ಭಾರತದ ಇತಿಹಾಸದಲ್ಲಿ ಹುದುಗಿಹೋದ ಹೈದರಾಬಾದ್ ನರಮೇಧ

Update: 2016-10-16 14:23 GMT

ಭಾರತೀಯ ಸೇನೆ ಕೆಲವರನ್ನು ಸಾಲು ನಿಲ್ಲಿಸಿ ಗುಂಡಿಕ್ಕಿ ಹತ್ಯೆ ಮಾಡಿತು. ಇಷ್ಟಾಗಿಯೂ ಸರಕಾರ ನೇಮಿಸಿದ ಸಮಿತಿಯ ವರದಿಯನ್ನು ಬಹಿರಂಗಪಡಿಸಲೇ ಇಲ್ಲ. ಈ ಹತ್ಯಾಕಾಂಡದ ಬಗ್ಗೆ ಭಾರತದಲ್ಲಿ ಕೆಲವರಿಗಷ್ಟೇ ಗೊತ್ತು. ಮುಂದೆ ಅಧಿಕಾರದ ಚುಕ್ಕಾಣಿ ಹಿಡಿದ ಎಲ್ಲ ಸರಕಾರಗಳು ಇದನ್ನು ಮುಚ್ಚಿಹಾಕುತ್ತಲೇ ಬಂದವು ಎಂದು ಹಲವರು ಅಭಿಪ್ರಾಯಪಡುತ್ತಾರೆ.

ಭಾರತ ಬ್ರಿಟಿಷ್ ಸಾಮ್ರಾಜ್ಯದಿಂದ ಸ್ವಾತಂತ್ರ್ಯ ಪಡೆದ ಬಳಿಕ 1948ರ ಸೆಪ್ಟಂಬರ್ ಹಾಗೂ ಅಕ್ಟೋಬರ್‌ನಲ್ಲಿ, ಮಧ್ಯಭಾರತದಲ್ಲಿ ಹತ್ತಾರು ಸಾವಿರ ಮಂದಿಯನ್ನು ಕ್ರೂರ, ಅಮಾನುಷವಾಗಿ ಹತ್ಯೆ ಮಾಡಲಾಯಿತು. ಭಾರತ 1947ರಲ್ಲಿ ವಿಭಜನೆಯಾದಾಗ ಪಾಕಿಸ್ತಾನದ ಗಡಿಯಲ್ಲಿ ಸುಮಾರು ಐದು ಲಕ್ಷ ಮಂದಿ ಕೋಮುಗಲಭೆಯಲ್ಲಿ ಜೀವ ಕಳೆದುಕೊಂಡಿದ್ದರು. ಆದರೆ ವರ್ಷದ ಬಳಿಕ ಭಾರತದಲ್ಲಿ ಮತ್ತೊಂದು ನರಮೇಧ ನಡೆಯಿತು. ಇದುವರೆಗೆ ಈ ಘಟನೆಯನ್ನು ರಹಸ್ಯವಾಗಿಯೇ ಇಡಲಾಗಿತ್ತು.

ಭಾರತೀಯ ಸೇನೆ ಕೆಲವರನ್ನು ಸಾಲು ನಿಲ್ಲಿಸಿ ಗುಂಡಿಕ್ಕಿ ಹತ್ಯೆ ಮಾಡಿತ್ತು. ಇಷ್ಟಾಗಿಯೂ ಸರಕಾರ ನೇಮಿಸಿದ ಸಮಿತಿಯ ವರದಿಯನ್ನು ಬಹಿರಂಗಪಡಿಸಲೇ ಇಲ್ಲ. ಈ ಹತ್ಯಾಕಾಂಡದ ಬಗ್ಗೆ ಭಾರತದಲ್ಲಿ ಕೆಲವರಿಗಷ್ಟೇ ಗೊತ್ತು. ಮುಂದೆ ಅಧಿಕಾರದ ಚುಕ್ಕಾಣಿ ಹಿಡಿದ ಎಲ್ಲ ಸರಕಾರಗಳು ಇದನ್ನು ಮುಚ್ಚಿಹಾಕುತ್ತಲೇ ಬಂದರು ಎಂದು ಹಲವರು ಅಭಿಪ್ರಾಯಪಡುತ್ತಾರೆ.

