×
Ad

ವರಿಷ್ಠರ ಎಚ್ಚರಿಕೆಗೂ ಮಣಿಯದ ಈಶ್ವರಪ್ಪ

Update: 2016-10-08 22:57 IST

ಬೆಂಗಳೂರು, ಅ.8: ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಚಟುವಟಿಕೆಗಳಿಂದ ದೂರ ವಿರುವಂತೆ ಬಿಜೆಪಿ ವರಿಷ್ಠರು ನೀಡಿದ ಎಚ್ಚರಿಕೆಯನ್ನು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಗಂಭೀರವಾಗಿ ಪರಿಗಣಿಸದೆ ತಮ್ಮ ಹಾದಿಯಲ್ಲಿ ಮುಂದುವರಿದಿದ್ದಾರೆ.
ಶನಿವಾರ ಶಾಸಕರ ಭವನದಲ್ಲಿ ನಡೆದಂತಹ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಪ್ರಮುಖ ನಾಯಕರ ಸಭೆಯಲ್ಲಿ ಈಶ್ವರಪ್ಪ ಪಾಲ್ಗೊಳ್ಳುವ ಮೂಲಕ, ವರಿಷ್ಠರಿಗೆ ಸ್ಪಷ್ಟವಾದ ಸಂದೇಶವನ್ನು ರವಾನಿಸಿದ್ದಾರೆ.

ನಗರದಲ್ಲಿ ಗುರುವಾರ ನಡೆದಂತಹ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನಿವಾಸದಲ್ಲಿ ನಡೆದಂತಹ ಉಪಾಹಾರ ಕೂಟದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮ್ ಲಾಲ್, ಈಶ್ವರಪ್ಪಗೆ ಈ ಸಂಬಂಧ ಸ್ಪಷ್ಟವಾದ ಸೂಚನೆಯನ್ನು ನೀಡಿದ್ದರು.ಲ್ಲದೆ, ಪಕ್ಷದಲ್ಲಿ ಹಿಂದುಳಿದ, ದಲಿತ ಹಾಗೂ ಯುವ ಮೋರ್ಚಾಗಳು ಇರುವಾಗ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಹೆಸರಿನಲ್ಲಿ ಹೊಸ ಸಂಘಟನೆಯನ್ನು ಹುಟ್ಟು ಹಾಕುವ ಅಗತ್ಯವೇನಿತ್ತು ಎಂದು ಕಾರ್ಯಕಾರಿಣಿ ಸಭೆಯಲ್ಲಿ ಈಶ್ವರಪ್ಪಗೆ ಯಡಿಯೂರಪ್ಪ ನೇರವಾಗಿಯೆ ಪ್ರಶ್ನಿಸಿದ್ದಾರೆ ಎಂದು ಹೇಳಲಾಗಿತ್ತು.
ಶಾಸಕರ ಭವನದಲ್ಲಿ ನಡೆದಂತಹ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಅಧ್ಯಕ್ಷ ಹಾಗೂ ಮಾಜಿ ಸಂಸದ ವಿರೂಪಾಕ್ಷಪ್ಪ, ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಆರಂಭವಾಗಿ 2 ತಿಂಗಳು 10 ದಿನ ಆಗಿದೆ. ಈ ಅವಧಿಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಮಾಡಿದ್ದೇವೆ ಎಂದರು.
ಹಾವೇರಿಯಲ್ಲಿ ನಡೆದಂತಹ ಸಮಾವೇಶದ ಬಳಿಕ ಮಾಧ್ಯಮಗಳಲ್ಲಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಚಟುವಟಿಕೆಗಳು ಸ್ಥಗಿತ, ಕೆ.ಎಸ್.ಈಶ್ವರಪ್ಪ ಸಂಘಟನೆಯಿಂದ ದೂರ ಸರಿದಿದ್ದಾರೆ ಎಂಬ ವರದಿಗಳು ಬಂದಿದ್ದವು. ಆದರೆ, ಯಾವುದೇ ಕಾರಣಕ್ಕೂ ಸಂಘಟನೆಯ ಚಟುವಟಿಕೆಗಳನ್ನು ಸ್ಥಗಿತಗೊಳಿಸುವುದಿಲ್ಲ ಎಂದು ಅವರು ಸ್ಪಷ್ಟಣೆ ನೀಡಿದರು.
ಬೆಳಗಾವಿಯ ನಂದಗಡದಲ್ಲಿ ಡಿ.6ರಂದು ಸಂಘಟನೆಯ ಸಂಚಾಲಕರ ಪ್ರತಿಜ್ಞಾವಿಧಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಜ.26ರಂದು ಬಸವ ಕಲ್ಯಾಣದ ಕೂಡಲ ಸಂಗಮದಲ್ಲಿ ಸಮಾವೇಶ ನಡೆಯಲಿದೆ. ಇಂದಿನ ಸಭೆಯಲ್ಲಿ ಸಮಾವೇಶದ ಕುರಿತು ಚರ್ಚೆ ನಡೆಸಿದ್ದೇವೆ ಎಂದು ಹೇಳಿದರು.
ನಮ್ಮ ಸಂಘಟನೆಯ ಮೊದಲ ಆದ್ಯತೆ ಹಿಂದುಳಿದ ಹಾಗೂ ದಲಿತ ವರ್ಗಗಳ ಅಭಿವೃದ್ಧಿ. ನಮ್ಮ ಜೊತೆಗೆ ಈಶ್ವರಪ್ಪ ಇರುತ್ತಾರೆ. ಮುಂದೆ ನಡೆಯು ವಂತಹ ಸಮಾವೇಶಗಳಿಗೆ ರಾಷ್ಟ್ರೀಯ ನಾಯಕರನ್ನು ಆಹ್ವಾನಿಸುತ್ತೇವೆ. ಬ್ರಿಗೇಡ್‌ಗೆ ಸಂಬಂಧಿಸಿದಂತೆ ಯಾವುದೇ ಊಹಾಪೋಹಗಳು ಬೇಡ ಎಂದು ತಿಳಿಸಿದರು.

