ಕಾವೇರಿ ನದಿ ನೀರಿನ ನೆಪದಲ್ಲಿ ಪರಿಸರ ರಾಜಕಾರಣ ಕುರಿತ ಒಂದು ಆಲೋಚನೆ

Update: 2016-10-09 16:52 GMT

 ಒಂದು ಅಂದಾಜಿನ ಪ್ರಕಾರ ಒಂದು ಕೆ.ಜಿ. ಭತ್ತ ಬೆಳೆಯಲು 5,000ದಿಂದ 8,000 ಲೀಟರ್ ನೀರಿನ ಅಗತ್ಯವಿದೆಯೆಂದು ಹೇಳುತ್ತಾರೆ. ಸಕ್ಕರೆ ಬೆಳೆಯಲು ಅದಕ್ಕಿಂತ ಹೆಚ್ಚು ನೀರು ಬೇಕು. ಆದರೂ ಬೃಹತ್ ಅಣೆಕಟ್ಟುಗಳನ್ಛ್ನು ಕಟ್ಟುವುದು ನಿಂತಿಲ್ಲ. ಲಕ್ಷಾಂತರ ಎಕರೆ ಭೂಮಿ ಸವಳು-ಜವಳಾಗಿ ಹಸಿ ಮರುಭೂಮಿಯಾಗಿದೆ. ಬಗರ್ ಹುಕುಂ ಅರ್ಜಿಗಳೆಲ್ಲವನ್ನೂ ಇತ್ಯರ್ಥ ಮಾಡಿದರೆ ಕಾಡಿನ ಪ್ರಮಾಣ ಶೇ.8ಕ್ಕಿಂತ ಕಡಿಮೆಯಾಗುತ್ತದೆಂದು ಹೇಳಲಾಗುತ್ತಿದೆ. ಇಷ್ಟಕ್ಕೂ ಪಶುಪಾಲನೆ ಮತ್ತು ಕೃಷಿಗಳನ್ನು ಪ್ರತ್ಯೇಕವೆಂದು ನೋಡುವ ಅಕಾರಶಾಹಿಯ ಮೂರ್ಖತನದಿಂದ ಈ ಸಮಸ್ಯೆ ಬಿಗಡಾಯಿಸಿದೆ. ಜಾಗತೀಕರಣದ ಈ ಹೊತ್ತಿನಲ್ಲಿ ಅಷ್ಟೋ ಇಷ್ಟೋ ಪ್ರಮಾಣದಲ್ಲಿ ಜನರನ್ನು ಪೊರೆಯುತ್ತಿರುವುದು ಜೂಜಿನಂತಾಗಿರುವ ಕೃಷಿಯಲ್ಲ ಬದಲಿಗೆ ಪಶುಪಾಲನೆಯಾಗಿದೆ. ಈ ಕುರಿತು ಮುನ್ನೋಟವಿದ್ದ ದೇವರಾಜ ಅರಸರನ್ನು ದ್ರಷ್ಟಾರರೆಂದು ಕರೆಯುವುದು ಸರಿ ಎನ್ನಿಸುತ್ತದೆ.

ಅರಸರ ಅರಣ್ಯ ಕುರಿತ ಕಾಳಜಿಗಳನ್ನು ತಿಳಿಯಲು ಎಲ್ಲಪ್ಪರೆಡ್ಡಿಯವರ ಪುಸ್ತಕಗಳು ಸಹಾಯ ಮಾಡುತ್ತವೆ. ಈ ಹಿಂದಿನ ಅಕ್ರಮ ಸಕ್ರಮ ಯೋಜನೆಗಳ ಪ್ರತಿಲವೇ ಪ್ರಾಣಿ-ಮನುಷ್ಯ ಸಂಘರ್ಷ. ಹಸು, ಕುರಿ ಮುಂತಾದವುಗಳಿಗೆ ಮೇವಿನ ಕ್ಷೇತ್ರಗಳ ಕೊರತೆ. ಹಳ್ಳಗಳಲ್ಲಿನ ಜೌಗು ಬತ್ತಿ ಹೋಗಿದ್ದು, ದಕ್ಷಿಣದ ಬಯಲು ಸೀಮೆಯಲ್ಲಿ ರಾಕ್ಷಸ ಕಳೆಯಾದ ಯೂಕಲಿಪ್ಟಸ್ ತಲೆಯೆತ್ತಿದ್ದನ್ನು ನೋಡುತ್ತಿದ್ದೇವೆ.
ಹವಾಮಾನದ ಕಣ್ಣಾಮುಚ್ಚಾಲೆಯ ಪ್ರತಿಲವನ್ನು ಉತ್ತರ ಕರ್ನಾಟಕದಲ್ಲಿ ನೋಡುತ್ತಿದ್ದೇವೆ. ಅಲ್ಲಿ ಇದೇ ರೀತಿ ಮುಂದುವರಿದರೆ ಕಟ್ಟಿರುವ ಡ್ಯಾಮುಗಳೆಲ್ಲ ಕೆಸರಿನಿಂದ ತುಂಬಿ ಹೋಗುತ್ತವೆ. ಲಕ್ಷಾಂತರ ಕೋಟಿ ಜನರ ದುಡ್ಡನ್ನು ಸುರಿದು ಕಟ್ಟಿದ ಈ ಡ್ಯಾಮುಗಳ ತುಂಬ ಹೂಳು ತುಂಬಿಕೊಂಡರೆ, ಮಲೆನಾಡಿನ ಬೆಟ್ಟಗಳ ಮೇಲಿನ ಹುಲ್ಲು ನಿರುಪಯೋಗಿ ಎಂದು ತಿಳಿದ ಮೂರ್ಖರು ಅಕೇಶಿಯಾ ಬೆಳೆಸಿ ಬೆಟ್ಟಗಳಲ್ಲಿ ನೀರಿಂಗುವ ಕಣ್ಣುಗಳಿಗೆ ಗೋಂದು ತುಂಬಿಸಿದ್ದಾರೆ. ಆದ್ದರಿಂದ ಕೊರೆದ ಬೋರ್‌ವೆಲ್‌ಗಳಲ್ಲಿ ನೀರು ಬರುವುದಾದರೂ ಎಲ್ಲಿಂದ? ಈಗಾಗಲೇ ಬೇಸಿಗೆಗಳಲ್ಲಿ ಕರಾವಳಿ-ಮಲೆನಾಡುಗಳಲ್ಲಿ ಟ್ಯಾಂಕರುಗಳಲ್ಲಿ ನೀರು ಸರಬರಾಜು ಮಾಡುವ ಹೊಸ ದಂಧೆ ಶುರುವಾಗಿದೆ.

