೀರು ಹರಿಯುವ ಕಡ್ಲುಗಳು ಇರುತ್ತವೆ. ನಮ್ಮ ಹೊಳೆಯ ಆಳದ ಗುಂಡಿಗಳೆಲ್ಲ ಬಂಡೆಗಳಂತೆಯೇ ಯಾವುದೋ ಶತಮಾನದಲ್ಲಿ ನೀರಿನಲ್ಲಿ ಮುಳುಗಿ ಹೋದ ಮರಗಳು ಇರುತ್ತವೆ. ಅಂತಹ ಭಾರವಾದ ಮರಗಳು ಮಳೆಗಾಲದ ಹೊಳೆಯ ನೀರಿನ ನೆರೆಯ ಹೊಡೆತಕ್ಕೂ ತೇಲಿಹೋಗುವುದಿಲ್ಲ. ಅವೆಲ್ಲ ಗಟ್ಟಿ ಮತ್ತು ತೂಕದ ಜಾತಿಗೆ ಸೇರಿದವುಗಳು. ಅವುಗಳು ಬಂಡೆಗಳಂತೆಯೇ ಮೀನು ಮತ್ತು ಇತರ ಜಲಚರಗಳಿಗೆ ಆವಾಸಸ್ಥಾನಗಳಾಗಿವೆ.

 ನಮ್ಮ ಅಪ್ಪಮೀನು ಶಿಕಾರಿಯಲ್ಲಿ ನಿಸ್ಸೀಮರು ಹಾಗಾಗಿ ನಮ್ಮ ಮನೆಯಲ್ಲಿ ಮಳೆಗಾಲದ ಮೂರು ತಿಂಗಳು ಅಂದರೆ ಆಗಸ್ಟ್, ಸೆಪ್ಟಂಬರ್, ಅಕ್ಟೋಬರ್ ಬಿಟ್ಟರೆ ಉಳಿದ ಒಂಬತ್ತು ತಿಂಗಳು ಮೀನಿನ ಸಾರು ತಪ್ಪುತ್ತಿರಲಿಲ್ಲ. ಅಕ್ಟೋಬರ್ ತಿಂಗಳಿಂದ ಹೊಳೆಯ ನೀರಿನ ಹರಿವು ಮಳೆಗಾಲ ಕಳೆದ ನಂತರ ಅರ್ಧಕ್ಕರ್ಧ ಕಡಿಮೆಯಾಗುತ್ತದೆ. ನೀರಿನ ಹರಿವು ಕಡಿಮೆಯಾಗುತ್ತಲ್ಲೆ ನಮ್ಮಪ್ಪ ದಿನವೂ ಸಂಜೆ ಕತ್ತಲಾಗುವ ಮುಂಚೆ ಯಾವುದಾದರೊಂದು ಗುಂಡಿಗೆ ಬಲೆ ಬಿಡುತ್ತಿದ್ದರು. ಅವರು ಬಲೆ ಬಿಡಲು ಹೋಗುವಾಗಲೆಲ್ಲ ಯಾರಾದರೂ ಒಬ್ಬರನ್ನು ಕರೆದುಕೊಂಡು ಹೋಗುವುದು ಪದ್ಧತಿ. ಅವರ ಕೊನೆಯ ಮಗನಾದ ನಾನು ನಮ್ಮಪ್ಪನೊಂದಿಗೆ ಬಲೆ ಬಿಡಲು ಬಹಳಷ್ಟು ಕಾಲ ಜೊತೆಗೆ ಹೋಗುತ್ತಿದುದ್ದುದುಂಟು. ನಮ್ಮಪ್ಪಹೊಳೆ ಬುರುಡೆ ಎನ್ನುವ ಸಾಧನ ಮಾಡಿಕೊಂಡಿದ್ದರು. ಅದು ಹಗ್ಗದ ಸಿಕ್ಕದಲ್ಲಿ ಎರಡು ಸೋರೆ ಬುರುಡೆಗಳನ್ನು ಹಿಂದುಗಡೆಗೂ ಮತ್ತು ಮುಂದುಗಡೆಗೆ ಸೀಲು ಮಾಡಿದ ಡಬ್ಬಿ. ಇವೆರಡನ್ನೂ ಕತ್ತದ ಸಿಕ್ಕದಲ್ಲಿ ಬಿಗಿದು ಮಧ್ಯದಲ್ಲಿ ಕುಳಿತು ಕಾಲಿನಿಂದ ಮಾತ್ರ ಈಜುವುದು. ಈ ಸೋರೆ ಬುರುಡೆ ಮತ್ತು ಡಬ್ಬಿ ಯಾವ ಕಾರಣಕ್ಕೂ ಮುಳುಗದೆ ಕ್ವಿಂಟಾಲು ಭಾರವನ್ನು ತೇಲಿಸುತ್ತಿದ್ದವು. ಹೊಳೆಯಲ್ಲಿ ಬುರುಡೆ ಬಿಡುವವರಿಗೆ ಪರಿಣಿತಿ ಇರಬೇಕು. ಗೊತ್ತಿದ್ದವರು ಎಂಥಾ ಆಳದ ಗುಂಡಿ ಇರಲಿ ಎಷ್ಟೇ ರಭಸದ ನೀರಿರಲಿ, ಸುಳಿ ಇರಲಿ ಏನೇ ಇರಲಿ ಅಲ್ಲಿ ಸರಾಗವಾಗಿ ಬುರುಡೆಯ ಸಹಾಯದಿಂದ ಹೋಗಬಹುದು. ಬುರುಡೆ ಬಿಡುವವರು ಸೊಂಟದ ಮೇಲೆ ಮಾತ್ರ ನೀರಿನ ಮೇಲಿರುತ್ತಾರೆ. ಕಾಲಿನಿಂದ ಈಜಿ ಮುಂದಕ್ಕೆ ಹೋಗುವಂತೆ ಕೈಯಿಂದ ಏನು ಬೇಕಾದರೂ ನೀರಿನ ಮೇಲೆ ಕಸರತ್ತು ಮಾಡಬಹುದು. ಪರಿಣಿತಿ ಇಲ್ಲದೇ ಬುರುಡೆ ಬಿಡಲು ಹೋದರೆ ನೀರೊಳಗೆ ತಲೆ ಕಾಲು ಮೇಲಾಗುತ್ತದೆ. ಆದ್ದರಿಂದ ಅದು ಅಷ್ಟೇ ಅಪಾಯಕಾರಿ. ಅದು ಗೊತ್ತಿಲ್ಲದವರ ಸಾಧನವಲ್ಲ ನಮ್ಮಪ್ಪ ಹೊಳೆಯ ನೀರಿನಲ್ಲಿ ಸರಾಗವಾಗಿ ಬುರುಡೆ ಬಿಡುತ್ತಿದ್ದುದರಿಂದ ನಮ್ಮೂರಲ್ಲಿ ಬಲೆ ಹಾಕಿ ಮೀನು ಹಿಡಿಯುವುದರಲ್ಲಿ ಖ್ಯಾತಿಯಾಗಿದ್ದರು. ಬುರುಡೆಯಲ್ಲಿ ಹೋಗಿ ಬಲೆಯಾಕುವುದು ಇನ್ನೂ ಅಪಾಯಕಾರಿ ಏಕೆಂದರೆ ಕಾಲಿನಲ್ಲಿ ಈಜುವಾಗ ತಾವೇ ನೀರಿನಲ್ಲಿ ಹಾಕಿದ ಬಲೆ ತಮ್ಮದೇ ಬೆರಳಿಗೆ, ಕಾಲಿಗೆ ಸುತ್ತಿಹಾಕಿಕೊಳ್ಳುವ ಸಾಧ್ಯತೆ ಇರುತ್ತದೆ. ಈ ರೀತಿಯಾಗಿ ಜೀವಕಳೆದುಕೊಂಡ ಕೆಲವು ಉದಾಹರಣೆಗಳು ಇವೆ.

ನಮ್ಮಪ್ಪನಿಗೂ ಮೀನು ಹಿಡಿಯುವ ಜಾತಿಯ ತಿಳ್ಯಕ್ಯಾತರಿಗೂ ಅವಿನವಾಭಾವ ಸಂಬಂಧ. ತಿಳ್ಯಾಕ್ಯಾತರು ಭದ್ರಾ ಅಣೆಕಟ್ಟೆಯ ಹಿನ್ನೀರಿನ ಲಕ್ಕುವಳ್ಳಿಯಿಂದ ವರ್ಷಕ್ಕೊಮ್ಮೆ ನಮ್ಮೂರಿಗೆ ಬರುತ್ತಿದ್ದರು. ಅದು ನಮ್ಮೂರಿನ ಶಿವರಾತ್ರಿಯ ಸೀಮೆ ಜಾತ್ರೆಗೆ. ಶಿವರಾತ್ರಿಗೆ ಬಂದವರು ಕಿಗ್ಗಾ ಸೀಮೆಯ ಸೀಮೆ ಜಾತ್ರೆ ಯುಗಾದಿ ಕಳೆದು ಒಂದು ವಾರಕ್ಕೆ. ಅಲ್ಲಿಯವರೆಗೂ ನಮ್ಮ ಹೊಳೆಯನ್ನು ಉದ್ದಾನುದ್ದಕ್ಕೆ ಬಲೆ ಹಾಕಿ ಮೀನು ಹಿಡಿಯುತ್ತಿದ್ದರು. ಅವರು ನಮ್ಮ ಕಡೆ ಬಂದಾಗಲೆಲ್ಲ ನಮ್ಮ ಮನೆಯಲ್ಲೇ ಅವರ ಕ್ಯಾಂಪ್. ತಿಳ್ಯಾಕ್ಯಾತ ಅಜ್ಜಿಯರು ನಮ್ಮಮ್ಮನಂತಹ ಹೆಂಗಸರಿಗೆ ಹಚ್ಚೆಕುಚ್ಚುತ್ತಿದ್ದರು. ಹರಳೆಣ್ಣೆ ದೀಪದ ಕರಿಯನ್ನು ಅವರ ಸೂಜಿಗೆ ಅದ್ದಿ ಅದ್ದಿ ಚಿತ್ರ ಬಿಡಿಸುತ್ತಿದ್ದರು. ನೋವು ತಡೆದುಕೊಳ್ಳುವವರು ಹಚ್ಚೆಯ ಆಸೆ ಇರುವವರು ಮುಂಗೈ, ಮೊಣಕೈ, ತೋಳು, ಅಲ್ಲಿಗೆಲ್ಲ ನಾನಾತರಹದ ಚಿತ್ರಗಳನ್ನು ಬಿಡಿಸಿಕೊಳ್ಳುತ್ತಿದ್ದರು. ಆ ಚಿತ್ರಗಳು ಅವರ ಜೀವನ ಪರ್ಯಂತ ಇದ್ದು ಅವರೊಂದಿಗೆ ಕೊನೆಯಾಗುತ್ತಿದ್ದವು. ಹಚ್ಚೆ ಕುಚ್ಚಿಸಿಕೊಳ್ಳುವವರಿಗೆ ನೋವು ಮರೆಸಲು ರಾಗವಾಗಿ ಹಾಡು ಹಾಡುತ್ತಿದ್ದರು. ಹಚ್ಚೆ ಕುಚ್ಚಿಸಿಕೊಳ್ಳಲು ಹೆದರುವ ಹೆಂಗಸರಿಗೆ ಹಣೆಗೆ ಮಾತ್ರ ನಾಮ ಇಟ್ಟುಕೊಳ್ಳುವಷ್ಟು ಜಾಗಕ್ಕೆ ಹಚ್ಚೆ ಕುಚ್ಚುತ್ತಿದ್ದರು. ಹಚ್ಚೆಕುಚ್ಚಿ ಒಂದಷ್ಟು ಊಟಕ್ಕೆ ಅಕ್ಕಿಯನ್ನು ಸಂಪಾದಿಸುತ್ತಿದ್ದರು ಅವರ ಹೆಂಗಸರು. ಅವರಿಗೆ ಹಚ್ಚೆಕುಚ್ಚುವುದು ಬಿಟ್ಟರೆ ಬಲೆ ನೇಯುವುದು ಮಾತ್ರ ಗೊತ್ತು. ಅವರು ಸೆಣಬು ಮತ್ತು ಹತ್ತಿಯಿಂದ ನೂಲನ್ನು ತಯಾರಿಸಿ ಅವುಗಳಿಂದ ಅಳತೆಗೆ ಸರಿಯಾಗಿ ಬಲೆ ನೇಯುತ್ತಿದ್ದರು. ಬಲೆಯ ಕಣ್ಣಿಗೆ ನಿರ್ದಿಷ್ಟವಾದ ಅಳೆತೆ ಇದೆ. ಸಣ್ಣ ಚರುವು ಮೀನು ಬಿಟ್ಟರೆ ಸೋಸಲಿಗೆ ಒಂದು ಬೆರಳು. ಅದಕ್ಕಿಂದ ಸ್ವಲ್ಪದೊಡ್ಡ ಮೀನಿಗೆ ಎರಡು ಬೆರಳು, ಮೂರು ಬೆರಳು, ಆರು ಬೆರಳು, ಎಂಟು ಬೆರಳಿನಷ್ಟು ದೊಡ್ಡ ಕಂಡಿಗಳಿರುವಂತೆ ಬಲೆಯನ್ನು ಹಣೆಯುತ್ತಾರೆ ಬಲೆ ಸಾಮಾನ್ಯವಾಗಿ ಮೂರರಿಂದ ನಾಲ್ಕು ಅಡಿ ಅಗಲ ಮೂವತ್ತರಿಂದ ಐವತ್ತು ಅಡಿ ಉದ್ಧ ಇರುತ್ತಿದ್ದವು. ಬಲೆಯ ಕೆಳಗಡೆ ಮಣ್ಣಿನಿಂದ ತಯಾರಿಸಿದ ಮಣಿಗಳನ್ನು ಪ್ರತಿ ಕಣ್ಣಿಗೂ ಸೇರಿಸಲಾಗುತ್ತದೆ. ಈ ಮಣ್ಣಿನ ಮಣಿಗಳು ತೂಕವಾಗಿದ್ದು ಅದು ಬಲೆ ನೀರಿನಲ್ಲಿ ಮುಳುಗಿರಲು ಸಹಾಯ ಮಾಡುತ್ತದೆ. ಅಂತೆಯೇ ಆದರೆ ಇನ್ನೊಂದು ಬಲೆಗೆ ಒಂದು ಬಗ್ಗುಹುರಿ ಎನ್ನುವ ದಪ್ಪದ ದಾರಕ್ಕೆ ಒಂದು ಹುಲ್ಲಿನ ಜಾತಿಗೆ ಸೇರಿದ ಒಳಗಡೆ ತೂತು ಇರುವ ಬೆಂಡಿನಂತಹ ಕಡ್ಡಿಗಳನ್ನು ಬೊಗ್ಗುಹುರಿಗೆ ಪೋಣಿಸಲಾಗುತ್ತದೆ. ಇದು ಬಲೆಯ ನೆತ್ತಿಯಲ್ಲಿರುತ್ತದೆ. ಅದು ಬಲೆಯನ್ನು ನೀರಿನಲ್ಲಿ ತೇಲುವಂತೆ ಮಾಡುತ್ತದೆ. ಒಟ್ಟಿನಲ್ಲಿ ನೀರಿನಲ್ಲಿ ಬಲೆ ಬೇಲಿಯಂತೆ ಅಡ್ಡಡ್ಡ ನಿಂತಿರುತ್ತದೆ. ಹುಲ್ಲಿನ ಬೆಂಡುಗಳು ಬಲೆಯನ್ನು ನೀರಿನಲ್ಲಿ ಮುಳುಗಲು ಬಿಡುವುದಿಲ್ಲ. ಮಣ್ಣಿನ ಮಣಿಗಳು ತೇಲಲು ಬಿಡುವುದಿಲ್ಲ. ಇದರಿಂದ ಬಲೆಯ ಕಣ್ಣಿನ ಅಳತೆಯ ಮೀನುಗಳು ಬಲೆಯ ಆಚೆ ಈಚೆ ಓಡಾಡುವಾಗ ಮೂತಿ ತೂರಿಸಿ ಸಿಕ್ಕಿ ಹಾಕಿಕೊಳ್ಳುತ್ತವೆ.

