ರಾಜ್ಯದಲ್ಲಿ ಪಡಿತರ ಚೀಟಿ ವಿತರಣೆಗೆ ಹೊಸರೂಪ

Update: 2016-10-05 11:19 GMT

ಬೆಂಗಳೂರು, ಅ.5: ಪಡಿತರ ಕಾರ್ಡ್ ವಿತರಣೆಗೆ ಹೊಸ ರೂಪರೂಪ ನೀಡಲಾಗಿದ್ದು, ನೂತನ ಯೋಜನೆ 15 ದಿನಗಳಲ್ಲಿ ಜಾರಿಯಾಗಲಿದೆ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಖಾತೆ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ಪದ್ಧತಿಯಲ್ಲಿ ಕಾರ್ಡ್ ಪಡೆಯಲು ಕಿರಿಕಿರಿ ಇರುವುದಿಲ್ಲ.ರಾಜ್ಯದ ಯಾವುದೇ ಭಾಗದಲ್ಲಿ ಬೇಕಿದ್ದರೂ ಪಡಿತರ ಕಾರ್ಡ್ ಪಡೆಯಬಹುದು. ಹೊಸ ಪಡಿತರ ಚೀಟಿಗಾಗಿ ಮನೆ ನಂಬರ್, ವಿದ್ಯುತ್ ಬಿಲ್ ನೀಡುವ ಅವಶ್ಯಕತೆ ಇಲ್ಲ. ಕೇವಲ ಆಧಾರ್ ಕಾರ್ಡ್ ನೀಡಿದ್ರೆ ಪಡಿತರ ಕಾರ್ಡ್ ವಿತರಣೆಯಾಗಲಿದೆ. 15 ದಿನಗಳೊಳಗೆ ಹೊಸ ಯೋಜನೆ ಜಾರಿಯಾಗಲಿದೆ ಎಂದು ಹೇಳಿದರು.

ಪಡಿತರ ಚೀಟಿಯುಳ್ಳವರು ತಮ್ಮ ಮೊಬೈಲ್ ಸಂಖ್ಯೆಯನ್ನು ನೊಂದಾಯಿಸಿಕೊಳ್ಳಬೇಕು. ಬಹಳ ಗ್ರಾಹಕರು ಗೋಧಿಯ ಬದಲು ಅಕ್ಕಿ ಕೇಳಿರುವ ಹಿನ್ನಲೆಯಲ್ಲಿ ಪಡಿತರ ವಿತರಣೆಯ ವೇಳೆ ಗೋಧಿಯ ಬದಲು 5 ಕೆ.ಜಿ.  ಅಕ್ಕಿಯನ್ನು ನೀಡಲಾಗುವುದು. ಈ ಬಗ್ಗೆ ಎಲ್ಲ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಕೂಪನ್ ಸಂಖ್ಯೆ ಹೇಳಿದರೆ ಸಾಕು. ಪಡಿತರ ಅಂಗಡಿಯವರು ಪಡಿತರ ವಿತರಿಸಬೇಕು. ನೀಡದಿದ್ದ ಪಕ್ಷದಲ್ಲಿ ಆ ಪಡಿತರ ಅಂಗಡಿಯ ಲೈಸೆನ್ಸ್ ರದ್ದು  ಮಾಡಲಾಗುವುದು ಎಂದು ಹೇಳಿದರು.

ಆರೋಗ್ಯ ಇಲಾಖೆಯಲ್ಲಿ ಕಾಂಡೊಮ್ ಖರೀದಿ ಮತ್ತು ವಿತರಣೆಯಲ್ಲಿ ಅವ್ಯವಹಾರ ನಡೆದಿದೆ ಎನ್ನುವ ಆರೋಪದ ಕುರಿತು ಪ್ರತಿಕ್ರಿಯಿಸಿದ ಸಚಿವರು, ಈ ಬಗ್ಗೆ ಆರೋಗ್ಯ ಇಲಾಖೆಯ ಸಚಿವರಿಗೆ ಪತ್ರ ಬರೆಯಲು ನಿರ್ಧರಿಸಿರುವುದಾಗಿ ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News