ನಿಸರ್ಗಕ್ಕೆ ಮನುಷ್ಯ ಒಡೆಯನೇ?

‘ಯಂತ್ರವು ಸರ್ವಕ್ಕೂ ಮದ್ದು’ ಎಂಬ ಮನೋಭಾವವು, ನಗರ ಕೇಂದ್ರಿತ ಕೆಲವು ಸ್ವಾರ್ಥಿಗಳ ಮನೋಭಾವಕ್ಕಿಂತ ಕ್ರೂರವಾದದ್ದು. ‘ನಮಸ್ತೆ ಸದಾ ವತ್ಸಲೆ’, ‘ಅಮ್ಮಾ ನಿನಗೆ ವಂದನೆ’ ಎನ್ನುವ, ‘ಸುಜಲಾಂ ಸುಲಾಂ ಮಲಯಜ ಶೀತಲಾಂ ಸಸ್ಯ ಶ್ಯಾಮಲಾಂ ವಂದೇ ಮಾತರಂ’ ಎಂದು ಹಾಡುವ, ಈ ಮಾತುಗಳನ್ನು ನೆನೆದೇ ಭಾವುಕರಾಗುವ, ಪಟರೂಪಿ ರಾಷ್ಟ್ರವನ್ನು ಕಲ್ಪಿಸಿಕೊಂಡು ಗದ್ಗದರಾಗುವ ಜನರ ಸಂಖ್ಯೆ ಹೆಚ್ಚುತ್ತಿದೆ. ಭಾರತ ಮಾತೆಯನ್ನು ನಿಸರ್ಗ ರೂಪಿಯಾಗಿ ಕಲ್ಪಿಸುವ ಇವರು ಕಣ್ಣ ಮುಂದೆ ನಿರಂತರವಾಗಿ ನಡೆಯುವ ಲೂಟಿಯ ಕುರಿತು ಚಕಾರವನ್ನೂ ಎತ್ತುವುದಿಲ್ಲವೇಕೆ? ಉತ್ತರಾಖಂಡದ ಸ್ವಾಮಿಗಳೊಬ್ಬರು ಈ ಶತಮಾನದ ಆರಂಭದಲ್ಲಿ ‘ಡೌನ್ ಟು ಅರ್ಥ್’ ಎಂಬ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ‘‘ಹಿಂದೂಗಳು ತಮ್ಮ ತಾಯಿಯ ಮೇಲೆ ಮಾಡುತ್ತಿರುವ ದೌರ್ಜನ್ಯದಷ್ಟು ಬೇರಾವ ಜನಾಂಗವೂ ಮಾಡುತ್ತಿಲ್ಲ’’ ಎಂದು ಉಗ್ರ ಕೋಪದಲ್ಲಿ ಪ್ರತಿಕ್ರಿಯಿಸಿದ್ದರು. ಉತ್ತರಾಖಂಡದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ, ಮರಗಳ್ಳತನಗಳ ಜೊತೆಗೆ ದೇಶದಲ್ಲಿ ದೀಪಾವಳಿ ಹೆಸರಲ್ಲಿ ಉತ್ಪಾದಿಸುತ್ತಿರುವ ವಿಷ, ಗಣಪತಿ ಮೂರ್ತಿಗಳ ಹೆಸರಲ್ಲಿ ನೀರಿನಲ್ಲಿ ಮುಳುಗಿಸುವುದರಿಂದ ಸೃಷ್ಟಿಯಾಗುತ್ತಿರುವ ವಿಷ, ಹಲವು ಮೇಳಗಳ ಹೆಸರಲ್ಲಿ ಎಣ್ಣೆ, ಹೂಗಳನ್ನು ಸುರಿದು, ನಿಸರ್ಗ ವಿರೋಯಾದ ಬಣ್ಣ ಎರಚಿ ನೆಲ, ಜಲ, ಗಾಳಿ ಮುಂತಾದವುಗಳನ್ನು ನಾಶಮಾಡುತ್ತಿರುವ ಉದಾಹರಣೆಗಳನ್ನು ಅಂಕಿ ಅಂಶಗಳ ಸಮೇತ ವಿವರಿಸಿದ್ದರು.

ಮಂಜು ಕರಗಿದ ಬೆಟ್ಟಗಳು, ಕಾಡು ಮರೆಯಾದ ಕಣಿವೆಗಳು, ವಿಷ ಹೊರುವ ನದಿಗಳು, ಬಹುರಾಷ್ಟ್ರೀಯ ಕಂಪೆನಿಗಳ ವಿಷ ಹೊತ್ತ ಮಣ್ಣು ಮತ್ತು ಹಣ್ಣುಗಳು, ತರಕಾರಿ ಮುಂತಾದವು ಮನುಷ್ಯನ ದೀರ್ಘ ಇತಿಹಾಸದಲ್ಲಿ ಕಂಡರಿಯದಂತಹ ರೋಗಗಳನ್ನು ಉತ್ಪಾದಿಸುತ್ತಿವೆ. ಆದರೂ ಸುಜಲಾಂ, ಸುಲಾಂ, ಮಲಯಜ ಶೀತಲಾಂ, ಸಸ್ಯ ಶ್ಯಾಮಲಾಂ ಎಂದು ಮಂತ್ರದಂತೆ ಪಠಿಸುವುದು ಅಮಾನುಷ ಕ್ರೌರ್ಯವಲ್ಲವೇ? ಕೃಶಳಾದ, ಕ್ಷಯ ಹಿಡಿದ ತಾಯಿಯನ್ನು, ಅವಳ ಆ ಸ್ಥಿತಿಗೆ ಕಾರಣವಾದ ಮಕ್ಕಳು ಹೀಗೆ ಹಾಡುತ್ತಾ ಕಾಲಹರಣ ಮಾಡುತ್ತಿದ್ದಾರೆ ಅದನ್ನು ಮನುಷ್ಯತ್ವವೆನ್ನಲಾದೀತೆ?