    ಮೀನುಗಳು ಎಲ್ಲಾ ಪ್ರಾಣಿಗಳಂತೆ ಸಂಜೆ ಮತ್ತು ಬೆಳಗಿನ ಜಾವ ಹೆಚ್ಚು ಚಟುವಟಿಕೆಯಿಂದ ಇರುತ್ತವೆ. ಚಳಿಗಾಲದ ರಾತ್ರಿಯಲ್ಲಿ ಬೆಚ್ಚಗಿನ ಕಡಿಮೆ ನೀರಿರುವ ಜಾಗಕ್ಕೆ ಬರುತ್ತವೆ. ರಾತ್ರಿ ಓಡಾಟ ಅಷ್ಟಾಗಿ ಇರುವುದಿಲ್ಲ. ಮಳೆಗಾಲ ಕಳೆದು ನೀರಿನ ಹರಿವು ಕಡಿಮೆಯಾದೆಂತೆಲ್ಲ ಅವುಗಳಿಗೆ ಆಮ್ಲಜನಕದ ಕೊರತೆಯಾಗಿ ಉಸಿರಾಟಕ್ಕೆ ತೊಂದರೆಯಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಆಳದ ಗುಂಡಿಗಳಿಂದ ಕಡಿಮೆ ನೀರಿರುವ ತೀರದ ಪ್ರದೇಶಕ್ಕೆ ಮತ್ತು ಅಬ್ಬಿಗಳಿರುವ ಪ್ರದೇಶಕ್ಕೆ ಹೋಗುತ್ತವೆ. ಏಕೆಂದರೆ ಅಬ್ಬಿಗಳಲ್ಲಿ ನೀರು ಮೇಲಿಂದ ಕೆಳಗೆ ಬೀಳುವಾಗ ಗಾಳಿಯೊಂದಿಗೆ ಸೇರಿ ಗಾಳಿಯಲ್ಲಿರುವ ಆಮ್ಲಜನಕವನ್ನು ನೀರಿನಲ್ಲಿ ಕರಗುತ್ತದೆ. ಸಿಹಿನೀರಿನ ನಮ್ಮ ಹೊಳೆಯಲ್ಲಿರುವ ಮೀನುಗಳಲ್ಲಿ ಹೆಚ್ಚಿನವೂ ಶುದ್ಧ ತಿಳಿನೀರಿನೊಂದಿಗೆ ಆಮ್ಲಜನಕ ಹೆಚ್ಚು ಕರಗಿಸಿಕೊಳ್ಳುವ ಶಕ್ತಿ ಇರುವ ನೀರಿನಲ್ಲಿ ವಾಸಮಾಡುವಂತಹವುಗಳೇ. ಪಶ್ಚಿಮ ಘಟ್ಟದ ನಮ್ಮ ಮಲೆನಾಡಿನ ಎಲ್ಲ ಗುಡ್ಡಗಳಿಂದ ಹುಟ್ಟಿ ಹರಿಯುವ ನದಿ, ತೊರೆ, ಝರಿಗಳೆಲ್ಲವೂ ಸಾವಿರಾರು ಅಡಿ ಎತ್ತರದಿಂದ ತಗ್ಗಿಗೆ ಧುಮುಕುತ್ತಾ ಸಾಗುತ್ತವೆ. ಈ ಕಾರಣದಿಂದ ನಮ್ಮ ಹೊಳೆಗಳಲ್ಲಿ ಆಮ್ಲಜನಕದ ಪ್ರಮಾಣ ಜಾಸ್ತಿ ಇರುತ್ತದೆ. ಅದು ಶೇಕಡಾ ಹದಿನಾಲ್ಕು ಮಿಲಿ ಲೀಟರ್‌ಮನಷ್ಟು ಆಮ್ಲಜನಕ ನಮ್ಮ ನೀರಿನಲ್ಲಿರುತ್ತದೆ. ಆ ಕಾರಣದಿಂದಲೇ ನಮ್ಮ ಹೊಳೆಗಳ ನೀರು ಸಿಹಿಯಾಗಿದ್ದು ತುಂಗಾ ಪಾನ ಗಂಗಾ ಸ್ನಾನ ಎನ್ನುವ ಗಾದೆ ಮಾತಿಗೆ ಕಾರಣವಾಗಿದೆ. ಇಂತಹ ಆಮ್ಲಜನಕ ಹೆಚ್ಚು ಕರಗಿಸಿಕೊಳ್ಳುವ ಶಕ್ತಿ ಇರುವ ನೀರುಗಳಲ್ಲಿ ಮಾತ್ರ ಬದುಕುವಂತಹ ಕೆಲವೇ ಜಾತಿ ಮೀನುಗಳು ನಮ್ಮಲ್ಲಿವೆ. ಈ ಮೀನುಗಳು