ಇದು ಭಾರತದ 'ಪೆನ್' ಕತೆ

Update: 2016-10-18 05:46 GMT

1961ರ ಬೇಸಗೆಯಲ್ಲಿ ಭಾರತ ಸರ್ಕಾರ ಅಮೆರಿಕದಿಂದ ಬರುವ ತಜ್ಞರಿಗಾಗಿ ಕಾಯುತ್ತಿತ್ತು. ಕೃಷಿ ವಿಜ್ಞಾನಿ ಅಥವಾ ಹವಾಮಾನ ತಜ್ಞರಲ್ಲ. ಬದಲಾಗಿ ಫೌಂಟೇನ್ ಪೆನ್ ಉದ್ಯಮದಲ್ಲಿ ಜ್ಞಾನವಿರುವ ವ್ಯಕ್ತಿಗಾಗಿ ಎದುರು ನೋಡಲಾಗಿತ್ತು. 1958ರಲ್ಲಿ ಭಾರತ ಪೆನ್‌ಗಳನ್ನು ಆಮದು ಮಾಡುವುದನ್ನು ಬಿಟ್ಟಿದ್ದ ಕಾರಣ 1960ರಲ್ಲಿ ಸಂಘಟಿತ ಕ್ಷೇತ್ರದಲ್ಲಿ ದೇಶೀಯವಾಗಿ ಪೆನ್‌ಗಳ ಉತ್ಪಾದನೆ 12 ಮಿಲಿಯಕ್ಕೆ ಮತ್ತು ಗುಡಿ ಕೈಗಾರಿಕೆಗಳಲ್ಲಿ 10 ಮಿಲಿಯಕ್ಕೆ ಏರಿತ್ತು. ನಮಗೆ ಅಗತ್ಯವಿರುವಷ್ಟು ಪೆನ್‌ಗಳನ್ನು ಉತ್ಪಾದಿಸಿದ್ದೆವು. ಆದರೆ ನಿಬ್‌ಗಳನ್ನು ಶೇ. 100 ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ ಯಾವಾಗಲೂ ಉತ್ತಮ ಗುಣಮಟ್ಟದ್ದೇ ಸಿಗುತ್ತಿರಲಿಲ್ಲ. ಹೀಗಾಗಿ 1961ರಲ್ಲಿ ಗುಣಮಟ್ಟ ಪರೀಕ್ಷೆಗಾಗಿ ಅಮೆರಿಕದ ತಜ್ಞರನ್ನು ಭಾರತ ಆಶ್ರಯಿಸಿತ್ತು.

ಇಂದು ಬಾಹ್ಯಾಕಾಶಕ್ಕೆ ಉಪಗ್ರಹಗಳನ್ನು ಉಡಾಯಿಸುವ ದೇಶ ಅರ್ಧ ಶತಮಾನದ ಹಿಂದೆ ಉತ್ತಮ ಗುಣಮಟ್ಟದ ಪೆನ್‌ಗಳನ್ನೂ ನಿರ್ಮಿಸುವ ಶಕ್ತಿ ಹೊಂದಿರಲಿಲ್ಲ ಎನ್ನುವುದು ಭಾರತದ ಪ್ರಗತಿಯ ಕತೆಯನ್ನು ಹೇಳುತ್ತದೆ. ಪೆನ್‌ಗಳನ್ನು ಮರೆತುಬಿಡಿ. 1957ರಲ್ಲಿ ಶಾಯಿ ಉತ್ಪಾದನೆಗೂ ಸಹಾಯ ಬೇಕಿತ್ತು. ಆದರೆ ಆಮದು ಕಾರುಗಳನ್ನು ಭಾರತದಲ್ಲಿ ಅವಕಾಶ ನೀಡದಂತೆ ಶಾಯಿ ಆಮದನ್ನೂ ಕೆಲ ಕಾರಣಗಳಿಂದ ನಿಲ್ಲಿಸಲಾಯಿತು. ಪ್ರತಿಯೊಂದರಲ್ಲೂ ಸ್ವಾವಲಂಬನೆ ಸಾಧಿಸಿ ಅಮೂಲ್ಯ ವಿದೇಶಿ ವಿನಿಮಯವನ್ನು ಉಳಿಸಲು ಬಯಸಿದ್ದೆವು.