ಇದರಲ್ಲಿ ಎಡಪಂಥೀಯ-ಬಲಪಂಥೀಯ, ಸಮಾಜವಾದಿ - ಬಂಡವಾಳಶಾಹಿ ಎಲ್ಲರೂ ಮಿಲಾಕತ್ತಾಗಿದ್ದಾರೆ ಎಂಬಷ್ಟು ಸಿಟ್ಟು ಬರುತ್ತದೆ. ಇವತ್ತು ಬದುಕುತ್ತಿರುವ ಇವರೆಲ್ಲರೂ ಮನುಷ್ಯ ಕೇಂದ್ರಿತ, ವರ್ತಮಾನಕೇಂದ್ರಿತ ಸ್ವಾರ್ಥಮಯಿ ಲೋಕಕ್ಕಾಗಿ ಬದುಕುತ್ತಿದ್ದಾರೆನ್ನಿಸುತ್ತದೆ. ಈ ಎಲ್ಲ ವಾದಗಳಲ್ಲಿಯೂ ಕೆಲವರು ಅಪವಾದವಾಗಿದ್ದಾರೆ. ಅಂಥವರ ಧ್ವನಿ ಕ್ಷೀಣವಾಗಿದೆ. ಅಥವಾ ಅಪಹಾಸ್ಯಕ್ಕೆ ಗುರಿಯಾಗಿದೆ. ಈ ಹತಾಶೆ ನಿಹಿಲಿಸ್ಟ್‌ನೊಬ್ಬನ ಗೋಳಲ್ಲ. ಭರವಸೆಗಾಗಿ ಒತ್ತಾಯಿಸುತ್ತಿರುವ ಹಲವರ ಸಿಟ್ಟಿದು. ನಿಸರ್ಗದ ಜಡ ಮತ್ತು ಚೇತನಗಳೆರಡೂ ವಿಕಾಸ ಪಥದಲ್ಲಿ ಅತ್ಯಂತ ಪ್ರಮುಖವಾದ ಪಾತ್ರವನ್ನು ನಿರ್ವಹಿಸುತ್ತಲೇ ಬಂದಿವೆ. ಬ್ರಿಟಿಷರ ಬೇಟೆಯ ತೆವಲಿಗಾಗಿ ನ್ಯೂಝಿಲೆಂಡ್‌ನ ಡೊಡೊ ಮುಂತಾದ ಹಕ್ಕಿಗಳು ನಾಶವಾಗಿ ಅವುಗಳಿಂದಾಗಿಯೇ ವರ್ಸುತ್ತಿದ್ದ ಅಮೂಲ್ಯ ಕಾಡು ಕಣ್ಮರೆಯಾದ ವಾಸ್ತವ ಕಣ್ಣ ಮುಂದಿದೆ. ಕರಾವಳಿಯಲ್ಲಿ ಕಪ್ಪೆಗಳು ಕಡಿಮೆಯಾದ್ದರಿಂದ ಸೊಳ್ಳೆಗಳು ಹೆಚ್ಚಾಗಿ ಆನೆಕಾಲು ರೋಗ ಹರಡಿದ ಕಥೆಯನ್ನು ಹೇಳುತ್ತಾರೆ. ಪ್ರಕೃತಿಯಲ್ಲಿ ಕೀಟಗಳಿಗಿರುವಷ್ಟೇ ಸ್ಥಾನ ಮನುಷ್ಯನಿಗೂ ಇರುವುದು ಅದಕ್ಕಿಂತ ಹೆಚ್ಚೂ ಅಲ್ಲ ಕಡಿಮೆಯೂ ಅಲ್ಲ. ಆದ್ದರಿಂದ ನಮ್ಮೆಲ್ಲಾ ಯೋಚನೆಗಳು ಮನುಷ್ಯ ಕೇಂದ್ರಿತವಾಗುತ್ತಿರುವುದನ್ನು ತಪ್ಪಿಸಿ ಇಲ್ಲಿ ಕ್ರಿಮಿ, ಕೀಟ, ಮನುಷ್ಯ ಎಲ್ಲರೂ ಸಹಬಾಳ್ವೆ ನಡೆಸುವ ಅನಿವಾರ್ಯತೆಯನ್ನು ಕಲಿತುಕೊಳ್ಳಬೇಕೆನ್ನಿಸುತ್ತದೆ.

ಮರವೆಂಬುದು ಮನುಷ್ಯನ ಶತ್ರುವೇ?

   ಮರವೆಂಬುದು ಆಧುನಿಕ ಮನುಷ್ಯನ ಶತ್ರುವಿನ ಸ್ಥಾನ ಪಡೆದಿದ್ದು ಯಾವಾಗ ಎಂಬುದು ನಿರ್ದಿಷ್ಟವಾಗಿ ದಿನಾಂಕ ಗುರುತಿಸಲಾಗದ ಸಂಗತಿ. ಯಾಕೆಂದರೆ ಹೊಲದ ಬದುವಿನಲ್ಲಿ ಮರವಿದ್ದರೆ, ಹಕ್ಕಿ, ಮಂಗಗಳ ಹಾವಳಿ ಬೆಳೆಗೆ ತೊಂದರೆ. ಅದಕ್ಕೆ ಮರ ಕಡಿಸಿರಿ ಎಂದು ಹಠ ಮಾಡುವ ಎಪ್ಪತೈದರ ಅಮ್ಮ. ‘‘ಸಾರ್ ಮನೆ ಮುಂದಿನ ಮರ ಕಡಿಯಲು ಅನುಮತಿ ಕೊಡಿ, ನೀರಿನ ಸಂಪಿಗೆ, ಮನೆಯ ಪಾಯಕ್ಕೆ ಮರದ ಬೇರು ನುಗ್ಗುತ್ತಿವೆ. ಎಲ್ಲಕ್ಕಿಂತ ಮುಖ್ಯವಾಗಿ ಮರದಿಂದ ಬೀಳುವ ಎಲೆ, ಹೂವು, ಕಾಯಿಗಳು ಬಿದ್ದು ಗಲೀಜು ಆಗುತ್ತವೆ. ನನ್ನ ಹೆಂಡತಿ ಜೊತೆ ಸಿಕ್ಕಾಪಟ್ಟೆ ಜಗಳ’’ ಎಂದು ಮುನಿಸಿಪಾಲಿಟಿಗೆ ಅರ್ಜಿ ಕೊಡುವ ನಗರದ ಮೇಷ್ಟ್ರುಗಳು, ಇದೆಲ್ಲಕ್ಕಿಂತ ಭೀಕರವೆಂದರೆ ರಸ್ತೆ ಪಕ್ಕದಲ್ಲಿ ಹಿರೀಕರು ನೆಟ್ಟ ಮರ ಕಂಡರೆ ನಮ್ಮ ಇಂಜಿನಿಯರುಗಳಿಗೆ ಆಗಿಬರದು. ಅವರಿಗೆ ರಸ್ತೆ ಪಕ್ಕ ನಿಂತ ಮರಗಳು ಸಂಭವನೀಯ ಕೊಲೆಗಾರರಂತೆ ಕಾಣುತ್ತವೆ. ರಸ್ತೆಗೆ ಹಾಕಿದ ಕಳಪೆ ಡಾಂಬರು ಮರದ ಹನಿಗಳ ಕಾರಣಕ್ಕೆ ಕಿತ್ತು ಹೋಗುತ್ತದೆ, ಚಾಪೆ ಬಿಡಿಸಿದಂತೆ ಹರಡುವ ಜಲ್ಲಿ ಟಾರಿನ ಕಾರಣಕ್ಕೆ ಮರದ ಬೇರುಗಳು ಹಂಪುಗಳಂತೆ ಉಬ್ಬಿ ಗುಣ ಮಟ್ಟದ ಮರ್ಮ ಬಿಚ್ಚಿ ತೋರಿಸುತ್ತವೆ.

