ಕಾಂಗ್ರೆಸ್‌ಮುಕ್ತ ರಾಜ್ಯಕ್ಕಾಗಿ ‘ಸರ್ಜಿಕಲ್ ಸ್ಟ್ರೈಕ್’: ಡಿ.ವಿ.ಸದಾನಂದಗೌಡ
ಬೆಂಗಳೂರು, ಅ.7: ರಾಜ್ಯದಲ್ಲಿ ಅಭಿವೃದ್ಧಿ ಪರ್ವವನ್ನು ಮತ್ತೆ ಆರಂಭಿಸಲು, ಕಾಂಗ್ರೆಸ್‌ನ್ನು ಅಧಿಕಾರದಿಂದ ಕಿತ್ತೊಗೆಯಲು ರಾಜಕೀಯವಾದ ‘ಸರ್ಜಿಕಲ್ ಸ್ಟ್ರೈಕ್’ಗಳನ್ನು ನಡೆಸಬೇಕಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.
ಶುಕ್ರವಾರ ನಗರದ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ವಿಧಾನಸಭಾ ಚುನಾವಣೆಗೆ ಕೇವಲ 500 ದಿನಗಳು ಮಾತ್ರ ಬಾಕಿಯಿದೆ. ಕಾರ್ಯಕರ್ತರು ಈ ಕ್ಷೇತ್ರವನ್ನು ಮತ್ತೆ ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳಲು ಇಂದಿನಿಂದಲೆ ತಯಾರಿ ಆರಂಭಿಸಬೇಕು ಎಂದರು.
ದೇಶದ 14 ರಾಜ್ಯಗಳಲ್ಲಿ ಬಿಜೆಪಿ ಹಾಗೂ ಅವುಗಳ ಮಿತ್ರಪಕ್ಷಗಳು ಅಧಿಕಾರದಲ್ಲಿದ್ದಾರೆ. ದಕ್ಷಿಣ ಭಾರತದ ದೊಡ್ಡ ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ ಇದೆ. ಪ್ರಧಾನಿ ನರೇಂದ್ರಮೋದಿ ಆಶಯದಂತೆ ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ಮಾಡಲು ಬಿಜೆಪಿ ಕಾರ್ಯಕರ್ತರು ಪಣ ತೊಡಬೇಕು ಎಂದು ಅವರು ಕರೆ ನೀಡಿದರು.
ಬಿಜೆಪಿಯನ್ನು ಸೋಲಿಸುವ ತಾಕತ್ತು ಕಾಂಗ್ರೆಸ್‌ಗಿಲ್ಲ. ಆದರೆ, 2013ರಲ್ಲಿ ನಮ್ಮಿಂದ ಆದ ತಪ್ಪುಗಳು, ಬಿಜೆಪಿ ಮೂರು ಪಕ್ಷಗಳಾಗಿ ವಿಭಜನೆಯಾಗಿದ್ದು, ನಾಯಕರು ಹಾಗೂ ಕಾರ್ಯಕರ್ತರ ನಡುವಿನ ಗೊಂದಲದಿಂದಾಗಿ ನಾವು ಸೋಲುವಂತಾಯಿತು. ಭವಿಷ್ಯದಲ್ಲಿ ಇಂತಹ ತಪ್ಪುಗಳು ಮರುಕಳಿಸಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಸದಾನಂದಗೌಡ ಭರವಸೆ ನೀಡಿದರು.
ಬಿಜೆಪಿಯು ದೇಶಾದ್ಯಂತ 12 ಕೋಟಿ ಸದಸ್ಯರನ್ನು ಹೊಂದಿದೆ. ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಸದಸ್ಯರನ್ನು ಹೊಂದಿರುವ ಮತ್ತೊಂದು ರಾಜಕೀಯ ಪಕ್ಷ ಜಗತ್ತಿನಲ್ಲಿ ಎಲ್ಲೂ ಇಲ್ಲ. ಕಾರ್ಯಕರ್ತರೆ ನಮ್ಮ ಶಕ್ತಿ. ನಿಮ್ಮ ಉತ್ಸಾಹ ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸುವ ರೀತಿಯೆ ನಮಗೆ ಶ್ರೀರಕ್ಷೆ ಎಂದು ಅವರು ಹೇಳಿದರು.
ಮಾಜಿ ಶಾಸಕ ಎನ್.ಎಸ್.ನಂದೀಶ್‌ರೆಡ್ಡಿ ಮಾತನಾಡಿ, ಬಿಜೆಪಿ ಸರಕಾರದ ಅವಧಿಯಲ್ಲಿ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದಲ್ಲಿ ಒಳಚರಂಡಿ ವ್ಯವಸ್ಥೆ, ಕಾವೇರಿ ನೀರು ಸಂಪರ್ಕ, ರಸ್ತೆಗಳ ಡಾಂಬರೀಕರಣ, ಬಡವರಿಗೆ ಮನೆಗಳು ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿತ್ತು ಎಂದರು.
ಸಮಾರಂಭದಲ್ಲಿ ಸಂಸದ ಪಿ.ಸಿ.ಮೋಹನ್, ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾದ ರಾಜ್ಯಾಧ್ಯಕ್ಷ ಅಬ್ದುಲ್ ಅಝೀಮ್, ಮಾಜಿ ಶಾಸಕ ನಾರಾಯಣ ಸ್ವಾಮಿ, ಪಾಲಿಕೆ ಸದಸ್ಯರಾದ ಪೂರ್ಣಿಮಾ ಶ್ರೀನಿವಾಸ್, ಪದ್ಮಾವತಿ ಶ್ರೀನಿವಾಸ್, ಎಸ್.ರಾಜು, ಮುಖಂಡರಾದ ಎನ್.ವೀರಣ್ಣ, ಸಚ್ಚಿದಾನಂದಮೂರ್ತಿ, ಸಿದ್ದಲಿಂಗಯ್ಯ, ಮಂಜುಳಾದೇವಿ ಶ್ರೀನಿವಾಸ್, ರಮೇಶ್, ಚಿದಾನಂದಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.