ಡಾ. ವ್ಯಾಸರಾವ್ ನಿಂಜೂರ್ ಸಾಹಿತ್ಯ ಸಂಭ್ರಮ, ಕೈದಿಗಳ ಕಲಾಕೃತಿಗಳ ಪ್ರದರ್ಶನ!

Update: 2016-10-17 18:27 GMT

ಮುಂಬೈ ವಿ.ವಿ.ಯಲ್ಲಿ ಡಾ. ವ್ಯಾಸರಾವ್ ನಿಂಜೂರ್ ಸಾಹಿತ್ಯ ಸಂಭ್ರಮ
ಕನ್ನಡದ ಪ್ರಮುಖ ಕಾದಂಬರಿಕಾರ, ಕತೆಗಾರ, ಸಾಹಿತಿ, ವಿಜ್ಞಾನಿ, ಪತ್ರಕರ್ತ... ಎಲ್ಲವೂ ಆಗಿರುವ ಡಾ. ವ್ಯಾಸರಾವ್ ನಿಂಜೂರು ಕುರಿತಂತೆ ಮುಂಬೈ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಆಶ್ರಯದಲ್ಲಿ ಇತ್ತೀಚೆಗೆ ಕಲಿನಾ ಕ್ಯಾಂಪಸ್‌ನ ಜೆ.ಪಿ. ನಾಯಕ್ ಭವನದಲ್ಲಿ ಡಾ. ವ್ಯಾಸರಾವ್ ನಿಂಜೂರು ಸಾಹಿತ್ಯ ಸಂಭ್ರಮವನ್ನು ಪ್ರಖ್ಯಾತ ವಿಮರ್ಶಕ ಡಾ. ಬಿ. ಜನಾದರ್ನ್ ಭಟ್ ಅವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡವರು ವಿಭಾಗ ಮುಖ್ಯಸ್ಥರಾದ ಡಾ. ಜಿ.ಎನ್.ಉಪಾಧ್ಯರು.

ಅಂದು ದಿನವಿಡೀ ಜರಗಿದ ಕಾರ್ಯಕ್ರಮದಲ್ಲಿ ಪೂರ್ವಾಹ್ನ ನಿಂಜೂರರ 3ನೆಯ ಕಾದಂಬರಿ ‘ತೆಂಕನಿಡಿಯೂರಿನ ಕುಳುವಾರಿ’ಗಳು ಕೃತಿಯನ್ನು ಹಾಗೂ ಕನ್ನಡ ವಿಭಾಗದ ಸಹ ಸಂಶೋಧಕಿ ರಮಾ ಉಡುಪ ವಿರಚಿತ ಡಾ.ನಿಂಜೂರರ ಸಾಧನೆಯನ್ನು ಬಿಂಬಿಸುವ ‘ಸಾಹಿತ್ಯ ವಿಜ್ಞಾನ ಸಮನ್ವಯಕ ಡಾ. ವ್ಯಾಸರಾವ್ ನಿಂಜೂರ್’ ಕೃತಿಯನ್ನು ಡಾ. ಬಿ. ಜನಾರ್ದನ್ ಭಟ್ ಮತ್ತು ಡಾ. ಸುರೇಶ್ ರಾವ್ ಅವರಿಂದ ಬಿಡುಗಡೆಗೊಳಿಸಲಾಯಿತು. ಅಪರಾಹ್ನದ ಕಾರ್ಯಕ್ರಮದಲ್ಲಿ ವಿಮರ್ಶಕಿ ಡಾ. ಮಮತಾ ರಾವ್ ನಿಂಜೂರರ ಸಣ್ಣ ಕತೆಗಳ ಕುರಿತು, ರಮಾ ಉಡುಪ ನಿಂಜೂರರ ಕಾದಂಬರಿಗಳ ಕುರಿತು, ಶ್ರೀನಿವಾಸ ಜೋಕಟ್ಟೆ ನಿಂಜೂರರ ಗದ್ಯ ಸಾಹಿತ್ಯದ ಕುರಿತು ಹಾಗೂ ಡಾ. ಭರತ್ ಕುಮಾರ್ ಪೊಲಿಪು (ಗೈರು ಹಾಜರಿಯಲ್ಲಿ ಸುಶೀಲಾ ದೇವಾಡಿಗರು ಅವರ ಪ್ರಬಂಧ ಓದಿದರು.) ನಿಂಜೂರರ ನಾಟಕಗಳ ಕುರಿತು ಅಭಿಪ್ರಾಯ ಮಂಡಿಸಿದರು. ಡಾ. ನಿಂಜೂರ್ ನಮ್ಮ ನಡುವಿನ ಅಪರೂಪದ ಸಾಹಿತಿ. ಎಂತಹ ಪ್ರಸಂಗವನ್ನೂ ಸಂಯಮದಿಂದ ಹೇಳುವ ವಿಶೇಷ ಗುಣ ಅವರದ್ದಾಗಿದೆ. ಅವರ ಗದ್ಯ ಬರಹಗಳು ಕೂಡಾ ಕತೆ ಹೇಳುವ ಧಾಟಿಯದ್ದೇ ಆಗಿಬಿಡುತ್ತದೆ. ಬಾಲ್ಯ, ಊರು, ಮಳೆ, ಊರಿನ ಗೆಳೆಯರು.... ಮತ್ತೆ ಮತ್ತೆ ಇವರನ್ನು ಕಾಡುತ್ತಲೇ ಈ ಬಗ್ಗೆ ಬರೆಯುತ್ತಾ ಇರುವವರು ಡಾ. ನಿಂಜೂರರು. ಅವರ ಬರವಣಿಗೆ ಓದುಗನನ್ನು ಸೆಳೆಯುವಲ್ಲಿ ಅವರು ಬಳಸುವ ಭಾಷಾ ಸೊಗಡು ಕೂಡಾ ಪ್ರಮುಖ ಕಾರಣವಾಗಬಹುದು. ಮೇಲ್ನೋಟಕ್ಕೆ ಡಾ. ನಿಂಜೂರರು ಸಂಕೋಚ ಪ್ರವೃತ್ತಿಯವರಾದರೂ ತಮ್ಮ ಬರಹಗಳಲ್ಲಿ ಅವರು ಬಿಂದಾಸ್, ಅಲ್ಲಿರುವುದು ತಿಳಿಹಾಸ್ಯ. ಎಂತಹ ಕಷ್ಟದ ಸಂದರ್ಭಗಳನ್ನೂ ಅವರು ತಮ್ಮ ಬರಹಗಳಲ್ಲಿ ಹೇಳುವುದು ತಿಳಿಹಾಸ್ಯದ ಮೂಲಕವೇ. ಗೋಕುಲವಾಣಿ ಪತ್ರಿಕೆಯ ಸಂಪಾದಕರಾಗಿರುವ ಡಾ.ನಿಂಜೂರು ಅನೇಕ ಸಾಂದರ್ಭಿಕ ಲೇಖನಗಳನ್ನೂ ಬರೆದಿದ್ದಾರೆ. ಪರಿಸರ ರಕ್ಷಣೆಯ ಕುರಿತಾದ ಕಾಳಜಿ, ಹಬ್ಬಗಳು, ಜಾಗತೀಕರಣದ ಸಮಸ್ಯೆ, ವಿಜ್ಞಾನದ ವಿಮರ್ಶೆ.... ಹೀಗೆ ನಾನಾ ಮಗ್ಗುಲುಗಳನ್ನು ತೆರೆದಿಟ್ಟಿರುತ್ತಾರೆ.