ಹಿಮಾಲಯ ಪರ್ವತದಿಂದ ಹುಟ್ಟಿ ಹರಿಯುವ ಕೆಲವು ನದಿಗಳಲ್ಲಿ ಉದಾಹರಣೆಗೆ ಬ್ರಹ್ಮಪುತ್ರ ನದಿ ಸೇರುವ ಗಂಡಕೀ ನದಿ. ಆ ನದಿಯಲ್ಲೂ ಕೂಡ ಇದೇ ರೀತಿಯ ಆಮ್ಲಜನದ ಪ್ರಮಾಣ ಹೆಚ್ಚಿರುವುದು ಮತ್ತು ಈ ಹೊಳೆಯಲ್ಲಿರುವ ಅಪರೂಪದ ಮೀನುಗಳಲ್ಲಿ ಕೆಲವು ಜಾತಿಯ ಮೀನುಗಳು ಅಲ್ಲಿಯೂ ಕಂಡುಬರುವುದಾಗಿ ಸಂಶೋಧಕರು ತಿಳಿಸಿದ್ದಾರೆ.ನಮ್ಮ ಹೊಳೆಗಳಲ್ಲಿರುವ ಮೀನುಗಳಲ್ಲಿ ಮೂರು ನಮೂನೆಯ ಮೀನುಗಳನ್ನು ಗುರುತಿಸಬಹುದು. ಅವುಗಳಲ್ಲಿ ಮೈಮೇಲೆ ಹೆರಜಲು ಇಲ್ಲದ ಮರುಗುಂಡ, ತೊಳ್ಳೆಮೀನು, ಹಿಮಗಲು ಮೀನು ಇತ್ಯಾದಿ. ಇನ್ನು ಸಣ್ಣದಾಗಿ ಹೆರಜಲಿರುವ ಸುರಿಗೆಮೀನು, ಸೂಜಿಮೀನು, ಗೊಜಳೆ, ಹಾರ್ಸಿಡಿ ಇತ್ಯಾದಿ. ಇನ್ನು ಸಾಮಾನ್ಯದಿಂದ ದೊಡ್ಡ ಗಾತ್ರದ ಹೆರಜಲಿರುವ ದೊಡ್ಡದೊಡ್ಡ ಜಾತಿಯ ಮೀನುಗಳಾದ ಹಳ್ಳು, ಕರ್ಸೆ, ಕಡ್ಲ್ಹೆಡೆ ಇತ್ಯಾದಿ. ಈ ಹೆರಜಲಿನಂತೆ ಮೀನಿನ ಮೂಳೆಗಳಾದ ಮೀನುಮುಳ್ಳುಗಳಲ್ಲಿಯೂ ಹೆಚ್ಚು ಮುಳ್ಳಿರುವ, ಕಡಿಮೆ ಮುಳ್ಳಿರುವವುಗಳೆಂದು ವಿಭಾಗಿಸಬಹುದು. ಬಹುತೇಕ ಮೀನುಗಳು ಮಳೆ ಹತ್ತುವ ಮುಂಗಾರುಮಳೆಯ ಪ್ರಾರಂಭದ ದಿನಗಳಲ್ಲಿ ಬೆದೆಯಾಡಿ ನೆರೆಯ ನೀರಲ್ಲಿ ಮೊಟ್ಟೆ ಇಡುತ್ತವೆ. ನೆರೆಯ ನೀರೆಂದರೆ ವಿಪರೀತವಾಗಿ ಗಟ್ಟದ ಗುಡ್ಡಗಳಲ್ಲಿ ಮತ್ತು ಅಚ್ಚುಕಟ್ಟಿನ ಪ್ರದೇಶಗಳಲ್ಲಿ ಅತಿಯಾಗಿ ಮಳೆ ಸುರಿದರೆ ಹೊಳೆಯ ಪಾತ್ರವೆಲ್ಲ ತುಂಬಿ ಅಕ್ಕಪಕ್ಕದ ಗದ್ದೆ ಬಯಲುಗಳಂತೆ ಪ್ರದೇಶಗಳಿಗೆ ನೀರು ನುಗ್ಗುತ್ತದೆ. ದೊಡ್ಡ ಹೊಳೆಯಲ್ಲಿ ನೀರು ಹೆಚ್ಚು ಬಂದರೆ ಕಿರುಹೊಳೆ ಹಳ್ಳಗಳ ನೀರನ್ನು ಸೇರಿಸಿಕೊಂಡು ಹರಿಯದೆ ಅಡ್ಡಗಟ್ಟಿ ನಿಲ್ಲಿಸುತ್ತದೆ. ಹೀಗಾದಾಗ ಗದ್ದೆ ಬಯಲುಗಳೆಲ್ಲ ತುಂಬಿ ಹೊಳೆ ಸಮುದ್ರವೇ ಆಗಿಬಿಡುತ್ತದೆ. ಈ ನೆರೆ ಹೊಳೆಯ ಅವಕಾಶವನ್ನು