1957ರಲ್ಲಿ ಭಾರತ ಬಾಟಲಿ ಒಂದರಲ್ಲಿ ಎರಡು ಔನ್ಸ್‌ಗಳಷ್ಟು ಇರುವ, 3.5 ಮಿಲಿಯನ್ ಬಾಕ್ಸ್‌ಗಳಷ್ಟು ಶಾಯಿ ತಯಾರಿಸುವ ಸಾಮರ್ಥ್ಯ ಹೊಂದಿತ್ತು. ಆದರೆ ಬೇಡಿಕೆ ಇದ್ದದ್ದು 0.9 ಮಿಲಿಯನ್ ಬಾಕ್ಸ್‌ಗಳಿಗೆ ಮಾತ್ರವಾಗಿತ್ತು. ಹಾಗಿದ್ದರೂ ವಿದೇಶಿ ಬ್ರಾಂಡ್‌ಗಳು ದೇಶಿ ಶಾಯಿಗಳನ್ನು ಮೀರಿಸಿದ್ದವು. ಪೈಲಟ್, ವಾಟರ್ಮನ್, ಕ್ವಿಂಕ್, ಸ್ಟೀಫನ್ಸ್ ಮತ್ತು ಸ್ವಾನ್ ಭಾರತದಲ್ಲಿ ಆ ಕಾಲದಲ್ಲಿ ಮಾರಾಟವಾಗುತ್ತಿದ್ದ ಐದು ಶಾಯಿ ಬ್ರಾಂಡ್‌ಗಳು. ಇವುಗಳಲ್ಲಿ ಪೈಲಟ್ ಮತ್ತು ಕ್ವಿಂಕ್ ಹೂಡಿಕೆ ಸಹಭಾಗಿತ್ವ ಹೊಂದಿದ್ದರೆ, ಉಳಿದವು ತಾಂತ್ರಿಕ ಸಹಯೋಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದವು. ಭಾರತದಲ್ಲೇ ಬೆಳೆದ ನಾಲ್ಕು ಪ್ರಮುಖ ಬ್ರಾಂಡ್‌ಗಳೆಂದರೆ ಕ್ಯಾಮಲ್, ಸುಲೇಖ, ಹರಿಹರ್ ಮತ್ತು ನೂಲುಕ್.

ಭಾರತದಲ್ಲಿ ಎಲ್ಲಾ ಶಾಯಿ ಕಾರ್ಖಾನೆಗಳು ತಮ್ಮ ಕಚ್ಛಾ ವಸ್ತುಗಳಾದ ಮಿಥಿಲೀನ್ ಬ್ಲೂವನ್ನು ಆಮದು ಮಾಡಿಕೊಳ್ಳುತ್ತಿದ್ದವು ಮತ್ತು ವಿದೇಶಿ ಸಹಯೋಗಿಗಳು ತಮ್ಮ ಸಂಬಂಧಿತ ರಹಸ್ಯ ಮಿಶ್ರಣವನ್ನು ತರುತ್ತಿದ್ದರು. ಫೌಂಟೇನ್ ಪೆನ್‌ಗಳನ್ನು ಭಾರತ ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯ, ಪೂರ್ವ ಜರ್ಮನಿ, ಫ್ರಾನ್ಸ್, ಜಪಾನ್ ಮೊದಲಾದ ಕಡೆಗಳಿಗೆ ಆಮದು ಮಾಡಿಕೊಳ್ಳುತ್ತಿತ್ತು. ಆದರೆ ದೇಶೀ ಉತ್ಪಾದನೆ ಪ್ರೋತ್ಸಾಹಿಸಲು ಸರ್ಕಾರವು ಒಂದು ಪೆನ್‌ಗೆ ರೂ. 25 ಎಂದು ನಿಗದಿ ಮಾಡಿ ಆಮದು ಮಾಡದಿರಲು ನಿರ್ಧರಿಸಿತು. ಹೀಗಾಗಿ ಮುಂಬೈ, ದೆಹಲಿ, ಚೆನ್ನೈ, ಕೋಲ್ಕತ್ತಾ ಮತ್ತು ಆಂಧ್ರಪ್ರದೇಶದ ರಾಜಮುಂಡ್ರಿಯಲ್ಲಿ ಕಾರ್ಖಾನೆಗಳು ಬೆಳೆದವು. 1950ರಲ್ಲಿ 12 ಭಾರತೀಯ ತಯಾರಕರಿದ್ದು, ರಾಜಮುಂಡ್ರಿ ಮೂಲದ ರತ್ನಂ ಆಂಡ್ ಸನ್ಸ್ ಅತೀ ಹಳೆಯ ಮತ್ತು ಪ್ರಸಿದ್ಧ ತಯಾರಕರಾಗಿದ್ದರು.

