ನಿಮ್ಮ ಮಕ್ಕಳ ಬಾಲ್ಯ ಜೋಪಾನವಾಗಿಡಿ

Update: 2016-10-16 16:12 GMT

ಮಧ್ಯಮ ವರ್ಗದ ಕುಟುಂಬಗಳೇ ಹೆಚ್ಚಾಗಿರುವಂತಹ ಈ ಸಮಾಜದಲ್ಲಿ, ಸಮಾಜದ ಅಡಿಪಾಯವೇ ಮಧ್ಯಮ ವರ್ಗ. ಆಧುನಿಕ ಯುಗದಲ್ಲಿ ಪತಿ, ಪತ್ನಿಯರಿಬ್ಬರೂ ನೌಕರಿಗಾಗಿ ಹೊರಗೆ ಹೋಗಲೇಬೇಕಾದ ಒತ್ತಡ. ಸುಸ್ತಾದ ದೇಹದೊಂದಿಗೆ, ದಣಿದ ಮನಸ್ಸಿನೊಂದಿಗೆ ಬರುವ ವ್ಯಕ್ತಿಗಳಿಗೆ ವ್ಯವಧಾನವೆಲ್ಲಿ?. ಆಗ ಬಳಲುವುದು ಮಗು. ಮಾನಸಿಕವಾಗಿ, ದೈಹಿಕವಾಗಿ ದೌರ್ಜನ್ಯಕ್ಕೊಳಗಾಗುವಂತಹ ಪರಿಸ್ಥಿತಿ ಬರಬಹುದು.

ಪ್ರತಿಯೊಬ್ಬರಿಗೂ ವಸತಿಗಳಿವೆ. ಆದರೆ ಕೆಲವರಿಗಷ್ಟೇ ಮನೆಗಳಿರುತ್ತವೆ. ಮನೆ ಎಂಬುದು ಕೇವಲ ನಾಲ್ಕು ಗೋಡೆಗಳಿಂದ ಕಟ್ಟಿದರಷ್ಟೇ ಸಲ್ಲ. ಏಕಾಂಗಿಯಾಗಿರದೆ, ಲೋನ್ಲಿ ಎಂದೆನಿಸದೆ, ಹೋಮ್ಲಿ ಎಂದಾಗುವುದು ಮನೆಯಿಂದ.

ಮನೆ ಮತ್ತು ಕುಟುಂಬ, ಓರ್ವ ಮನುಷ್ಯನ ಮಾನಸಿಕ ಆರೋಗ್ಯದ ಮೂಲ ಎಂದರೆ ತಪ್ಪಾಗಲಾರದು. ಮನುಷ್ಯ, ಮಾನವನಾಗುವುದು ಆತನಿಗೆ ಸಾಕಷ್ಟು ಪ್ರೀತಿ ಮತ್ತು ಕಾಳಜಿ ದೊರಕಿದಾಗ ಮಾತ್ರ.

ಮಕ್ಕಳು, ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಹೊರ ಹೊಮ್ಮಲು ಮನೆ ಮತ್ತು ಕುಟುಂಬ ಒಂದು ತರಬೇತಿ ಶಿಬಿರ ಎನ್ನಲು ಅಡ್ಡಿಯಿಲ್ಲ. ಈ ತರಬೇತಿಯು, ಚೆನ್ನಾಗಿ ನಡೆದರೆ ಮಾತ್ರ ಸಮಾಜದ ಸ್ವಾಸ್ಥವನ್ನು ಉಳಿಸುವಂತಹ ಪ್ರಜೆಗಳ ನಿರ್ಮಾಣವಾಗಬಹುದು.

ಸಮಸ್ಯಾತ್ಮಕ ವ್ಯಕ್ತಿಗಳ ಕುರಿತು ಅಧ್ಯಯನ ಮಾಡಿದಾಗ ಕಂಡು ಬರುವಂತಹ, ಮುಖ್ಯ ಅಂಶವೆಂದರೆ, ಅಸಮರ್ಪಕ, ತೊಂದರೆಗೊಳಪಟ್ಟಂತಹ ಬಾಲ್ಯ. ಬಾಲ್ಯದ ರಚನಾತ್ಮಕ ವರ್ಷಗಳಲ್ಲಿ ಉಂಟಾಗುವಂತಹ ತೊಂದರೆಗಳಿಂದ, ವ್ಯಕ್ತಿಯು ಜೀವಮಾನವಿಡೀ ತೊಳಲಾಡ ಬೇಕಾಗುವಂತಹ ಪರಿಸ್ಥಿತಿ ಉಂಟಾಗುತ್ತದೆ. ಹಾಗಾಗಿ ಬಾಲ್ಯವು ಆರೋಗ್ಯಕರವಾಗಿ ಇರಬೇಕಾದುದು, ವ್ಯಕ್ತಿಯ ಮಾನಸಿಕ ಆರೋಗ್ಯಕ್ಕೆ ಅತೀ ಅಗತ್ಯ.

ತಂದೆ, ತಾಯಿ ಅಥವಾ ಕುಟುಂಬದ ಸದಸ್ಯರು, ಮಕ್ಕಳ ಬೆಳವಣಿಗೆಯ ಹಂತದಲ್ಲಿ ಮಾಡುವ ಹಲವಾರು ತಪ್ಪುಗಳಿಂದಾಗಿ, ಮಗುವು ಪೂರ್ಣವಾಗಿ ಬೆಳೆದು, ಯೋಗ್ಯ ನಾಗರಿಕನಾಗಬೇಕಾದ ಸಮಯದಲ್ಲಿ ಆತನ ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯವು ಪರಿಪೂರ್ಣತೆಯಿಂದ ಕೂಡಿರುವುದಿಲ್ಲ. ಕೆಲವೊಮ್ಮೆ ದೇಹ ಆರೋಗ್ಯವಾಗಿದ್ದರೂ, ಮಾನಸಿಕ ಆರೋಗ್ಯ ಹದಗೆಟ್ಟಿರುತ್ತದೆ.

ಮಗುವಿನ ಬಾಲ್ಯದಲ್ಲಿ ಅರ್ಥಾತ್ ಬೆಳವಣಿಗೆಯ ಹಂತದಲ್ಲಿ, ಪೋಷಕರಿಂದ ಉಂಟಾಗುವಂತಹ ಕೆಲವು ಸಾಮಾನ್ಯ ತಪ್ಪುಗಳಿಂದಾಗಿ, ಒಬ್ಬ ಆರೋಗ್ಯವಂತ ವ್ಯಕ್ತಿಯ ಬದಲಿಗೆ, ಸಮಾಜಕ್ಕೆ ಹೊರೆಯಾಗುವಂತಹ, ಓರ್ವ ಮಾನಸಿಕ ಅಸ್ಥಿರತೆಯುಳ್ಳ, ಅಪರಿಪಕ್ವ ವ್ಯಕ್ತಿತ್ವದ ವ್ಯಕ್ತಿಯು ದೊರೆಯಬಹುದು.

ಅತಿಯಾದ ಸಂರಕ್ಷಣೆ, ಭೇದಭಾವ, ಪಕ್ಷಪಾತದ ಹೋಲಿಕೆ, ಆಜ್ಞಾಧಾರಕ ವರ್ತನೆ, ಅತಿಯಾದ ಆಕಾಂಕ್ಷೆ, ಮಕ್ಕಳ ಭವಿಷ್ಯದ ಹೆಬ್ಬಯಕೆ, ತಿರಸ್ಕಾರ ಮಕ್ಕಳಿಂದ ಪರಿಪೂರ್ಣತೆಯ ಅಪೇಕ್ಷೆ, ತಮ್ಮಿಂದ ಸಾಧ್ಯವಾಗದ್ದನ್ನು ಮಕ್ಕಳಿಂದ ಮಾಡಿಸುವ ಬಯಕೆ, ಆ ಬಯಕೆಗಳ ಪೂರ್ತೀಕರಣಕ್ಕಾಗಿ ಅತಿಯಾದ ಒತ್ತಡ, ಅಥವಾ ಅತಿಯಾದ ಶಿಸ್ತು, ಕೆಲವೊಂದು ಸಲ ಪೋಷಕರಿಗೆ, ಅಪರೂಪದ ಸಂತಾನವೋ, ಅಥವಾ ಕಿರಿಯ ಮಕ್ಕಳೋ ಆದರೆ, ವಿಪರೀತ ಸಲಿಗೆ, ಅವರ ಪ್ರತಿಯೊಂದು ಸರಿ-ತಪ್ಪುಗಳಿಗೆ ಕುಮ್ಮಕ್ಕು, ಮಕ್ಕಳ ಪರವಾಗಿ, ಅರ್ಥಾತ್ ಅವರ ತಪ್ಪುಗಳ ಪರವಾಗಿ ವಾದಿಸುವುದು.