ಈ ಹತ್ಯಾಕಾಂಡ ನಡೆದದ್ದು, ವಿಭಜನೆ ಹಿಂಸಾಚಾರ ನಡೆದ ಒಂದು ವರ್ಷದ ಬಳಿಕ, ಭಾರತದ ಕೇಂದ್ರಸ್ಥಾನವಾದ ಅಂದಿನ ಹೈದರಾಬಾದ್ ರಾಜ್ಯದಲ್ಲಿ. ಭಾರತದಲ್ಲಿ ಸ್ವಾತಂತ್ರ್ಯ ಸಿಗುವ ವೇಳೆಗೆ ಅಧಿಕಾರದಲ್ಲಿದ್ದ 500 ರಾಜರ ಆಡಳಿತದ ಸಾಮ್ರಾಜ್ಯಗಳಲ್ಲಿ ಇದೂ ಒಂದು. ಈ ಸಾಮ್ರಾಜ್ಯ ಕೂಡಾ ಬ್ರಿಟಿಷರಿಂದ ವಿಮೋಚನೆ ಪಡೆಯಿತು. ಸ್ವಾತಂತ್ರ್ಯ ಬಂದಾಗ ಈ ಎಲ್ಲ ರಾಜರು ಭಾರತದ ಭಾಗವಾಗಲು ಒಪ್ಪಿಕೊಂಡರು. ಆದರೆ ಹೈದರಾಬಾದ್‌ನ ಮುಸ್ಲಿಂ ನಿಜಾಮ, ಸ್ವತಂತ್ರವಾಗಿಯೇ ಮುಂದುವರಿಯುವ ಇಂಗಿತ ವ್ಯಕ್ತಪಡಿಸಿದರು. ಭಾರತದ ಹೊಸ ಪ್ರಜಾಪ್ರಭುತ್ವ ವ್ಯವಸ್ಥೆಗೆ ಶರಣಾಗಲು ಹೈದರಾಬಾದ್ ನಿಜಾಮ ತಿರಸ್ಕರಿಸಿದ್ದು, ದಿಲ್ಲಿ ನಾಯಕರ ಆಕ್ರೋಶಕ್ಕೆ ಕಾರಣವಾಯಿತು.

ಹೈದರಾಬಾದ್ ಹಾಗೂ ದಿಲ್ಲಿ ನಡುವಿನ ಈ ನಿಷ್ಠುರ ನಿರ್ಧಾರದಿಂದಾಗಿ, ಸರಕಾರ ಕೊನೆಗೂ ತಾಳ್ಮೆ ಕಳೆದುಕೊಂಡಿತು. ಹಿಂದೂ ಪ್ರಾಬಲ್ಯದ ದೇಶದ ಹೃದಯ ಭಾಗದಲ್ಲಿ, ಸ್ವತಂತ್ರ ಮುಸ್ಲಿಂ ರಾಜ್ಯವೊಂದು ಬೇರೂರುವುದನ್ನು ತಡೆಯುವುದು ಸರಕಾರದ ಉದ್ದೇಶವಾಗಿತ್ತು ಎಂದು ಇತಿಹಾಸಕಾರರು ಹೇಳುತ್ತಾರೆ.