ಆದ್ದರಿಂದ ರಸ್ತೆ ಮಾಡಲು ಶುರುಮಾಡುವುದಕ್ಕೆ ಎಷ್ಟೋ ವರ್ಷ ಮೊದಲೇ ಮರಗಳಿಗೆ ಗಲ್ಲಿಗೇರಲು ಸಿದ್ಧರಾಗಿ ಎಂದು ಕೆತ್ತಿ ಕೆಂಪು ಬಣ್ಣದಲ್ಲಿ ನಂಬರು ಕೊಡುತ್ತಾರೆ. ಅರ್ಧರ್ಧ ಎಕರೆ ನೆರಳು ಚೆಲ್ಲಿದ, ಮಾವು, ಆಲ, ಹಿಪ್ಪೆ, ಹುಣಸೆ, ಹೊಂಗೆ, ಅರಳಿ, ನೇರಳೆ, ಹಲಸು ಮುಂತಾದ ನೂರಾರು ವರ್ಷಗಳ ಮರಗಳಲ್ಲಿ ಊಹಿಸಲಾಗದಷ್ಟು ಕೀಟ, ಪ್ರಾಣಿ, ಪಕ್ಷಿಗಳು ನೆಲೆಸಿದ್ದವು. ಜೇನು, ಬಾವಲಿ, ಅಳಿಲು, ಹಾವು, ಮುಂತಾದವು ನೆಲೆಸಿದ್ದವು. ಒಮ್ಮೆ ಶಿವಮೊಗ್ಗದಿಂದ ಶಿಕಾರಿಪುರ ಮತ್ತು ಹಾನಗಲ್ಲಿಗೆ ಹೋಗುವ ರಸ್ತೆಯಲ್ಲಿದ್ದ ಅಮೂಲ್ಯವಾದ ಅಪ್ಪೆಮಿಡಿ ಮರಗಳನ್ನು ಕತ್ತರಿಸಿ ಚೆಲ್ಲಲಾಗಿತ್ತು. ರಣರಂಗದಲ್ಲಿ ಮಡಿದ ಸೈನಿಕರಂತೆ ಅವು ಕಾಣುತ್ತಿದ್ದವು. ಅಲ್ಲಿನ ಉಪ್ಪಿನಕಾಯಿ ್ಯಾಕ್ಟರಿಯ ಮಾಲಕರು ಧೃತರಾಷ್ಟ್ರನಂತೆ ಹೆಣಗಳ ಬಣವೆಯನ್ನು ತಡವುತ್ತಾ ‘‘ನಮಗೆ ಅನ್ಯಾಯ ಮಾಡಿಬಿಟ್ರು ಸಾರ್’’ ಎಂದು ಅಳಲಾರಂಭಿಸಿದರು. ಅಲ್ಲಿದ್ದ ಅಷ್ಟೂ ಕಾರ್ಮಿಕರು ಕಣ್ಣಲ್ಲಿ ನೀರು ತುಂಬಿಕೊಂಡರು. ದಾರಿಯುದ್ದಕ್ಕೂ ಕೇಳಿದ ಅಳಿಲುಗಳ ಆರ್ತನಾದ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಆದರೂ ಈ ಭಾಗದಲ್ಲಿ ಸುಜಲಾಂ..ಸುಲಾಂ ಮಂತ್ರ ತಾರಕ ಸ್ವರದಲ್ಲಿ ಕೇಳುತ್ತದೆ.