ಆದರೆ ಬಹುತೇಕ ಭಾರತೀಯ ತಯಾರಕರ ಗುಣಮಟ್ಟ ಉತ್ತಮವಾಗಿರಲಿಲ್ಲ. ಹೀಗಾಗಿ 1956ರಲ್ಲಿ ಸರ್ಕಾರ ಪೈಲಟ್ ಮತ್ತು ವಾಟರ್ಮನ್ ಜೊತೆಗೆ ಸಹಯೋಗಕ್ಕೆ ಅಂಗೀಕಾರ ನೀಡಿತು. ಸರ್ಕಾರವು ಈ ಕಂಪೆನಿಗಳು ರೂ. 10ಕ್ಕೆ ವಿಶ್ವದರ್ಜೆಯ ಪೆನ್ನು ತಯಾರಿಸುವ ಭರವಸೆ ಹೊಂದಿತ್ತು. ಆದರೆ ವರ್ಷಗಳು ಉರುಳಿದರೂ ಉದ್ಯಮಗಳ ಗುಣಮಟ್ಟ ಸುಧಾರಿಸದ ಕಾರಣ ಅಮೆರಿಕದ ತಂತ್ರಜ್ಞ ಪರಿಣತರನ್ನು ಕರೆಸಲಾಗಿತ್ತು.

ಬಾಲ್‌ಪಾಯಿಂಟ್ ಪೆನ್ ತಯಾರಕರು ಇನ್ನೂ ನಂತರ ಬಂದಿದ್ದರು. ವಿದೇಶಿ ಉತ್ಪಾದಕ ಬಿರೋ ಪೆನ್ಸ್ 1953ರಲ್ಲಿ ಭಾರತದಲ್ಲಿ ಕಾರ್ಖಾನೆ ಸ್ಥಾಪಿಸಲು ಉದ್ದೇಶಿಸಿತ್ತು. ಆದರೆ ಕಂಪೆನಿ ಶೇ. 49ರಷ್ಟು ಷೇರು ಮತ್ತು ಸಂಭಾವನೆ ಬಯಸಿದ ಕಾರಣ ಸರ್ಕಾರ ಒಪ್ಪಿಗೆ ನೀಡಲಿಲ್ಲ. ಭಾರತದಲ್ಲಿ ಬಾಲ್‌ಪಾಯಿಂಟ್ ಪೆನ್ ಶಾಯಿಗೆ ಮೊದಲ ಅಂಗೀಕಾರ 1962ರಲ್ಲಿ ಸಿಕ್ಕಿತ್ತು. ಗುಜರಾತಿನ ರಾಜ್‌ಕೋಟ್ ಉದ್ಯಮಿ ಧೀರಜ್‌ಲಾಲ್ ಮೋಹನ್‌ಲಾಲ್ ಜೋಶಿ ಮತ್ತು ಎಂ/ಎಸ್ ಫಾರ್ಮುಲ್ಯಾಬ್ಸ್ ಇಂಕ್ ಆಗಿರುವ ಎಸ್ಕಾಂಡಿಡೋ ನಡುವೆ ಒಡಂಬಡಿಕೆಯಾಯಿತು. ಆ ಸಂದರ್ಭದಲ್ಲಿ ವಿದೇಶಿ ಸಹಯೋಗವಿಲ್ಲದೆ ಭಾರತದಲ್ಲಿ ಶಾಯಿ ತಯಾರಿಸಲು ಸಾಧ್ಯವಿರಲಿಲ್ಲ ಎಂದು ಸರ್ಕಾರವೇ ಒಪ್ಪಿಕೊಂಡಿದೆ.

ಇಂದು ಬ್ಯಾಂಕುಗಳು ವಂಚನೆ ತಪ್ಪಿಸಲು ಚೆಕ್‌ಗಳನ್ನು ಬಾಲ್‌ಪಾಯಿಂಟ್ ಪೆನ್‌ನಲ್ಲಿ ಸಹಿ ಹಾಕಲು ಹೇಳುತ್ತಾರೆ. ಆದರೆ 1960ರಲ್ಲಿ ಬಾಲ್‌ಪಾಯಿಂಟ್ ಪೆನ್‌ಗಳ ಹಲವು ರೀತಿಯ ಬಳಕೆಗೆ ಭಾರತದಲ್ಲಿ ಮಿತಿಗಳಿದ್ದವು. ಮನಿಯಾರ್ಡರನ್ನು ಬಾಲ್‌ಪಾಯಿಂಟ್‌ನಲ್ಲಿ ತುಂಬಿಸುವ ಹಾಗಿರಲಿಲ್ಲ. ಪಾವತಿಸುವವ ಸಾಮಾನ್ಯ ಶಾಯಿ ಪೆನ್ನಿನಲ್ಲೇ ಸಹಿ ಹಾಕಬೇಕಾಗಿತ್ತು. ಬಿಲ್ಲುಗಳು, ಸರ್ಕಾರದ ಚೆಕ್‌ಗಳು ಮತ್ತು ಪ್ರಚಾರಗಳಿಗೂ ಸರ್ಕಾರ ಸಾಮಾನ್ಯ ಶಾಯಿಯಲ್ಲಿಯೇ ಸಹಿ ಮಾಡುತ್ತಿತ್ತು. ನಂತರದ ದಿನಗಳಲ್ಲಿ ಈ ನಿಯಮಗಳು ಪೂರ್ಣವಾಗಿ ಬದಲಾದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News