ವೇಮುಲಾ ಹತ್ಯೆ: ಹೈದರಾಬಾದ್ ವಿವಿ ಇನ್ನೂ ಬೂದಿಮುಚ್ಚಿದ ಕೆಂಡ

Update: 2016-10-17 17:29 GMT

ಅಕ್ಟೋಬರ್ 1ರಂದು ಹೈದರಾಬಾದ್ ವಿಶ್ವವಿದ್ಯಾನಿಲಯದ 18ನೇ ಘಟಿಕೋತ್ಸವದಲ್ಲಿ ಪಿಎಚ್‌ಡಿ ವಿದ್ಯಾರ್ಥಿಗಳು, ಕುಲಪತಿ ಪಿ. ಅಪ್ಪಾರಾವ್ ಅವರಿಂದ ತಮ್ಮ ಪದವಿ ಪ್ರಮಾಣಪತ್ರ ಪಡೆಯಲು ಸಾಲು ನಿಂತಿದ್ದರು. ಸುಂಕಣ್ಣ ವೇಲ್ಪುಲಾ ಎಂಬ 37 ವರ್ಷದ ಪಿಎಚ್‌ಡಿ ವಿದ್ಯಾರ್ಥಿಯ ಹೆಸರು ಕರೆದಾಗ, ಕುಂಕುಮಬಣ್ಣದ ಅಂಗಿ ಹಾಗೂ ಪ್ಯಾಂಟ್ ಧರಿಸಿದ್ದ ವ್ಯಕ್ತಿ ವೇದಿಕೆಗೆ ಬಂದರು. ಅಪ್ಪಾರಾವ್ ಪದವಿಪ್ರದಾನ ಮಾಡಲು ಮುಂದಾದರೂ, ಏನೂ ಮಾತನಾಡದೇ ಆ ವ್ಯಕ್ತಿ ಕೈಕಟ್ಟಿ ನಿಂತೇ ಇದ್ದರು. ಅಪ್ಪಾರಾವ್, ಪದವಿಪತ್ರ ಸ್ವೀಕರಿಸುವಂತೆ ವಿನಂತಿ ಮಾಡಿದರು. ಮುಖಭಂಗಕ್ಕೀಡಾದ ರಾವ್, ಪದವಿಪತ್ರ ಪ್ರದಾನ ಹೊಣೆಯನ್ನು ಸಹ ಕುಲಪತಿ ವಿಪಿನ್ ಶ್ರೀವಾಸ್ತವ ಅವರಿಗೆ ಹಸ್ತಾಂತರಿಸಿದರು. ವೇಲ್ಪುಲಾ ಅವರು ಶ್ರೀವಾಸ್ತವ ಅವರಿಂದ ಪದವಿಪತ್ರ ಸ್ವೀಕರಿಸಿ, ವೇದಿಕೆಯಿಂದ ಹೊರಟುಹೋದರು.
ವೇಲ್ಪುಲಾ ಮೌನದ ಈ ಫೋಟೊ ಆ ಬಳಿಕ ಸಾಮಾಜಿಕ ಜಾಲತಾಣದಲ್ಲಿ ವೈರಸ್‌ನಂತೆ ಹಬ್ಬಿದೆ. ಸಹ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಅವರ ಆತ್ಮಹತ್ಯೆ ಹಾಗೂ ಬಳಿಕ ನಡೆದ ಘಟನಾವಳಿಗಳ ವಿರುದ್ಧ ವೇಲ್ಪುಲಾ ಪ್ರತಿಭಟನೆ ವ್ಯಕ್ತಪಡಿಸಿದ ಬಗೆ ಇದು. ರೋಹಿತ್ ವೇಮುಲಾ, ವೇಲ್ಪುಲಾ ಸೇರಿದಂತೆ ನಾಲ್ಕು ಮಂದಿಯನ್ನು ಕಳೆದ ಜನವರಿಯಲ್ಲಿ ಹಾಸ್ಟೆಲ್‌ನಿಂದ ಅಮಾನತು ಮಾಡಿದ ಬಳಿಕ, ವೇಮುಲಾ ಆತ್ಮಹತ್ಯೆ ಮಾಡಿಕೊಂಡಿದ್ದರು.
