×
Ad

ಕೇಂದ್ರತಂಡದಿಂದ ಕಾವೇರಿ ವಾಸ್ತವ ಸ್ಥಿತಿ ಅಧ್ಯಯನ ಆರಂಭ

Update: 2016-10-07 23:33 IST

ಮಂಡ್ಯ, ಅ.7: ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಕೇಂದ್ರ ಜಲ ಆಯೋಗದ ಅಧ್ಯಕ್ಷ ಜಿ.ಎಸ್.ಝಾ ನೇತೃತ್ವದ ಉನ್ನತ ಮಟ್ಟದ ತಾಂತ್ರಿಕ ತಂಡ ಶುಕ್ರವಾರ ಜಿಲ್ಲೆಯ ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಅಧ್ಯಯನ ಪ್ರವಾಸ ನಡೆಸಿತು.

ಮದ್ದೂರು, ಮಳವಳ್ಳಿ, ಪಾಂಡವಪುರ, ಶ್ರೀರಂಗಪಟ್ಟಣ ತಾಲೂಕುಗಳ ವಿವಿಧೆಡೆ ಪ್ರವಾಸ ನಡೆಸಿದ ತಂಡ ಬೆಳೆ ಪರಿಸ್ಥಿತಿ, ಕೆರೆಗಳ ವೀಕ್ಷಣೆ ನಡೆಸಿತಲ್ಲದೆ, ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿಯನ್ನು ಕಲೆಹಾಕಿತು. ಪೊಲೀಸ್ ಬೆಂಗಾವಲಿನಲ್ಲಿ ಅಧ್ಯಯನ ಪ್ರವಾಸ ಕೈಗೊಂಡಿದ್ದ ಕಾರಣಕ್ಕೆ ತಂಡದ ಜತೆ ತಮ್ಮ ಅಳಲು ತೋಡಿಕೊಳ್ಳಲು ಜಮಾಯಿಸಿದ್ದ ರೈತರಿಗೆ ಸಾಧ್ಯವಾಗಲಿಲ್ಲ. ಆದರೂ, ಕೆಲವು ರೈತರು, ರಾಜಕೀಯ ಮುಖಂಡರು ತಂಡಕ್ಕೆ ತಮ್ಮ ಅಹವಾಲು ಸಲ್ಲಿಸಿದರು.
ಮೊದಲು ಬೆಂಗಳೂರಿನಿಂದ ಹೆಲಿಕಾಪ್ಟರ್‌ನಲ್ಲಿ ಮದ್ದೂರು ತಾಲೂಕಿನ ಬೋರಾಪುರ ಹೆಲಿಪ್ಯಾಡ್‌ಗೆ ಬಂದಿಳಿದ ತಂಡವನ್ನು ಸಂಸದ ಸಿ.ಎಸ್.ಪುಟ್ಟರಾಜು, ಶಾಸಕರಾದ ಡಿ.ಸಿ.ತಮ್ಮಣ್ಣ, ಎನ್.ಅಪ್ಪಾಜಿಗೌಡ, ಮಾಜಿ ಶಾಸಕ ಡಾ.ಕೆ.ಅನ್ನದಾನಿ, ಜಿಲ್ಲಾಧಿಕಾರಿ ಎಸ್.ಜಿಯಾವುಲ್ಲಾ ಬರಮಾಡಿಕೊಂಡರು.
ಮದ್ದೂರು ತಾಲೂಕಿನ ತೈಲೂರು, ಪಣ್ಣೆದೊಡ್ಡಿ, ಹೆಮ್ಮನಹಳ್ಳಿ, ದೊಡ್ಡರಸಿನಕೆರೆ, ಮಾದರಹಳ್ಳಿ, ಅರಳಹಳ್ಳಿ, ಶೆಟ್ಟಹಳ್ಳಿ, ಹನುಮಂತನಗರ, ಕುರಿಕೆಂಪನದೊಡ್ಡಿ, ಕೊಪ್ಪ ಸಮೀತಪದ ಹರಳಕೆರೆ, ಮಳವಳ್ಳಿ ತಾಲೂಕಿನ ಹಲವೆಡೆ ಕೆರೆ, ಬೆಳೆಪರಿಸ್ಥಿತಿಯನ್ನು ತಂಡ ಪರಿಶೀಲಿಸಿ ಮಾಹಿತಿ ಪಡೆಯಿತು.
ನಂತರ, ಪಾಂಡವಪುರ, ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲೂ ಪ್ರವಾಸ ನಡೆಸಿದ ಅಧಿಕಾರಿಗಳಿಂದ ಮಾಹಿತಿ ಕಲೆಹಾಕಿದ ತಜ್ಞರ ತಂಡವು, ಹೇಮಾವತಿ ಜಲಾಶಯ ವ್ಯಾಪ್ತಿಯ ಕೆ.ಆರ್.ಪೇಟೆ, ನಾಗಮಂಗಲ ತಾಲೂಕುಗಳಿಗೂ ಭೇಟಿ ನೀಡಿತ್ತು.