  ಜೈವಿಕ ಸಾಮ್ರಾಜ್ಯವಾದ ಪರಿಸರ ರಾಜಕಾರಣದ ಕುರಿತು ಹೆಚ್ಚೆಚ್ಚು ಮಾತನಾಡಲೇಬೇಕಾದ ಅನಿವಾರ್ಯತೆ ಹೆಚ್ಚಾಗಿದೆ. ಏಕೆಂದರೆ, ಪರಿಸರದ ರಾಜಕಾರಣದ ಬೇರುಗಳು ಹೆಚ್ಚು ವಿರೋಧವಿಲ್ಲದೆ ನಡೆಸಬಹುದಾದ ಲೂಟಿಯ ಸಂಗತಿಯಾಗಿರುವುದರಿಂದ ಈ ಸಮಸ್ಯೆ ಉಂಟಾಗಿದೆ. ಅದು ಊರೊಂದರ ಕೆರೆ, ರಾಜಕಾಲುವೆ, ಗೋಮಾಳ, ಕಲ್ಲಿನಕ್ವಾರಿಯಿಂದ ಹಿಡಿದು ಆಫ್ರಿಕಾದ ಅನೇಕ ದೇಶ ದೇಶಗಳನ್ನು, ಮಡಗಾಸ್ಕರ್ ನಂತಹ ದ್ವೀಪಗಳನ್ನು ಗುತ್ತಿಗೆ ಪಡೆದು ಕೃಷಿ ಕಾರ್ಖಾನೆಗಳನ್ನು ನಡೆಸುತ್ತಿದೆ. ಬುಡಕಟ್ಟುಗಳು ವಾಸಿಸುತ್ತಿರುವ ಕಾಡುಗಳನ್ನು ಕಡಿದು ಗ್ರಾಮಗಳನ್ನಾಗಿಸುವ ಕೆಲಸ ನಡೆಯುತ್ತಿದೆ. ಬಹುರಾಷ್ಟ್ರೀಯ ಕಂಪೆನಿಗಳ ಔಷಧ, ಬೀಜ, ಗಿಡಮೂಲಿಕೆ ಮುಂತಾದವುಗಳ ಗಾಳಕ್ಕೆ ಸಿಲುಕಿ ಪರಿಸರವೆಂಬುದು ಜೈವಿಕ ಸಾಮ್ರಾಜ್ಯವಾದದ ಸ್ವರೂಪ ಪಡೆದುಕೊಂಡಿದೆ. ಅದರ ಪ್ರಭಾವವೆಂಬಂತೆ ನಮ್ಮಲ್ಲಿಯೂ ಕುಲಾಂತರಿ ತಳಿ, ಆಹಾರ ನಮ್ಮ ಊಟದ ತಟ್ಟೆಯೊಳಗೆ ಬಂದು ಕೂತಾಗಿದೆ. ಗುತ್ತಿಗೆ ಕೃಷಿ-ಪದ್ಧತಿ ಮುಂತಾದವುಗಳ ಮೂಲಕ ನಮ್ಮ ಭೂ ಸುಧಾರಣಾ ಕಾಯ್ದೆಯನ್ನು ಕಂಡರೆ ಕೆಂಡವಾಗುವ ಒಂದಿಷ್ಟು ರಾಜಕಾರಣಿಗಳು,ಅಕಾರಿಗಳು ಸೇರಿ, ಹೇಗಾದರೂ ಮಾಡಿ ಕಾಯ್ದೆಯ ಮೂಲ ಆಶಯವನ್ನು ಬದಲಾಯಿಸಿ ರೈತರ ಭೂಮಿಗಳನ್ನು ಗುತ್ತಿಗೆ ನೀಡಿ ಅವರದೇ ಹೊಲಗಳಲ್ಲಿ ಕೂಲಿಯಾಳುಗಳನ್ನಾಗಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

 ಹಾಗಿದ್ದರೆ ಜೈವಿಕ ಸಾಮ್ರಾಜ್ಯವಾದವೆಂಬುದು ಇವತ್ತಿನ ಸಮಸ್ಯೆ ಮಾತ್ರವೇ? ಎಂದರೆ ಖಂಡಿತ ಅಲ್ಲ. ನಮ್ಮ ರೈತರು ಏನು ಬೆಳೆಯಬೇಕು? ಹೇಗೆ ಬೆಳೆಯಬೇಕು? ಎಂಬುದನ್ನು ತೀರ್ಮಾನಿಸುವ ಅಕಾರಚಂಪಾರಣ್‌ನ ನೀಲಿ ಕೃಷಿ ಕುರಿತ ಸಂಘರ್ಷವನ್ನು ನೆನಪಿಸಿಕೊಳ್ಳಬಹುದು. ನವ ಶಿಲಾಯುಗದ ಮನುಷ್ಯನ ಕಾಲದಿಂದಲೂ ಆಹಾರ ಪದ್ಧತಿ, ಬೆಳೆ ಪದ್ಧತಿ ಜನಾಂಗ-ಜನಾಂಗಗಳ ನಡುವೆ ಬೆರೆಯುತ್ತಾ ಹೋಗಿವೆ. ವಾತಾವರಣಕ್ಕನುಸಾರವಾಗಿ ಅಳವಡಿಸಿಕೊಳ್ಳುವ ಕೆಲಸ ನಡೆದಿದೆ.ಆಫ್ರಿಕಾ,ದಕ್ಷಿಣ ಅಮೆರಿಕ,ಯುರೋಪಿನ ಆಹಾರದ ಬೆಳೆಗಳು ಇಲ್ಲಿಗೂ ಬಂದಿವೆ.ಇಲ್ಲಿನವು ಅಲ್ಲಿಗೂ ಹೋಗಿವೆ.ಬಿ.ಜಿ.ಎಲ್ ಸ್ವಾಮಿಯವರ ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕ ಈ ವಿಚಾರದಲ್ಲಿ ಕುತೂಹಲದ ಪುಸ್ತಕ.ಈ ರೀತಿ ಬಂದು ಹೋಗಿ ಮಾಡಿರುವ ತಳಿಗಳು-ಬೆಳೆಗಳು ಬಲವಂತದ ಹೇರಿಕೆಯಿಂದ,ಲಾಭದ ದಾಹದಿಂದ ಬದಲಾದವಲ್ಲ.ಬಾಲ್ಟೀಕರಿಗೆ ಇಲ್ಲಿನ ಗೋ, ಬಾರ್ಲಿ ಇಷ್ಟವಾದರೆ,ಬಾಬರನಿಗೆ ದಿಲ್ಲಿಯ ಮಾವು ಬಿಡಿಸಿಕೊಳ್ಳಲಾಗದ ಮೋಹದಂತೆ ಕಾಡುತ್ತದೆ.ಅದಕ್ಕಾಗಿ ಆತ ಹುಟ್ಟಿದ ನಾಡನ್ನು ತೊರೆದು ಇಲ್ಲೇ ನೆಲೆಸಿದ ಎಂದು ಲಂಕೇಶ್ ಬರೆಯುತ್ತಾರೆ.
 