ಅಂದು ಜರಗಿದ ಕಥಾ ಕಥನ ಕಾರ್ಯಕ್ರಮದಲ್ಲಿ ಡಾ. ನಿಂಜೂರರು ಹೇಳಿದ್ದರು... ‘‘ಬರೆಯಬೇಕು ಅನಿಸಿದಾಗ ನಾನು ಬರೆಯುತ್ತೇನೆ. ಪ್ರಬಲವಾದ ಒಂದು ಶಕ್ತಿ ಒತ್ತಡ ಹಾಕಬೇಕಾಗುತ್ತದೆ. ತಿಂಗಳುಗಟ್ಟಲೆ ಆಲೋಚನೆ ಮಾಡಿ ಲೇಖನಕ್ಕೆ ಇಳಿಯುತ್ತೇನೆ. ಆಲಸ್ಯವೋ ಏನೋ ಕೆಲವೊಮ್ಮೆ ಮಧ್ಯದಲ್ಲಿ ನಿಂತು ಹೋಗುವುದೂ ಇದೆ. ಅಥವಾ ನಾನೇ ಚೆನ್ನಾಗಿಲ್ಲ ಅಂತ ಭಾವಿಸುವುದೂ, ಅದನ್ನು ಹರಿಯುವುದೂ ಇದೆ.’’
ಅಧ್ಯಕ್ಷತೆ ವಹಿಸಿದ ಖ್ಯಾತ ವಿಮರ್ಶಕ ಡಾ. ಬಿ. ಜನಾರ್ದನ ಭಟ್ ಮಾತನಾಡುತ್ತಾ, ‘‘ಕರಾವಳಿ ಮತ್ತು ಮುಂಬೈ ಸಂಬಂಧದ ಕುರಿತು ಬರೆಯುವ ಪ್ರಾದೇಶಿಕ ಕಥನಕಾರರಾದ ಡಾ. ವ್ಯಾಸರಾವ್ ನಿಂಜೂರು ಕರಾವಳಿಯ ಪಾರಂಪರಿಕ ಅಧಿಕಾರ ಕೇಂದ್ರಗಳು ಶಿಥಿಲವಾಗಿ ಮುಂಬೈಯ ಧರ್ಮರಹಿತ ಅರ್ಥಕಾಮಗಳಿಂದ ಸಮಾಜವು ನಲುಗುವ ದುರಂತದ ಚಿತ್ರಣವನ್ನು ಹಾಸ್ಯ ಶೈಲಿಯಲ್ಲಿ ದಾಖಲಿಸಿರುವ ವಿಶಿಷ್ಟ ಕತೆ ಕಾದಂಬರಿಕಾರ ಎಂದದ್ದು ಒಪ್ಪಿಕೊಳ್ಳಲೇಬೇಕಾದ ಮಾತು.’’
ಡಾ. ನಿಂಜೂರರು ‘ಉಸಿರು’, ‘ಚಾಮುಂಡೇಶ್ವರಿ ಭವನ, ಕಾದಂಬರಿಗಳ ನಂತರ ‘ತೆಂಕನಿಡಿಯೂರಿನ ಕುಳುವಾರಿಗಳು’ ಕಾದಂಬರಿ ಪ್ರಕಟಿಸಿದ್ದಾರೆ. ನಿಂಜೂರರು ಎರಡು ದಶಕಗಳಿಗೊಮ್ಮೆ ಕಾದಂಬರಿ ಬರೆಯುವವರು! ಕಳೆದ ಬಾರಿ ಇವರ ಸಣ್ಣ ಕತೆಗಳ ಸಂಕಲನ ‘ದೂಜ ಮಾಸ್ತರರ ಮಗಳು ಬಸಿರಾದದ್ದು’ ಬಿಡುಗಡೆಗೊಂಡಿತ್ತು. ಅದೇ ಸಮಯ ‘ಆಗಾಗ ಅನಿಸಿದ್ದು’ ಗದ್ಯ ಬರಹಗಳ ಕೃತಿಯೂ ಬಿಡುಗಡೆಗೊಂಡಿತ್ತು. ಇದೀಗ ‘ತೆಂಕನಿಡಿಯೂರಿನ ಕುಳುವಾರಿಗಳು’ ಕಾದಂಬರಿ ಜೊತೆ ರಮಾ ಉಡುಪ ಅವರು ಬರೆದ ಡಾ. ನಿಂಜೂರರ ಸಾಧನೆಯನ್ನು ಬಿಂಬಿಸುವ ಸಾಹಿತ್ಯ ವಿಜ್ಞಾನ ಸಮನ್ವಯಕ ಡಾ. ವ್ಯಾಸರಾವ್ ನಿಂಜೂರು ಕೃತಿಯೂ ಬಿಡುಗಡೆಗೊಂಡಿದೆ.