ಬಳಸಿಕೊಂಡು ಹೊಳೆಯಲ್ಲಿರುವ ಮೀನುಗಳೆಲ್ಲ ನೀರಿನ ಹೊಡೆತ ಕಡಿಮೆ ಇರುವ ಬದಿಗೆ ಸರಿಯುತ್ತವೆ. ಇನ್ನು ಬೆದೆಯಾಡಿ ಮೊಟ್ಟೆ ಇಡಬೇಕಾದ ಮೀನುಗಳು ಗದ್ದೆ ಬಯಲಿನ ಕಡಿಮೆ ನೀರಿರುವ ಹೊಡೆತವಿಲ್ಲದ ನಿಂತ ನೀರಿನಲ್ಲಿ ಇರುವ ಹುಲ್ಲು, ಕಸ ಇತ್ಯಾದಿಗಳಿಗೆ ತಮ್ಮ ಮೊಟ್ಟೆಗಳನ್ನು ಅಂಟಿಸಿ ಮರಿಯಾಗುವಂತೆ ಮಾಡುತ್ತವೆ. ನೆರೆ ಬಂದಾಗ ಗದ್ದೆ ಬಯಲುಗಳಿಗೆ ಬರುವ ಮೀನುಗಳಿಗೆ ಹತ್ತು ಮೀನು ಎಂದು ಕರೆಯುತ್ತಾರೆ. ಈ ಮೀನುಗಳು ಒಂದು ಹೆಣ್ಣು ಮೀನಿನ ಹಿಂದೆ ಹತ್ತಾರು ಗಂಡು ಮೀನುಗಳು ಜಡೆಗಟ್ಟಿ ತಮ್ಮ ವಂಶಾಭಿವೃದ್ಧಿ ಚಟುವಟಿಕೆಯನ್ನು ಮಾಡಲು ಪೈಪೋಟಿ ಮಾಡುತ್ತವೆ. ಬೆದೆಗೆ ಮೀನುಗಳು ತಮಗೆ ಎದುರಾಗುವ ಅಪಾಯಗಳನ್ನು ಲೆಕ್ಕಿಸದೇ ಮುನ್ನುಗ್ಗುತ್ತವೆ. ಈ ಹತ್ತು ಮೀನುಗಳಿಗೆ ನೆತ್ತಿಕಂಡಿ ಅನ್ನುವ ಮಾತಿದೆ. ಅಂದರೆ ಅವು ನೀರಿನ ಮೇಲೆ ಮೇಲೆಯೇ ಹಾರುತ್ತವೆ. ಇಂತಹ ಮೀನುಗಳನ್ನು ಶಿಕಾರಿ ಮಾಡಲು ಬೋನುಗಳಂತಿರುವ ಕೂಳಿ ಎಂದು ಕರೆಯುವ ಒಂದು ಮೀನು ಹಿಡಿಯುವ ಸಾಧನವನ್ನು ಮಾಡಿಕೊಂಡಿರುತ್ತಾರೆ. ಬೇಸಿಗೆಯಲ್ಲಿ ಚಿಮ್ಮೆಕಣೆ, ಗೂಟಕದಕಣೆ, ಮುಂತಾದ ಕಡ್ಡಿಗಳನ್ನು ಕೊಳಗೀಬೀಳು ಎನ್ನುವ ಮೃದುವಾಗಿ ಬಾಡಿಸಿದ ಬಳ್ಳಿಯಿಂದ ಹಣೆದು ಅಟ್ಟೇಬೀಳು ಎಂಬ ಗಟ್ಟಿಯಾದ ಬೀಳಿನಿಂದ ಕೂಳಿಗೆ ಮುಂದುಗಡೆ ಬಾಯಿ ಹಿಂದಿನ ಕೂಡಿ ಎರಡನ್ನು ಪ್ರತ್ಯೇಕವಾಗಿ ಹಣೆದು ಅಟ್ಟೇಬೀಳಿನಿಂದ ಅದನ್ನು ಬೋನಿನಂತೆ ಕಟ್ಟಿ ವಿನ್ಯಾಸಗೊಳಿಸುತ್ತಾರೆ. ಗೂಟಕದಕಣೆ ಚಿಮ್ಮೆಕಣ್ಯಲ್ಲಿ ಕಟ್ಟುವ ಕೂಳಿಯನ್ನು ಸಣ್ಣ ಮತ್ತು ದೊಡ್ಡ ಹಳ್ಳಗಳಿಗೆ ಮಾತ್ರ ಮೀನು ಹಿಡಿಯಲು ಬಳಸುತ್ತಾರೆ. ಹೊಳೆಯಲ್ಲೂ ಕೆಲವುಕಡೆ ಉದ್ಧಾನುದ್ಧಕ್ಕೆ ಬಂಡೆ ಇದ್ದು ಅದರ ಬದಿಯಲ್ಲೂ ಕೆಲವು ಕೂಳಿಗಂಡಿಗಳು