ಈ ಸಂದರ್ಭದಲ್ಲಿ ಪ್ರಭಾವಿ ಮುಸ್ಲಿಂ ರಾಜಕೀಯ ಪಕ್ಷದ ಸಶಸ್ತ್ರ ಪಡೆಯಾದ ರಝಾಕರ್ ಮಿಲಿಷಿಯಾ ಕಾರ್ಯಕರ್ತರು ಹಲವು ಮಂದಿ ಹಿಂದೂ ನಿವಾಸಿಗಳಲ್ಲಿ ಭೀತಿ ಮೂಡಿಸುತ್ತಿದ್ದರು. ಇದು ಪ್ರಧಾನಿ ಜವಾಹರಲಾಲ್ ನೆಹರೂ ಅವರಿಗೆ ಹೈದರಾಬಾದ್ ಮೇಲಿನ ಆಕ್ರಮಣಕ್ಕೆ ಸಾಕಾಯಿತು. ಭಾರತೀಯ ಸೇನೆ ಹೈದರಾಬಾದ್ ಮೇಲೆ 1948ರ ಸೆಪ್ಟಂಬರ್‌ನಲ್ಲಿ ದಾಳಿ ಕೈಗೊಂಡಿತು.

ಇದನ್ನು ಪೊಲೀಸ್ ಕಾರ್ಯಾಚರಣೆ ಎಂದು ತಪ್ಪಾಗಿ ಅರ್ಥೈಸಲಾಯಿತು. ದೊಡ್ಡ ಪ್ರಮಾಣದಲ್ಲಿ ನಾಗರಿಕರ ಸಾವು ನೋವು ಸಂಭವಿಸುವ ಮುನ್ನವೇ, ನಿಜಾಮ ಪಡೆ ಕೆಲವೇ ದಿನಗಳಲ್ಲಿ ಭಾರತೀಯ ಸೇನೆಯ ವಿರುದ್ಧ ಸೋಲು ಅನುಭವಿಸಿತು. ಆದರೆ ಈ ದಾಳಿಯ ಬಳಿಕ ದೊಂಬಿ, ಲೂಟಿ, ಮುಸ್ಲಿಮರ ಸಾಮೂಹಿಕ ಹತ್ಯೆ, ಅತ್ಯಾಚಾರದ ಸುದ್ದಿ ದಿಲ್ಲಿ ತಲುಪಿತು. ಹೈದರಾಬಾದ್‌ನಲ್ಲಿ ಏನು ನಡೆಯುತ್ತಿದೆ ಎಂದು ತಿಳಿಯುವ ಉದ್ದೇಶದಿಂದ ನೆಹರೂ, ವಿವಿಧ ನಂಬಿಕೆಗಳ ಜನರನ್ನೊಳಗೊಂಡ ತಂಡವನ್ನು, ಹೈದರಾಬಾದ್ ಘಟನೆ ತನಿಖೆಗಾಗಿ ನೇಮಕ ಮಾಡಿದರು. ಹಿಂದೂ ಕಾಂಗ್ರೆಸ್ಸಿಗ ಪಂಡಿತ್ ಸುಂದರ್‌ಲಾಲ್ ಇದರ ನೇತೃತ್ವ ವಹಿಸಿದ್ದರು. ಆದರೆ ಅವರು ನೀಡಿದ ವರದಿ ಎಂದೂ ಬಹಿರಂಗವಾಗಲೇ ಇಲ್ಲ. ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಇತಿಹಾಸ ಸಂಶೋಧಕ ಸುನೀಲ್ ಪುರುಷೋತ್ತಮ ಈ ವರದಿಯ ಪ್ರತಿಯನ್ನು ತಮ್ಮ ಸಂಶೋಧನೆಗಾಗಿ ಪಡೆದಿದ್ದಾರೆ.

ಸುಂದರ್‌ಲಾಲ್ ತಂಡ ರಾಜ್ಯಾದ್ಯಂತ ಸಂಚರಿಸಿ, ಹಲವು ಮಂದಿ ಗ್ರಾಮಸ್ಥರನ್ನು ಸಂಪರ್ಕಿಸಿತ್ತು.