ಈ ಘಟನೆ ದೇಶಾದ್ಯಂತ ಪ್ರತಿಭಟನೆ ಹಾಗೂ ಕುಲಪತಿಯ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಆಗ್ರಹಗಳು ವ್ಯಕ್ತವಾಗಿದ್ದವು. ಈ ಸಂಬಂಧ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ನೇತೃತ್ವದ ಏಕಸದಸ್ಯ ಆಯೋಗವನ್ನು ನೇಮಕ ಮಾಡಿ, ವೇಮುಲಾ ಆತ್ಮಹತ್ಯೆ ಹಾಗೂ ಜಾತಿ ತಾರತಮ್ಯದ ಆರೋಪಗಳ ಬಗ್ಗೆ ತನಿಖೆ ಮಾಡುವಂತೆ ಸೂಚಿಸಲಾಗಿತ್ತು. ಕಳೆದ ಆಗಸ್ಟ್‌ನಲ್ಲಿ ಆಯೋಗ, ಕೇಂದ್ರಕ್ಕೆ ವರದಿ ಸಲ್ಲಿಸಿದ್ದು, ಇದರ ಅಂಶಗಳನ್ನು ಇದೀಗ ಬಹಿರಂಗಪಡಿಸಲಾಗಿದೆ. ವೇಮುಲಾ ದಲಿತ ಅಲ್ಲ. ಆತ ಆತ್ಮಹತ್ಯೆ ಮಾಡಿಕೊಂಡದ್ದು ವೈಯಕ್ತಿಕ ಕಾರಣಕ್ಕೆ ಎಂದು ಹೇಳಿ, ಈ ವಿಚಾರದಲ್ಲಿ ವಿಶ್ವವಿದ್ಯಾನಿಲಯಕ್ಕೆ ಆಯೋಗ ಕ್ಲೀನ್ ಚಿಟ್ ನೀಡಿದೆ.
ವೇಲ್ಪುಲಾ ಮೂಲತಃ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ದಲಿತ ಕೂಲಿಕಾರ್ಮಿಕ ಕುಟುಂಬದಿಂದ ಬಂದವರು. 2005ರಲ್ಲಿ ಹೈದರಾಬಾದ್ ವಿಶ್ವವಿದ್ಯಾನಿಲಯ ಸೇರಿದ ಅವರು ಎಂಎ, ಬಿಇಡಿ, ಎಂಫಿಲ್ ಹಾಗೂ ಪಿಎಚ್‌ಡಿ ಪಡೆದಿದ್ದಾರೆ. ವೇಮುಲಾ ಕುಟುಂಬಕ್ಕೆ ನ್ಯಾಯ ಇನ್ನೂ ಸಿಕ್ಕಿಲ್ಲ ಎಂಬ ಅಭಿಪ್ರಾಯ ಅವರದ್ದು. ಮುಂಬೈನ ಐಐಟಿಯಲ್ಲಿ ಡಾಕ್ಟರೇಟ್ ಬಳಿಕದ ಸಂಶೋಧನೆಗೆ ಅವಕಾಶ ಪಡೆದಿರುವ ವೇಲ್ಪುಲಾ ವಿಶೇಷ ಸಂದರ್ಶನದಲ್ಲಿ, ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಅಪ್ಪಾರಾವ್ ಅವರಿಂದ ಏಕೆ ಪದವಿ ಸ್ವೀಕರಿಸಲಿಲ್ಲ ಎನ್ನುವುದನ್ನು ಅವರು ಬಹಿರಂಗಪಡಿಸಿದ್ದು, ವೇಮುಲಾ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ನಡೆಯುತ್ತಿರುವ ಪ್ರತಿಭಟನೆ ಇನ್ನೂ ಏಕೆ ಮುಂದುವರಿದಿದೆ ಎನ್ನುವುದನ್ನೂ ಸಂದರ್ಶನದಲ್ಲಿ ವಿವರಿಸಿದ್ದಾರೆ.
ಸುಂಕಣ್ಣ ವೇಲ್ಪುಲಾ