ಡಾ. ನಿಂಜೂರರ ಹಿಂದಿನ ಎರಡೂ ಕಾದಂಬರಿಗಳು ಪ್ರಶಸ್ತಿ ಪಡೆದಿರುವುದನ್ನು ಇಲ್ಲಿ ನೆನಪಿಸಬಹುದು. ಈ ಬಾರಿ ನಿರೂಪಣಾ ತಂತ್ರದಲ್ಲಿ ರಾಮಾಯಣದ ಅಪೂರ್ವ ತಂತ್ರವನ್ನು ಅನುಸರಿಸಿ ಲೇಖಕನೂ ಪಾತ್ರವಾಗಿರುವ ವಿಶಿಷ್ಟ ತಂತ್ರ ಹೊಸ ಕಾದಂಬರಿಯಲ್ಲಿ ಬಳಸಲಾಗಿದೆ ಎಂದು ಅಂದಿನ ಅಧ್ಯಕ್ಷತೆ ವಹಿಸಿರುವ ಡಾ. ಬಿ. ಜನಾರ್ದನ ಭಟ್ ಹೇಳಿದ್ದರು. ಡಾ. ನಿಂಜೂರರೇ ಒಂದೆಡೆ ಹೇಳಿದ್ದಿದೆ- ‘‘ಪರಿಚಿತವಲ್ಲದ ಗುಂಪಿನಲ್ಲಿ ನಾನು ಬೆರೆಯುವುದಿಲ್ಲ. ಯಾರೊಂದಿಗೂ ಮೇಲೆ ಬಿದ್ದು ಮಾತಿಗೆ ತೊಡಗುವುದಿಲ್ಲ.’’
ನಿಜ. ಆದರೆ, ಅವರ ಬರವಣಿಗೆ ಮಾತ್ರ ಎಂತವರನ್ನೂ ಇವರತ್ತ ಸೆಳೆದುಬಿಡುವುದು. ಇವರ ಜೊತೆ ಮಾತನಾಡಿಸುವುದು. ವೈಜ್ಞಾನಿಕ ಮನೋಭಾವ ಎನ್ನುವುದು ಸಂಪ್ರದಾಯಗಳನ್ನು ಆಚರಣೆಗಳನ್ನು ಗೇಲಿ ಮಾಡುವಷ್ಟಕ್ಕೇ ಸೀಮಿತಗೊಳ್ಳಬಾರದು ಎನ್ನುವ ಡಾ. ನಿಂಜೂರರು ‘ಪರಂಪರೆಯ ಲೇವಡಿ ಸಲ್ಲ’ ಎನ್ನುವ ಲೇಖನದಲ್ಲಿ ‘‘ಅಂಧ ಶ್ರದ್ಧೆಗಳಿಗೆ ಬಲಿಯಾಗುವ ಮುಗ್ಧರನ್ನು ವರ್ತಮಾನದ ವೈಜ್ಞಾನಿಕ ಚಿಂತನೆಗಳಿಗೆ ಒಳಪಡಿಸುವುದರಲ್ಲಿ ತಪ್ಪೇನಿಲ್ಲ. ಆದರೆ ಪಾರಂಪರಿಕವಾಗಿ ಸಾಗಿಬಂದ ರಿಚುವಲ್‌ಗಳು ಅವುಗಳಿಗೆ ಅವಶ್ಯವಿರುವ ಜಾನಪದೀಯ ವೈಖರಿಗಳಿಗೂ ಅಂಧಶ್ರದ್ಧೆಯ ಹಣೆಪಟ್ಟಿ ಅಂಟಿಸುವುದು ಮೂರ್ಖತನದ ಪರಮಾವಧಿ ಎಂದು ಹೇಳಲೇ ಬೇಕಾಗುತ್ತದೆ’’ ಎಂದದ್ದಿದೆ. ಅಂದು ಅಭಿನಂದನೆಯ ಮಾತುಗಳನ್ನಾಡಿದ ವಿ.ವಿ. ಕನ್ನಡ ವಿಭಾಗದ ಮುಖ್ಯಸ್ಥ ಡಾ. ಜಿ.ಎನ್.ಉಪಾಧ್ಯರು ನಿಂಜೂರರ ಸಾಹಿತ್ಯಕ್ಕೆ ಕನ್ನಡದ ವಿಮರ್ಶಕರು ಇನ್ನಾದರೂ ನ್ಯಾಯ ಒದಗಿಸುವಂತಾಗಲಿ ಎಂದು ಹಾರೈಸಿದ್ದಾರೆ.