ಇರುತ್ತವೆ. ಹೊಳೆಗಳಿಗೆ ಹಾಕುವ ಕೂಳಿ ದೊಡ್ಡದಾಗಿದ್ದು ಅದನ್ನು ಘಟ್ಟದ ಗುಡ್ಡಗಳಲ್ಲಿ ಸಿಕ್ಕುವ ಅಡಿಕೆ ಜಾತಿಗೆ ಸೇರಿದ ಅಡಿಕೆ ಮರದಂತೆಯೇ ಸಣ್ಣಗರಿಗಳನ್ನು ಹೊಂದಿರುವ ಜೆಂಜಿರಿಗೆ ಎನ್ನುವ ಕಾಡಿನ ಒಂದು ಪಾಮ್ ಜಾತಿಗೆ ಸೇರಿದ ಗಿಡದಿಂದ ತಯಾರಿಸುತ್ತಾರೆ. ಇಂತಹ ಕೂಳಿಗಳನ್ನು ನಾನು ಊರಿನಲ್ಲಿರುವಷ್ಟು ವರ್ಷಗಳಲ್ಲಿ ಸದಾ ಬೇಸಿಗೆಯಲ್ಲಿ ತಯಾರಿಸಿ ಇಟ್ಟುಕೊಳ್ಳುತ್ತಿದ್ದೆವು. ಕೂಳಿಗಳನ್ನು ಅಡೆ ಹಳ್ಳ ಅಥವಾ ದೊಡ್ಡ ಹಳ್ಳ ಈ ರೀತಿಯ ಹಳ್ಳಗಳ ನೀರಿನ ಹರಿವಿಗೆ ಹಿಮ್ಮುಖವಾಗಿ ಇಡಲಾಗುತ್ತದೆ. ಇಡೀ ಹಳ್ಳಕ್ಕೆ ಬೇಲಿಯ ಒಡ್ಡಿನಂತೆ ಕಂಬಗಳನ್ನು ದೃಢವಾಗಿ ನೆಟ್ಟು ಅವುಗಳಿಗೆ ಅಡ್ಡ ತೋಳನ್ನೊಂದನ್ನು ಹಾಕಿ ಅದಕ್ಕೆ ಲಕ್ಕಿ ಸೊಪ್ಪಿನ ದಡಿಗಳನ್ನು ನೀರು ಮಾತ್ರ ಸೋಸಿ ಹೋಗುವಂತೆ ಹತ್ತಿ ಬರುವ ಮೀನುಗಳೆಲ್ಲ ಕೂಳಿಯ ಬಾಯೊಳಗೇ ಬರುವಂತೆ ಹಳ್ಳದ ನೀರೆಲ್ಲ ಕೂಳಿಯ ಬಾಯಿಯಲ್ಲೇ ಹರಿಯುವಂತೆ ಮಾಡಲಾಗುತ್ತದೆ. ಕೂಳಿಗಳು ನೀರಿನಿಂದ ಮೇಲೆ ಎದ್ದು ತೇಲದಂತೆ ಅವುಗಳ ಬೆನ್ನುಗಳ ಮೇಲೆ ಭಾರವಾದ ಕಲ್ಲುಗಳನ್ನು ಏರಬೇಕು. ಇಷ್ಟೆಲ್ಲಾ ಮಾಡಿ ತಟ್ಟಿಯಂತೆ ಕೂಳಿಗಂಡಿಯನ್ನು ಹಣೆದರೂ ಒಂದು ಹಳ್ಳಕ್ಕೆ ಹತ್ತಾರು ಕಡೆ ಈ ರೀತಿಯ ಅಡ್ಡಗಂಡಿಗಳನ್ನು ಮಾಡಿ ಕೂಳಿಯನ್ನು ಹಾಕಿದ್ದರೂ ಆ ಎಲ್ಲ ತಡೆಗಳನ್ನು ದಾಟಿ ಗದ್ದೆ ಬಯಲಿಗೆ ಮೀನುಗಳು ತಲುಪುವುದು ವಿಸ್ಮಯ. ಹೊಳೆಯಿಂದ ಹತ್ತಿ ಬರುವ ಹತ್ತಿಪ್ಪತ್ತು ಭಾಗ ಮೀನುಗಳು ಕೂಳಿಯಲ್ಲಿ ಸಿಕ್ಕಿಹಾಕಿಕೊಂಡು ಶಿಕಾರಿಯಾಗಬಹುದು. ನೂರಕ್ಕೆ ಎಂಬತ್ತರಷ್ಟು ಹೇಗಾದರು ಮಾಡಿ ಗದ್ದೆ ಬಯಲನ್ನು ತಲುಪಿ ಬೆದೆಯಾಡಿ ಮತ್ತೆ ಹೊಳೆಗೆ ಮಳೆ ಕಡಿಮೆಯಾಗಿ ನೆರೆ ಇಳಿಯುತ್ತಿದ್ದಂತೆ ವಾಪಾಸು ಹೊಳೆಗೆ ಸೇರುತ್ತವೆ. ನಮ್ಮಲ್ಲಿ ಒಂದು