* ಕುಲಪತಿ ಅಪ್ಪಾ ರಾವ್ ಅವರಿಂದ ಪದವಿ ಸ್ವೀಕರಿಸಲು ನಿರಾಕರಿಸಿದ್ದು ಏಕೆ?

ಸುಂಕಣ್ಣ ವೇಲ್ಪುಲಾ:ಮೂರು ಪ್ರಮುಖ ಕಾರಣಗಳಿಂದ ನಾನು ಅವರನ್ನು ಕುಲಪತಿ ಎಂದು ಪರಿಗಣಿಸುವುದಿಲ್ಲ.
1. ಅವರು ಬಿಜೆಪಿ ಸರಕಾರದಿಂದ ನೇಮಕಗೊಂಡವರು. ಈ ಕೃತಜ್ಞತಾಭಾವದಿಂದ ಅವರು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾಗಿದ್ದ ಸ್ಮತಿ ಇರಾನಿಗೆ ನಿಷ್ಠರಾಗಿದ್ದರು. ಪಕ್ಷಪಾತದ ಧೋರಣೆ ಅನುಸರಿಸಿ, ಐದು ಮಂದಿ ದಲಿತ ಸಂಶೋಧನಾ ವಿದ್ಯಾರ್ಥಿಗಳನ್ನು ಅಮಾನತು ಮಾಡಿದರು. ರೋಹಿತ್ ವೇಮುಲಾ ಆತ್ಮಹತ್ಯೆಗೆ ಕಾರಣವಾದ ಈ ಘಟನೆಯಲ್ಲಿ ಅಮಾನತುಗೊಂಡವರಲ್ಲಿ ನಾನೂ ಒಬ್ಬ.
2. ಅವರ ವಿರುದ್ಧ ಅಪರಾಧ ಪ್ರಕರಣಗಳು ದಾಖಲಾಗಿವೆ. ಅವರಿಂದ ನಾನು ಪದವಿ ಪಡೆದರೆ, ನನ್ನ ಪದವಿಗೆ ಯಾವ ಮೌಲ್ಯವೂ ಇರುವುದಿಲ್ಲ.
3. ಅಪ್ಪಾರಾವ್ ದಲಿತ ವಿರೋಧಿ. ಮೂಲಭೂತವಾಗಿ ನನ್ನ ಆತ್ಮಗೌರವ ಕಾಪಾಡಿಕೊಳ್ಳಲು, ಅವರನ್ನು ಕುಲಪತಿ ಎಂದು ಪರಿಗಣಿಸದೆ ನಾನು ಅವರನ್ನು ನಿರ್ಲಕ್ಷಿಸಿದೆ ಹಾಗೂ ಅವರಿಂದ ಪದವಿ ಪಡೆಯಲು ನಿರಾಕರಿಸಿದೆ.

* ಏಕಸದಸ್ಯ ವಿಚಾರಣಾ ಆಯೋಗದ ವರದಿ ಬಗ್ಗೆ ಏನನಿಸುತ್ತದೆ?
ವೇಲ್ಪುಲಾ: ಆಯೋಗದ ವರದಿಯ ಪ್ರಕಾರ, ರೋಹಿತ್ ವೇಮುಲಾ ದಲಿತ ಅಲ್ಲ ಹಾಗೂ ಆತ ಆತ್ಮಹತ್ಯೆ ಮಾಡಿಕೊಂಡಿರುವುದು ವೈಯಕ್ತಿಕ ಕಾರಣಕ್ಕಾಗಿ. ಇದು ಸಂಪೂರ್ಣ ಪಕ್ಷಪಾತದ ವರದಿ. ಈ ಸಮಿತಿಯ ಅಧ್ಯಕ್ಷ ನಿವೃತ್ತ ನ್ಯಾಯಾಧೀಶ. ರೋಹಿತ್ ದಲಿತನೇ ಅಥವಾ ಅಲ್ಲವೇ ಎಂದು ಹೇಳಲು ಅವರು ಯಾರು? ರೋಹಿತ್ ಅವರ ಜಾತಿಯನ್ನು ನಿರ್ಧರಿಸಲು ಅವರಿಗೆ ಯಾವುದೇ ಹಕ್ಕು ಅಥವಾ ಕಾನೂನುಬದ್ಧ ಅಧಿಕಾರ ಇಲ್ಲ. ರೋಹಿತ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಪರಿಶೀಲಿಸುವುದಷ್ಟೇ ಅವರ ಕೆಲಸವಾಗಿತ್ತು. ಆದರೆ ಇದೀಗ ಅವರು ಪಕ್ಷಪಾತ ಧೋರಣೆ ಅನುಸರಿಸಿ, ಸರಕಾರದ ಪರವಾಗಿ ಕೆಲಸ ಮಾಡಿರುವುದು ಸ್ಪಷ್ಟವಾಗಿದೆ. ಅವರು ಸರಕಾರದ ಏಜೆಂಟ್‌ನಂತೆ ಕೆಲಸ ಮಾಡಿದ್ದಾರೆಯೇ ವಿನಃ ನಿವೃತ್ತ ನ್ಯಾಯಾಧೀಶರಂತೆ ಅಲ್ಲ. ಈ ಸಮಿತಿಯನ್ನು ನೇಮಕ ಮಾಡಿರುವುದು ರೋಹಿತ್ ಆತ್ಮಹತ್ಯೆಗೆ ಕಾರಣವಾದ ಅಂಶಗಳ ಬಗ್ಗೆ ತನಿಖೆ ನಡೆಸಲು.
ರೋಹಿತ್ ವೇಮುಲಾ ಎಂದು ದಲಿತ ಗುಂಟೂರು ಜಿಲ್ಲಾಧಿಕಾರಿ ಪತ್ರಿಕಾ ಪ್ರಕಟನೆ ನೀಡಿದ್ದರು. ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗದ ಅಧ್ಯಕ್ಷ ಪಿ.ಎಲ್.ಪುನಿಯಾ ಕೂಡಾ, ರೋಹಿತ್‌ನನ್ನು ದಲಿತ ಎಂದು ಘೋಷಿಸಿದ್ದರು. ರೋಹಿತ್ ದಲಿತ ಎಂದು ನಿರೂಪಿಸಲು ಅವರಿಗೆ ಅಧಿಕಾರ ಇದೆ. ರೋಹಿತ್‌ನ ಜಾತಿ ನಿರ್ಧರಿಸಲು ನಿವೃತ್ತ ನ್ಯಾಯಾಧೀಶರಿಗೆ ಏನು ಅಧಿಕಾರವಿದೆ?

