ವಿರಾಟ್ ಕೊಹ್ಲಿ ದ್ವಿತೀಯ ದ್ವಿಶತಕ

Update: 2016-10-09 17:41 GMT

ಇಂದೋರ್, ಅ.9: ನಾಯಕ ವಿರಾಟ್ ಕೊಹ್ಲಿ ದ್ವಿಶತಕ ಮತ್ತು ಅಗ್ರ ಸರದಿಯ ದಾಂಡಿಗ ಅಜಿಂಕ್ಯ ರಹಾನೆ 188 ರನ್‌ಗಳ ಸಹಾಯದಿಂದ ಭಾರತ ಇಲ್ಲಿ ನಡೆಯುತ್ತಿರುವ ನ್ಯೂಝಿಲೆಂಡ್ ವಿರುದ್ಧದ ಮೂರನೆ ಹಾಗೂ ಅಂತಿಮ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಬೃಹತ್ ಮೊತ್ತ ದಾಖಲಿಸಿದ್ದು, ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ.
ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಎರಡನೆ ದಿನದ ಆಟ ನಿಂತಾಗ ಪ್ರವಾಸಿ ನ್ಯೂಝಿಲೆಂಡ್ ತಂಡ ಮೊದಲ ಇನಿಂಗ್ಸ್‌ನಲ್ಲಿ 9 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 28 ರನ್ ಗಳಿಸಿತ್ತು. ಆರಂಭಿಕ ದಾಂಡಿಗರಾದ ಮಾರ್ಟಿನ್ ಗಪ್ಟಿಲ್ 17 ರನ್ ಮತ್ತು ಟಿಮ್ ಲಥಾಮ್ 6 ರನ್ ಗಳಿಸಿ ಔಟಾಗದೆ ಕ್ರೀಸ್‌ನಲ್ಲಿದ್ದರು.
ಭಾರತ 557/5: ಇದಕ್ಕೂ ಮೊದಲು ಭಾರತ ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್ ನಷ್ಟದಲ್ಲಿ 557 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು.
ವಿರಾಟ್ ಕೊಹ್ಲಿ ದ್ವಿತೀಯ ದ್ವಿಶತಕ (211) ಮತ್ತು ಅಜಿಂಕ್ಯ ರಹಾನೆ 188 ರನ್ ಗಳಿಸಿ ತಂಡದ ಸ್ಕೋರ್‌ನ್ನು 550ರ ಗಡಿ ದಾಟಿಸುವಲ್ಲಿ ದೊಡ್ಡ ಕೊಡುಗೆ ನೀಡಿದರು.
ಮೊದಲ ದಿನದಾಟದ ಅಂತ್ಯಕ್ಕೆ ಭಾರತ 90 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 267 ರನ್ ಮಾಡಿತ್ತು. ಕೊಹ್ಲಿ ಔಟಾಗದೆ 103 ರನ್ ಮತ್ತು ರಹಾನೆ 79 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು. ಅವರು ಇಂದು ಆಟ ಮುಂದುವರಿಸಿ ನಾಲ್ಕನೆ ವಿಕೆಟ್‌ಗೆ 365 ರನ್‌ಗಳ ಜೊತೆಯಾಟ ನೀಡಿದರು. ಟೀ ವಿರಾಮದ ಬಳಿಕ ಜೀತನ್ ಪಟೇಲ್ ಅವರು ಕೊಹ್ಲಿ ಮತ್ತು ರಹಾನೆ ಜೊತೆಯಾಟವನ್ನು ಮುರಿದರು. ಕೊಹ್ಲಿ ಅವರನ್ನು ಎಲ್‌ಬಿಡಬ್ಲು ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾದರು.
