ಉಡುಗೊರೆಯ ಬಿಎಂಡಬ್ಲ್ಯು ಕಾರು ಹಿಂದಿರುಗಿಸಲಿರುವ ಒಲಿಂಪಿಕ್ ತಾರೆ ದೀಪಾ!

Update: 2016-10-12 06:57 GMT

ಮುಂಬೈ, ಅ.12: ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕವನ್ನು ಕೂದಲೆಳೆಯ ಅಂತರದಿಂದ ಕಳೆದುಕೊಂಡ ಭಾರತದ ಜಿಮ್ನ್ಯಾಸ್ಟಿಕ್ಸ್ ತಾರೆ ದೀಪಾ ಕರ್ಮಕರ್ ಒಲಿಂಪಿಕ್ಸ್ ಪದಕ ವಿಜೇತರಾದ ಪಿ.ವಿ.ಸಿಂಧು ಹಾಗೂ ಸಾಕ್ಷಿ ಮಲಿಕ್ ಅವರೊಂದಿಗೆ ತಮಗೂ ನೀಡಲಾದ ಬಿಎಂಡಬ್ಲ್ಯು ಕಾರನ್ನು ನಿರ್ವಹಣಾ ಸಮಸ್ಯೆಯ ನೆಪವೊಡ್ಡಿ ಅದರ ಮೂಲ ಮಾಲಕ ಹೈದರಾಬಾದ್ ಬ್ಯಾಡ್ಮಿಂಟನ್ ಅಸೋಸಿಯೇಶನ್ ಅಧ್ಯಕ್ಷ ವಿ ಚಾಮುಂಡೇಶ್ವರಿನಾಥ್ ಅವರಿಗೆ ಹಿಂದಿರುಗಿಸುವ ನಿರ್ಧಾರ ಕೈಗೊಂಡಿದ್ದಾರೆ.
ಅಗಲ ಕಿರಿದಾದ ಹಾಗೂ ಸರಿಯಾದ ನಿರ್ವಹಣೆಯಿಲ್ಲದ ರಸ್ತೆಗಳಿರುವ ಅಗರ್ತಲಾದಂತಹ ನಗರದಲ್ಲಿ ಇಂತಹ ವಿಲಾಸಿ ಕಾರಿನ ನಿರ್ವಹಣೆ ದೀಪಾ ಮತ್ತಾಕೆಯ ಕುಟುಂಬಕ್ಕೆ ಅಸಾಧ್ಯವೆಂದು ಈ ನಿರ್ಧಾರ ಕೈಗೊಳ್ಳಲಾಗಿದೆ. ಮೇಲಾಗಿದೀಪಾ ಸದ್ಯದಲ್ಲಿಯೇ ಭಾಗವಹಿಸಲಿರುವ ಚ್ಯಾಲೆಂಜರ್ಸ್ ಕಪ್ ಸ್ಪರ್ಧೆಗೆ ಜರ್ಮನಿಗೆ ತೆರಳಬೇಕಾಗಿದ್ದು ಇನ್ನೊಂದು ತಿಂಗಳಲ್ಲಿ ಆಕೆ ಅಲ್ಲಿಗೆ ಹೋಗಬೇಕಾಗುವುದರಿಂದ ಆಕೆ ಹೆಚ್ಚಿನ ಸಮಯವನ್ನು ಅಭ್ಯಾಸಕ್ಕೆ ಮೀಸಲಿಡಬೇಕೆಂದು ಆಕೆಗೆ ಸಲಹೆ ನೀಡಲಾಗಿದೆ.
ಈ ಬಗ್ಗೆ ದೀಪಾ ಇಲ್ಲಿಯವರೆಗೆ ಪ್ರತಿಕ್ರಿಯಿಸದೇ ಇದ್ದರೂಬಿಎಂಡಬ್ಲ್ಯು ಕಾರನ್ನು ಹಿಂದಿರುಗಿಸುವ ನಿರ್ಧಾರವನ್ನು ದೀಪಾ ಒಬ್ಬರೇ ಕೈಗೊಂಡಿಲ್ಲ. ಆಕೆಯ ಕುಟುಂಬ ಹಾಗೂ ಕೋಚ್ ಜತೆಯಾಗಿ ಕೈಗೊಂಡಿದ್ದಾರೆಂದುಸ್ವತಹ ಆಕೆಯ ಕೋಚ್ ಬಿಶ್ವೇಸ್ವರ್ ನಂದಿ ಮಾಹಿತಿ ನೀಡಿದ್ದಾರೆ. ಮೇಲಾಗಿ ಅಗರ್ತಲಾದಲ್ಲಿ ಬಿಎಂಡಬ್ಲ್ಯು ಸರ್ವಿಸ್ ಸೆಂಟರ್ ಇಲ್ಲವಾಗಿದ್ದು, ಅಲ್ಲಿನ ರಸ್ತೆಗಳೂ ಇಂತಹ ವಿಲಾಸಿ ಕಾರುಗಳಿಗೆ ಪೂರಕವಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
ಈ ನಿರ್ಧಾರವನ್ನು ಹೈದರಾಬಾದ್ ಬ್ಯಾಡ್ಮಿಂಟನ್ ಅಸೋಸಿಯೇಶನ್ನಿನ ಪದಾಧಿಕಾರಿಗಳಿಗೂ ತಿಳಿಸಲಾಗಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News