ಯಾವಾಗ ಮನುಷ್ಯ ಮನುಷ್ಯನಿಗೆ ಶತ್ರುವಾಗುತ್ತಾನೋ ಆಗ ಪ್ರೀತಿ, ಪ್ರೇಮ, ಒಲವು, ಅನುಕಂಪ, ಕಾರುಣ್ಯ ಎಂಬೆಲ್ಲ ಪದಗಳು ಸವಕಲಾಗುತ್ತವೆ. ಈ ಪದಗಳಿಗೆ ಸರಿಯಾದ ಪರಿಭಾಷೆ ಕೊಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.
ಇಂತಹ ಮನೋಭಾವದ ಸಾಹಿತಿ ಡಾ. ನಿಂಜೂರರ ಕುರಿತಂತೆ ಮುಂಬೈ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗವು ಡಾ. ವ್ಯಾಸರಾವ್ ನಿಂಜೂರು ಸಾಹಿತ್ಯ ಸಂಭ್ರಮವನ್ನು ಆಯೋಜಿಸಿರುವುದಕ್ಕೆ ಮುಂಬೈ ಕನ್ನಡ ಸಾಹಿತ್ಯ ಲೋಕವು ಅಭಿಮಾನಪಡುವಂತಾಗಿದೆ.

* * *

ಕೈದಿಗಳ ಕಲಾಕೃತಿಗಳಿಗೆ ಡಿಮಾಂಡ್
ಜೈಲ್‌ಗಳಲ್ಲಿ ಶಿಕ್ಷೆಗೆ ಒಳಗಾಗಿರುವ ಕೈದಿಗಳು ಸಜೆ ಅನುಭವಿಸುತ್ತಲೇ ಜೊತೆಗೆ ತಮ್ಮಳಗಿನ ಕಲೆಗಳನ್ನು ಜೀವಂತ ಇರಿಸುವಲ್ಲೂ ಕೆಲವರು ಪ್ರಯತ್ನಿಸುತ್ತಾರೆ. ಮಹಾರಾಷ್ಟ್ರದ ಜೈಲುಗಳಲ್ಲಿ ಬಂಧಿಯಾಗಿರುವ ಅನೇಕ ಕೈದಿಗಳಿದ್ದಾರೆ. ಅವರಲ್ಲ್ಲಿ ಕಲಾವಿದರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಇದೀಗ ಜೈಲ್ ಆಡಳಿತವು ಕೈದಿಗಳಲ್ಲಿರುವ ಕಲಾ ಪ್ರತಿಭೆಗಳನ್ನು ಗುರುತಿಸಿ ಅವರ ಕಲಾ ರಚನೆಗಳಿಂದಲೇ ಆ ಕೈದಿಗಳ ಕಲ್ಯಾಣಕಾರಿ ಯೋಜನೆಗಳ ರೂಪುರೇಷೆ ತಯಾರಿಸಿದ್ದಾರೆ. ಈ ವಿಷಯವನ್ನು ತಿಳಿಸಿದವರು ಪೊಲೀಸ್ ಮಹಾನಿರೀಕ್ಷಕ (ಜೈಲ್) ರಾಜವರ್ಧನ್ ಸಿನ್ಹಾ. ಜೈಲ್ ಆಡಳಿತವು ಮುಂದಿನ ವರ್ಷದೊಳಗೆ ಕೈದಿಗಳು ರಚಿಸಿದ ಚಿತ್ರಕಲಾ ಪ್ರದರ್ಶನಗಳನ್ನು ಆಯೋಜಿಸಲಿದೆ.