  ಕೊಹ್ಲಿ ದ್ವಿಶತಕ: ವಿರಾಟ್ ಕೊಹ್ಲಿ ಅವರು ಎರಡನೆ ಬಾರಿ ದ್ವಿಶತಕ ದಾಖಲಿಸಿದರು. ಅವರು ಈ ಮೊದಲು ಜುಲೈ 21ರಿಂದ 24ರ ತನಕ ಆ್ಯಂಟಿಗುವಾದಲ್ಲಿ ನಡೆದ ವೆಸ್ಟ್‌ಇಂಡೀಸ್ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ದ್ವಿಶತಕ(200) ದಾಖಲಿಸಿದ್ದರು.
ಕೊಹ್ಲಿ ನಾಯಕರಾಗಿ ಒಂದೇ ವರ್ಷ ಎರಡು ದ್ವಿಶತಕ ದಾಖಲಿಸಿದ ಭಾರತ ಕ್ರಿಕೆಟ್ ತಂಡದ ಮೊದಲ ನಾಯಕರೆನಿಸಿಕೊಂಡರು. 2010ರಲ್ಲಿ ಸಚಿನ್ ತೆಂಡುಲ್ಕರ್ ಒಂದೇ ವರ್ಷ ಎರಡು ದ್ವಿಶತಕ ಬಾರಿಸಿದ್ದರು. ಆ ಬಳಿಕ ಈ ಸಾಧನೆ ಮಾಡಿರುವ ಮೊದಲ ಆಟಗಾರ ಕೊಹ್ಲಿ.
 ಊಟದ ವಿರಾಮದ ಬಳಿಕ 141.6ನೆ ಓವರ್‌ನಲ್ಲಿ ಹೆನ್ರಿ ಅವರ ಕೊನೆಯ ಎಸೆತದಲ್ಲಿ ರಹಾನೆ ಜೊತೆಗೆ ಒಂದು ರನ್ ಗಳಿಸಿದ ಕೊಹ್ಲಿ ದ್ವಿಶತಕ ಪೂರೈಸಿದರು.347 ಎಸೆತಗಳಲ್ಲಿ 18 ಬೌಂಡರಿಗಳ ಸಹಾಯದಿಂದ ಕೊಹ್ಲಿ ದ್ವಿಶತಕ ಪೂರ್ಣಗೊಳಿಸಿದರು.
 ದ್ವಿಶತಕದ ಬಳಿಕ ಕೊಹ್ಲಿ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. 147.6ನೆ ಓವರ್‌ನಲ್ಲಿ ಪಟೇಲ್ ಅವರು ಕೊಹ್ಲಿಗೆ ಪೆವಿಲಿಯನ್ ಹಾದಿ ತೋರಿಸಿದರು. 211 ರನ್ (366ಎ, 20ಬೌ) ಗಳಿಸಿ ಕೊಹ್ಲಿ ನಿರ್ಗಮಿಸಿದರು.
ಚೊಚ್ಚಲ ದ್ವಿಶತಕ ವಂಚಿತ ರಹಾನೆ
 ಅಗ್ರ ಸರದಿಯ ದಾಂಡಿಗ ಅಜಿಂಕ್ಯ ರಹಾನೆ ಅವರು 101.1ನೆ ಓವರ್‌ನಲ್ಲಿ ಟ್ರೆಂಟ್ ಬೌಲ್ಟ್ ಎಸೆತದಲ್ಲಿ ಒಂದು ರನ್ ಗಳಿಸಿ ಎಂಟನೆ ಶತಕ ಪೂರೈಸಿದರು. ಇದಕ್ಕಾಗಿ 210 ಎಸೆತಗಳನ್ನು ಎದುರಿಸಿದರು. 11 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಲ್ಲಿ ರಹಾನೆ ಶತಕ ಪೂರ್ಣಗೊಳಿಸಿದರು.
29ನೆ ಟೆಸ್ಟ್ ಆಡುತ್ತಿರುವ ರಹಾನೆ ದ್ವಿಶತಕದ ಯೋಜನೆಯಲ್ಲಿದ್ದರು. ಅವರು ಈ ಹಿಂದೆ 147 ರನ್ ಗಳಿಸಿರುವುದು ಟೆಸ್ಟ್‌ನಲ್ಲಿ ಗಳಿಸಿದ ವೈಯಕ್ತಿಕ ಗರಿಷ್ಠ ಸ್ಕೋರ್ ಆಗಿತ್ತು.
 ಕೊಹ್ಲಿ ಔಟಾಗುವ ಹೊತ್ತಿಗೆ ರಹಾನೆ ಸ್ಕೋರ್ 166 ಆಗಿತ್ತು. ಬಳಿಕ ರಹಾನೆಗೆ ರೋಹಿತ್ ಶರ್ಮ ಜೊತೆಯಾದರು. ಮುಂಬೈನ ರಣಜಿ ತಂಡದ ನಾಯಕ ರೋಹಿತ್ ಅವರು ತನ್ನ ತಂಡದ ಸಹ ಆಟಗಾರ ರಹಾನೆಗೆ ಉತ್ತಮ ಬೆಂಬಲ ನೀಡಿದರು. ಆದರೆ ರಹಾನೆಗೆ ದ್ವಿಶತಕ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.
159.1ನೆ ಓವರ್‌ನಲ್ಲಿ ರಹಾನೆ ಅವರು ಬೌಲ್ಟ್ ಎಸೆತವನ್ನು ರಕ್ಷಣಾತ್ಮಕವಾಗಿ ಎದುರಿಸುವಲ್ಲಿ ಎಡವಿದರು. ಅವರ ಬ್ಯಾಟನ್ನು ಸ್ಪರ್ಶಿಸಿದ ಚೆಂಡು ವಿಕೆಟ್ ಕೀಪರ್ ವಾಟ್ಲಿಂಗ್ ಕೈ ಸೇರುವುದರೊಂದಿಗೆ ರಹಾನೆ ನಿರಾಶೆಯಿಂದಲೇ ಪೆವಿಲಿಯನ್ ಸೇರಿದರು.