ಸಂಜೆ ವೇಳೆಗೆ ಕೃಷ್ಣರಾಜಸಾಗರ ಜಲಾಶಯಕ್ಕೆ ತೆರಳಿದ ತಜ್ಞರು, ಜಲಾಶಯದಲ್ಲಿನ ನೀರಿನ ಸಂಗ್ರಹ, ಇತರ ಮಾಹಿತಿಗಳನ್ನು ಸಂಬಂಧಿಸಿದ ಅಧಿಕಾರಿಗಳು, ಅಭಿಯಂತರರಿಂದ ಕಲೆಹಾಕಿತು. ನಾಳೆ ಕಬಿನಿ ಅಚ್ಚುಕಟ್ಟು ಪ್ರದೇಶದಲ್ಲಿ ತಂಡ ಪ್ರವಾಸ ನಡೆಸಲಿದೆ.ೇಂದ್ರ ಜಲ ಆಯೋಗದ ಸದಸ್ಯ ಸೈಯದ್ ಮಸೂದ್ ಹುಸೈನ್, ಕೃಷ್ಣಾ ಮತ್ತು ಗೋದಾವರಿ ಕಣಿವೆ ಮುಖ್ಯ ಅಭಿಯಂತರ ಆರ್.ಕೆ.ಗುಪ್ತಾ, ತಮಿಳುನಾಡು, ಕೇರಳ, ಪುದುಚೇರಿ ರಾಜ್ಯಗಳ ತಾಂತ್ರಿಕ ಅಧಿಕಾರಿಗಳ ಜತೆಗೆ ರಾಜ್ಯ ಜಲ ಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಚಿಕ್ಕರಾಯಪ್ಪ ಹಾಗೂ ಕೆಆರ್‌ಎಸ್ ಅಣೆಕಟ್ಟು ಮುಖ್ಯ ಅಭಿಯಂತರ ಶಿವಕುಮಾರ್ ತಂಡದಲ್ಲಿದ್ದರು.

ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಕಾವೇರಿ ಕೊಳ್ಳದ ವಾಸ್ತವ ಅಧ್ಯಯನಕ್ಕೆ ಬಂದಿದ್ದೇವೆ. ಇಲ್ಲಿನ ಪರಿಸ್ಥಿತಿಯನ್ನು ನೋಡಿದರೆ, ಕಾವೇರಿ ಕಣಿವೆಯಲ್ಲಿ ನೀರಿನ ಕೊರತೆ ಇರುವುದು ಕಂಡು ಬಂದಿದೆ. ತಮಿಳುನಾಡಿಗೂ ಭೇಟಿ ನೀಡಿ ಪರಿಶೀಲಿಸುತ್ತೇವೆ. ಅನಂತರ, ವಸ್ತುಸ್ಥಿತಿ ಬಗ್ಗೆ ವರದಿ ಸಲ್ಲಿಸುತ್ತೇವೆ.

-ಜಿ.ಎಸ್.ಝಾ, ಕೇಂದ್ರ ಜಲ ಆಯೋಗದ ಅಧ್ಯಕ್ಷ.