ಬ್ರಿಗೇಡ್‌ನ ಕಾರ್ಯಾಧ್ಯಕ್ಷ ಮುಕುಡಪ್ಪ ಮಾತನಾಡಿ, ನಮ್ಮ ಚಟುವಟಿಕೆ ಗಳಿಂದ ಕಾಂಗ್ರೆಸ್‌ನವರಿಗೆ ಹೆದರಿಕೆ ಉಂಟಾಗಿದೆ. ಕೊಳಾಯಿ ನೀರನ್ನು ನಿಲ್ಲಿಸ ಬಹುದು. ಆದರೆ, ಪ್ರವಾಹವನ್ನು ನಿಲ್ಲಿಸೋಕೆ ಆಗುವುದಿಲ್ಲ. ಯಾವುದೇ ಕಾರಣ ಕ್ಕೂ ಬ್ರಿಗೇಡ್‌ನ ಕಾರ್ಯಚಟುವಟಿಕೆಗಳಿಂದ ಹಿಂದಕ್ಕೆ ಸರಿಯುವುದಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನಮ್ಮ ನಾಯಕರು ಎಂದರು.
 

ಈ ಸಂದರ್ಭದಲ್ಲಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನ ಸಂಚಾಲಕ ಹಾಗೂ ಮಾಜಿ ಮೇಯರ್ ವೆಂಕಟೇಶಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಹಾವೇರಿಯಲ್ಲಿ ನಡೆದಂತಹ ಸಮಾವೇಶದ ಬಳಿಕ ಮಾಧ್ಯಮಗಳಲ್ಲಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಚಟುವಟಿಕೆಗಳು ಸ್ಥಗಿತ, ಕೆ.ಎಸ್.ಈಶ್ವರಪ್ಪ ಸಂಘಟನೆಯಿಂದ ದೂರ ಸರಿದಿದ್ದಾರೆ ಎಂಬ ವರದಿಗಳು ಬಂದಿದ್ದವು. ಆದರೆ, ಯಾವುದೇ ಕಾರಣಕ್ಕೂ ಸಂಘಟನೆಯ ಚಟುವಟಿಕೆಗಳನ್ನು ಸ್ಥಗಿತಗೊಳಿಸುವುದಿಲ್ಲ.
ವಿರೂಪಾಕ್ಷಪ್ಪ, ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News