ಬೆಳ್ಳಂದೂರು ಗೇಟ್ ಬಳಿ ನಿರ್ಮಾಣ ಹಂತದ ಕಟ್ಟಡ ಕುಸಿತ:ಇಬ್ಬರ ಸಾವು , ನಾಲ್ವರ ರಕ್ಷಣೆ

Update: 2016-10-05 10:45 GMT

ಬೆಂಗಳೂರು, ಅ.5: ಇಲ್ಲಿನ  ಬೆಳ್ಳಂದೂರು ಗೇಟ್ ಬಳಿ ಐದು ಅಂತಸ್ತಿನ ನಿರ್ಮಾಣ ಹಂತದ ಕಟ್ಟಡವೊಂದು ಇಂದು ಮಧ್ಯಾಹ್ನ  ಕುಸಿದು ಬಿದ್ದ ಪರಿಣಾಮವಾಗಿ  ಇಬ್ಬರು  ಸಾವಿಗೀಡಾಗಿದ್ದು, ನಾಲ್ವರನ್ನು ರಕ್ಷಿಸಲಾಗಿದೆ.  ಇನ್ನೂ ಹಲವರು ಕಟ್ಡದ ಅವಶೇಷಗಳಡಿ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ. 8ಕ್ಕೂ ಹೆಚ್ಚು ಮಂದಿ ಅವಶೇಷಗಳಡಿಯಲ್ಲಿ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ.

ಇಬ್ಬರು ಕಟ್ಟಡದ ಅವಶೇಷಗಳಡಿ ಸಿಲುಕಿ ಸಾವಿಗೀಡಾಗಿದ್ದಾರೆ.ರಕ್ಷಿಸಲಾದ ನಾಲ್ವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳಪೆ ಕಾಮಗಾರಿಯೇ ಕಟ್ಟಡ ಕುಸಿದು ಬೀಳಲು ಕಾರಣವಾಗಿದೆ  ಎಂದು ಬೆಂಗಳೂರಿನ ಮೇಯರ್ ಜಿ.ಪದ್ಮಾವತಿ ತಿಳಿಸಿದ್ದಾರೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ ಕಟ್ಟಡ ಕುಸಿಯುವುದಕ್ಕೂ ಮುನ್ನ ದೊಡ್ಡ ಸ್ಫೋಟದ ಶಬ್ದ ಕೇಳಿ ಬಂತು ಎಂದು ತಿಳಿದುಬಂದಿದೆ. ಪ್ರಸ್ತುತ ಘಟನಾ ಸ್ಥಳಕ್ಕೆ ಮೂರು ಅಗ್ನಿ ಶಾಮಕ ದಳದ ವಾಹನಗಳು ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಪ್ರಾಥಮಿಕ ಮಾಹಿತಿ ಪ್ರಕಾರ ಕಟ್ಟಡದಲ್ಲಿ 20ಕ್ಕೂ ಅಧಿಕ ಕಾರ್ಮಿಕರು ಇದ್ದರು ಎಂದು ತಿಳಿದುಬಂದಿದೆ. ಪ್ರಸ್ತುತ ನಾಲ್ಕು ಮಂದಿಯನ್ನು ರಕ್ಷಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಗಾಯಾಳುಗಳನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಕುಸಿದು ಬಿದ್ದ ಕಟ್ಟಡ ಅದರ ಪಕ್ಕದಲ್ಲೇ ಇದ್ದ ಮತ್ತೊಂದು ಕಟ್ಟಡದ ಮೇಲೆ ಬಿದ್ದಿದ್ದು, ಆ ಕಟ್ಟಡಕ್ಕೂ ಕೂಡ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಕಟ್ಟಡದ ಮಾಲಕತ್ವದ ಕುರಿತು ಈ ವರೆಗೂ ಮಾಹಿತಿ ತಿಳಿದುಬಂದಿಲ್ಲವಾದರೂ, ಸ್ಥಳಕ್ಕೆ ದೌಡಾಯಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News