ರಹಾನೆ 188 ರನ್(381ಎ, 18ಬೌ,4ಸಿ) ಗಳಿಸಿ ವಾಪಸಾದರು.
ರಹಾನೆ ಮತ್ತು ರೋಹಿತ್ ಐದನೆ ವಿಕೆಟ್‌ಗೆ 39 ರನ್‌ಗಳ ಜೊತೆಯಾಟ ನೀಡಿದರು.
ರೋಹಿತ್ ಅರ್ಧಶತಕ
ರೋಹಿತ್ ಶರ್ಮ ಅವರು 7ನೆ ಅರ್ಧಶತಕ ಗಳಿಸಿದ ಬೆನ್ನಲ್ಲೆ ನಾಯಕ ವಿರಾಟ್ ಕೊಹ್ಲಿ ಇನಿಂಗ್ಸ್ ಡಿಕ್ಲೇರ್ ಮಾಡುವ ನಿರ್ಧಾರ ಕೈಗೊಂಡರು.
ರೋಹಿತ್ ಶರ್ಮ 62 ಎಸೆತಗಳಲ್ಲಿ 3ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ ಅರ್ಧಶತಕ ಗಳಿಸಿದರು. ರೋಹಿತ್ ಮತ್ತು ರವೀಂದ್ರ ಜಡೇಜ ಮುರಿಯದ ಜೊತೆಯಾಟದಲ್ಲಿ 6ನೆ ವಿಕೆಟ್‌ಗೆ 53 ರನ್ ಜಮೆ ಮಾಡಿದರು.
ರೋಹಿತ್ ಶರ್ಮ ಔಟಾಗದೆ 51 ರನ್(63ಎ, 3ಬೌ,2ಸಿ) ಮತ್ತು ರವೀಂದ್ರ ಜಡೇಜ ಔಟಾಗದೆ 17 ರನ್(27ಎ, 1ಬೌ) ಗಳಿಸಿದರು.
ನ್ಯೂಝಿಲೆಂಡ್ ತಂಡದ ಟ್ರೆಂಟ್ ಬೌಲ್ಟ್ 113ಕ್ಕೆ 2, ಪಟೇಲ್ 120ಕ್ಕೆ 2 ಮತ್ತು ಸ್ಯಾಂಟ್ನೆರ್ 137ಕ್ಕೆ 1 ವಿಕೆಟ್ ಪಡೆದರು.
ಅಂಕಿ-ಅಂಶ
*365: ಕೊಹ್ಲಿ ಮತ್ತು ರಹಾನೆ 4ನೆ ವಿಕೆಟ್‌ಗೆ 365 ರನ್ ದಾಖಲಿಸಿರುವುದು ಭಾರತದ ಪರ ಟೆಸ್ಟ್‌ನಲ್ಲಿ ನಾಲ್ಕನೆ ವಿಕೆಟ್‌ಗೆ ದಾಖಲಿಸಿದ ಗರಿಷ್ಠ ರನ್‌ಗಳ ಜೊತೆಯಾಟವಾಗಿದೆ.
*672: ಕೊಹ್ಲಿ ಮತ್ತು ರಹಾನೆ ಜೊತೆಯಾಗಿ 672 ಎಸೆತಗಳನ್ನು ಎದುರಿಸಿದ್ದರು.
*1: ಕೊಹ್ಲಿ ಎರಡು ಬಾರಿ ದ್ವಿಶತಕ ದಾಖಲಿಸಿದ ಭಾರತದ ಮೊದಲ ನಾಯಕ.
*5: ರಹಾನೆ 188 ರನ್ ಗಳಿಸಿರುವುದು ಐದನೆ ಕ್ರಮಾಂಕದಲ್ಲಿ ಆಟಗಾರ ದಾಖಲಿಸಿದ ಗರಿಷ್ಠ ಸ್ಕೋರ್
*557: ಭಾರತ 557 ರನ್ ಗಳಿಸಿರುವುದು ನ್ಯೂಝಿಲೆಂಡ್ ವಿರುದ್ಧ ಈ ವರೆಗೆ ದಾಖಲಾದ ಗರಿಷ್ಠ ಸ್ಕೋರ್.
 *971: ಕೊಹ್ಲಿ 2014-15ರಲ್ಲಿ ಅಡಿಲೇಡ್ ಟೆಸ್ಟ್‌ನಲ್ಲಿ ಶತಕ ದಾಖಲಿಸಿದ ಬಳಿಕ ಶತಕಗಳ ಮೂಲಕ ಅವರು ಒಟ್ಟು 971 ರನ್ ಗಳಿಸಿದ್ದಾರೆ. 141, 169, 147, 103, 200 ಮತ್ತು 211 ರನ್ ಗಳಿಸಿದ್ದಾರೆ.
 *2: ಭಾರತದ 4ನೆ ಮತ್ತು 5ನೆ ಕ್ರಮಾಂಕದ ದಾಂಡಿಗರು 2ನೆ ಬಾರಿ 150ಕ್ಕೂ ಅಧಿಕ ರನ್ ದಾಖಲಿಸಿದ್ದಾರೆ. ಈ ಹಿಂದೆ ತೆಂಡುಲ್ಕರ್(ಔಟಾಗದೆ 241) ಮತ್ತು ವಿವಿಎಸ್ ಲಕ್ಷ್ಮಣ್(178) ಅವರು 4 ಮತ್ತು 5ನೆ ಕ್ರಮಾಂಕದಲ್ಲಿ 150ಕ್ಕೂ ಅಧಿಕ ರನ್ ದಾಖಲಿಸಿದ್ದರು.

