ಪತ್ರಕರ್ತ ಎಂ.ಜೆ.ರಾವ್ ನಿಧನ
ಮಂಗಳೂರು, ಅ. 15: ‘ಸುಮ ಸೌರಭ’ ಪತ್ರಿಕೆಯ ಸ್ಥಾಪಕ ಎಂ.ಜನಾರ್ಧನ ರಾವ್ (60) ಇಂದು ಹೃದಯಾಘಾತದಿಂದ ನಿಧನ ಹೊಂದಿದರು. ನಗರದಲ್ಲಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಬಂಟ್ಸ್‌ಹಾಸ್ಟೆಲ್ ಬಳಿ ಬಸ್ಸಿನಿಂದ ಇಳಿಯುತ್ತಿದ್ದಾಗ ಹಠಾತ್ ಹೃದಾಯಾಘಾತಗೊಂಡು ಕುಸಿದು ಬಿದ್ದಿದ್ದು, ಅವರನ್ನು ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಅವರು ಪತ್ನಿ ಮೂವರು ಪುತ್ರರು ಹಾಗೂ ಓರ್ವ ಪುತ್ರಿ ಸಹಿತ ಅಪಾರ ಬಂಧು, ಮಿತ್ರರನ್ನು ಅಗಲಿದ್ದಾರೆ.
ಮೂಲತಃ ಕಾಸರಗೋಡಿನ ಬೈಲಂಗಡಿನವರಾದ ಎಂ.ಜೆ.ರಾವ್ ಅವರು, ತಮ್ಮ ವಾಸವನ್ನು ಬಂಟ್ವಾಳ ತಾಲೂಕಿನ ಕಕ್ಕೆಪದವು ಎಂಬಲ್ಲಿ ವರ್ಗಾಯಿಸಿದ್ದರು. ‘ನವಭಾರತ’ ಪತ್ರಿಕೆಯಲ್ಲಿ ಕೆಲವು ಕಾಲ ಕೆಲಸ ಮಾಡಿಕೊಂಡಿದ್ದ ಅವರು, ಅನಂತರ ‘ಸುಮ ಸೌರಭ’ ಪತ್ರಿಕೆಯನ್ನು ಪ್ರಾರಂಭಿಸಿದ್ದರು. ಪತ್ರಿಕೆಯ ರಜತಮಹೋತ್ಸವದ ಸಿದ್ಧತೆಯಲ್ಲಿದ್ದರು ಎಂದು ಮೂಲಗಳು ತಿಳಿಸಿವೆ.
1991ರಿಂದ 2004ರವರೆಗೆ ‘ಸುಮ ಸೌಲಭ’ ವತಿಯಿಂದ ಪ್ರತಿ ವರ್ಷ ನಗರದಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಸನ್ಮಾನಿಸಿ ಸೌಲಭ ಪ್ರಶಸ್ತಿ ಪ್ರದಾನ ಮಾಡುತ್ತಿದ್ದರು. ಅಲ್ಲದೆ, ಯಕ್ಷಗಾನ, ತಾಳಮದ್ದಳೆ, ಭರತನಾಟ್ಯ ಮೊದಲಾದ ರ್ಕಾಕ್ರಮಗಳನ್ನು ಏರ್ಪಡಿಸುತ್ತಿದ್ದರು. ಯಕ್ಷಗಾನ ಕಲಾವಿದರೂ, ಕಲಾ ಪೋಷಕರೂ ಆಗಿದ್ದ ಅವರಿಗೆ ಆರ್ಯಭಟ ಪ್ರಶಸ್ತಿ, ಸುವರ್ಣ ಕರ್ನಾಟಕ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಶ್ರೀದೇವರ ದಾಸಿಮಯ್ಯ ರಾಷ್ಟ್ರೀಯ ರತ್ನ ಪ್ರಶಸ್ತಿಗಳು ಲಭಿಸಿದ್ದವು.