×
Ad

ಶ್ರೀನಿವಾಸ ಪ್ರಸಾದ್ ಶಾಸಕ ಸ್ಥಾನಕ್ಕೆರಾಜೀನಾಮೆ?

Update: 2016-10-09 23:49 IST

ಬೆಂಗಳೂರು, ಅ. 9: ಸಚಿವ ಸಂಪುಟದಿಂದ ತಮ್ಮನ್ನು ಕೈಬಿಟ್ಟ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯನವರ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದ ಮಾಜಿ ಸಚಿವ ಹಾಗೂ ಹಿರಿಯ ಮುಖಂಡ ವಿ.ಶ್ರೀನಿವಾಸ ಪ್ರಸಾದ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.

ಸೆಪ್ಟಂಬರ್ ಮೊದಲ ವಾರದಲ್ಲೇ ಶಾಸನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ಮುಂದಾಗಿದ್ದ ಶ್ರೀನಿವಾಸ ಪ್ರಸಾದ್, ಕಾವೇರಿ ವಿವಾದ ಭುಗಿಲೆದ್ದ ಹಿನ್ನೆಲೆಯಲ್ಲಿ ತಮ್ಮ ನಿರ್ಧಾರವನ್ನು ಕೆಲ ಕಾಲ ಮುಂದೂಡಿದ್ದರು. ದಸರಾ ಮಹೋತ್ಸವದ ಬಳಿಕ ತಮ್ಮ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ಗೊತ್ತಾಗಿದೆ.

ಮೈಸೂರು ಜಿಲ್ಲೆಯ ನಂಜನಗೂಡು ವಿಧಾನಸಭಾ ಕ್ಷೇತ್ರ ದಿಂದ ಆಯ್ಕೆಯಾಗಿರುವ ವಿ.ಶ್ರೀನಿವಾಸ ಪ್ರಸಾದ್, ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಮೂಲಕ ಕಾಂಗ್ರೆಸ್ ತ್ಯಜಿಸಿ, ಜೆಡಿಎಸ್ ಸೇರ್ಪಡೆಯಾಗುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ತೀವ್ರ ಅಸಮಾಧಾನಗೊಂಡಿರುವ ಶ್ರೀನಿವಾಸ ಪ್ರಸಾದ್ ಅವರನ್ನು ಸೆಳೆದುಕೊಳ್ಳಲು ವಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ತೆರೆ ಮರೆಯಲ್ಲೆ ಕಸರತ್ತು ನಡೆಸಿದ್ದಾರೆ. ಯಡಿಯೂರಪ್ಪ ಹಾಗೂ ಮಾಜಿ ಪ್ರಧಾನಿ ದೇವೇಗೌಡ ಪ್ರಸಾದ್ ಅವರೊಂದಿಗೆ ಸಂಪರ್ಕದಲ್ಲಿದ್ದಾರೆಂದು ಹೇಳಲಾಗಿದೆ.ಮಧ್ಯೆಯೇ ಹಿರಿಯ ಮುಖಂಡ ವಿ.ಶ್ರೀನಿವಾಸ ಪ್ರಸಾದ್ ವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಕಾಂಗ್ರೆಸ್ ಮುಖಂಡರು ಮನವೊಲಿಕೆ ಪ್ರಯತ್ನವನ್ನೂ ನಡೆಸಿದ್ದಾರೆ. ಅತ್ಯಂತ ಪ್ರಭಾವಿ ಹಾಗೂ ಯಾವುದೇ ಕಳಂಕವಿಲ್ಲದ ಶ್ರೀನಿವಾಸ ಪ್ರಸಾದ್ ಅವರು ಯಾವುದೇ ಪಕ್ಷಕ್ಕೆ ಹೋದರೂ ಮೈಸೂರು ಭಾಗದಲ್ಲಿ ಆ ಪಕ್ಷಕ್ಕೆ ಲಾಭವಾಗುವುದು ನಿಶ್ಚಿತ ಎಂದೇ ವಿಶ್ಲೇಷಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News