* ಕುಲಪತಿ ಅಪ್ಪಾರಾವ್‌ಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಬೇಡಿಕೆ ಏನು?
ವೇಲ್ಪುಲಾ: ನಾವು ಅಪ್ಪಾರಾವ್ ಅವರ ರಾಜೀನಾಮೆಗೆ ಆಗ್ರಹಿಸುತ್ತಿದ್ದೇವೆ. ಜತೆಗೆ ಪರಿಶಿಷ್ಟ ಜಾತಿ ಹಾಗೂ ಪಂಗಡ ದೌರ್ಜನ್ಯ ಕಾಯ್ದೆಯಡಿ ತಕ್ಷಣ ಅವರನ್ನು ಬಂಧಿಸಬೇಕು ಎನ್ನುವುದು ನಮ್ಮ ಆಗ್ರಹ.

* ಕುಲಪತಿ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು ನ್ಯಾಯಸಮ್ಮತವಲ್ಲದ ಹೋರಾಟ ನಡೆಸುತ್ತಿದ್ದಾರೆ ಎನ್ನುವುದು ಟೀಕಾಕಾರರ ಆರೋಪ. ಈ ಬಗ್ಗೆ ನಿಮ್ಮ ಅಭಿಪ್ರಾಯ?
ವೇಲ್ಪುಲಾ: ಟೀಕಾಕಾರರು ಮೊದಲು ಇಡೀ ಘಟನಾವಳಿಯನ್ನು ಅರ್ಥ ಮಾಡಿಕೊಳ್ಳಬೇಕು. 2015ರ ಸೆಪ್ಟಂಬರ್ 11ರಂದು ನಮ್ಮ ಅಮಾನತನ್ನು ವಾಪಸು ಪಡೆಯಲಾಗಿತ್ತು ಹಾಗೂ ಹೊಸದಾಗಿ ತನಿಖಾ ಸಮಿತಿ ನೇಮಕ ಮಾಡಲಾಗುತ್ತದೆ ಎಂದು ನಮಗೆ ಹೇಳಿದ್ದರು. ಅಪ್ಪಾರಾವ್ ನವೆಂಬರ್ 27ರಂದು ಅಧಿಕಾರ ವಹಿಸಿಕೊಂಡರು. ಅವರು ಯಾವುದೇ ಹೊಸ ಸಮಿತಿಯನ್ನು ನೇಮಕ ಮಾಡದೇ, ಪಕ್ಷಪಾತದ ನಿರ್ಧಾರ ಕೈಗೊಂಡರು. ಕುಲಪತಿ ನೇರವಾಗಿ ನಮ್ಮನ್ನು ಅಮಾನತು ಮಾಡಿರುವುದರಿಂದ ಅವರು ಇದರಲ್ಲಿ ನೇರವಾಗಿ ಹಸ್ತಕ್ಷೇಪ ಮಾಡಿರುವುದು ಖಚಿತ. ಅವರನ್ನು ಪ್ರಶ್ನಿಸದೇ ನಾವು ಈ ಚಳವಳಿಯನ್ನು ಹೇಗೆ ಮುಂದೆ ಕೊಂಡೊಯ್ಯಲು ಸಾಧ್ಯ? ನಮ್ಮ ಪ್ರತಿಭಟನೆಯನ್ನು ಟೀಕಿಸುವವರು ಸರಕಾರದ ಪರ ಹಾಗೂ ನಮ್ಮ ವಿರುದ್ಧ ಪಕ್ಷಪಾತದ ಧೋರಣೆ ಹೊಂದಿದ್ದಾರೆ.