ಮಾಜಿ ಸಂಸದೆ ರಮ್ಯಾರಿಂದ ಮಾಹಿತಿ

ಮದ್ದೂರು ತಾಲೂಕಿನ ಕೆಲವೆಡೆ ಅಧ್ಯಯನ ಪ್ರವಾಸ ನಡೆಸಿ ಪಟ್ಟಣದ ಪ್ರವಾಸಿ ಮಂದಿರಕ್ಕೆ ವಿಶ್ರಾಂತಿಗೆ ತಂಡ ಆಗಮಿಸಿದಾಗ ಪ್ರತ್ಯಕ್ಷರಾದ ಮಾಜಿ ಸಂಸದೆ ರಮ್ಯಾ, ಜಿಲ್ಲೆಯ ವಾಸ್ತವ ಪರಿಸ್ಥಿತಿಯನ್ನು ತಂಡಕ್ಕೆ ವಿವರಿಸಿದರು.
ನಂತರ ಸುದ್ದಿಗಾರರ ಜತೆ ಮಾತನಾಡಿದ ರಮ್ಯಾ, ಕೇಂದ್ರ ತಂಡಕ್ಕೆ ಜಿಲ್ಲೆಯ ಬೆಳೆ ಮತ್ತು ನೀರಿನ ವಾಸ್ತವ ಪರಿಸ್ಥಿತಿಯನ್ನು ವಿವರಿಸಿದ್ದು, ಸಂಕಷ್ಟ ಸೂತ್ರ ರೂಪಿಸಲು ಮನವಿ ಮಾಡಿದ್ದೇನೆ ಎಂದರು.
ಮಾಜಿ ಸಂಸದೆಯಾಗಿ ಜಿಲ್ಲೆಯ ಜನತೆಯ ಸಮಸ್ಯೆ ಬಗ್ಗೆ ನನಗೆ ಜವಾಬ್ದಾರಿಯಿದೆ. ಆದ್ದರಿಂದ ಬಂದಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ರಮ್ಯಾ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್, ಇತರ ರಾಜಕೀಯ ನಾಯಕರ ಗೈರು ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.

ತಂಡದ ವಿರುದ್ಧ ರೈತರ ಆಕ್ರೋಶ
ಮಂಡ್ಯ: ಕಾವೇರಿ ಕೊಳ್ಳದ ವಾಸ್ತವ ಪರಿಸ್ಥಿತಿ ಅಧ್ಯಯನಕ್ಕೆ ಆಗಮಿಸಿದ್ದ ತಜ್ಞರ ತಂಡ ತಮ್ಮ ಅಳಲು ಆಲಿಸುತ್ತಿಲ್ಲ, ಜಮೀನುಗಳಿಗೆ ತೆರಳಿ ಪರಿಶೀಲನೆ ನಡೆಸುತ್ತಿಲ್ಲವೆಂದು ರೈತರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.ರಸ್ತೆಬದಿ ನಿಂತು ಬೆಳೆ ಪರಿಸ್ಥಿತಿ ಅವಲೋಕಿಸಿದ ತಂಡವನ್ನು ಜಮೀನು ಬಳಿ ತೆರಳಿ ಪರಿಶೀಲಿಸಬೇಕು ಎಂದು ಮದ್ದೂರು ತಾಲೂಕಿನ ಪಣ್ಣೆದೊಡ್ಡಿ ಗ್ರಾಮದ ರೈತರು ಮನವಿ ಮಾಡಿದರು. ಆದರೆ, ಇದಕ್ಕೆ ಸೊಪ್ಪು ಹಾಕದ ತಂಡ ಕಾರುಹತ್ತಿ ಹೊರಟೇಬಿಟ್ಟಿತು.ದರಿಂದ ಕೆರಳಿದ ರೈತರು, ತಂಡದ ತಜ್ಞರ ಕಾರನ್ನು ಅಡ್ಡಗಟ್ಟಿ ಪ್ರತಿಭಟನೆ ನಡೆಸಲು ಯತ್ನಿಸಿದರು. ಆದರೆ, ಸಾಕಷ್ಟು ಸಂಖ್ಯೆಯಲ್ಲಿದ್ದ ಪೊಲೀಸರು ಗ್ರಾಮಸ್ಥರನ್ನು ತೆರವುಗೊಳಿಸಿ ತಂಡ ಮುಂದಿನ ಗ್ರಾಮಗಳ ಪ್ರವಾಸಕ್ಕೆ ತೆರಳಲು ಅನುವು ಮಾಡಿಕೊಟ್ಟರು. ಇದಕ್ಕೂ ಮುನ್ನ ರಸ್ತೆಬದಿಯ ತನ್ನ ಜಮೀನಿನ ಬಳಿ ಇದ್ದ ರೈತ ಮಹಿಳೆ ವೆಂಕಟಮ್ಮ ಎಂಬವರನ್ನು ತಂಡ ಮಾತನಾಡಿಸಿತು. ಒಂದೂವರೆ ಎಕರೆಯಲ್ಲಿ ರಾಗಿ ಬೆಳೆದಿದ್ದು, ನೀರಿಲ್ಲದೆ ಒಣಗುತ್ತಿದೆ ಎಂದು ವೆಂಕಟಮ್ಮ ತನ್ನ ಅಳಲು ತೋಡಿಕೊಂಡರು.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News