ಈ ಭೀಕರ ಹಿಂಸಾಚಾರದಲ್ಲಿ ಉಳಿದುಕೊಂಡ ಎಲ್ಲ ಮುಸ್ಲಿಮರು, ಘಟನೆಯ ತೀವ್ರತೆಯ ಚಿತ್ರಣವನ್ನು ವಿವರಿಸಿದ್ದಾರೆ. ‘‘ಭಾರತೀಯ ಸೇನೆಗೆ ಸೇರಿದ ಮಂದಿ ಹಾಗೂ ಸ್ಥಳೀಯ ಪೊಲೀಸರು ಕೂಡಾ ಲೂಟಿ ಹಾಗೂ ಇತರ ಅಪರಾಧದಲ್ಲಿ ತೊಡಗಿದ್ದರು ಎನ್ನುವುದಕ್ಕೆ ನಮ್ಮ ಬಳಿ ಸಾಕಷ್ಟು ಸಾಕ್ಷ್ಯಗಳಿವೆ’’ ಎಂದು ಸ್ಪಷ್ಟಪಡಿಸಿದ್ದರು.

‘‘ನಮ್ಮ ಪ್ರವಾಸದ ಅವಧಿಯಲ್ಲಿ ಕಲೆ ಹಾಕಿದ ಮಾಹಿತಿಗಳ ಪ್ರಕಾರ, ಕೆಲವೆಡೆಗಳಲ್ಲಿ ಸೈನಿಕರನ್ನು ಇಂಥ ಕೃತ್ಯಕ್ಕೆ ಪ್ರಚೋದಿಸಿದ್ದರೆ, ಮತ್ತೆ ಕೆಲವೆಡೆ ಮುಸ್ಲಿಂ ಅಂಗಡಿಗಳು ಮತ್ತು ಮನೆಗಳನ್ನು ಲೂಟಿ ಮಾಡುವಂತೆ ಹಿಂದೂ ಗುಂಪುಗಳಿಗೆ ಕುಮ್ಮಕ್ಕು ನೀಡಿರುವುದು ಸ್ಪಷ್ಟವಾಗಿದೆ’’ ಎಂಬ ಉಲ್ಲೇಖ ವರದಿಯಲ್ಲಿದೆ.

‘‘ಭಾರತೀಯ ಸೇನೆ ಮುಸ್ಲಿಂ ಗ್ರಾಮಸ್ಥರನ್ನು ಶಸ್ತ್ರತ್ಯಾಗ ಮಾಡಿಸಿತು. ಆದರೆ ಹಿಂದೂಗಳು ತಾವು ಹೊಂದಿದ ಶಸ್ತ್ರಾಸ್ತ್ರಗಳನ್ನು ಹಾಗೆಯೇ ಉಳಿಸಿಕೊಂಡರು. ಗುಂಪು ದೊಂಬಿಗಳ ನೇತೃತ್ವವನ್ನು ಹಿಂದೂ ಅರೆಸೇನಾ ಪಡೆಗಳೇ ವಹಿಸಿದ್ದವು. ಇನ್ನು ಕೆಲವು ಪ್ರಕರಣಗಳಲ್ಲಿ ಭಾರತೀಯ ಸೈನಿಕರೇ ಈ ಹತ್ಯಾಕಾಂಡದ ಮುಂಚೂಣಿಯಲ್ಲಿದ್ದರು. ಹಲವು ಪ್ರಕರಣಗಳಲ್ಲಿ ಸೈನಿಕರು ಮುಸ್ಲಿಂ ಪುರುಷರನ್ನು ಗ್ರಾಮ ಹಾಗೂ ಪಟ್ಟಣಗಳಿಂದ ಹೊರಗೆ ಕರೆದೊಯ್ದು ಹತ್ಯೆ ಮಾಡಿದರು’’ ಎಂದು ವರದಿ ವಿವರಿಸಿದೆ.

ಆದಾಗ್ಯೂ ಭಾರತೀಯ ಸೇನೆ ಉತ್ತಮ ನಡತೆ ತೋರಿ, ಮುಸ್ಲಿಮರನ್ನು ರಕ್ಷಿಸಿದ ನಿದರ್ಶನಗಳನ್ನೂ ವರದಿ ಬಣ್ಣಿಸಿದೆ.