* ಒಂದು ಅರ್ಥದಲ್ಲಿ ಪ್ರತಿಭಟನೆ ಈಗ ಸತ್ತಿದೆ. ಮುಂದಿನ ನಡೆ ಏನು?
ವೇಲ್ಪುಲಾ: ನಾವು ಕ್ಯಾಂಪಸ್‌ನಲ್ಲಿ ಪ್ರತಿಭಟನೆ ಹಾಗೂ ರ್ಯಾಲಿ ನಡೆಸುತ್ತಿದ್ದೇವೆ. ಕುಲಪತಿ, ವಿಶ್ವವಿದ್ಯಾನಿಲಯದಲ್ಲಿ ಮುಕ್ತರಲ್ಲ. ಇತರ ಯಾವುದೇ ದೇವಸ್ಥಾನದಲ್ಲಿ ಕುಲಪತಿ ಮುಕ್ತ ವ್ಯಕ್ತಿ. ಆದರೆ ಇಲ್ಲಿ ಕುಲಪತಿ ಜತೆಗೆ ಇಬ್ಬರು ಗನ್‌ಮ್ಯಾನ್ ಇರುತ್ತಾರೆ. ಅವರು ಯಾವುದೇ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೆ, ಅವರ ವಿರುದ್ಧ ಘೋಷಣೆಗಳು ಕೇಳಿಬರುತ್ತವೆ. ಆದ್ದರಿಂದ ಯಾವುದೇ ಸಮ್ಮೇಳನ, ವಿಚಾರ ಸಂಕಿರಣಗಳಲ್ಲಿ ಅವರು ಭಾಗವಹಿಸುತ್ತಿಲ್ಲ.
ಮಾಧ್ಯಮಗಳಿಗೆ ಒಂದಷ್ಟು ಮಸಾಲೆ ಬೇಕು. ಬಿಸಿ ಬಿಸಿ ಸುದ್ದಿಯನ್ನು ಮಾಧ್ಯಮಗಳು ಬಿತ್ತರಿಸುತ್ತವೆ. ಆದರೆ ಈಗ ಮಾಧ್ಯಮಗಳಿಗೆ ಈ ವಿಷಯದಲ್ಲಿ ಆಸಕ್ತಿ ಉಳಿದಿಲ್ಲ. ನಮ್ಮ ಚಳವಳಿ ಮುಂದುವರಿದಿದ್ದು, ನಾವು ಮಾಧ್ಯಮಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ.

* ನಿಮ್ಮ ಮುಂದಿನ ಯೋಜನೆಗಳೇನು?
ವೇಲ್ಪುಲಾ: ತಕ್ಷಣಕ್ಕೆ ನಾವು ಕುಲಪತಿ ಅಪ್ಪಾರಾವ್ ಅವರನ್ನು ಯಾವುದೇ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಲು ಅವಕಾಶ ನೀಡುವುದಿಲ್ಲ. ಜತೆಗೆ ಇತರ ಕುಲಪತಿಗಳಂತೆ ಅವರು ಮುಕ್ತರಾಗಿ ಸಂಚರಿಸಲಾರರು. ಅವರು ರಾಜೀನಾಮೆ ನೀಡುವವರೆಗೂ ಪ್ರತಿಭಟನೆ ಮುಂದುವರಿಯುತ್ತದೆ.

Writer - ಮಾನಸ ಚೆನ್ನಪ್ರಗಡ

contributor

Editor - ಮಾನಸ ಚೆನ್ನಪ್ರಗಡ

contributor

Similar News