ಸ್ಕೋರ್ ವಿವರ

ಭಾರತ ಪ್ರಥಮ ಇನಿಂಗ್ಸ್: 169 ಓವರ್‌ಗಳಲ್ಲಿ 557/5 ಡಿಕ್ಲೇರ್

ಮುರಳಿ ವಿಜಯ್ ಸಿ ಲಥಾಮ್ ಬಿ ಪಟೇಲ್ 10

ಗೌತಮ್ ಗಂಭೀರ್ ಎಲ್‌ಬಿಡಬ್ಲು ಬೌಲ್ಟ್ 29

ಚೇತೇಶ್ವರ ಪೂಜಾರ ಬಿ ಸ್ಯಾಂಟ್ನರ್ 41

ವಿರಾಟ್ ಕೊಹ್ಲಿ ಎಲ್‌ಬಿಡಬ್ಲು ಪಟೇಲ್ 211

ಅಜಿಂಕ್ಯ ರಹಾನೆ ಸಿ ವಾಟ್ಲಿಂಗ್ ಬಿ ಬೌಲ್ಟ್ 188

ರೋಹಿತ್ ಶರ್ಮ ಔಟಾಗದೆ 51

ರವೀಂದ್ರ ಜಡೇಜ ಔಟಾಗದೆ 17

ಇತರ 10

ವಿಕೆಟ್ ಪತನ: 1-26, 2-60, 3-100, 4-465, 5-504.

ಬೌಲಿಂಗ್ ವಿವರ:

ಟ್ರೆಂಟ್ ಬೌಲ್ಟ್ 32-2-113-2

ಮ್ಯಾಟ್ ಹೆನ್ರಿ 35-3-127-0

ಜೀತನ್ ಪಟೇಲ್ 40-5-120-2

ಸ್ಯಾಂಟ್ನರ್ 44-4-137-1

ನೀಶಮ್ 18-1-53-0.

ನ್ಯೂಝಿಲೆಂಡ್ ಪ್ರಥಮ ಇನಿಂಗ್ಸ್: 9 ಓವರ್‌ಗಳಲ್ಲಿ 28/0

ಗಪ್ಟಿಲ್ ಔಟಾಗದೆ 17

ಲಥಾಮ್ ಔಟಾಗದೆ 06

ಇತರ 5

ಬೌಲಿಂಗ್ ವಿವರ

ಮುಹಮ್ಮದ್ ಶಮಿ 2-0-5-0

ಉಮೇಶ್ ಯಾದವ್ 2-0-7-0

ಆರ್.ಅಶ್ವಿನ್ 3-1-9-0

ರವೀಂದ್ರ ಜಡೇಜ 2-1-2-0

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News