ಆದರೆ ಎಲ್ಲಾ ಪಾಲಕರೂ, ನೆನಪಿಟ್ಟುಕೊಳ್ಳಬೇಕಾದ ಒಂದು ಅಂಶವೆಂದರೆ, ಮಕ್ಕಳು ಕನ್ನಡಿಯಲ್ಲಿ ನೀವು ನೋಡುವಂತಹ ನಿಮ್ಮ ಪ್ರತಿಬಿಂಬವಲ್ಲ. ಅವರು ಬೇರೆಯೇ ವ್ಯಕ್ತಿಗಳು. ನಿಮ್ಮಿಂದ ಅವರು ಒಂದು ಕಣವಾಗಿ ಹೊರ ಬಿದ್ದಿರಬಹುದು. ನಿಮ್ಮ ರಕ್ತ ಮಾಂಸಗಳನ್ನು ಹಂಚಿಕೊಂಡಿರಬಹುದು ಆದರೆ ಅವರು ಅವರೇ, ಸ್ವತಂತ್ರರೇ, ನಿಮ್ಮ ರೆಪ್ಲಿಕಾ ಅಲ್ಲ. ಅದಾಗಲೂ ಅವರಿಂದ ಸಾಧ್ಯವಿಲ್ಲ. ಒತ್ತಡ, ಆಕಾಂಕ್ಷೆ ಹೇರುವ ಹಿರಿಯರು ಒಂದು ಮಾತನ್ನು ಅರ್ಥ ಮಾಡಿಕೊಳ್ಳಬೇಕು. ನೀವೇಂದಾದರೂ, ನಿಮ್ಮ ತಂದೆ ತಾಯಿಗಳ ಪ್ರತಿಬಿಂಬಗಳಾಗಿದ್ದೀರಾ? ಅವರ ಆಸೆ ಆಕಾಂಕ್ಷೆಗಳಂತೆ ನಿಮ್ಮ ಜೀವನವನ್ನು ರೂಪಿಸಿಕೊಂಡಿದ್ದೀರಾ?. ಹೌದಾದೆಂದಲ್ಲಿ, ಜೀವನದ ಯಾವುದೇ ಹಂತದಲ್ಲಿಯೂ ನಿಮ್ಮನ್ನು ಅಸಹನೆ ಕಾಡಲಿಲ್ಲವೇ? ಅಸಹಾಯಕತೆಯಿಂದ ಕಣ್ಣೀರು ಬರಲಿಲ್ಲವೇ? ಮನಸಿನಲ್ಲೊಂದು ನಿರಾಶೆಯ ಎಳೆಯು ಕಾಡಲಿಲ್ಲವೇ?