ಆದರೆ ಜೈವಿಕ ಸಾಮ್ರಾಜ್ಯವಾದವು,ಜೈವಿಕ ಯುದ್ಧಕ್ಕೆ, ಜೈವಿಕ ಭಯೋತ್ಪಾದನೆಗೆ ಸಮವಾದುದು.ಅದು ಅತ್ಯಂತ ಎಚ್ಚರಿಕೆಯಿಂದ ಎಲ್ಲ ಸ್ಥಳೀಯ ತಳಿಗಳನ್ನು ಕೊಂದು ಹಾಕುತ್ತದೆ.ಮೂಲತಃ ಬಹುತ್ವವನ್ನು ಇದು ವಿರೋಸುತ್ತದೆ.ರೈತರ ತಲೆಯೊಳಗೆ ಸ್ವರ್ಗದ ಕನಸು ಬಿತ್ತಿ ಬೀಜ,ಗೊಬ್ಬರ ಮುಂತಾದವುಗಳಲ್ಲಿ ಸಾವಿರಾರು ವರ್ಷಗಳಿಂದ ಸಾಸಿದ್ದ ತಂತ್ರಜ್ಞಾನ,ಸ್ವಾವಲಂಬನೆಯನ್ನು ನಾಶಪಡಿಸಿದೆ.ರಾಜಕೀಯ ಸಾಮ್ರಾಜ್ಯವಾದವು ನಮ್ಮ ಭಾಷೆ ಮತ್ತು ಬದುಕನ್ನು ನಿರುಪಯೋಗಿ ಎಂದು ಪ್ರತಿಪಾದಿಸಿದರೆ, ಜೈವಿಕ ಸಾಮ್ರಾಜ್ಯವಾದವು ಸಾಂಪ್ರದಾಯಿಕವಾದ ನಮ್ಮ ಬೆಳೆ ವಿಜ್ಞಾನವನ್ನು ಅಪಹಾಸ್ಯ ಮಾಡುತ್ತದೆ.ಆರ್ಥಿಕ ಸಾಮ್ರಾಜ್ಯವಾದವು ಎಲ್ಲ ಸ್ಥಳೀಯ ತಂತ್ರಜ್ಞಾನಗಳನ್ನು,ಕುಂಬಾರಿಕೆ, ಚಮ್ಮಾರಿಕೆ, ನೇಕಾರಿಕೆ,ಕಲೆಗಾರಿಕೆ ನಾಶ ಮಾಡಿ ಬೃಹತ್ ಯಂತ್ರಗಳ ಮೂಲಕ ಉತ್ಪಾದಿಸತೊಡಗುತ್ತದೆ. ಈ ವ್ಯವಸ್ಥೆಯಲ್ಲಿ ಮನುಷ್ಯ ಹುಳ ಸ್ವರೂಪಿ. ಈ ಹುಳ ಸ್ವರೂಪಿಯಾದ ಮನುಷ್ಯನೂ ತೊಂದರೆ ಕೊಡಬಹುದೆಂದು ಭಾವಿಸಿ ರೋಬೊಟುಗಳನ್ನು ಸೃಷ್ಟಿಸಿ ಉತ್ಪಾದನೆಗೆ ಇಳಿಸಲಾಗುತ್ತಿದೆ. ಹೀಗೆ ಎಲ್ಲ ಸ್ವರೂಪದ ಸಾಮ್ರಾಜ್ಯವಾದಗಳೂ ಬಡನಾಡುಗಳನ್ನು ಹೀರುವ ಜಿಗಣೆಗಳಾಗಿವೆ.ಹಾಗಾಗಿಯೇ ಕೋಟ್ಯಪತಿಗಳ ಸಂಖ್ಯೆಯೂ ರೈತರ, ಕಾರ್ಮಿಕರ ಆತ್ಮಹತ್ಯೆಗಳೂ, ಶವ ಸಾಗಿಸಲಾರದೆ ಹೆಗಲ ಮೇಲೆ ಹೊತ್ತು ಸಾಗಿಸುವ, ಶವವನ್ನು ಕಾಲುಗಳಲ್ಲಿ ತುಳಿದು ಮೂಳೆಗಳನ್ನು ಪುಡಿಗಟ್ಟಿ ಮೂಟೆ ಕಟ್ಟಿ ಸಾಗಿಸುವ ಪರಿಸ್ಥಿತಿಗಳು ಏಕ ಕಾಲದಲ್ಲಿ ಸಂಭವಿಸುತ್ತಿವೆ. ಒಂದೊಂದು ಕಂಪೆನಿಯ ಆಸ್ತಿ ಒಂದೊಂದು ದೇಶದ ವರ್ಷದ ಬಜೆಟ್ಟಿನಷ್ಟಾಗುತ್ತಿದೆ.