ಕೇರಳದ ನಿವಾಸಿ ಜಾನ್ ಬಾಬಿ ಪಾರ್ಕರ್ ನೌಕರಿಯ ಹುಡುಕಾಟದಲ್ಲಿ ಮುಂಬೈಗೆ ಬಂದಿದ್ದ. ಈ ನಡುವೆ ಇಲ್ಲಿ ಆತನ ಕೈಯಿಂದ ಗಂಭೀರವಾದ ಅಪರಾಧವೊಂದು ನಡೆದುಹೋಯಿತು. ನ್ಯಾಯಾಲಯವು ಆತನಿಗೆ ಕಾರಾಗೃಹ ಸಜೆಯನ್ನೂ ವಿಧಿಸಿತು.
2006ರಿಂದ ಜೈಲ್‌ನಲ್ಲಿರುವ ಜಾನ್ ಬಿಡುವಿನ ವೇಳೆಯಲ್ಲಿ ಚಿತ್ರರಚನೆ ಮಾಡುತ್ತಿದ್ದ. ಸಾಮಾಜಿಕ ಸಂಸ್ಥೆಯೊಂದು ಆತನಿಗೆ ಚಿತ್ರ ಕಲೆಯ ಸಾವಗ್ರಿಗಳನ್ನು ಉಪಲಬ್ಧಗೊಳಿಸಿತ್ತು. ಈತ ಸಜೆಯನ್ನು ಅನುಭವಿಸುತ್ತಿದ್ದಂತೆ 100ಕ್ಕೂ ಅಧಿಕ ಚಿತ್ರಗಳನ್ನು ರಚಿಸಿದ. ಈ ಚಿತ್ರಗಳನ್ನು ಅಕ್ಟೋಬರ್ ಮೊದಲ ವಾರದಲ್ಲಿ ಪ್ರದರ್ಶನಕ್ಕಿಡಲಾಗಿತ್ತು. ಅದರಲ್ಲಿ ದೊರೆತ ಹಣವನ್ನು ಜಾನ್‌ರ ಖಾತೆಗೆ ಜಮಾ ಮಾಡಲಾಗಿತ್ತು. ಹಾಗೆಯೇ ನಾಗ್‌ಪುರ ಜೈಲ್‌ನಲ್ಲಿ ಬಂಧಿಯಾಗಿರುವ ಲಲಿತ್ ರಮಣ್‌ರಾವ್ ಗೊಣೂಗಲ್‌ರಾಲಾ ಕೂಡಾ 50 ಚಿತ್ರ ರಚಿಸಿದ್ದು ಸದ್ಯ ಚಿತ್ರಕಲಾ ಶಿಕ್ಷಕನಾಗಿ ನೌಕರಿ ಮಾಡುತ್ತಿದ್ದಾರೆ. ಇದೇ ರೀತಿ ಬೇರೆ ಕೈದಿಗಳೂ ಚಿತ್ರ ರಚನೆಯಲ್ಲಿ ತೊಡಗಿದ್ದು ಮುಂದಿನ ವರ್ಷ ಜೈಲ್ ಆಡಳಿತವೇ ಚಿತ್ರಕಲಾ ಪ್ರದರ್ಶನವನ್ನು ಆಯೋಜಿಸಲು ನಿರ್ಧರಿಸಿದೆ. ಇದರಲ್ಲಿ ದೊರೆತ ಹಣ ಕೈದಿಗಳ ಕಲ್ಯಾಣ ಕಾರ್ಯಗಳಿಗೆ ಬಳಸಲಾಗುವುದು.