 ಇಲ್ಲವೆಂದಾದರೆ ಬಹಳ ಸಂತೋಷ. ಆದರೆ ಒಂದು ತಲಾಶೆ, ಒಂದು ಗಮ್ಯ, ಒಂದು ನಿರೀಕ್ಷೆ, ನಿಮ್ಮದೇ ಆದದ್ದು, ಕೇವಲ ನಿಮ್ಮದೇ ಒಂದು ಆದ ಆಸೆ ಮನಸ್ಸಿನ ಮೂಲೆಯಲ್ಲಿ ಹುದುಗಿರುವಂತಹದ್ದು, ಎಲ್ಲೋ ಯಾವುದೋ ಗಳಿಗೆಯಲ್ಲೋ, ಕಾಡುವ ಒಂಟಿತನದ ನಡುವೆಯೋ ದುತ್ತೆಂದು ಎದುರಿಗೆ ಬಂದು ನಿಂತಿಲ್ಲವೆಂದು ಎದೆ ತಟ್ಟಿ ಹೇಳಲೂ ಮನುಷ್ಯರೆನಿಸಿಕೊಂಡವರಿಂದ, ಭಾವನೆಗಳು ಉಳ್ಳವರಿಂದ ಅಸಾಧ್ಯ. ಒಂದು ವೇಳೆ ನೀವು ನಿಮ್ಮ ತಂದೆ ತಾಯಿಯ ಇಚ್ಛೆಯಂತೆ ನಡೆಯದೇ ನಿಮ್ಮ ಜೀವನವನ್ನು ರೂಪಿಸಿಕೊಂಡವರಾದರೆ, ನಿಮ್ಮ ಶೂಗಳಲ್ಲಿ ನಿಮ್ಮ ಮಕ್ಕಳನ್ನು ಇಳಿಸುವ ಪ್ರಯತ್ನವೇಕೆ?.

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ, ಉನ್ನತ ಶಿಕ್ಷಣ ಪಡೆದವರಲ್ಲಿ ಕೂಡಾ ಒಂದು ಗೀಳಾಗಿದೆ.

ಆದರೆ ನಾವು ಅರ್ಥ ಮಾಡಿ ಕೊಳ್ಳಬೇಕಾಗಿರುವುದು ಏನೆಂದರೆ, ಮಕ್ಕಳಿಗೆ ಆವಶ್ಯಕವಾಗಿ ಬೇಕಾದುದು ಪ್ರೀತಿ, ಸಂರಕ್ಷಣೆ, ಆಧಾರ, ಬೆಚ್ಚನೆಯ ಆಶ್ರಯ, ನಂಬಿಕೆ, ಮಾರ್ಗದರ್ಶನ, ಪ್ರೋತ್ಸಾಹ ಮತ್ತು ಅನುಸರಿಸಲು ಬೇಕಾದ ವ್ಯಕ್ತಿತ್ವ.

 ಬಹಳಷ್ಟು ಕುಟುಂಬಗಳು, ಬದಲಾಯಿಸಲಾರದಂತಹ ಮನೋಸ್ಥಿತಿಯನ್ನು ಹೊಂದಿರುತ್ತವೆ. ಕಠಿಣ ನಿಯಮಗಳೊಂದಿಗೆ ಬದುಕುತ್ತವೆ. ಮಕ್ಕಳ ಮಾತು ವರ್ತನೆಗಳಿಗೆ ಕಡಿವಾಣವಿರುತ್ತದೆ. ಶಾಲೆಗಳಲ್ಲಿ ಅಧ್ಯಾಪಕರು ಕೂಡಾ ಪೋಷಕರ ಮನಸ್ಥಿತಿಯನ್ನು ಬದಲಿಸಲು ಯಾವುದೇ ಪ್ರಯತ್ನ ನಡೆಸಲಾರರು. ಬಹಳಷ್ಟು ಸಮದರ್ಭಗಳಲ್ಲಿ ಪೋಷಕರು, ಮಕ್ಕಳಿಗೆ ಅತ್ಯುತ್ತಮವಾದದ್ದನ್ನೇ ಕೊಡುವ ಪ್ರಯತ್ನ ಮಾಡುತ್ತಾರೆ.

ಕೆಲವೊಂದು ಸಲ ಪಾಲಕರ ಆರ್ಥಿಕ ಸ್ಥಿತಿ ಏರು ಪೇರಾದಾಗ, ಮಕ್ಕಳ ಬಯಕೆಗಳನ್ನು ಈಡೇರಿಸಲಾಗದ ಪರಿಸ್ಥಿತಿಯೂ ಉದ್ಭವಿಸುತ್ತದೆ. ಬಾಲ್ಯದ ಹಲವಾರು ಆಶೆಗಳು ಈಡೇರಿಸಲಾಗದೆ, ಮಕ್ಕಳು ಆಶೆ ಬುರುಕರೋ, ಅಥವಾ ಸ್ವಾರ್ಥಿಗಳೋ, ಹಂಚಿಕೊಳ್ಳದ ಮನೊಭಾವವನ್ನು ಹೊಂದಿದವರಾಗುತ್ತಾರೆ.