ರಝಾಕರ್ ಸಮುದಾಯದವರು ಹಲವು ವರ್ಷಗಳ ಕಾಲ ನಡೆಸಿದ ಭಯೋತ್ಪಾದನೆ ಕೃತ್ಯಗಳಿಗೆ ಪ್ರತೀಕಾರವಾಗಿ ಈ ಹತ್ಯಾಕಾಂಡ ನಡೆಯಿತು ಎನ್ನಲಾಗಿದೆ.

ಸುಂದರ್‌ಲಾಲ್ ವರದಿಯ ಜತೆ ನೀಡಿದ ರಹಸ್ಯ ಟಿಪ್ಪಣಿಗಳಲ್ಲಿ, ಈ ಹಿಂದೂ ಪ್ರತೀಕಾರದ ಕ್ರೂರ ಮುಖವನ್ನು ಬಣ್ಣಿಸಲಾಗಿದೆ. ‘‘ಹಲವು ಕಡೆಗಳಲ್ಲಿ ಬಾವಿಗಳ ತುಂಬಾ ಶವಗಳು ಕೊಳೆಯುತ್ತಿದ್ದುದನ್ನು ನಮಗೆ ತೋರಿಸಲಾಗಿದೆ. ಅಂಥ ಒಂದು ಕಡೆ ನಾವು 11 ಶವಗಳನ್ನ ಕಂಡಿದ್ದೇವೆ. ಇದರಲ್ಲಿ ಒಬ್ಬ ಮಹಿಳೆ ಪುಟ್ಟ ಕಂದನನ್ನು ಎದೆಗೆ ಅವುಚಿಕೊಂಡು ಪ್ರಾಣ ಬಿಟ್ಟದ್ದು ಘಟನೆಯ ತೀವ್ರತೆಯನ್ನು ಸಾರುತ್ತಿತ್ತು’’ ಎಂದು ವಿವರಿಸಲಾಗಿದೆ.

ಈ ಹಿಂಸಾಚಾರದಲ್ಲಿ 27 ಸಾವಿರದಿಂದ 40 ಸಾವಿರ ಮಂದಿ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಸುಂದರ್‌ಲಾಲ್ ಸಮಿತಿ ಅಂದಾಜು ಮಾಡಿದೆ. ಸುಂದರ್‌ಲಾಲ್ ವರದಿಯನ್ನು ಬಹಿರಂಗಪಡಿಸದಿರುವ ನೆಹರೂ ನಿರ್ಧಾರಕ್ಕೆ ಯಾವುದೇ ಅಧಿಕೃತ ವಿವರಣೆಯನ್ನು ಸರಕಾರ ಬಿಡುಗಡೆ ಮಾಡಿರಲಿಲ್ಲ. ಬಹುಶಃ ಸ್ವಾತಂತ್ರ್ಯಾ ನಂತರದ ಆರಂಭಿಕ ಹಂತದಲ್ಲೇ ಹಿಂದೂಗಳ ವಿರುದ್ಧ ಮುಸ್ಲಿಂ ಆಕ್ರೋಶಕ್ಕೆ ಇದು ಕಾರಣವಾಗಬಹುದು ಎಂಬ ಕಾರಣಕ್ಕೆ ಇರಬಹುದು.