  ಜೈವಿಕ ಸಾಮ್ರಾಜ್ಯವಾದವು ರೈತರ ಹಿತ್ತಿಲು, ಹೊಲಗಳಷ್ಟೇ ಅಲ್ಲ, ಮಲೆನಾಡಿನ ಶೋಲಾಹುಲ್ಲು ಸಹ ನಿರುಪಯೋಗಿ ಎಂದು ಹೇಳಿ ಅಕೇಶಿಯಾ, ನೀಲಗಿರಿ, ಯೂಕಲಿಪ್ಟಸ್, ಸಬಾಬುಲ್, ಸಿಲ್ವರ್ ಓಕ್ ಮುಂತಾದ ವಿಷ ಕಳೆಗಳನ್ನು ನೆಟ್ಟು ಹುಲ್ಲನ್ನು ಕೊಂದು, ನದಿಗಳಿಗೆ ಮಣ್ಣುತುಂಬಿ ಲಕ್ಷಾಂತರ ಎಕರೆ ಕಾಡು ನಾಶ ಮಾಡಿ ಅಟ್ಟ ಹಾಸ ಮಾಡುತ್ತಿದೆ. ಕಂದಾಯ ಇಲಾಖೆಯ ಸಿ ಮತ್ತು ಡಿ ವರ್ಗದ ಭೂಮಿಯಲ್ಲಿ, ಗೋಮಾಳ ಮುಂತಾದವುಗಳಲ್ಲಿ ಬೆಳೆದ ಈ ಮೃದು ೈಬರ್ ಮರಗಳು ಸಾಮಾಜಿಕ ಅರಣ್ಯದ ಹೆಸರಲ್ಲಿ ವಿಶ್ವಬ್ಯಾಂಕ್ ನಿರ್ದೇಶನದ ಮೂಲಕ ಬಂದಂತವು. ಈ ಎಲ್ಲವುಗಳಿಂದಲೂ ನಾವು ವಿನಾಶದ ದಾರಿಯ ಅಂಚಿಗೆ ತಲುಪಿದ್ದೇವೆ. ಇವೆಲ್ಲದರ ಲವಾಗಿ ನಮ್ಮಾಳಗೆ ಖಂಡಾಂತರಗಳನ್ನು ಗಂಟೆಗಳ ಲೆಕ್ಕದಲ್ಲಿ ಹಾರಾಡಬಲ್ಲ ಅತಿ ಆಧುನಿಕರೆಂಬ ಹುಸಿ ಅಹಂಕಾರ ತಲೆಗೆ ಹತ್ತಿ ಕೂತಿದೆ. ಇದೇ ಸಂದರ್ಭದಲ್ಲಿ ನೀರಿಗಾಗಿ ಯುದ್ಧಗಳು ಆರಂಭವಾಗಿವೆ. ನಮ್ಮ ಆಹಾರ, ಜೀವನಕ್ರಮ ಎಲ್ಲವನ್ನೂ ಮರೆಯಲ್ಲಿ ಕೂತು ನಿರ್ದೇಶಿಸುವ ಪತಂಜಲಿ ಗುರುವಿನಾದಿಯಾಗಿ ಎಲ್ಲರೂ ಹದಗೆಟ್ಟು ಹೋದ ನಮ್ಮ ಆರೋಗ್ಯದಿಂದ ನಮ್ಮ ಜೀವಮಾನಗಳ ದುಡಿಮೆಯನ್ನು ಹೀರಿ ನಾಶಮಾಡುವ ಆಸ್ಪತ್ರೆಗಳು,ಸ್ವಾಸ್ಥ ್ಯ ಕೆಟ್ಟ ಮನುಷ್ಯರ ವರ್ತನೆಯನ್ನು ಲಾಭ ಮಾಡಿಕೊಳ್ಳುವ ವಕೀಲರು ಹುಸಿ ಭರವಸೆ ಕೊಡುತ್ತಾ ಸಾಯುವುದನ್ನು ತಡಮಾಡಿಸುತ್ತಿದ್ದಾರೆ.ಪ್ರಸ್ತುತ ಸಂದರ್ಭದಲ್ಲಿ ಈ ಎಲ್ಲವನ್ನೂ ಸಮಗ್ರವಾಗಿ ಅರ್ಥಮಾಡಿಕೊಂಡು ರಚನಾತ್ಮಕ,ಭರವಸೆಯ ರಾಜಕಾರಣ ಮಾಡುವ ಅನಿವಾರ್ಯತೆ ಇದೆ. ಇಲ್ಲದಿದ್ದರೆ ಮನುಕುಲದ ಸಾಮೂಹಿಕ ನಾಶ ತಪ್ಪಿದ್ದಲ್ಲ ಎನ್ನಿಸುತ್ತದೆ.

ಬಡವನ ಉಳುಮೆ ಹಕ್ಕನ್ನು ನಿರಾಕರಿಸುವುದು ತರವೇ?
 
ಕ್ರಿಮಿ ಕೀಟ, ಮರ ಗಿಡಗಳನ್ನು ರಕ್ಷಿಸುವ ಮಾತುಗಳನ್ನಾಡುವ ನೀವು, ಸಾವಿರಾರು ವರ್ಷಗಳಿಂದ ಉಳುಮೆಯೊಂದೇ ತನಗಿರುವ ಏಕ ಮಾತ್ರ ಹಕ್ಕು ಎಂದು ಭಾವಿಸುತ್ತಾ ಬಂದ ಆದಿವಾಸಿ ರೈತನನ್ನು ಮರೆತು ವರ್ತಿಸುವುದು ಕ್ರೌರ್ಯವಲ್ಲವೇ ಎನ್ನಬಹುದು. ಹಾಗೆ ವರ್ತಿಸುವುದು ಕ್ರೌರ್ಯ ಹೌದು.ಇಲ್ಲಿನ ಸಮಸ್ಯೆಯೆಂದರೆ ತಲೆಮಾರುಗಳಾದಿಯಾಗಿ ಉಳುತ್ತಾ ಬಂದವರಿಗೆ ಉದ್ದೇಶ ಪೂರ್ವಕವಾಗಿ ಹಕ್ಕು ಪತ್ರವನ್ನು ತಪ್ಪಿಸುವುದು, ಈ ಯೋಜನೆಗಳ ಹೆಸರಲ್ಲಿ ಬಲಾಢ್ಯರು ಒತ್ತುವರಿಗಳನ್ನು ಸಕ್ರಮ ಮಾಡಿಕೊಳ್ಳುವುದು ಪದೇ ಪದೇ ನಡೆಯುತ್ತಿದೆ. ಪ್ರತಿವರ್ಷವೂ ಕಾಡು ಕಣ್ಮರೆಯಾಗುತ್ತಿರುವುದು ಕಣ್ಣಿಗೆ ರಾಚಿದಂತೆ ಕಾಣುತ್ತಿದೆ. ದೊಡ್ಡ ದೊಡ್ಡ ಎಸ್ಟೇಟುಗಳವರು, ದೊಡ್ಡ ದೊಡ್ಡ ರೈತರು ಪ್ರತಿವರ್ಷ ತಮ್ಮ ತೋಟಗಳ ವ್ಯಾಪ್ತಿಯನ್ನು ಹಿಗ್ಗಿಸುತ್ತಾ ಹೋಗುತ್ತಿದ್ದಾರೆಂದು ಕೆಲವು ಪ್ರಾಮಾಣಿಕ ಅಕಾರಿಗಳು ಹೇಳುತ್ತಾರೆ. ಆದ್ದರಿಂದ ಸರಕಾರದ ಅಕ್ರಮ ಸಕ್ರಮದಂತಹ ಯೋಜನೆಗಳು ದೊಡ್ಡವರ ಪಾಲಾಗದೆ ಸರ್ವರಿಗೂ ಸಮವಾಗಿ ಸಿಗಲು ಬೇಕಾದಂತಹ ಸೂತ್ರವನ್ನು ಜರೂರಾಗಿ ರೂಪಿಸಬೇಕಾಗಿದೆ.ಹೊಸದಾಗಿ ಸಕ್ರಮಕ್ಕೆ ಅರ್ಜಿ ಕರೆಯುತ್ತಾರೆಂಬ ಸುದ್ದಿಯನ್ನು ಆಧರಿಸಿಯೇ ಚಿಕ್ಕನಾಯಕನಹಳ್ಳಿಯಾದಿಯಾಗಿ ಅನೇಕ ಕಡೆ ಸಾವಿರಾರು ಎಕರೆ ಕಾಡು ಬುಲ್ಡೋಜರುಗಳ ರಕ್ಕಸ ಬಾಯಿಗೆ ಬಲಿಯಾಗಿದೆ. ಮಲೆನಾಡಿನಲ್ಲಿ ಸ್ಪಷ್ಟವಾಗಿ ಭೂಮಿತಿ ಕಾಯ್ದೆಯನ್ನು ಜಾರಿಗೊಳಿಸಿ, ಬಯಲು ಸೀಮೆಯಲ್ಲಿ ಲಕ್ಷಾಂತರ ಎಕರೆ ಎಸ್ಟೇಟುಗಳ ಹೆಸರಲ್ಲಿ ಯಾವ ಬೆಳೆಯನ್ನೂ ಬೆಳೆಯದೆ ಮುಳ್ಳು ತಂತಿ ಬಿಗಿಸಿ ಬೀಳು ಬಿಟ್ಟಿರುವ ಭೂಮಿಯ ಕುರಿತು ವಿಶೇಷ ಕಾಯ್ದೆ ತಂದು ಸರಕಾರ ವಶಕ್ಕೆ ಪಡೆದು ಭೂ ಹೀನರಿಗೆ ಹಂಚುವ ಕೆಲಸ ಮಾಡಬಹುದು. ಕರ್ನಾಟಕ ಭೂ ಮಂಜೂರಾತಿ ಕಾಯ್ದೆಯಲ್ಲಿನ ಕುಟುಂಬ ಎಂಬುದರ ಕುರಿತು ಇರುವ ವ್ಯಾಖ್ಯಾನವನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಅದನ್ನು ತಪ್ಪಿಸಿ ತಂದೆಗೆ 5 ಎಕರೆ ಭೂಮಿ ಹಿಂದೆ ಮಂಜೂರಾಗಿದ್ದರೆ ಮತ್ತೆ ಮಗನಿಗೆ ಹೊಸದಾಗಿ ಹಂಚುವುದನ್ನು ತಪ್ಪಿಸಬೇಕು.ಪಶುಸಂಗೋಪನೆ ಮಾತ್ರ ರೈತರನ್ನು ಕಾಪಾಡುತ್ತಿರುವುದರಿಂದ ಯಾವುದೇ ಕಾರಣಕ್ಕೂ ಕಾವಲುಗಳನ್ನು,ಗೋಮಾಳಗಳನ್ನು ಸಾಗುವಳಿ ಉದ್ದೇಶಕ್ಕಾಗಿ ಮಂಜೂರು ಮಾಡಬಾರದು. ಈ ಇಡೀ ಪ್ರಕ್ರಿಯೆಯನ್ನು ಸಮಗ್ರ ದೃಷ್ಟಿಕೋನದಡಿ ಪರಾಮರ್ಶಿಸಿ ನೋಡಬೇಕಾದ ಅನಿವಾರ್ಯತೆ ಇದೆ.ಇದರ ಜೊತೆಗೆ ಬರೀ ಭೂಮಿ ಹಂಚುವುದಲ್ಲ ಕೃಷಿ ಬಿಕ್ಕಟ್ಟುಗಳನ್ನು ಪರಿಹರಿಸಬೇಕಾದ ಗುರುತರ ಜವಾಬ್ದಾರಿಯೂ ಇದೆ ಎಂಬುದನ್ನು ಮರೆಯಬಾರದು.