ಕೆಲವೊಂದು ಸಲ ಸಣ್ಣ ಮಕ್ಕಳಲ್ಲಿ ಕದಿಯುವ ಗುಣವೂ ಬೆಳೆಯಬಹುದು.

ನೆರೆಹೊರೆಯ ಮಕ್ಕಳೊಂದಿಗಿನ ಹೋಲಿಕೆಗಳು ಕೂಡಾ, ಮಕ್ಕಳಲ್ಲಿ ಅಶಾಂತಿಯನ್ನು ಬೆಳೆಸಬಹುದು.

ಇನ್ನೂ ಕೆಲವೊಂದು ಕುಟುಂಬಗಳಲ್ಲಿ ಅತಿಯಾದ ಸ್ವಾತಂತ್ಯ್ರ, ಸ್ವೇಚ್ಛಾಚಾರಕ್ಕೆ ದಾರಿ ಮಾಡಿ ಕೊಡುತ್ತದೆ. ತಮ್ಮ ತಮ್ಮ ಜೀವನದಲ್ಲಿ ಮುಳುಗಿಹೋಗಿ, ಮಕ್ಕಳನ್ನು ಗಮನಿಸದಿರುವಿಕೆ, ಕೆಲವೊಂದು ಸಂದರ್ಭದಲ್ಲಿ ಅನಿವಾರ್ಯ ಕಾರಣಗಳಿಂದಲೊ ಅಥವಾ ಕೆಟ್ಟ ಚಟಗಳಿಗೆ ಬಲಿಯಾಗಿಯೋ, ಮನೆಯಲ್ಲಿ ಅಶಾಂತಿಯ ವಾತಾವರಣದ ಸೃಷ್ಟಿಯು ಬಾಲ್ಯವನ್ನು ಹದಗೆಡಿಸುತ್ತದೆ.

ಮಧ್ಯಮ ವರ್ಗದ ಕುಟುಂಬಗಳೇ ಹೆಚ್ಚಾಗಿರುವಂತಹ ಈ ಸಮಾಜದಲ್ಲಿ, ಸಮಾಜದ ಅಡಿ ಪಾಯವೇ ಮಧ್ಯಮ ವರ್ಗ. ಆಧುನಿಕತೆ ಯುಗದಲ್ಲಿ ಪತಿ, ಪತ್ನಿಯರಿಬ್ಬರೂ ನೌಕರಿಗಾಗಿ ಹೊರಗೇ ಹೋಗಲೇಬೇಕಾದ ಒತ್ತಡ. ಸುಸ್ತಾದ ದೇಹದೊಂದಿಗೆ, ದಣಿದ ಮನಸ್ಸಿನೊಂದಿಗೆ ಬರುವ ವ್ಯಕ್ತಿಗಳಿಗೆ ವ್ಯವಧಾನವೆಲ್ಲಿ?. ಆಗ ಬಳಲುವುದು ಮಗು. ಮಾನಸಿಕವಾಗಿ, ದೈಹಿಕವಾಗಿ ದೌರ್ಜನ್ಯಕ್ಕೊಳಗಾಗುವಂತಹ ಪರಿಸ್ಥಿತಿ ಬರಬಹುದು. ಹಾಗಾದಲ್ಲಿ ಸ್ವಸ್ಥ ನಾಗರಿಕನಾಗಿ ಸಮಾಜಕ್ಕೆ ಒದಗಿಬರುವುದು ಕನಸೇ ಸರಿ. ಅನೇಕ ಸಂಶೋಧನೆಗಳ ಪ್ರಕಾರ ಅಪರಾಧಿಯಾಗಿ ಪರಿವರ್ತಿತನಾಗಿರುವ ವ್ಯಕ್ತಿಯ ಹಿನ್ನೆಲೆಯನ್ನು ಪರಿಶೀಲಿಸಿದಾಗ ತಿಳಿದು ಬಂದ ಅಂಶವೇನೆಂದರೆ, ಅವರ ಅಸುರಕ್ಷಿತ ಕೆಟ್ಟ ಬಾಲ್ಯ.

