ಸಹಬಾಳ್ವೆಯ ಅತ್ಯುತ್ತಮ ನಿದರ್ಶನ ಕುಶ್ ಸಿಂಗ್ ಮತ್ತು ಫೈಝಲ್ ಖಾನ್

Update: 2016-10-18 10:36 GMT

ನವದೆಹಲಿಯ ಓಕ್ಲಾ ಪ್ರದೇಶದಲ್ಲಿ ಬಹಳ ಕಿರಿದಾದ ಜನಸಂದಣಿ ತುಂಬಿದ ಕಿರುಹಾದಿಯಲ್ಲಿ ಮುಂದುವರಿಯುತ್ತಾ ಗಫರ್ ಮಂಝಿಲ್ ಕಾಲನಿ ಹುಡುಕುವುದೇ ಕಷ್ಟವಾಗುತ್ತದೆ. ಆದರೆ ನಾವು ಅಲ್ಲಿ ಫೈಜಲ್ ಖಾನ್‌ರನ್ನು ಭೇಟಿಯಾಗಬೇಕಿತ್ತು. ಬಹುತೇಕ ಮುಸ್ಲಿಂ ಸಮುದಾಯದವರ ಮನೆಗಳೇ ಇರುವ ಈ ಗಫರ್ ಮಂಝಿಲ್ ಪತ್ತೆ ಮಾಡಬೇಕಾದಲ್ಲಿ ಕುಶ್ ಸಿಂಗ್ ಮನೆ ಎಲ್ಲಿದೆ ಎಂದು ಕೇಳಿದರೆ ಸಾಕು. ವೃತ್ತಿಯಲ್ಲಿ ವೈದ್ಯರಾಗಿರುವ ಕುಶ್ ಕುಮಾರ್ ಸಿಂಗ್ ಫೈಝಲ್‌ರ ಫ್ಲಾಟ್‌ನಲ್ಲಿ ನೆಲೆಸಿದ್ದಾರೆ. ಕೆಲ ವರ್ಷಗಳ ಹಿಂದೆ ಪರಸ್ಪರ ಪರಿಚಯವೇ ಇಲ್ಲದ ಕುಶ್ ಮತ್ತು ಫೈಝಲ್ ಕಳೆದ ಮೂರು ವರ್ಷಗಳಿಂದ ಜೊತೆಯಾಗಿ ನೆಲೆಸಿದ್ದಾರೆ. ಮುಸ್ಲಿಂ ಕಾಲನಿಯೇ ಆಗಿರುವ ಗಫರ್ ಮಂಝಿಲ್‌ನಲ್ಲಿ ಕುಶ್ ಮಾತ್ರ ಹಿಂದೂ ನಿವಾಸಿ. ಹೀಗಾಗಿ ಬಹುತೇಕರು ಅವರ ಬಗ್ಗೆ ತಿಳಿದಿದ್ದಾರೆ.

ದೇಶದಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಆದರೆ ಇವರು ಜೊತೆಯಾಗಿ ಒಂದೇ ಮನೆ ಬಿಡಿ, ಒಂದೇ ಪರಿಸರದಲ್ಲಿ ನೆಲೆಸುವುದು ಅತೀ ಕಡಿಮೆ. ಮುಖ್ಯವಾಗಿ ಉತ್ತರ ಭಾರತದಲ್ಲಿ ಇದು ಕಣ್ಣಿಗೆ ರಾಚುವಂತೆ ಕಾಣಿಸುತ್ತದೆ. ಬಾಡಿಗೆ ಮನೆಗಳಲ್ಲಿ ವಾಸ ಮಾಡುತ್ತಿರುವವರಿಗೂ ಈ ನಿಯಮ ಅನ್ವಯಿಸುತ್ತದೆ. ಬಾಡಿಗೆ ಮನೆಗಾಗಿ ಹುಡುಕುವ ಮುಸ್ಲಿಮರು ಮುಖ್ಯವಾಗಿ ತಮ್ಮ ಸಮುದಾಯದವರೇ ನೆಲೆಸಿರುವ ಗಫರ್ ಮಂಝಿಲ್‌ನಂತಹ ಜಾಗದಲ್ಲೇ ನೋಡಬೇಕಾಗುತ್ತದೆ. ದೆಹಲಿಗೆ ಕೆಲ ವರ್ಷಗಳ ಹಿಂದೆ ಉತ್ತರ ಪ್ರದೇಶದಿಂದ ಬಂದ ಫೈಝಲ್ ಕೂಡ ಅದೇ ಕಾರಣದಿಂದ ಈ ಪ್ರದೇಶದಲ್ಲಿ ಮನೆ ಮಾಡಿದ್ದಾರೆ. ಆಗ್ರಾ ನಿವಾಸಿ ಕುಶ್ ಕೂಡ 2010ರಲ್ಲಿ ದೆಹಲಿಗೆ ಬಂದಾಗ ಹಿಂದೂಗಳು ಹೆಚ್ಚಾಗಿರುವ ಸರಿತಾ ವಿಹಾರ್‌ನಲ್ಲೇ ಮನೆ ಮಾಡಿದ್ದರು. "ಗಫರ್ ಮಂಝಿಲ್ ಅಥವಾ ಜಾಮಿಯಾ ನಗರ ನನ್ನ ವಸತಿಯ ಸಾಧ್ಯತೆಯ ಪಟ್ಟಿಯಲ್ಲೂ ಇರಲಿಲ್ಲ. ನಮ್ಮ ಹೆಸರನ್ನು ತಿಳಿದುಕೊಂಡು ಅದಕ್ಕೆ ತಕ್ಕಂತೆ ಆಸ್ತಿ ಡೀಲರ್ ನಮಗೆ ಮನೆ ತೋರಿಸುತ್ತಾನೆ" ಎನ್ನುತ್ತಾರೆ ಕುಶ್. "ಆಗ್ರಾದಲ್ಲಿ ಮುಸ್ಲಿಂ ಪ್ರಾಂತಕ್ಕೆ ಹೋದರೆ ಸಂಜೆಯ ಒಳಗೆ ಮರಳಿ ಮನೆಗೆ ಬರುವಂತೆ ಹೆತ್ತವರು ಎಚ್ಚರಿಸುತ್ತಿದ್ದರು" ಎಂದು ನೆನಪಿಸಿಕೊಳ್ಳುತ್ತಾರೆ ಕುಶ್. ಹಾಗಿದ್ದರೆ ಅವರು ಗಫರ್ ಮಂಝಿಲ್‌ಗೆ ಬಂದು ನೆಲೆಸಿದ್ದು ಏಕೆ? ಬದಲಾವಣೆಯ ಹರಿಕಾರರಾಗಬೇಕು ಎನ್ನುವುದು ಫೈಝಲ್ ಮತ್ತು ಕುಶ್ ಉದ್ದೇಶವಾಗಿತ್ತು.

"ಇದೊಂದು ಸಾಮಾಜಿಕ ಪ್ರಯೋಗ. ಒಂದೇ ಮನೆಯಲ್ಲಿ ನೆಲೆಸುವ ಮೂಲಕ ಕುಶ್ ಮತ್ತು ನಾನು ನಮ್ಮ ನಡುವೆ ಏನು ವ್ಯತ್ಯಾಸವಿದೆ ಎಂದು ತಿಳಿಯಲು ಪ್ರಯತ್ನಿಸುತ್ತಿದ್ದೇವೆ. ನಾನು ಮುಸ್ಲಿಂ ಧರ್ಮೀಯ ಮತ್ತು ಆತ ಹಿಂದೂ ಮತ್ತು ಸಸ್ಯಾಹಾರಿ. ಹೀಗಿರುವಾಗ ಜೊತೆಯಲ್ಲಿ ಇರಬಹುದೇ ಎಂದು ನೋಡಲು ನಾನು ಬಯಸಿದ್ದೆ" ಎನ್ನುತ್ತಾರೆ ಫೈಝಲ್. "ಮುಸ್ಲಿಮರನ್ನು ಸ್ನೇಹಿತರೆಂದು ತಿಳಿಯದ ಮತ್ತು ಹೆಚ್ಚು ಸ್ನೇಹಪರವಾಗಿರದ ಜಾಗದಲ್ಲಿ ನೆಲೆಸಿದ್ದ ನನಗೆ ಫೈಝಲ್ ಜೊತೆ ಬಂದು ನೆಲೆಸುವ ನಿರ್ಧಾರ ಕುತೂಹಲದಿಂದ ಬಂದಿದ್ದಾಗಿತ್ತು. ಈ ಅನುಭವ ನನಗೆ ಬೇಕಾಗಿತ್ತು" ಎನ್ನುವುದು ಕುಶ್ ಅಭಿಪ್ರಾಯ.