ಘಟನೆ ನಡೆದು ಹಲವು ದಶಕಗಳು ಕಳೆದರೂ, ಈ ಇತಿಹಾಸ ಪುಟಗಳ ವಿವರಗಳು ಶಾಲೆಗಳ ಪಠ್ಯದಲ್ಲಿ ಕೂಡಾ ಏಕೆ ದಾಖಲಾಗಿಲ್ಲ ಎನ್ನುವುದು ಅಸ್ಪಷ್ಟ. ಇಂದಿಗೂ ಬಹುತೇಕ ಭಾರತೀಯರಿಗೆ ಈ ಘಟನೆಯ ಬಗ್ಗೆ ತಿಳಿದೇ ಇಲ್ಲ. ಸುಂದರ್‌ಲಾಲ್ ವರದಿ ಬಹುತೇಕ ಮಂದಿಗೆ ಗೊತ್ತಿಲ್ಲದಿದ್ದರೂ, ಈ ವರದಿ ಇದೀಗ, ಹೊಸದಿಲ್ಲಿಯ ನೆಹರೂ ಸ್ಮಾರಕ ಮ್ಯೂಸಿಯಂ ಮತ್ತು ಗ್ರಂಥಾಲಯದಲ್ಲಿ ವೀಕ್ಷಣೆಗೆ ಲಭ್ಯ. ಇದು ಸಾರ್ವಜನಿಕರಿಗೆ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗುವಂತೆ ವ್ಯವಸ್ಥೆ ಮಾಡಬೇಕು ಎಂದು ಮಾಧ್ಯಮಗಳೂ ಇತ್ತೀಚೆಗೆ ಆಗ್ರಹಿಸಿವೆ. ಆದ್ದರಿಂದ ಇಡೀ ದೇಶವೇ, ಅಂದು ಏನಾಯಿತು ಎನ್ನುವುದನ್ನು ತಿಳಿದುಕೊಳ್ಳಬಹುದಾಗಿದೆ.

ಇದು ದೇಶದಲ್ಲಿ ಮುಂದುವರಿದಿರುವ ಹಿಂದೂ- ಮುಸ್ಲಿಂ ಸಂಘರ್ಷ ಇನ್ನಷ್ಟು ಹೆಚ್ಚಲು ಕಾರಣವಾಗಬಹುದು ಎಂಬ ವಾದವೂ ಇದೆ. ‘‘ಈ ದೇಶದಲ್ಲಿ ಎಲ್ಲ ಸಂಘರ್ಷ ಹಾಗೂ ಸಮಸ್ಯೆಗಳ ನಡುವೆ ಬದುಕುವುದು ನಮಗೆ ಸಾಮಾನ್ಯವಾಗುವುದರಿಂದ ಈ ವರದಿಯ ವಿಷಯ ದೊಡ್ಡ ವಿವಾದ ಹುಟ್ಟಿಸುತ್ತದೆ ಎಂದು ನನಗನಿಸುವುದಿಲ್ಲ’’ ಎಂದು ಆ ಕಾಲದಲ್ಲಿ ಹೈದರಾಬಾದ್ ನಿವಾಸಿಯಾಗಿದ್ದ ನರಸಿಂಗ್ ರಾವ್ ಹೇಳುತ್ತಾರೆ. ‘‘ಪ್ರತಿಕ್ರಿಯೆ, ವಿರುದ್ಧ ಪ್ರತಿಕ್ರಿಯೆ ಹಾಗೂ ಇತರ ಹಲವು ಅಂಶಗಳು ನಡೆಯುತ್ತಲೇ ಇರುತ್ತವೆ. ಆದರೆ ಶೈಕ್ಷಣಿಕ ವಲಯದಲ್ಲಿ, ಸಂಶೋಧನಾ ವಲಯದಲ್ಲಿ, ಪ್ರಸಾರದ ಹಂತದಲ್ಲಿ, ಈ ಅಂಶಗಳು ಹೊರಬರಬೇಕು. ಇದರಿಂದ ಯಾವ ಸಮಸ್ಯೆಯೂ ಇಲ್ಲ’’ ಎನ್ನುವುದು 80ರ ವಯೋಮಾನದಲ್ಲಿರುವ ಅವರ ಸ್ಪಷ್ಟ ನಿಲುವು.

ಕೃಪೆ: ಬಿಬಿಸಿ

Writer - ಮೈಕ್ ಥೋಮಸ್

contributor

Editor - ಮೈಕ್ ಥೋಮಸ್

contributor

Similar News