2001 ಮಾನವ ಮಾನಸಿಕ ಆರೋಗ್ಯ ಸಮೀಕ್ಷೆಯಿಂದ, ತಿಳಿದು ಬರುವ ಪ್ರಮುಖ ಹನ್ನೊಂದು ಅಂಶಗಳಲ್ಲಿ ಪ್ರಥಮವಾಗಿ ಇರುವ ಅಂಶವೇ ಬಾಲ್ಯದ ಕೆಟ್ಟ ಅನುಭವಗಳಿಂದಾಗುವಂತಹ ಹಾನಿ. ಕೆಟ್ಟ ಅನುಭವಗಳಿಂದ ಜರ್ಜರಿತವಾದ ಎಳೆಯ ಮುಗ್ಧ ಮನಸು, ಆತನ ನಂತರದ ಜೀವನದಲ್ಲಿ ಅದರ ಛಾಯೆಯೊಂದಿಗೆ ಬದುಕಬೇಕಾಗುತ್ತದೆ.

ಹಾಗಾಗಬಾರದೆಂದರೆ, ದೇಶಕ್ಕೆ ಸಶಕ್ತ, ಮಾನಸಿಕ, ದೈಹಿಕ ಆರೋಗ್ಯವಂತರು, ಸಮಾಜದ ಕೊಡುಗೆಯಾಗಬೇಕಾದರೆ, ಮಕ್ಕಳ ಬಾಲ್ಯವನ್ನು ಜಾಗರೂಕತೆಯಿಂದ ಕಾಪಾಡಿಕೊಳ್ಳುವುದು ಅತೀ ಅಗತ್ಯ. ಅದು ಹಿರಿಯರ, ಮಾತಾಪಿತರ, ಶಿಕ್ಷಕರ ಮತ್ತು ಸಮಾಜದ ಹೊಣೆಗಾರಿಕೆಯಾಗಿದೆ.

 ವೃದ್ಧ ತಂದೆ, ತಾಯಿಗಳನ್ನು ಒಂಟಿಯಾಗಿಸಿ ಅವರ ಜೀವನವನ್ನು ನರಕಗೊಳಿಸುವುದರ ಬದಲು, ಅವರೊಂದಿಗೆ ಹೊಂದಾಣಿಕೆ ಮಾಡಿ, ಎಳೆಯ ಜೀವಗಳನ್ನು ಅವರ ಕಣ್ಣೆಪ್ಪೆಯ ರಕ್ಷಣೆಯಲ್ಲಿ ಬಿಡುವುದು ಇಂದಿನ ಅಗತ್ಯವಾಗಿದೆ. ಹಾಗಾದಾಗ ಸಮಾಜವು ಶಾಂತಿಯುತವಾಗಿ ಬಾಳಲು ಕೂಡಾ ಯೋಗ್ಯವೆನಿಸುವುದು. ತಂದೆ, ತಾಯಿಯರ ಬಿಡುವಿಲ್ಲದ, ವಿಶ್ರಾಂತಿ ರಹಿತ ಜೀವನದಲ್ಲಿ ಕೂಡಾ, ಕೂಡು ಕುಟುಂಬದ ತಂಪು ಬೀಸಲಿ.

  ಲೇಖಕರು: ಕಲ್ಲಿಕೋಟೆಯ  ಗ್ಲೋಬಲ್ (ಬ್ರಿಟಿಷ್) ಇಂಗ್ಲಿಷ್ ಸ್ಕೂಲ್, ಪ್ರಾಂಶುಪಾಲರು,

Writer - ಝೊಹರಾ ಅಬ್ಬಾಸ್

contributor

Editor - ಝೊಹರಾ ಅಬ್ಬಾಸ್

contributor

Similar News