ಮಾತಿದೆ, ಮೀನಿನ ಮೊಟ್ಟೆಯಲ್ಲವೂ ಮರಿಗಳಾದರೆ ಹೊಳೆಯಲ್ಲಿ ನೀರಿಗೇ ಜಾಗವಿಲ್ಲವಾಗುತ್ತದೆ ಎಂದು ಅಂದರೆ ಒಂದೊಂದು ಸಣ್ಣ ಸಣ್ಣ ಮೀನಿನಲ್ಲೂ ನೂರಾರು ಮೊಟ್ಟೆಗಳಿರುತ್ತವೆ. ಅವುಗಳೆಲ್ಲವೂ ಮರಿಗಳಾಗಲು ಸಾಧ್ಯವೂ ಇಲ್ಲ ಸಾಧುವೂ ಅಲ್ಲ. ಹತ್ತು ಮೀನಿಗೆ ನೆತ್ತಿಕಂಡಿ ಎಂಬ ಮಾತಿನ ಹಾಗೆ ಇಳಿಯುವ ಮೀನಿಗೆ ಬುಡದಕಂಡಿ ಎಂಬ ಮಾತಿದೆ. ಹೊಳೆಯ ನೆರೆ ಗದ್ದೆ ಬಯಲೆಲ್ಲ ತುಂಬಿ ಮೇಲ್ಮಳೆ ಕಡಿಮೆಯಾಗುತ್ತಿದ್ದಂಗೆ ಹೊಳೆ ಏರಿದಂತೆ ಇಳಿಯಲು ಪ್ರಾರಂಭವಾಗುತ್ತದೆ. ಹೊಳೆ ಇಳಿಯುವ ಸೂಚನೆ ಗೊತ್ತಾಗುತ್ತಿದ್ದಂತೆ ಬೆದೆಯಾಡಿದ ಮೀನುಗಳೆಲ್ಲ ಕಳ್ಳ ಮುಖುಮಾಡಿಕೊಂಡು ಸದ್ದಿಲ್ಲದೆ ಜಾರುತ್ತವೆ. ಹತ್ತುಮೀನು ಹಿಡಿದಷ್ಟು ಸುಲಭಕ್ಕೆ ಇಳಿಮೀನನ್ನು ಹಿಡಿಯಲು ಸಾಧ್ಯವಿಲ್ಲ. ಈ ಕಾರಣಕ್ಕಾಗಿ ಹತ್ತುಮೀನಿಗೆ ‘‘ನೆತ್ತಿಕಂಡಿಯಾದರೆ ಇಳಿಮೀನಿಗೆ ಬುಡದಕಂಡಿ.’’ ಎಂಬ ಗಾದೆ ಮಾತು ನಮ್ಮಲ್ಲಿ ಚಾಲ್ತಿಯಲ್ಲಿದೆ.

ಮೀನುಗಳು ಎಲ್ಲಾ ಪ್ರಾಣಿಗಳಂತೆ ಸಂಜೆ ಮತ್ತು ಬೆಳಗಿನ ಜಾವ ಹೆಚ್ಚು ಚಟುವಟಿಕೆಯಿಂದ ಇರುತ್ತವೆ. ಚಳಿಗಾಲದ ರಾತ್ರಿಯಲ್ಲಿ ಬೆಚ್ಚಗಿನ ಕಡಿಮೆ ನೀರಿರುವ ಜಾಗಕ್ಕೆ ಬರುತ್ತವೆ. ರಾತ್ರಿ ಓಡಾಟ ಅಷ್ಟಾಗಿ ಇರುವುದಿಲ್ಲ. ಮಳೆಗಾಲ ಕಳೆದು ನೀರಿನ ಹರಿವು ಕಡಿಮೆಯಾದೆಂತೆಲ್ಲ ಅವುಗಳಿಗೆ ಆಮ್ಲಜನಕದ ಕೊರತೆಯಾಗಿ ಉಸಿರಾಟಕ್ಕೆ ತೊಂದರೆಯಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಆಳದ ಗುಂಡಿಗಳಿಂದ ಕಡಿಮೆ ನೀರಿರುವ ತೀರದ ಪ್ರದೇಶಕ್ಕೆ ಮತ್ತು ಅಬ್ಬಿಗಳಿರುವ ಪ್ರದೇಶಕ್ಕೆ ಹೋಗುತ್ತವೆ.

Writer - ಕಲ್ಕುಳಿ ವಿಠಲ ಹೆಗ್ಗೆಡೆ

contributor

Editor - ಕಲ್ಕುಳಿ ವಿಠಲ ಹೆಗ್ಗೆಡೆ

contributor

Similar News