* * *
ಮರಾಠ ಮೀಸಲಾತಿ ಹೋರಾಟ ಈಗಿದ್ದಲ್ಲವಂತೆ!
ಬಿಜೆಪಿ ಮಹಾರಾಷ್ಟ್ರ ರಾಜ್ಯ ಕಾರ್ಯಕಾರಿ ಸಮಿತಿಯ ಬೈಠಕ್ ಕಳೆದ ವಾರ ನಡೆಯಿತು. ಇಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ‘‘ಮರಾಠ ಮೋರ್ಚಾಕ್ಕೆ ಯಾರೂ ಭಯ ಪಡಬೇಡಿ. ಅದು ಬಿಜೆಪಿ ಸರಕಾರದ ವಿರುದ್ಧ ಅಲ್ಲ, ಕಳೆದ 40 ವರ್ಷಗಳಿಂದ ಬಂದಿರುವ ಆಕ್ರೋಶದ ಕಾರಣ ಈ ಮೋರ್ಚಾ. ಈ ಆಕ್ರೋಶ ಸ್ವಯಂ ಘೋಷಿತ ಮರಾಠ ನೇತಾರರ ವಿರುದ್ಧವಾಗಿದೆ’’ ಎಂದರು. ಮುಂದಿನ ಮಹಾನಗರ ಪಾಲಿಕೆ, ಜಿಲ್ಲಾ ಪರಿಷತ್, ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಬಿಜೆಪಿ ದೊಡ್ಡ ಪ್ರಮಾಣದಲ್ಲಿ ಗೆದ್ದು ಬರುವಂತೆ ಸಂಕಲ್ಪವನ್ನು ಈ ಕಾರ್ಯಕಾರಿ ಬೈಠಕ್‌ನಲ್ಲಿ ಮಾಡಲಾಗಿದೆ.
ಇತ್ತರಾಜ್ಯ ಬಿಜೆಪಿ ಅಧ್ಯಕ್ಷ ರಾವ್ ಸಾಹೇಬ್ ದಾನವ್ ಅವರು ‘‘ಮರಾಠ ಮೀಸಲಾತಿ ನಾವು ತೆಗೆಸಿಕೊಟ್ಟೇ ಸಿದ್ಧ’’ ಎಂದಿದ್ದಾರೆ. ಇನ್ನೊಂ ದೆಡೆ ಮರಾಠವಾಡಾದಲ್ಲಿ ಇತ್ತೀಚೆಗೆ ಸಮಾಪ್ತಿಗೊಂಡ ಕ್ಯಾಬಿನೆಟ್ ಬೈಠಕ್‌ನಲ್ಲಿ ತಳೆದ ನಿರ್ಣಯವನ್ನು ಕಾಂಗ್ರೆಸ್ ವಕ್ತಾರರು ಈ ಘೋಷಣೆ ಗಳು ಸುಳ್ಳು. ಮರಾಠವಾಡಾದಲ್ಲಿ ಫಡ್ನವೀಸ್ ಸರಕಾರ 49,500 ಕೋಟಿ ರೂ. ಯೋಜನೆ ಘೋಷಿಸಿದೆ. ಆದರೆ ಇದರಲ್ಲಿ ಹಲವು ಕೋಟಿ ರೂ. ಯೋಜನೆಗಳು ಹಿಂದೆಯೇ ಘೋಷಿಸಲಾಗಿದೆ. ಸರಕಾರ ಅಂಕಿ ಅಂಶಗಳ ಜೊತೆ ಆಟ ಆಡುತ್ತಿದೆ ಎಂದು ಟೀಕಿಸಿದ್ದಾರೆ.
 

Writer - ಶ್ರೀನಿವಾಸ ಜೋಕಟ್ಟೆ

contributor

Editor - ಶ್ರೀನಿವಾಸ ಜೋಕಟ್ಟೆ

contributor

Similar News