  ಅಂತಿಮವಾಗಿ ಜಲಮೂಲಗಳನ್ನು, ಹುಲ್ಲುಗಾವಲುಗಳನ್ನು, ಸಸ್ಯರಾಶಿಯನ್ನು ನಿಸರ್ಗದ ಸಮಸ್ತ ಜೀವರಾಶಿಯನ್ನು ಉಳಿಸುವ ಕೆಲಸಮಾಡಿ ಮನುಷ್ಯತಾನು ಉಳಿಯುವುದಕ್ಕೆ ಅಗತ್ಯವಾಗಿರುವ ಪರಿಭಾಷೆಯನ್ನು, ಜೀವನ ವಿಧಾನವನ್ನು ರೂಢಿಸಿಕೊಳ್ಳಬೇಕಾದ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ನಿಸರ್ಗವೆಂದರೆ ಮಲೆನಾಡಿನ ಕಾಡುಗಳು ಮಾತ್ರ ಎಂದು ಭಾವಿಸದೆ ಬಯಲು ಸೀಮೆಯ ಕಲ್ಲುಗುಡ್ಡಗಳು, ಮುಳ್ಳುಗಂಟಿಗಳೂ ಅಷ್ಟೇ ಮೌಲ್ಯವುಳ್ಳವೆಂಬುದನ್ನು ಅರ್ಥೈಸಿಕೊಳ್ಳಬೇಕೆನ್ನಿಸುತ್ತದೆ.ನದಿ ಮೂಲಗಳಷ್ಟೇ ಅಲ್ಲದೆ ತಲಪರಿಗೆಗಳು ಸಹ ಮಹತ್ವವಾದವುಗಳೆಂದು ಉಳಿಸಬೇಕಾಗಿದೆ. ಕಲ್ಲಿದ್ದಲು, ದೂರದೇಶದ ಹಣ್ಣುಗಳು ಮನೆ ಕಟ್ಟುವ ಸಾಮಗ್ರಿಗಳನ್ನು ಸಾವಿರಾರು ಮೈಲುಗಳಿಂದ ಹೊತ್ತು ತರುವ ಬದಲು ತಲೆಮಾರುಗಳಿಂದ ಬಳಸುತ್ತಾ ಬಂದ ಸ್ಥಳೀಯವಾದುದಕ್ಕೆ ನಿಸರ್ಗ ಪರವಾದ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲೇಬೇಕಾಗಿದೆ. ಮನುಷ್ಯ ತಾನೂ ಬದುಕಿ ಸಮಸ್ತ ಇರುವೊಂಬತ್ತು ಕೋಟಿ ಜೀವರಾಶಿಯನ್ನು ಬದುಕಲು ಬಿಡಬೇಕು.ಆಗ ಮಾತ್ರ ಆರೋಗ್ಯಪೂರ್ಣವಾದ ವಿಶ್ವ ನಮ್ಮದಾಗಬಹುದು.

Writer - ತಿರುಮಲೇಶ್

contributor

Editor - ತಿರುಮಲೇಶ್

contributor

Similar News