ಕುಶ್ ಮತ್ತು ಫೈಝಲ್ 2010ರಲ್ಲಿ ದಕ್ಷಿಣ ದೆಹಲಿಯ ಆಸ್ಪತ್ರೆಯೊಂದರಲ್ಲಿ ಕಿರಿಯ ವೈದ್ಯರಾಗಿದ್ದಾಗ ಭೇಟಿಯಾಗಿದ್ದರು. "ಫೈಝಲ್‌ರನ್ನು ಮೊದಲಿಗೆ ಪಠಾಣಿ ಉಡುಪು ಮತ್ತು ತಲೆಯ ಟೋಪಿ ನೋಡಿ ಕಟ್ಟಾ ಸಂಪ್ರದಾಯವಾದಿ ಎಂದುಕೊಂಡಿದ್ದೆ. ವೈದ್ಯಕೀಯ ಬಿಡಿ, ಇತರ ವಿಷಯದಲ್ಲೂ ಅವರ ಆಧುನಿಕ ಚಿಂತನೆಯ ಬಗ್ಗೆ ನನಗೆ ಅನುಮಾನವಿತ್ತು. ಅವರು ನನ್ನ ಬಳಿ ರೋಗಗಳ ಬಗ್ಗೆ ವಿಚಾರಿಸಿದಾಗಲೂ ಉತ್ತರಿಸಲು ನಿರಾಕರಿಸುತ್ತಿದ್ದೆ" ಎಂದು ನೆನಪಿಸುತ್ತಾರೆ ಕುಶ್. ನಂತರ ಫೈಝಲ್ ಪದೇ ಪದೇ ಪ್ರಯತ್ನಿಸಿದ ಮೇಲೆ ಇಬ್ಬರ ನಡುವೆ ಆತ್ಮೀಯತೆ ಬೆಳೆಯಿತು. "ಮುಸ್ಲಿಂ ಸಮುದಾಯದವನಾಗಿದ್ದರೂ ಸಾಮಾಜಿಕ ಕಾರ್ಯಕರ್ತನೆಂದು ತಿಳಿದು ಅಚ್ಚರಿಯಾಗಿತ್ತು. ಮುಸ್ಲಿಮರೆಲ್ಲರೂ ಮೂಲಭೂತವಾದಿಗಳು ಎಂದೇ ನನ್ನ ಭಾವನೆಯಾಗಿತ್ತು. ನಂತರ ಅವರು ಕೋಮು ಸೌಹಾರ್ದಕ್ಕೆ ಪ್ರಯತ್ನಿಸುತ್ತಿರುವುದೂ ತಿಳಿದುಬಂತು. ಅವರು ಧರ್ಮಕ್ಕಿಂತ ಹೆಚ್ಚು ಸಾಮಾಜಿಕ ವಿಷಯಗಳಲ್ಲೇ ಆಸಕ್ತಿ ಹೊಂದಿದ್ದರು. ಹೀಗಾಗಿ ಅವರನ್ನು ಹೆಚ್ಚು ತಿಳಿದುಕೊಳ್ಳುವ ಆಸಕ್ತಿ ಬೆಳೆಯಿತು" ಎಂದು ನೆನಪಿಸುತ್ತಾರೆ ಕುಶ್.

ಆದರೆ ಈಗ ಕುಶ್ ಗಫರ್ ಮಂಝಿಲ್‌ನಲ್ಲಿ ಎಲ್ಲರಿಗೂ ವಿಚಿತ್ರ ವ್ಯಕ್ತಿಯಾಗಿದ್ದಾರೆ. ಅವರನ್ನು ನೋಡಿದ ಕೂಡಲೇ ಸುತ್ತಮುತ್ತಲಿನವರು ಹೆಸರು ಕೇಳುತ್ತಾರೆ. ಜಾಮಿಯಾ ಮಿಲಿಯಾ ಇಸ್ಲಾಮಿಯದಲ್ಲಿ ಓದಲು ಬಂದಿದ್ದೀರಾ ಎಂದೂ ಪ್ರಶ್ನಿಸುವವರಿದ್ದಾರೆ! ಮುಸ್ಲಿಂ ಕಾಲನಿಯಲ್ಲಿ 3 ವರ್ಷಗಳಿಂದ ನೆಲೆಸಿದ್ದರೂ ತನ್ನ ಹಿಂದೂತನಕ್ಕೆ ಏನೂ ಕೊರತೆಯಾಗಿಲ್ಲ ಎಂದು ಅವರು ಹೇಳುತ್ತಾರೆ. ಆದರೆ ಅವರು ಮುಸ್ಲಿಮರನ್ನು ಹೆಚ್ಚು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿದೆ. ಅಲ್ಲದೆ ಅವರ ನೆರೆಯವರು ಸಹ ಹಿಂದೂವನ್ನು ಅರ್ಥ ಮಾಡಿಕೊಳ್ಳುತ್ತಿದ್ದಾರೆ. ವೈದ್ಯರಾಗಿದ್ದೇ ಅವರನ್ನು ಜನರು ಬೇಗನೇ ಸ್ವೀಕರಿಸಲು ಸಾಧ್ಯ ಮಾಡಿದೆ. ಆದರೆ ತಮ್ಮ ಸ್ನೇಹಿತರು ಮತ್ತು ಆಪ್ತರನ್ನು ಗಫರ್ ಮಂಝಿಲ್‌ಗೆ ಆಹ್ವಾನಿಸುವುದು ಅವರಿಗೆ ಮೊದಲಿಗೆ ಸವಾಲಾಗಿತ್ತಾದರೂ ನಂತರ ಅವರೂ ಒಗ್ಗಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News